ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾ.ಪು.ಸಿದ್ದವೀರಯ್ಯ ಅಧ್ಯಕ್ಷ, ಎಂ.ಕೆ.ಸುಚಿತ್ರ ಉಪಾಧ್ಯಕ್ಷೆ

Last Updated 9 ಅಕ್ಟೋಬರ್ 2012, 9:05 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪಂಚಾಯಿತಿಯಲ್ಲಿ ಎರಡನೇ ಅವಧಿಗೂ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಮುಂದುವರಿದಿದ್ದು, ಬಿಜೆಪಿಯ ಕಾ.ಪು.ಸಿದ್ದವೀರಪ್ಪ  ಅಧ್ಯಕ್ಷರಾಗಿ, ಜೆಡಿಎಸ್‌ನ ಎಂ.ಕೆ.ಸುಚಿತ್ರ ಉಪಾಧ್ಯಕ್ಷರಾಗಿ ಸೋಮವಾರ ಆಯ್ಕೆಯಾದರು.

ಕಾ.ಪು.ಸಿದ್ದವೀರಪ್ಪ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಮಹದೇವು ಅವರನ್ನು 4 ಮತಗಳ ಅಂತರದಿಂದ ಸೋಲಿಸಿದರು. ಸಿದ್ದವೀರಯ್ಯ ಪರವಾಗಿ 25, ಮಹದೇವು ಪರವಾಗಿ 21 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಜೆಡಿಎಸ್‌ನ ಎಂ.ಕೆ.ಸುಚಿತ್ರ ತಮ್ಮ ಎದುರಾಳಿ ಕಾಂಗ್ರೆಸ್‌ನ ಎಸ್.ಭ್ರಮರಾಂಬ ಅವರನ್ನು 4 ಮತಗಳಿಂದ ಪರಾಭವಗೊಳಿಸಿದರು. ಸುಚಿತ್ರ ಪರವಾಗಿ 25, ಭ್ರಮರಾಂಬ ಪರವಾಗಿ 21 ಮತಗಳು ಚಲಾವಣೆಗೊಂಡವು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಪ್ರಾದೇಶಿಕ ಆಯುಕ್ತೆ ಹಾಗೂ ಚುನಾವಣಾಧಿಕಾರಿಯೂ ಆಗಿದ್ದ ಎಂ.ವಿ.ಜಯಂತಿ ಅವರು ಕಾ.ಪು.ಸಿದ್ದವೀರಪ್ಪ ಮತ್ತು ಎಂ.ಕೆ.ಸುಚಿತ್ರ ಅವರ ಆಯ್ಕೆಯನ್ನು ಘೋಷಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಅಕ್ಟೋಬರ್ 11, 2012 ರಿಂದ ಜೂನ್ 10, 2014 ರ ವರಿಗೆ ಇರುತ್ತದೆ.

ಕಾ.ಪು.ಸಿದ್ದವೀರಪ್ಪ ಮತ್ತು ಎಂ.ಕೆ.ಸುಚಿತ್ರ ಅವರ ಪರವಾಗಿ ಪಕ್ಷೇತರ ಸದಸ್ಯ ಮಾದಪ್ಪ ಮತ ಚಲಾಯಿಸಿದರು.
ಸಿದ್ದವೀರಪ್ಪ ಮೂರು ಸೆಟ್, ಎಂ.ಮಹದೇವು ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದರು. ಎಂ.ಕೆ. ಸುಚಿತ್ರ ಎರಡು ಸೆಟ್, ಭ್ರಮರಾಂಬ ಮತ್ತು ಎಂ.ರಾಜಲಕ್ಷ್ಮಿ ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದರು. ಎಲ್ಲವೂ ಕ್ರಮಬದ್ಧವಾಗಿದ್ದವು. ಆದರೆ ಜೆಡಿಎಸ್‌ನ ರಾಜಲಕ್ಷ್ಮಿ ಅವರು ಎಂ.ಕೆ.ಸುಚಿತ್ರ ಅವರನ್ನು ಬೆಂಬಲಿಸಿ ನಾಮಪತ್ರವನ್ನು ಹಿಂಪಡೆ ದರು. ಚುನಾವಣೆ ವೇಳೆ ಯಾವುದೇ ರೀತಿಯ ಗೊಂದಲು ಸೃಷ್ಟಿಯಾಗಲಿಲ್ಲ.

ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 46 ಸ್ಥಾನಗಳಿವೆ. ಕಾಂಗ್ರೆಸ್ 21, ಜೆಡಿಎಸ್ 16, ಬಿಜೆಪಿ 8, ಪಕ್ಷೇತರ 1 ಸ್ಥಾನವನ್ನು ಗಳಿಸಿದ್ದಾರೆ. ಹೀಗಾಗಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಮೊದಲ ಅವಧಿಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಜೆಡಿಎಸ್‌ನ ಜೆ.ಸುನೀತಾ ವೀರಪ್ಪಗೌಡ, ಭಾಗ್ಯಶಿವಮೂರ್ತಿ ಅಧ್ಯಕ್ಷ ರಾಗಿಯೂ, ಡಾ.ಶಿವರಾಂ, ಭಾಗ್ಯಲಕ್ಷ್ಮಿ ಉಪಾಧ್ಯಕ್ಷ ರಾಗಿಯೂ ಕೆಲಸ ಮಾಡಿದರು. ಎರಡನೇ ಅವಧಿಗೂ ಉಭಯ ಪಕ್ಷಗಳ ನಡುವೆ ಮೈತ್ರಿ ಮುಂದುವರಿದಿದೆ. ಇದರಿಂದಾಗಿ ಕಾಂಗ್ರೆಸ್ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಜಯ್‌ನಾಗಭೂಷನ್ ಇದ್ದರು.

ಮೈಸೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಧ್ಯಾಹ್ನ 3.11 ನಿಮಿಷಕ್ಕೆ ಸರಿಯಾಗಿ ಬಿಜೆಪಿಯ ಕಾ.ಪು. ಸಿದ್ದವೀರಪ್ಪ ನವರ ಪರವಾಗಿ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಕೈ ಎತ್ತಿದರು. ಈ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಹೊರಗೆ ಪಟಾಕಿಯನ್ನು ಸಿಡಿಸಿ, ಜಯಕಾರ ಹಾಕಿ ಸಂಭ್ರಮಿಸಿದರು.

ಜೆಡಿಎಸ್‌ನ ಎಂ.ಕೆ.ಸುಚಿತ್ರ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಷಯ ತಿಳಿದ ಆ ಪಕ್ಷದ ಕಾರ್ಯಕರ್ತರೂ ಸಹ ಪಟಾಕಿ ಸಿಡಿಸಿದರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರು.

ಗಿಡಕೊಟ್ಟ ಪುಷ್ಪಾವತಿ
ಹುಣಸೂರು ತಾಲ್ಲೂಕು ಧರ್ಮಾಪುರ ಕ್ಷೇತ್ರದ ಸದಸ್ಯೆ ಡಾ.ಪುಷ್ಪಾವತಿ ಎಂದಿನಂತೆ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಉಪಾಧ್ಯಕ್ಷೆ ಎಂ.ಕೆ.ಸುಚಿತ್ರ ಅವರಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದರು. ಈ ಹಿಂದೆ ಭಾಗ್ಯಶಿವಮೂರ್ತಿ ಮತ್ತು ಭಾಗಲಕ್ಷ್ಮಿ ಆಯ್ಕೆ ಯಾದಾಗಲೂ ಗಿಡಗಳನ್ನು ಕೊಟ್ಟಿದ್ದರು.

ಕಾ.ಪು.ಸಿ. ಪ್ರತ್ಯಕ್ಷ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪನವರ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗ ಸ್ವಾಮಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಇವರು ತಮ್ಮ ಸಹೋದರ ಕಾ.ಪು. ಸಿದ್ದವೀರಪ್ಪನವರು ಅಧ್ಯಕ್ಷರಾಗಲು ಎಲ್ಲ ರೀತಿಯಿಂದಲೂ ಶ್ರಮಿಸಿದ್ದರು. ಹೀಗಾಗಿ ಸಹೋದರ ಆಯ್ಕೆಯಾದ ಕೂಡಲೇ ಅವರನ್ನು ಅಭಿನಂದಿಸಲು ತುದಿಗಾಲಲ್ಲಿ ನಿಂತಿದ್ದರು.

ಕಾಲಿಗೆರಗಿದ ಸುಚಿತ್ರ
ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಎಂ.ಕೆ.ಸುಚಿತ್ರ ತಮ್ಮದೇ ಪಕ್ಷದ ಹಿರಿಯ ಸದಸ್ಯ ಚಿಕ್ಕಣ್ಣೇಗೌಡ ಅವರ ಕಾಲಿಗೆರಗಿ ನಮಸ್ಕರಿಸಿದರು. ಮತ್ತೊಬ್ಬ ಹಿರಿಯ ಸದಸ್ಯ ಸಿ.ಟಿ.ರಾಜಣ್ಣನವರ ಕಾಲಿಗೆ ನಮಸ್ಕಾರ ಮಾಡಲು ಹೋದರು. ಅವರು ನಯವಾಗಿಯೇ ನಿರಾಕರಿಸಿ, `ನಿಮಗೆ ಒಳ್ಳೆಯದಾಗಲಿ~ ಎಂದು ಶುಭ ಹಾರೈಸಿದರು.

ಮುಖಂಡರ ಅಭಿನಂದನೆ
ಚುನಾವಣೆ ಪ್ರಕ್ರಿಯೆ ಮುಗಿಯವ ತನಕ ಕೊಠಡಿಯಲ್ಲಿ ಕುಳಿತಿದ್ದ ಜೆಡಿಎಸ್‌ನ ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚಿಕ್ಕಮಾದು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡ ಸ್ವಾಮಿ ಸೇರಿದಂತೆ ಹಲವು ಮುಖಂಡರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT