ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಕಣಿವೆಯಲ್ಲಿ ಕಾರು ರ‌್ಯಾಲಿ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

`ಕಾಫಿ ಕಣಿವೆ'  ಚಿಕ್ಕಮಗಳೂರಿನಲ್ಲಿ ಪ್ರತಿ ವರ್ಷ ಚಳಿಗಾಲಕ್ಕೂ ಮುನ್ನ ನಡೆಯುವ ರಾಷ್ಟ್ರಮಟ್ಟದ ಮೋಟಾರು ಕಾರು ರ‌್ಯಾಲಿಯೂ ದೇಶದ ಮೂಲೆಮೂಲೆಯಿಂದ ಪ್ರತಿಭಾನ್ವಿತ ಚಾಲಕರು, ಹಾಗೂ ಪ್ರೇಕ್ಷಕರನ್ನು ಸೆಳೆಯುತ್ತದೆ!

ರಣಜಿವರೆಗೆ ಹೋಗಿರುವ ಒಬ್ಬನೇ ಒಬ್ಬ ಕ್ರಿಕೆಟಿಗ ಈ ಪ್ರದೇಶದಲ್ಲಿ ಕಂಡು ಬರದಿದ್ದರೂ, ಮೋಟಾರು ರ‌್ಯಾಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಮಾಜಿ ಚಾಂಪಿಯನ್, ಈಗಲೂ ಮಿನುಗುತ್ತಿರುವ ಚಾಂಪಿಯನ್ ಚಾಲಕರು ಹಲವರಿದ್ದಾರೆ.

ಹೊಸ ಮಾದರಿಯ ಐಶಾರಾಮಿ ವಾಹನ ಮಾರುಕಟ್ಟೆಗೆ ಬಂದರೂ ಸಾಕು ಅದರಲ್ಲೊಂದು ಚಿಕ್ಕಮಗಳೂರಿನ ರಸ್ತೆಗೆ ಇಳಿಯುವುದು ಖಚಿತ.  ಕಾಫಿ ನೆಲದಲ್ಲಿ ನಡೆಯುತ್ತಿರುವ ಮೋಟಾರ್ ರ‌್ಯಾಲಿ ಯಶಸ್ಸಿನ ಹಿಂದಿನ ಗುಟ್ಟು ಇದರಲ್ಲೇ ಅಡಗಿದೆ. ಹಾಗಾಗಿಯೇ ಮೂರು ದಶಕಗಳಿಂದ ಕಾರು ರ‌್ಯಾಲಿ ಸೊರಗದೆ ಮುಂದುವರಿದಿದೆ.

ಭವಿಷ್ಯದಲ್ಲಿ ಚಿಕ್ಕಮಗಳೂರು `ಕಾರು ರ‌್ಯಾಲಿ ಹಬ್ಬು' ಎನಿಸಿದರೂ ಅಚ್ಚರಿಪಡಬೇಕಿಲ್ಲ.
ಕೋಲ್ಕತ್ತದ ಅಮಿತ್ ಘೋಷ್, ಮಂಗಳೂರಿನ ಅಶ್ವಿನ್ ನಾಯಕ್, ಕಾಸರಗೋಡಿನ ಮೂಸಾ    ಶರೀಫ್, ಕೇರಳದ ಜುಹಿನ್, ಮೈಸೂರಿನ ಲೋಹಿತ್ ಅರಸ್, ಸುಜಿತ್ ಕುಮಾರ್, ಕರ್ಣ ಕಡೂರು, ಸೋಮಿನಿತ ಘೋಷ್.... ಹೀಗೆ ಪ್ರತಿಯೊಬ್ಬ ರಾಷ್ಟ್ರಮಟ್ಟದ ಚಾಲಕ ಜೋಡಿಗಳು ಚಿಕ್ಕಮಗಳೂರು ರ‌್ಯಾಲಿ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಭಾರತೀಯ ಮೋಟಾರು ಸ್ಪೋರ್ಟ್ಸ್ ಕ್ಲಬ್ ಮತ್ತು ಚಿಕ್ಕಮಗಳೂರು ಮೋಟಾರು ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಮೊನ್ನೆಯಷ್ಟೇ ಎರಡು ದಿನಗಳ ಕಾಲ ಚಿಕ್ಕಮಗಳೂರು ಮತ್ತು ಬೀರೂರಿನಲ್ಲಿ ನಡೆದ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‌್ಯಾಲಿ ಚಾಂಪಿಯನ್‌ನಲ್ಲಿ ಹೆಸರಾಂತ ಚಾಲಕರು, ನಾವಿಕರು ಭಾಗವಹಿಸಿದ್ದರು.

ಐಆರ್‌ಸಿ, ಐಎನ್‌ಆರ್‌ಸಿ 2000ಸಿಸಿ, 1600 ಸಿಸಿ, ಜೂನಿಯರ್ ಐಎನ್‌ಆರ್‌ಸಿ ವಿಭಾಗಗಳಲ್ಲಿ ಒಟ್ಟು 43 ಕಾರುಗಳು ಸ್ಪರ್ಧಿಸಿದ್ದವು. ಇದರಲ್ಲಿ 15 ಕಾರುಗಳು ಸ್ಪರ್ಧೆ ಪೂರ್ಣಗೊಳಿಸಲಾಗದೆ ವಾಹನದಲ್ಲಿ ಎದುರಾದ ತಾಂತ್ರಿಕ ಅಡಚಣೆ, ಚಾಲಕನ ನಿಯಂತ್ರಣ ತಪ್ಪಿ ಹೊರ ನಡೆದವು.

ವಿಶ್ವಮಟ್ಟದ ರ‌್ಯಾಲಿಯಲ್ಲಿ ಮಿಂಚುವ ಸುಬಾರು ಇಂಪ್ರೆಜಾ ಇದೇ ಮೊದಲ ಬಾರಿಗೆ ಕಾಫಿ ಡೇ ರ‌್ಯಾಲಿಯಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರಿಗೆ `ಕಿಕ್' ನೀಡಿತಾದರೂ ಸ್ಪರ್ಧೆ ಪೂರ್ಣಗೊಳಿಸಲಾಗದೆ ಹೊರನಡೆದು ಕೊಂಚ ನಿರಾಸೆ ಮೂಡಿಸಿತು. ಏಷ್ಯದ ಅಗ್ರ ಶ್ರೇಯಾಂಕದ ಚಾಲಕ ಗೌರವ್‌ಗಿಲ್ ಅನುಪಸ್ಥಿತಿಯೂ ಎಲ್ಲರನ್ನು ಕಾಡಿತು.

ಎಂಆರ್‌ಎಫ್ ಟೀಮ್ ಈ ರ‌್ಯಾಲಿಯಲ್ಲಿ ಭಾಗವಹಿಸಿಲ್ಲದ ಕಾರಣಕ್ಕೆ ರ‌್ಯಾಲಿ ಪ್ರಿಯರ ಕಣ್ಮಣಿ ಎನಿಸಿರುವ ಗಿಲ್ ಚಾಲನಾ ಕೌಶಲ್ಯ ಪ್ರದರ್ಶಿಸಲು ಆಗಲಿಲ್ಲ. ಕೋಲ್ಕತ್ತದ ಯುವ ಪ್ರತಿಭಾನ್ವಿತ ಚಾಲಕ ಅಮಿತ್ ಘೋಷ್, ಚಿಕ್ಕಮಗಳೂರಿನ ಎ.ಎಂ.ಕರಣ್, ಬಿ.ರಘುನಂದನ್ ಚಾಂಪಿಯನ್ನರಾಗಿ ಹೊರಹೊಮ್ಮಿ ಗಮನ ಸೆಳೆದರು.

ಊಟ, ತಿಂಡಿ ಬಿಟ್ಟು, ಇನ್ನು ಕೆಲವರು ಜಮೀನು ಕೆಲಸ ಬಿಟ್ಟು ಮನೆಯಿಂದಲೇ ಬುತ್ತಿಕಟ್ಟಿಕೊಂಡು ಬಂದು ಮರದ ನೆರಳಿನಲ್ಲಿ ಕುಳಿತು ಬೆಳಿಗ್ಗೆಯಿಂದ ಸಂಜೆವರೆಗೂ ರ‌್ಯಾಲಿ ಕಣ್ತುಂಬಿಕೊಂಡ ಸನ್ನಿವೇಶಗಳು ಕಡೂರಿನ ಎಮ್ಮೆದೊಡ್ಡಿ, ಹೊಗರೆಹಳ್ಳಿ, ಶಿವಾಜಿಪುರ, ಮುಸ್ಲಾಪುರದಹಟ್ಟಿಯ ರಸ್ತೆ ಬದಿ, ಬೀರೂರಿನ ವಿವಿ ಕೇಂದ್ರದ ಆವರಣದಲ್ಲಿ ಕಂಡುಬಂದವು.

`ಮೋಟಾರ್ ರ‌್ಯಾಲಿ ಟಿ.ವಿಯಲ್ಲಿ ನೋಡೋದು ಅಂಥಾ ಖುಷಿ ಕೊಡಲ್ಲ. ಇಂತಹ ಸಾಹಸ ಕ್ರೀಡೆಯನ್ನು ಲೈವ್ ನೋಡ್ತೀವಲ್ಲ ಅದರ ಮಜಾನೇ ಬೇರೆ. ನಾವಂತೂ ಊರತ್ತಿರದಲ್ಲೇ ನಡೆಯುವ ಕಾಫಿ ರ‌್ಯಾಲಿಯನ್ನು ಐದಾರು ವರ್ಷಗಳಿಂದ ತಪ್ಪದೆ ನೋಡಲು ಬರುತ್ತಿದ್ದೇವೆ' ಎಂದರು ಬೀರೂರಿನ ಗೃಹಿಣಿ ಮಮತಾ.

ಅಮ್ಮನ ಮಾತನ್ನು ಅನುಮೋದಿಸಿದ ಅವರ ಪುತ್ರಿ ಹವ್ಯಾಸಿ ಛಾಯಾಗ್ರಾಹಕಿ ಜ್ಯೋತಿ, ಮೋಟಾರು ಕಾರುಗಳು ಏರ್‌ಪಿನ್ ತಿರುವುಗಳಲ್ಲಿ ರುಯ್ಯನೆ ತಿರುವ ಪಡೆದು ಮುಗೆಲೆತ್ತರಕ್ಕೆ ದೂಳೆಬಿಸುವ, ದಿಣ್ಣೆ, ತಗ್ಗುಗಳಲ್ಲಿ ಜಿಗಿದು ಪ್ರೇಕ್ಷಕರನ್ನು ಪುಳಕಗೊಳಿಸುವ ರೋಚಕ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದುಕೊಳ್ಳುತ್ತಿದ್ದರು.

`ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಭಾನುವಾರದ ದಿನ ನಮ್ಮೂರಿನ ಮೂಲಕವೇ ರ‌್ಯಾಲಿ ಹಾದು ಹೋಗುತ್ತಿತ್ತು. ಆಗ ನನ್ನ ವಯಸ್ಸು ನಾಲ್ಕೈದು ವರ್ಷವಷ್ಟೆ. ಇಡೀ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಶರವೇಗದಲ್ಲಿ ದೂಳೆಬ್ಬಿಸಿ ಹೋಗುವ ಬೈಕು, ಕಾರುಗಳನ್ನು ರೆಪ್ಪೆಮುಚ್ಚದೆ ನೋಡುತ್ತಾ ನಿಲ್ಲುತ್ತಿದ್ದೆ.

ನನ್ನ ಕುತೂಹಲ ತಣಿಯುತ್ತಲೇ ಇರಲಿಲ್ಲ. ರ‌್ಯಾಲಿ ನೋಡಲು ಮತ್ತೊಂದು ಚಳಿಗಾಲ ಎದುರು ನೋಡುತ್ತಿದ್ದೆ. ಐದಾರು ವರ್ಷ ಸತತ ರ‌್ಯಾಲಿ ಕಣ್ತುಂಬಿಕೊಂಡಿದ್ದೆ. ಓದು, ಉದ್ಯೋಗ ನಿಮಿತ್ತ ರ‌್ಯಾಲಿ ನೋಡುವ ಅವಕಾಶ ತಪ್ಪಿಹೋಗಿತ್ತು. ಈಗ ಕಳೆದ ಎರಡು ವರ್ಷಗಳಿಂದ ರ‌್ಯಾಲಿ ಇದ್ದಾಗ ರಜೆ ಹಾಕಿ ಬಂದು ಕಣ್ತುಂಬಾ ನೋಡಿ ಖುಷಿಪಡುತ್ತೇನೆ' ಎಂದರು ಬೆಂಗಳೂರಿನಿಂದ ರ‌್ಯಾಲಿ ನೋಡಲು ಬೀರೂರಿನ ವಿಶ್ವವಿದ್ಯಾಲಯ ಆವರಣಕ್ಕೆ ಬಂದಿದ್ದ ಸಾಫ್ಟ್‌ವೇರ್ ಉದ್ಯೋಗಿ ಸಂದೇಶ.

ಈ ವರ್ಷದ ಕಾಫಿ ಡೇ ರ‌್ಯಾಲಿಯ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸ್ಥಳೀಯ ಪ್ರತಿಭೆ ಎ.ಎಂ.ಕರಣ್. ಕಡೂರು ಮೂಲದ ಚಾಲಕ ಕರ್ಣ ಮತ್ತು ಕೋಲ್ಕತ್ತ ಮೂಲದ ಮಹಿಳಾ ನ್ಯಾವಿಗೇಟರ್ ಸೋಮಿನಿತ ಘೋಷ್ ಮುಖ ಮಾತ್ರ ಬಾಡಿತ್ತು. ಆರನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಈ ಜೋಡಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿತ್ತು.

ಕೊನೆ ಸುತ್ತಿನಲ್ಲಿ ಸರ್ವೀಸ್ ಬ್ರೇಕ್ ಅಪ್‌ನ 40 ಸೆಕೆಂಡ್ ವಿಳಂಬದಿಂದ ಎದುರಾದ ಪೆನಾಲ್ಟಿ ಅವರಿಂದ ಬೆಳಗಾಗುವುದರೊಳಗೆ ಅಗ್ರಸ್ಥಾನ ಕಸಿದುಕೊಂಡು, ಎರಡನೇ ಸ್ಥಾನಕ್ಕೆ ನೂಕಿಬಿಟ್ಟಿತ್ತು. ಕರ್ಣಗೆ ಸಹಚಾಲಕಿಯಾಗಿದ್ದ ಸೋಮಿನಿತ ಘೋಷ್ ತನ್ನ ಸ್ವಂತ ಅಣ್ಣ ಅಮಿತ್‌ಘೋಷ್‌ಗೆ ಅಗ್ರಸ್ಥಾನದ `ಕೊಡುಗೆ' ನೀಡಬೇಕಾಯಿತು.

ಕಾಫಿ ಡೇ ರ‌್ಯಾಲಿ `ದಿ ಬೆಸ್ಟ್ ರ‌್ಯಾಲಿ'
ಮೂರು ದಶಕಗಳ ಇತಿಹಾಸ ಹೊಂದಿರುವ ಮೋಟಾರು ಕಾರು ರ‌್ಯಾಲಿ ಕಳೆದ ಮೂರು ಬಾರಿ (2007, 2009, 2011) ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಒಕ್ಕೂಟದಿಂದ ದೇಶದ ಅತ್ಯುತ್ತಮ ರ‌್ಯಾಲಿ ಎನ್ನುವ ಮೆಚ್ಚುಗೆ ಪಡೆದಿದೆ.

ಆರಂಭದಿಂದ ಕಾಫಿ 500 ರ‌್ಯಾಲಿ ಎಂದೇ ಕರೆಯುತ್ತಿದ್ದ ಚಿಕ್ಕಮಗಳೂರು ರ‌್ಯಾಲಿಗೆ ಕಳೆದ 10 ವರ್ಷಗಳಿಂದ ಕಾಫಿ ಡೇ ಕಾಯಂ ಪ್ರಾಯೋಜಕತ್ವ ವಹಿಸಿದ ನಂತರ ದೇಶದಲ್ಲಿ `ಕಾಫಿ ಡೇ ರ‌್ಯಾಲಿ' ಎಂದೇ ಚಿರಪರಿಚಿತ.

ಚೆನ್ನೈ ಮೂಲದ ಗೋಪಿನಾಥ್ ಶಿವ ಎನ್ನುವವರು ರಾಜ್ಯದಲ್ಲಿ ಮೊದಲ ಬಾರಿಗೆ ಹುಟ್ಟುಹಾಕಿದ ರ‌್ಯಾಲಿ ಕಾಫಿ ಕಣಿವೆಯಲ್ಲಿ ಬಾಬುಶಂಕರ ಅರಿಶಿಣಗುಪ್ಪೆ, ಬಿ.ಎಂ.ಶ್ರೀನಿವಾಸ್, ಪ್ರಭಾಕರ್, ಎಸ್.ಎಂ.ರಘುನಾಥ್, ಈರೇಗೌಡ, ಫಾರೂಕ್ ಅಹಮದ್ ಅವರಂತಹ ಉತ್ಸಾಹಿಗಳ ಪರಿಶ್ರಮದಿಂದ 1980ರ ಅವಧಿಯಿಂದಲೂ ಹಲವು ಏಳುಬೀಳುಗಳ ನಡುವೆ ಇಂದು ರಾಷ್ಟ್ರದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ.

ಪ್ರಾಯೋಜಕರಿಲ್ಲದೆ ಕೆಲ ವರ್ಷ ರ‌್ಯಾಲಿ ನಡೆದಿರಲಿಲ್ಲ. ಆದರೆ, ಎಬಿಸಿ ಮುಖ್ಯಸ್ಥ ಸಿದ್ಧಾರ್ಥ ಹೆಗ್ಡೆ ಪ್ರಾಯೋಜಕತ್ವ ವಹಿಸಿಕೊಂಡ ಮೇಲೆ ಆ ಸಮಸ್ಯೆ ತಲೆತೋರಿಲ್ಲ.
2014-15ರೊಳಗೆ `ಏಷ್ಯ ಫೆಸಿಫಿಕ್ ರ‌್ಯಾಲಿ'ಯನ್ನು ಚಿಕ್ಕಮಗಳೂರಿಗೆ ತರುವ ಕನಸು ಹೊತ್ತು ಆ ದಿಕ್ಕಿನಲ್ಲಿ ಪರಿಶ್ರಮದ ಪ್ರಯತ್ನ ನಡೆಸುತ್ತಿದ್ದೇವೆ.

ಅದೊಂದು ಕನಸು ಸಾಕಾರಗೊಂಡರೆ ವಿಶ್ವ ರ‌್ಯಾಲಿಯ ಭೂಪಟದಲ್ಲಿ ಚಿಕ್ಕಮಗಳೂರು ನೋಡಬಹುದು. `ಏಷ್ಯ ಫೆಸಿಫಿಕ್ ರ‌್ಯಾಲಿ' ತರುವುದು ನಮಗೆ ಕಷ್ಟವಾಗಲಾರದು, ನಮ್ಮಲ್ಲಿ ಸ್ಟಾರ್ ಹೋಟೆಲ್‌ಗಳಿಗೆ ಭರವಿಲ್ಲ, ಇನ್ನೊಂದೆರಡು ಪಂಚತಾರ ಹೋಟೆಲ್‌ಗಳು ತಲೆ ಎತ್ತಿದರೆ ಸಾಕು.

ವಿದೇಶದಿಂದ ಕಾರುಗಳನ್ನು ರ‌್ಯಾಲಿಗೆ ತರಲು ಅನುಕೂಲವಾಗುವಂತೆ ಹತ್ತಿರದಲ್ಲೇ ಮಂಗಳೂರು ಬಂದರು ಇದೆ. ಶಿವಮೊಗ್ಗ ಅಥವಾ ಹಾಸನದಲ್ಲಿ ವಿಮಾನ ನಿಲ್ದಾಣ ಆದಷ್ಟು ಬೇಗ ಕಾರ್ಯಾರಂಭಿಸಿದರೆ ವಿಶ್ವದ ನಾನಾ ರಾಷ್ಟ್ರಗಳ ಸ್ಪರ್ಧಿಗಳ ಕಣ್ಣು ಕಾಫಿ ಕಣಿವೆ ರ‌್ಯಾಲಿಯತ್ತ ಹರಿಯುವುದು ಖಚಿತ ಎನ್ನುವುದು ಫಾರೂಕ್ ವಿಶ್ವಾಸದ ನುಡಿ.

ಈ ರ‌್ಯಾಲಿ...

ದೇಶದಲ್ಲಿ ಮೆಟ್ರೋ ಅಲ್ಲದ ನಗರದಲ್ಲಿ ರಾಷ್ಟ್ರಮಟ್ಟದ ರ‌್ಯಾಲಿ ನಡೆಯುತ್ತಿದ್ದರೆ ಅದು ಚಿಕ್ಕಮಗಳೂರಿನಲ್ಲಿ ಮಾತ್ರ.  ರ‌್ಯಾಲಿ ನೋಡಲು ಇತರ ಜಿಲ್ಲೆಗಳಿಂದ ನೂರಾರು ಮಂದಿ ಪ್ರೇಕ್ಷಕರು ಬರುತ್ತಾರೆ'
-ಫಾರೂಕ್ ಅಹಮದ್, ಮಾಜಿ ರಾಷ್ಟ್ರೀಯ ಚಾಂಪಿಯನ್

`ಚಿಕ್ಕಮಗಳೂರು ಕಾಫಿ  ರ‌್ಯಾಲಿ ನನಗೆ ಯಾವಾಗಲೂ ಅಚ್ಚುಮೆಚ್ಚು. ಇಲ್ಲಿ ಮೊದಲ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟಿದ್ದೆವು. ಕರ್ಣ ಕಡೂರು, ಲೋಹಿತ್ ಅರಸ್ ಅವರಿಂದ ತೀವ್ರ ಪೈಪೋಟಿ ಎದುರಿಸಬೇಕಾಯಿತು. ಕೊನೆಗೂ ಗೆಲುವು ದಕ್ಕಿತು.
-ಅಮಿತ್ ಘೋಷ್, ಕೋಲ್ಕತ್ತ, ಕಾಫಿ ಡೇ ರ‌್ಯಾಲಿ ಚಾಂಪಿಯನ್.

`ಕಾಫಿ ಕಣಿವೆಯಲ್ಲಿ ರ‌್ಯಾಲಿ ನೋಡಲು ಸೇರುವ ಸಾವಿರಾರು ಸಂಖ್ಯೆಯ ಪ್ರೇಕ್ಷಕರ ಸಮೂಹ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ'
-ಅಶ್ವಿನ್ ನಾಯಕ್, ಕಾಫಿ ಡೇ ರ‌್ಯಾಲಿ ಚಾಂಪಿಯನ್ ನ್ಯಾವಿಗೇಟರ್.

`ಹತ್ತು ವರ್ಷದ ಹುಡುಗನಿದ್ದಾಗಿಂದಲೂ ಕಾಫಿ 500 ರ‌್ಯಾಲಿಯನ್ನು ಅತ್ಯಂತ ಕುತೂಹಲದಿಂದ ನೋಡುತ್ತಿದ್ದೆ. ನಾನೂ ಒಂದಲ್ಲ ಒಂದು ದಿನ ರ‌್ಯಾಲಿಯಲ್ಲಿ ಕಾರು ಓಡಿಸಬೇಕು; ಚಾಂಪಿಯನ್ ಆಗಬೇಕು ಅಂಥ ಗುರಿ ಇಟ್ಟುಕೊಂಡಿದ್ದೆ. ಇದೀಗ ಆ ಕನಸು ನನಸಾಗಿದೆ'
-ಎ.ಎಂ.ಕರಣ್, ಕಾಫಿ ಡೇ ರ‌್ಯಾಲಿ ಜೂನಿಯರ್ ಇಂಡಿಯನ್ ರ‌್ಯಾಲಿ ಚಾಂಪಿಯನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT