ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪಿರೈಟ್ ಕಾಯ್ದೆ ಹಿಂದೆ ಪ್ರಬಲ ಲಾಬಿ

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ನಗರದ ಸುಚಿತ್ರಾ ಸಭಾಂಗಣದಲ್ಲಿ ಭಾನುವಾರ ನಡೆದ `ಕಾಪಿರೈಟ್, ಕಲ್ಚರ್ ಮತ್ತು ಐಡೆಂಟಿಟಿ ಮಾಧ್ಯಮ ಚಿಂತನೆ~ ಕುರಿತ ವಿಚಾರ ಸಂಕಿರಣವು ಕಾಪಿರೈಟ್ ಪರ- ವಿರೋಧ ಚರ್ಚೆಗೆ ವೇದಿಕೆಯಾಯಿತು. 

ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ, `ಕವಿ, ಸಂಗೀತ ನಿರ್ದೇಶಕ, ರಾಗ ಸಂಯೋಜಕನಿಗೆ ಒಂದು ಬಾರಿ ಸಂಭಾವನೆ ಕೊಟ್ಟ ತಕ್ಷಣ ಆತನ ಗೌರವ ಕೊಂಡುಕೊಂಡ ಹಾಗೆ ಆಗುವುದಿಲ್ಲ. ಆತನ ಸೃಜನಶೀಲತೆ ಲೆಕ್ಕಾಚಾರದಿಂದ ಬಂದಿರುವಂತಹುದು ಅಲ್ಲ. ಅದು ಆತನ ಜಾಣ್ಮೆ. ಗೌರವಧನ ಸಂಬಂಧಪಟ್ಟವರಿಗೆ ಸಲ್ಲಬೇಕು. ಅದು ಎಷ್ಟು, ಯಾವ ಪ್ರಮಾಣದಲ್ಲಿ ಸಲ್ಲಬೇಕು ಎಂಬ ಬಗ್ಗೆ ಚರ್ಚೆ ಆಗಬೇಕು~ ಎಂದು ಪ್ರತಿಪಾದಿಸಿದರು.

ಲಹರಿ ಸಂಸ್ಥೆಯ ವೇಲು ಮಾತನಾಡಿ, `ಕಾಯ್ದೆಯಲ್ಲಿ ತಿದ್ದುಪಡಿ ಮಾಡದಿದ್ದರೆ ಸಂಗೀತ ಕ್ಷೇತ್ರ ಸಂಪೂರ್ಣ ನಾಶ ಆಗಲಿದೆ. ನಿರ್ಮಾಪಕರು ಹಾಗೂ ಆಡಿಯೋ ಕಂಪೆನಿ ಹಣ ಹೂಡಿಕೆ ಮಾಡದಿದ್ದರೆ ಸಿನಿಮಾ ತಯಾರಾಗುವುದಿಲ್ಲ. ಸಿನಿಮಾದಲ್ಲಿ ನಷ್ಟ ಉಂಟಾದಾಗ ಯಾರು ಕಷ್ಟ ಕೇಳುವುದಿಲ್ಲ. ಆದರೆ ಲಾಭ ಬಂದಾಗ ಪಾಲು ಕೊಡಬೇಕು ಎಂಬುದು ಸರಿಯಲ್ಲ. ಕಾಯ್ದೆ ಜಾರಿಯ ಹಿಂದೆ ದೊಡ್ಡ ಲಾಬಿ ಇದೆ~ ಎಂದು ಕಿಡಿ ಕಾರಿದರು.

ನಿರ್ಮಾಪಕ ಕೆ.ವಿ. ಗುಪ್ತ, `ಕಾಯ್ದೆ ಅನುಷ್ಠಾನ ತುಂಬಾ ಕಷ್ಟ. ಇಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಕಾಯ್ದೆ ಅನುಷ್ಠಾನ ಮಾಡಬೇಕು. ಸಿನಿಮಾದ ಯಶಸ್ಸು- ವೈಫಲ್ಯ ನಿರ್ಮಾಪಕನ ಹೊಣೆ. ಲಾಭ ಬಂದಾಗಲೂ ಸಹ ನ್ಯಾಯವಾಗಿ ಅವನಿಗೆ ಸಲ್ಲಬೇಕು. ಒಂದು ಬಾರಿ ಹಣ ಪಾವತಿಸಿದ ಬಳಿಕ ನೈತಿಕವಾಗಿ ಯಾರಿಗೂ ಹಕ್ಕು ಇರುವುದಿಲ್ಲ. ಹೊಸ ಗಾಯಕರನ್ನು ಸೃಷ್ಟಿಸಲು ಈ ಕಾಯ್ದೆ ಅಡ್ಡಿಯಾಗಲಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, `ಆಂಗ್ಲ ಭಾಷೆಯಲ್ಲಿ ನನ್ನ ಕೃತಿ ಪ್ರಕಟಗೊಂಡರೆ ಆ ಕೃತಿಯ ಕಾಪಿರೈಟ್ ಅನುವಾದಕನಿಗೆ ಇರುತ್ತದೆ ಹೊರತು ನನಗೆ ಇರುವುದಿಲ್ಲ. ತಿದ್ದುಪಡಿಯ ಬಗ್ಗೆ ನನ್ನಲ್ಲಿ ಸಾಕಷ್ಟು ಗೊಂದಲ ಇದೆ. ತಜ್ಞರು ಗೊಂದಲ ಪರಿಹರಿಸಬೇಕು~ ಎಂದು ವಿನಂತಿಸಿದರು.

ಸಂಗೀತ ನಿರ್ದೇಶಕ ಗುರುಕಿರಣ್, `ಈ ಹಿಂದೆ ಸಂಗೀತ ನಿರ್ದೇಶಕರು ಹಾಗೂ ಗಾಯಕರಿಗೆ ಒಂದು ಬಾರಿ ನಿಗದಿತ ಮೊತ್ತ ಪಾವತಿಸಿದ ಬಳಿಕ ಅವರನ್ನು ಮರೆತು ಬಿಡಲಾಗುತ್ತಿತ್ತು. ಈ ಕಾಯ್ದೆಯಿಂದ ಸಂಗೀತ ನಿರ್ದೇಶಕರು ಹಾಗೂ ಗಾಯಕರಿಗೆ ನೆರವಾಗಲಿದೆ~ ಎಂದು ಅಭಿಪ್ರಾಯಪಟ್ಟರು.

ಬರಹಗಾರ ಸತ್ಯಮೂರ್ತಿ ಆನಂದೂರು ಮಾತನಾಡಿ, `ಡಬ್ಬಿಂಗ್ ನಡೆಸುವುದು ಕಾನೂನಿಗೆ ವಿರುದ್ಧವಲ್ಲ; ಆದರೆ ಅದು ಸೃಜನಶೀಲವಲ್ಲದ ಕ್ರಿಯೆ. ಯಾವುದೇ ಕ್ಷೇತ್ರ ಮೊದಲು ಸೃಜನಶೀಲ ಕ್ರಿಯೆಗೆ ಮೊದಲು ಒಡ್ಡಿಕೊಳ್ಳಬೇಕು~ ಎಂದು ಅವರು ಹೇಳಿದರು.

ಸಂಶೋಧಕ ಲಾರೆನ್ಸ್ ಲಿಯಾಂಗ್ ಮಾತನಾಡಿ, `ಕಾಪಿ ರೈಟ್ ಕಾಯ್ದೆ ಕಲಾವಿದರ ಹಕ್ಕನ್ನು ಸಂರಕ್ಷಿಸುತ್ತದೆ. ಈ ಹಿಂದೆ ಕಾಪಿ ರೈಟ್ ವಿಚಾರಕ್ಕೆ ಬಂದಾಗ ಕೃತಿಯ ಸೃಷ್ಟಿಕರ್ತರು ಲೆಕ್ಕಕ್ಕೆ ಇರಲಿಲ್ಲ. ಈಗ ಸಮತೋಲನ ಮೂಡಿದೆ. ಆದರೆ ಕಾಯ್ದೆಯಲ್ಲಿನ ಲೋಪದೋಷ ಮುಂದಿನ ದಿನಗಳಲ್ಲಿ ನಿವಾರಣೆ ಆಗಬಹುದು. ಹಕ್ಕಿನ ವಿಚಾರದಲ್ಲಿ ಹೆಚ್ಚು ಬಿಕ್ಕಟ್ಟು ನಡೆದು ವಕೀಲರಿಗೆ ಹೆಚ್ಚಿನ ಲಾಭ ಆಗುವ ಸಾಧ್ಯತೆಯೂ ಇದೆ~ ಎಂದರು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಧೀರ್ ಕೃಷ್ಣಸ್ವಾಮಿ, `ಈ ಹಿಂದೆ ಕಾಪಿರೈಟ್ ಸೊಸೈಟಿಗಳ ಮಾಫಿಯಾ ಇತ್ತು. ಹೊಸ ಕಾಯ್ದೆಯಿಂದ ಅಂತಹ ಸೊಸೈಟಿಗಳಿಗೆ ಕಡಿವಾಣ ಬೀಳಲಿದೆ. ಈಗಿನ ಕಾಯ್ದೆಯಿಂದ ಅರ್ಹರಿಗೆ ಪ್ರತಿಫಲ ಸಮಾನ ಹಂಚಿಕೆಯಾಗುತ್ತದೆ~ ಎಂದು ಅಭಿಪ್ರಾಯಪಟ್ಟರು.

ಗಾಯಕಿ ಎಂ.ಡಿ. ಪಲ್ಲವಿ, ಸುಚಿತ್ರಾ ಸಂಸ್ಥೆಯ ಟ್ರಸ್ಟಿ ಪ್ರಕಾಶ್ ಬೆಳವಾಡಿ, ವಕೀಲ ಸೌವಿಕ್ ಮಜುಂದಾರ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT