ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು: ಕಾರ್ಯಕರ್ತರಲ್ಲಿ ಅಸಮಾಧಾನ

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಳಂಬ
Last Updated 10 ಏಪ್ರಿಲ್ 2013, 8:58 IST
ಅಕ್ಷರ ಗಾತ್ರ

ಶಿರ್ವ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಕಾಂಗ್ರೆಸ್ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಇನ್ನೂ ವಿಳಂಬ ನೀತಿ ತೋರುತ್ತಿರುವುದರಿಂದ ಸೂಕ್ತ ಅಭ್ಯರ್ಥಿಯ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಅಸಮಾಧಾನ ಆಗಿದ್ದು, ಕಾಪು ಕ್ಷೇತ್ರದ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸಿಗೆ ತಣ್ಣೀರೆರಚಿದಂತಾಗಿದೆ. ಪಕ್ಷದ ಹೈಕಮಾಂಡಿನ ವಿಳಂಬ ನೀತಿ ಧೋರಣೆಗೆ ಕ್ಷೇತ್ರದ ಹಿರಿಯ, ಕಿರಿಯ ಕಾರ್ಯಕರ್ತರು ಸಿಡಿಮಿಡಿಗೊಂಡಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕರಾಗಿದ್ದ ಲಾಲಾಜಿ ಆರ್.ಮೆಂಡನ್ ಅವರ ಹೆಸರು ಅಂತಿಮವಾಗಿದ್ದು, ಕಾರ್ಯಕರ್ತರು ಪ್ರಚಾರಕ್ಕೆ ಇಳಿದಿದ್ದರೂ ಸಹ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ಇನ್ನೂ ಹೈಕಮಾಂಡ್ ಕದ ತಟ್ಟುತ್ತಾ ದೆಹಲಿಯಲ್ಲೇ ಅಲೆದಾಡುತ್ತಿರುವುದರಿಂದ ಅಭ್ಯರ್ಥಿ ಘೋಷಣೆ ಯಾಗದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಷೇತ್ರ ಪ್ರಚಾರ ಕಾರ್ಯ ನಡೆಸುವುದು ಕಗ್ಗಂಟಾಗಿದೆ.
ಚುನಾವಣೆ ಎದುರಿಸಲು ವಿವಿಧ ಮುಖಂಡರು, ಬೆಂಬಲಿಗರು ಸಿದ್ಧವಾಗಿದ್ದರೂ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮತದಾರರ ಪ್ರಶ್ನೆಗೆ ಸದ್ಯಕ್ಕೆ ಪಕ್ಷದಲ್ಲಿ ಉತ್ತರ ಇಲ್ಲದಂತಾಗಿದೆ.

ಕಾಂಗ್ರೆಸಿನ ಅಧಿಕೃತ ಅಭ್ಯರ್ಥಿಯ ಘೋಷಣೆಯಾಗದೆ ಯಾರ ಹಿಂದೆ ಕೆಲಸ ಮಾಡಬೇಕು ಎಂಬ ಜಿಜ್ಞಾಸೆಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯದೇ ಗೊಂದಲಕ್ಕೆ ಸಿಲುಕಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ `ಕೈ' ಪಾಳಯದಲ್ಲಿ ದಿನಕ್ಕೊಂದು ನಾಯಕರ ಹೆಸರು ಕೇಳಿ ಬರುತ್ತಿರುವುದರಿಂದ ಪ್ರಚಾರಕ್ಕೆ ಹಿನ್ನಡೆಯಾಗಿದ್ದು, ಬಿಜೆಪಿ ಕಾರ್ಯಕರ್ತರ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ಸುಮಾರು 20ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಪಟ್ಟಿಯಲ್ಲಿದ್ದರೂ ಇದೀಗ ಅಂತಿಮ ಪಟ್ಟಿಯಲ್ಲಿ ಮೂವರ ಹೆಸರು ಮಾತ್ರ ಪ್ರಮುಖವಾಗಿ ಕೇಳಿಬರುತ್ತಿವೆ. ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಐದು  ಬಾರಿ ಶಾಸಕರಾಗಿರುವ ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ಅವರು ಈ ಬಾರಿ ಕೂಡಾ ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾವ  ಅಭ್ಯರ್ಥಿಗಳ ಮೇಲೆ ಒಲವು ತೋರಿಸಲಿದೆ ಎಂಬುದು ಇನ್ನೂ ನಿಗೂಢ. ಈ ನಡುವೆ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕೂಡಾ ಈ ಭಾಗದಲ್ಲಿ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರು ಆಕಾಂಕ್ಷಿಗಳು ಮುಂಚೂಣಿಗಳಾಗಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್‌ನಲ್ಲಿ ಈ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ಖಚಿತ ಎನ್ನುವಷ್ಟರಲ್ಲಿ ಇದೀಗ ಈ ಪಟ್ಟಿಗೆ ಇನ್ನೊಂದು ಹೆಸರು ಸೇರಿಕೊಂಡಿದೆ.

ಉಡುಪಿ ಸಂಸದರಾಗಿ ಗುರುತಿಸಿಕೊಂಡಿದ್ದು, ಕಾಪು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲದಿದ್ದರೂ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಅವರ ಹೆಸರು ಹೈಕಮಾಂಡ್ ಮುಂದಿರುವ ಅಂತಿಮ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿ ಅಚಾನಕ್ಕಾಗಿ ಸೇರಿಕೊಂಡು ಬಿಟ್ಟಿದೆ.  ಬಿಲ್ಲವ ಜನಾಂಗಕ್ಕೆ ಸೇರಿರುವ ವಸಂತ ವಿ. ಸಾಲ್ಯಾನ್ ತಮಗೆ ಟಿಕೆಟ್ ಖಚಿತ ಎಂದು ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಬಂಟ ಸಮುದಾಯದ ಸುರೇಶ್ ಶೆಟ್ಟಿ ಗುರ್ಮೆ ತಮಗೆ ಟಿಕೆಟ್ ಖಚಿತವಾಗಿದೆ ಎಂದು ಕ್ಷೇತ್ರ ಪರ್ಯಟನೆ ಮಾಡುತ್ತಿದ್ದರೆ. ಇದೀಗ ಬಿಲ್ಲವ ಸಮುದಾಯದ ಇನ್ನೊಬ್ಬ ಅಭ್ಯರ್ಥಿ.

ಪುತ್ತೂರಿನ ವಿನಯ ಕುಮಾರ್ ಸೊರಕೆ ಅವರ ಹೆಸರೂ ಕೇಳಿ ಬಂದಿರುವುದರಿಂದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ನಡುವೆ ಗೊಂದಲದ ವಾತಾವರಣ ಏರ್ಪಟ್ಟಿದೆ. ಹೀಗಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಕಾರ್ಯ ಕರ್ತರು ಇತ್ತೀಚಿನ ಬೆಳವಣಿಗೆಯಿಂದಾಗಿ ಕಂಗಾಲಾಗಿದ್ದಾರೆ. ಮೂವರು ಅಭ್ಯರ್ಥಿಗಳ ಪೈಕಿ ಇಬ್ಬರು ಒಂದೇ ಸಮುದಾಯ ದವರಾಗಿ ದ್ದರಿಂದ ಒತ್ತಡ ತಂತ್ರ ಬಲು ಜೋರಾಗಿದೆ. ಕಾಂಗ್ರೆಸ್‌ನೊಳಗೆ  ಟಿಕೆಟ್ ನೀಡಿದರೆ ಸಾಲ್ಯಾನ್, ಸೊರಕೆ ಈ ಇಬ್ಬರಲ್ಲಿ ಒಬ್ಬರಿಗೆ ದೊರೆಯಲಿದ್ದು, ಕಾಂಗ್ರೆಸ್ಸೇತ ರರಾಗಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

ಅಮೆರಿಕಕ್ಕೆ ತೆರಳಿರುವ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ದೆಹಲಿಗೆ ಮರಳಿದ ಬಳಿಕವೇ ಟಿಕೆಟ್ ಅಂತಿಮವಾಗಲಿದ್ದರೂ ಈ ಮೂವರು ಸಂಭಾವ್ಯ ಅಭ್ಯರ್ಥಿಗಳು ಸೇರಿದಂತೆ ಇನ್ನುಳಿದ ಆಕಾಂಕ್ಷಿಗಳು ಕೂಡಾ ದೆಹಲಿಯಲ್ಲಿ ಸೋನಿಯಾ ಆಗಮನವನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾರ ಪರ ಪ್ರಚಾರದಲ್ಲಿ ತೊಡಗಬೇಕು ಎಂಬ ಗೊಂದಲ ದೊಂದಿಗೆ ಪಕ್ಷದ ಕಚೇರಿಗಳಲ್ಲಿ ಮಾಧ್ಯಮಗಳ ವರದಿಗಳ ಮೇಲೆ ಕಣ್ಣಾಡಿಸುತ್ತಾ ಕಾಲ ಕಲೆಯುತ್ತಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಜೆಡಿಎಸ್ ಕೂಡಾ ತಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸದೆ ಅಲ್ಲಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಾ ಕಾಂಗ್ರೆಸ್ಸಿನ ನಡೆಯನ್ನು ಗಮನಿಸುತ್ತಾ ಹೊಸ ತಂತ್ರವನ್ನು ರೂಪಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಆದರೆ ಕಾಪು ಕ್ಷೇತ್ರದಲ್ಲಿ ಎಂದಿನಂತೆ  ತ್ರಿಕೋನ ಸ್ಪರ್ಧೆ ಏರ್ಪಡುವುದಂತೂ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT