ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಲ್ಲಿ ರಾಜಕೀಯ ಕಿಲಾಡಿಗಳ ಪಟ್ಟು-ಪ್ರತಿಪಟ್ಟು

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇರುವುದೇ ಎರಡು ವಿಧಾನಸಭಾ ಕ್ಷೇತ್ರ. ಆದರೆ ಜಿದ್ದಾಜಿದ್ದಿಗೇನೂ ಕಮ್ಮಿಯಿಲ್ಲ. ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇರುವುದು ಮೇಲ್ನೋಟಕ್ಕೆ ಕಂಡರೂ, ಫಲಿತಾಂಶದ ಮೇಲೆ ಕೆಜೆಪಿ ಪ್ರಭಾವ ಬೀರಲಿದೆ.

ತಮ್ಮ ನಡೆಯಿಂದಾಗಿ ರಾಷ್ಟ್ರದಾದ್ಯಂತ ಚರ್ಚೆಗೀಡಾಗಿದ್ದ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿ ಸತತ ಎರಡನೇ ಬಾರಿಗೆ ವಿರಾಜಪೇಟೆಯಿಂದ ಕಣಕ್ಕಿಳಿದಿದ್ದಾರೆ. ಇದಕ್ಕೂ ಮೊದಲು 2004ರಲ್ಲಿ ಮಡಿಕೇರಿಯಿಂದ ಬಿಜೆಯಿಂದಲೇ ಗೆದ್ದಿದ್ದರು. ಈ ಬಾರಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತದಾರರಿದ್ದು, ಕೊಡವ, ಮುಸ್ಲಿಂ, ಪರಿಶಿಷ್ಟರು, ಇತರೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಬೋಪಯ್ಯ ಸೇರಿರುವ ಅರೆಗೌಡ ಜನಾಂಗದ ಮತದಾರರ ಸಂಖ್ಯೆಯು ಆ ಕ್ಷೇತ್ರದ ಮತದಾರರ ಪೈಕಿ ಶೇ 10ಕ್ಕಿಂತಲೂ ಕಡಿಮೆ ಇದೆ ಎನ್ನುವುದು ಗಮನಾರ್ಹ.

ಅಲ್ಲಿ ಹೆಚ್ಚಿನ ಮತದಾರರು ಹಾಗೂ ಪ್ರಭಾವ ಬೀರುವವರು ಕೊಡವ ಸಮುದಾಯಕ್ಕೆ ಸೇರಿದವರು. ಈ ಕಾರಣಕ್ಕಾಗಿ ಬೋಪಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಈ ಸಮುದಾಯದವರನ್ನು ಹೆಚ್ಚು ಓಲೈಸಿಕೊಂಡು ಬಂದಿರುವಂತೆ ಕಾಣುತ್ತದೆ. ಪಕ್ಷದ ಹಲವು ಹುದ್ದೆಗಳಿಗೆ ಹಾಗೂ ಸರ್ಕಾರದ ಮಟ್ಟದ ಹಲವು ಹುದ್ದೆಗಳಿಗೆ ಕೊಡವರನ್ನು ನೇಮಿಸಲು ಅವರು ಪ್ರಭಾವ ಬೀರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದು ಅವರ ಪಾಲಿಗೆ ಸಿಹಿ ಹಾಗೂ ಕಹಿಯಾಗಿ ಪರಿಣಮಿಸಿದೆ. ಕೊಡವರನ್ನು ಓಲೈಸಿಕೊಳ್ಳುವ ಭರಾಟೆಯಲ್ಲಿ ತಮ್ಮ ಜನಾಂಗದವರಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲವೆಂದು ಗೌಡ ಸಮುದಾಯದ ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬೋಪಯ್ಯ ಮೂಲತಃ ಸಂಘ ಪರಿವಾರದ ಕಾರ್ಯಕರ್ತರಾಗಿ ಬೆಳೆದು ಬಂದವರು. ವಿರಾಜಪೇಟೆ ಕ್ಷೇತ್ರದ ಮೂಲೆಮೂಲೆಯಲ್ಲಿ ಸಂಘದ ಕಾರ್ಯಕರ್ತರು ಸಕ್ರಿಯವಾಗಿದ್ದಾರೆ. ಇದೇ ಬೋಪಯ್ಯ ಅವರ ಬಲ. ಇದರ ಜೊತೆಗೆ ಕಳೆದ ಐದು ವರ್ಷದಲ್ಲಿ ಸರ್ಕಾರದಿಂದ 900 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತರುವಲ್ಲಿ ಬೋಪಯ್ಯ ಯಶಸ್ವಿಯಾಗಿದ್ದು, ಅವರು ಕೈಗೊಂಡ ವಿವಿಧ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ರಾಚುತ್ತವೆ.

ಕಾಂಗ್ರೆಸ್, ಕೊಡವ ಸಮುದಾಯಕ್ಕೆ ಸೇರಿದ ಬಿ.ಟಿ. ಪ್ರದೀಪ್ ಅವರನ್ನು ಕಣಕ್ಕಿಳಿಸಿದೆ. ಕೊಡವ ಸಮುದಾಯದ ಕೆಲವು ವ್ಯಕ್ತಿಗಳು  `ನಂಗಡ ಕುಂಞ' (ನಮ್ಮ ಮಗು) ಎಂದು ಪ್ರದೀಪ್ ಪರ ಪ್ರಚಾರ ನಡೆಸಿದ್ದಾರೆ.

ಕಾಫಿ ತೋಟದ ಮಾಲೀಕರು ತಮ್ಮ ತೋಟಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಮತದಾನ ಚೀಟಿ ಕೊಡಿಸಿ, ಮತದಾನಕ್ಕೆ ತಯಾರಿ ಮಾಡಿಸಿದ್ದಾರೆ. ಇದರ ಜೊತೆಗೆ ಕೆಲವು ವರ್ಷಗಳ ಹಿಂದೆ ಈ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದ ಕಾರಣ ಪರಿಶಿಷ್ಟರು ಹಾಗೂ ಮುಸ್ಲಿಮರ ಮತಬ್ಯಾಂಕ್ ಈಗಲೂ ಬಲವಾಗಿದೆ. ಇದು ಪ್ರದೀಪ್‌ಗೆ ಪ್ಲಸ್ ಪಾಯಿಂಟ್ ಆಗಬಹುದು.

ಅರೆಗೌಡ ಜನಾಂಗಕ್ಕೆ ಸೇರಿದ ಮಾಜಿ ಶಾಸಕ ಡಿ.ಎಸ್. ಮಾದಪ್ಪ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಸಿಪಿಐ (ಎಂ-ಎಲ್)ದಿಂದ ಚಂಗಪ್ಪ, ಬಿಎಸ್‌ಆರ್‌ದಿಂದ ಜನಿತ್ ಅಯ್ಯಪ್ಪ, ಎಸ್‌ಡಿಪಿಐದಿಂದ ಉಸ್ಮಾನ್, ಸ್ವತಂತ್ರ ಅಭ್ಯರ್ಥಿಗಳಾಗಿ ವಿಜಯಸಿಂಗ್ ಆರ್ ಡೇವಿಡ್, ಮಾರಣ್ಣ ದಿಲೀಪ್ ಕುಮಾರ್, ಸೋಮೆಯಂಡ ಡಿ. ಉದಯ ಕಣಕ್ಕಿಳಿದಿದ್ದಾರೆ.

ದಿಗ್ಗಜರ ಕಾದಾಟ
ಹಿರಿಯ ರಾಜಕಾರಣಿಗಳ ಸ್ಪರ್ಧಾ ಕಣವಾಗಿ ಮಡಿಕೇರಿ ಕ್ಷೇತ್ರ ಮಾರ್ಪಟ್ಟಿದೆ. ಜೆಡಿಎಸ್‌ನ ಬಿ.ಎ. ಜೀವಿಜಯ ಅವರಿಗೆ 9ನೇ ಚುನಾವಣೆಯಾದರೆ, ಬಿಜೆಪಿಯ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರಿಗೆ ಇದು ಐದನೇ ಚುನಾವಣೆಯಾಗಿದೆ.

ಈ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಕೊಡವ ಜನಾಂಗಕ್ಕೆ ರಂಜನ್ ಸೇರಿದ್ದರೂ ಇದುವರೆಗೆ ಮೂರು ಬಾರಿ ಚುನಾವಣೆಯಲ್ಲಿ ಗೆದ್ದಿದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಪ್ಪಚ್ಚು ರಂಜನ್ ಅವರ ಸಂಬಂಧ ಮೊದಲಿನಿಂದಲೂ ಅಷ್ಟಕಷ್ಟೇ ಇತ್ತು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೋದ ನಂತರ ಅಪ್ಪಚ್ಚು ರಂಜನ್ ಅವರು, `ಭ್ರಷ್ಟರು ಪಕ್ಷ ಬಿಟ್ಟು ಹೋಗಿದ್ದಾರೆ, ಈಗ ಪಕ್ಷ ಸ್ವಚ್ಛವಾಗಿದೆ' ಎಂದು ಸಿಕ್ಕಸಿಕ್ಕಲ್ಲೆಲ್ಲ ಹೇಳಿಕೊಂಡು ತಿರುಗುತ್ತಿದ್ದರು. ಇದು ಲಿಂಗಾಯತರ ಕಣ್ಣು ಕೆಂಪಾಗಿಸಿದೆ.

`ಸಚಿವರೇನು ಸಾಚಾ ಅಲ್ಲ. ರಸ್ತೆ ಕಾಮಗಾರಿ, ಹಾರಂಗಿ ಅಣೆಕಟ್ಟು ಟೆಂಡರ್ ಗುತ್ತಿಗೆ ಕಾಮಗಾರಿಯಲ್ಲಿ ನಡೆದ ಅವ್ಯವಹಾರದಲ್ಲಿ ಸಚಿವರ ಆಪ್ತ ಬಳಗದವರ ಹೆಸರು ಕೇಳಿಬಂದಿದೆ. ಅಲ್ಲದೇ, ಇವರ ಸಹೋದರರು ವಿರಾಜಪೇಟೆಯಲ್ಲಿ ಅಕ್ರಮ-ಸಕ್ರಮ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿಲ್ಲವೇ?' ಎಂದು ಸೋಮವಾರಪೇಟೆಯ ವ್ಯಾಪಾರಿ ಚಂದ್ರು ಪ್ರಶ್ನಿಸುತ್ತಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದ ಲಿಂಗಾಯತರು ಈ ಬಾರಿ ಕೆಜೆಪಿಯತ್ತ ಒಲವು ತೋರಿದ್ದಾರೆ. ಕೆಜೆಪಿ ಅಭ್ಯರ್ಥಿ ಲಿಂಗಾಯತ ಸಮುದಾಯದ ಶಂಭುಲಿಂಗಪ್ಪ ಅವರು ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಸೋಮವಾರಪೇಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳಾಗಿರುವುದು ಶಂಭುಲಿಂಗಪ್ಪ ಅವರಿಗೆ ಪ್ಲಸ್ ಪಾಯಿಂಟ್.

ಇನ್ನೊಂದು ಪ್ರಮುಖ ಸಮುದಾಯವಾದ ಒಕ್ಕಲಿಗ ಜನಾಂಗಕ್ಕೆ ಸೇರಿದ ಮಾಜಿ ಸಚಿವ ಬಿ.ಎ. ಜೀವಿಜಯ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಒಂದು ವರ್ಷದ ಹಿಂದೆಯೇ ಜೀವಿಜಯ ಅವರನ್ನು ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ, ಸಂಘಟಿಸಲು ಸಾಕಷ್ಟು ಸಮಯಾವಕಾಶ ದೊರೆತಿತ್ತು. ಕ್ಷೇತ್ರದ ಬಹುತೇಕ ಮತದಾರರ ಹಾಗೂ ಕಾರ್ಯಕರ್ತರ ಪರಿಚಯ ಅವರಿಗಿದೆ. ಅಷ್ಟರಮಟ್ಟಿಗೆ ಅವರು ಜನರ ಸಂಪರ್ಕದಲ್ಲಿದ್ದಾರೆ.

ಜೀವಿಜಯ ಅವರ ಬೆನ್ನಿಗೆ ಇರುವ ಒಕ್ಕಲಿಗ ಸಮುದಾಯದವರ ಮತಗಳನ್ನು ವಿಭಜಿಸಬೇಕೆನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷವು ಇದೇ ಸಮುದಾಯಕ್ಕೆ ಸೇರಿದ ಕೆ.ಎಂ. ಲೋಕೇಶ್ ಅವರಿಗೆ ಟಿಕೆಟ್ ನೀಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸೋಮವಾರಪೇಟೆಯ ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಸುತ್ತಮುತ್ತಲಿನ ಜನರಿಗೆ ಬಿಟ್ಟರೆ, ಮಡಿಕೇರಿ ತಾಲ್ಲೂಕಿನಲ್ಲಿ ಬಹುತೇಕರಿಗೆ ಲೋಕೇಶ್ ಅವರ ಮುಖ ಪರಿಚಯ ಕೂಡ ಇಲ್ಲ. ಆದಾಗ್ಯೂ, ಕಾಂಗ್ರೆಸ್‌ಗೆ  ಸಾಂಪ್ರದಾಯಕ ಮತಗಳು ಇರುವ ಕಾರಣ ಲೋಕೇಶ್ ಸ್ಪರ್ಧೆ ನೀಡಬಹುದು.

ಸಿಪಿಐ(ಎಂ-ಎಲ್) ವನಜಾಕ್ಷಿ, ಜೆಡಿಯು ಕೆ.ಎಂ. ಬಷೀರ್, ಸ್ವತಂತ್ರ ಅಭ್ಯರ್ಥಿಗಳಾಗಿ ಸಂತೋಷಕುಮಾರ್, ರಫೀಕ್, ನಿಜಾಮುದ್ದೀನ್, ಎಂ.ಪಿ. ಹರೀಶ್ ಪೂವಯ್ಯ, ಸಿ.ವಿ.ನಾಗೇಶ್, ಡಾ.ಬಿ.ಸಿ. ನಂಜಪ್ಪ, ಡಿ.ಎಸ್. ಗುರುಪ್ರಸಾದ್ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT