ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಗಿಡದ ಬೇರು: ವ್ಯಾಪಾರ ಜೋರು!

Last Updated 16 ಫೆಬ್ರುವರಿ 2014, 9:50 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಉದ್ಯೋಗವಿಲ್ಲ, ಸ್ವಂತ ಉದ್ಯಮ ಅಥವಾ ವ್ಯಾಪಾರ ಆರಂಭಿ ಸಲು ಅಗತ್ಯ ಬಂಡವಾಳವೂ ಇಲ್ಲ ಎಂದು ಹಪಹಪಿಸುವವರು ತುಸು ಭಿನ್ನವಾಗಿ ಯೋಚಿಸಿದರೆ ಸುಲಭದಲ್ಲಿ ಲಾಭ ಪಡೆಯುವ ಮಾರ್ಗ ಕಂಡುಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.

ನೀವು ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಹಾದು ಹೋದರೆ ಶ್ರೀರಂಗಪಟ್ಟಣ ತಾಲ್ಲೂಕು ಗೌರಿಪುರ ಗ್ರಾಮದ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳ ಅಲಂಕಾರ ಹೆಚ್ಚಿಸುವ ವಸ್ತುಗಳು ಕಣ್ಣಿಗೆ ಬೀಳುತ್ತವೆ. ಟವಿ ಸ್ಟ್ಯಾಂಡ್‌, ಅಕ್ವೇರಿಯಂ, ಟಿಪಾಯ್‌, ಹೂದಾನಿ, ಸೋಫಾಸೆಟ್‌ ಇತರ ವಸ್ತುಗಳು ನಮ್ಮನ್ನು ಆಕರ್ಷಿಸುತ್ತವೆ. ‘ಅಗ್ಗದ ಬೆಲೆಯ ನಮ್ಮನ್ನು ಕೊಳ್ಳಿ; ನಿಮ್ಮ ಮನೆಯ ಅಂದ ಹೆಚ್ಚಿಸಿಕೊಳ್ಳಿ’ ಎಂದು ಕೂಗಿ ಕರೆಯುತ್ತವೆ. ನಿರುಪ ಯುಕ್ತ ವಸ್ತುಗಳು ಜೀವ ಕಳೆಯಿಂದ ಶೋಭಿಸುತ್ತವೆ. ಬೇಡವಾದ ಕಾಫಿ ಗಿಡದ ಬೊಡ್ಡೆಗಳು ಬೇಕಾದ ವಸ್ತುಗಳ ರೂಪ ಪಡೆದು ಹಣ ತಂದು ಕೊಡುತ್ತಿವೆ. ಇಂತಹದ್ದೊಂದು ವಿಭಿನ್ನ ವ್ಯವಹಾರ ಆರಂಭಿಸಿ ತಮ್ಮ ಪ್ರಯತ್ನ ದಲ್ಲಿ ಯಶಸ್ಸು ಗಳಿಸಿರುವವರ ಹೆಸರು ಸ್ವರೂಪ್‌ ಪಟೇಲ್‌.

ಮಂಡ್ಯ ತಾಲ್ಲೂಕು ಶಂಭೂನಹಳ್ಳಿ ಗ್ರಾಮದ ಸ್ವರೂಪ್‌ ಪಟೇಲ್‌ 9 ತಿಂಗಳ ಹಿಂದಷ್ಟೇ ಈ ವ್ಯಾಪಾರ ಶುರು ಮಾಡಿದ್ದಾರೆ. ಕೇವಲ ₨40ಸಾವಿರ ಬಂಡವಾಳ ಹೂಡಿರುವ ಅವರ ವ್ಯವಹಾರ ಈಗ ರೂ.8 ಲಕ್ಷ ದಾಟಿದೆ. ತಿಂಗಳಿನಿಂದ ತಿಂಗಳಿಗೆ ದುಪ್ಪಟ್ಟಾಗುತ್ತಿದೆ.

ಸ್ವರೂಪ್‌ ಪಟೇಲ್‌ ಅವರಿಗೆ ಈ ಮರದ ನಿಷ್ಪ್ರಯೋಜಕ ಕಾಫಿ ಗಿಡದ ಬೇರು, ಬೊಡ್ಡೆಗಳಿಂದ ತಯಾರಿಸಿದ ವಸ್ತುಗಳ ವ್ಯವಹಾರ ನಿರೀಕ್ಷೆಯಂತೆ ಲಾಭ ತರುತ್ತಿದೆ. ಗೌರಿಪುರ ಮಾತ್ರವಲ್ಲದೆ ಇಂಡುವಾಳು, ಹಾಸನ ಜಿಲ್ಲೆಯ ಶ್ರವಣ ಬೆಳಗೊಳ ದಲ್ಲಿ ಕೂಡ ಈ ವ್ಯಾಪಾರ ಶುರು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಳವಳ್ಳಿಯಲ್ಲಿ ಇದೇ ವ್ಯಾಪಾರ ಶುರು ಮಾಡುವುದಾಗಿ ಅವರು ಹೇಳುತ್ತಾರೆ.

‘ಮಡಿಕೇರಿಯ ಸುತ್ತಮುತ್ತ ಸಿಗುವ, ಕಡಿದು ಹಾಕುವ ಸ್ಥಿತಿಯಲ್ಲಿರುವ ಬಲಿತ ಕಾಫಿ ಗಿಡಗಳನ್ನು ತರುತ್ತೇನೆ. ಕುಶಲ ಕರ್ಮಿಗಳಿಂದ ಕಚ್ಚಾ ವಸ್ತುಗಳಿಗೆ ಹೊಸ ರೂಪ ಕೊಡಿಸಿ ಪಾಲಿಷ್‌ ಕೊಡಿಸಲಾಗುತ್ತದೆ. ಮನೆಗೆ ಶೋಭೆ ತರುವ ವಸ್ತುಗಳನ್ನಾಗಿ ಪರಿವರ್ತಿಸಿ ಜನ ಸಂಚಾರ ಹೆಚ್ಚು ಇರುವ ಸ್ಥಳಗಳಲ್ಲಿ ಮಾರಾಟಕ್ಕೆ ಇಡಲಾಗು ತ್ತದೆ.

ಆಕೃತಿ, ವಿನ್ಯಾಸಕ್ಕೆ ತಕ್ಕಂತೆ ₨.500ರಿಂದ ರೂ.5 ಸಾವಿರದ ವರೆಗೆ ಮಾರಾಟ ಮಾಡಲಾಗುತ್ತದೆ. ಒಂದು ಟಿವಿ  ಸ್ಟ್ಯಾಂಡ್‌ನ್ನು ರೂ.43 ಸಾವಿರಕ್ಕೆ ಮಾರಾಟ ಮಾಡಿದ ಉದಾಹರಣೆಯೂ ಇದೆ.  ಮೊಸಳೆ, ಮೀನು, ಹುಲಿ ಆಕೃತಿಯ ವಸ್ತುಗಳನ್ನು ತಯಾರಿಸಲು ಸಿದ್ಧತೆ ನಡೆಯುತ್ತಿದ್ದು, ಒಂದು ವರ್ಷದ ಒಳಗೆ ಈ ವ್ಯವಹಾರ ಮೂರು ಪಟ್ಟು ವೃದ್ಧಿಸುವಂತೆ ಯೋಜನೆ ರೂಪಿಸಿದ್ದೇನೆ’ ಎಂದು ಸ್ವರೂಪ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಮೊ:8884051110.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT