ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಪರಿಮಳದಲ್ಲಿ ಕಾಣದಾದ ಸಿರಿಧಾನ್ಯ

ಸಾವಯವ ಆಹಾರ ಮೇಳದಲ್ಲಿ ಗ್ರಾಹಕರನ್ನು ಸೆಳೆದ ಜರ್ಮನಿ ಪೇಯ
Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಬೆಂಗಳೂರು: `ಸಾವೆ, ನವಣೆ, ಸಜ್ಜೆಗಳೆಲ್ಲ ಸಿರಿಧಾನ್ಯ ಎಂಬುದು ಗೊತ್ತು. ಸಮಸ್ಯೆ ಎಂದರೆ ಇವುಗಳಿಂದ ಯಾವ ಆಹಾರ ಪದಾರ್ಥ ಮಾಡುತ್ತಾರೆ ಎಂಬುದೇ ನಮಗೆ ಗೊತ್ತಿಲ್ಲ'

-ನಗರದಲ್ಲಿ ಏರ್ಪಡಿಸಲಾಗಿದ್ದ ಬಯೋಫ್ಯಾಕ್ ಇಂಡಿಯಾ ಸಾವಯವ ಆಹಾರ ಪದಾರ್ಥ ಮೇಳದಲ್ಲಿ ಗದಗಿನ ಸಿರಿಧಾನ್ಯ ಮಳಿಗೆಗೆ ಭೇಟಿ ನೀಡುತ್ತಿದ್ದ ಮಹಿಳೆಯರು ಸಾಮಾನ್ಯವಾಗಿ ಹಂಚಿಕೊಳ್ಳುತ್ತಿದ್ದ ಅನಿಸಿಕೆ ಇದಾಗಿತ್ತು.

ಜರ್ಮನಿಯ ಕಾಫಿ ಅಬ್ಬರದಲ್ಲಿ ರಾಜ್ಯದ ಸಾವಯವ ಮಳಿಗೆಗಳಿಗೆ ಭೇಟಿ ಕೊಡುವ ಜನರ ಸಂಖ್ಯೆಯೇ ಕಡಿಮೆ ಇತ್ತು. ಬಂದವರಲ್ಲೂ ಅಲ್ಲಿ ದೊರೆಯುತ್ತಿದ್ದ ಪದಾರ್ಥಗಳ ಉಪಯೋಗ ಏನೆಂಬುದು ಗೊತ್ತಿರಲಿಲ್ಲ.

ಗದಗಿನ ಶ್ರೀ ಶ್ರೀ ಸಾವಯವ ಉತ್ಪಾದಕರ ಸಂಸ್ಥೆ 50ಕ್ಕೂ ಅಧಿಕ ವಿಧದ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಸಿರಿಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ರಾಗಿ, ಬರಗು, ಎಣ್ಣೆ ಅಂಶ ಹೊಂದಿದ ಕುಸುಬಿ, ಅಗಸಿ, ಎಳ್ಳು, ರೋಗ ನಿರೋಧಕಗಳಾದ ಅರಿಶಿಣ, ಹವೀಜ, ಊಟದ ರುಚಿ ಹೆಚ್ಚಿಸುವ ಬೇಳೆ-ಕಾಳು, ಒಣ ಮೆಣಸಿನಕಾಯಿ ಮೊದಲಾದ ಪದಾರ್ಥಗಳು ಅಲ್ಲಿದ್ದವು.

ಗದಗಿನ ಈ 49 ಜನ ರೈತರ ಗುಂಪು ಕಳೆದ 20 ವರ್ಷಗಳಿಂದ ಸದ್ದಿಲ್ಲದೆ ಸಾವಯವ ಕೃಷಿಯಲ್ಲಿ ತೊಡಗಿದೆ. ಆರಂಭದಲ್ಲಿ ಗ್ರಾಹಕರೇ ಸಿಗದ ಕಾರಣ ಸಂಕಷ್ಟದಲ್ಲಿದ್ದೆವು. ಈಗ ಬೆಳೆದ ಫಸಲು ಗೊತ್ತಿಲ್ಲದಂತೆ ಖರ್ಚಾಗುತ್ತದೆ ಎಂದು ಖುಷಿಯಿಂದ ಹೇಳುತ್ತಾರೆ ಎಸ್.ಎಫ್. ಮಿಶ್ರಿಕೋಟಿ.

ಗದಗ ಜಿಲ್ಲೆಯ ಜಗಾಪುರ, ಕರಡಿ, ಅಡವಿ ಸೋಮಾಪುರ, ಜಂತ್ಲಿ ಶಿರೂರು, ಡಂಬಳ, ಕದಾಂಪುರ, ಹುಲಕೋಟಿ ಮತ್ತು ಬಿಂಕದಕಟ್ಟಿ ಗ್ರಾಮಗಳ ರೈತರು ಒಟ್ಟಾಗಿ ಈ ಸಂಸ್ಥೆ ಕಟ್ಟಿಕೊಂಡಿದ್ದಾರೆ. ತಾವು ಬೆಳೆಯುವ ಆಹಾರ ಪದಾರ್ಥಗಳನ್ನು ಶ್ರೀ ಶ್ರೀ ಸಾವಯವ ಪದಾರ್ಥ ಹೆಸರಿನಲ್ಲೇ ಮಾರಾಟ ಮಾಡುತ್ತಾರೆ.
`ಕುಸುಬಿ ರಕ್ತದ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ.

ಅಗಸಿ ರಕ್ತವನ್ನು ತೆಳುಗೊಳಿಸಿ ಸರಾಗವಾಗಿ ಹರಿಯಲು ಸಹಕಾರ ನೀಡುತ್ತದೆ. ನಮ್ಮ ಶರೀರ ಈಗ ರೋಗಗಳ ತವರು ಮನೆಯಾಗಿದೆ. ನಮ್ಮ ಜನಕ್ಕೆ ಆರೋಗ್ಯ ಜಾಗೃತಿ ಉಂಟು ಮಾಡುವುದೂ ನಮ್ಮ ಸಾವಯವ ಆಂದೋಲನದ ಭಾಗವಾಗಿದೆ' ಎನ್ನುತ್ತಾರೆ ಸಂಘದ ಪದಾಧಿಕಾರಿಗಳಾದ ಶಂಕರಗೌಡ ಪಾಟೀಲ ಮತ್ತು ಮಲ್ಲನಗೌಡ ಪಾಟೀಲ.

ಕುಮಟಾದ ಬೆಟ್ಟಗೇರಿ ಗ್ರಾಮದ ನಿರ್ಮಲಾ ಆಹಾರ ಉತ್ಪಾದನಾ ಸಂಸ್ಥೆ ತಯಾರಿಸಿದ್ದ `ಹರಿದ್ರಾಸಾರ' ಬ್ರ್ಯಾಂಡ್ ಶುದ್ಧ ದ್ರವ ರೂಪದ ಅರಿಶಿಣ ಕೂಡ ಸಾಕಷ್ಟು ಜನರ ಗಮನ ಸೆಳೆಯಿತು. ಕಚ್ಚಾ ಅರಿಶಿಣದ ಬೇರಿನಿಂದ ತೆಗೆದ ಈ ದ್ರವ ಸೇವಿಸಿದರೆ ಶ್ವಾಸಕೋಶ ಸಂಬಂಧಿ ಎಲ್ಲ ತೊಂದರೆಗಳು ಮಾಯವಾಗುತ್ತವೆ. ರಕ್ತಹೀನತೆ ಸಮಸ್ಯೆ ಕೂಡ ಬಗೆಹರಿಯುತ್ತದೆ ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಿದ್ದರು.


ಸಹಜ ಆರ್ಗ್ಯಾನಿಕ್ಸ್ ಸಂಸ್ಥೆ ಔಷಧಿ ಗುಣವುಳ್ಳ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಸಿರಿಧಾನ್ಯಗಳೂ ಅಲ್ಲಿ ದೊಡ್ಡ ಪ್ರಮಾಣದಲ್ಲೇ ಇದ್ದವು. ಮೇಳದ ದ್ವಾರದಲ್ಲೇ ಠಿಕಾಣಿ ಹೂಡಿದ್ದ ಸಾವಯವ ಸೌಂದರ್ಯ ಸಾಮಗ್ರಿಗಳ ಮಾರಾಟಗಾರರು ಭರ್ಜರಿ ವಹಿವಾಟು ನಡೆಸಿದರು. ಹಿಮಾಚಲ ಪ್ರದೇಶದ ಹಣ್ಣುಗಳು, ಕೇರಳದ ಜೇನುತುಪ್ಪ, ಆಂಧ್ರದ ಮೆಣಸಿನಕಾಯಿ ಮೇಳದ ಆಕರ್ಷಣೆ ಎನಿಸಿದ್ದವು.

ಜರ್ಮನಿಯ ಕಾಫಿ ಸೇವನೆಗಂತೂ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ನೆರೆದಿದ್ದರು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ 163 ಸಂಸ್ಥೆಗಳಲ್ಲಿ 16 ಅಂತರರಾಷ್ಟ್ರೀಯ ಸಂಘಟನೆಗಳಾಗಿದ್ದವು. ಕರ್ನಾಟಕದ ಸಾವಯವ ಸಂಸ್ಥೆಗಳಿಗೆ ಮೇಳದಲ್ಲಿ ಉಚಿತವಾಗಿ ಮಳಿಗೆ ಒದಗಿಸಲಾಗಿತ್ತು.


ಬಾರದ ಸಚಿವರು; ಕೆರಳಿದ ರೈತರು

ನಗರದ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಬಯೋಫ್ಯಾಕ್ ಇಂಡಿಯಾ ಸಾವಯವ ಆಹಾರ ಮೇಳದ ಸಮಾರೋಪ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಯಾವೊಬ್ಬ ಸಚಿವರೂ ಬಾರದಿದ್ದುದು ರಾಜ್ಯದ ಕೃಷಿಕರನ್ನು ಕೆರಳುವಂತೆ ಮಾಡಿತು.

`ರಾಜ್ಯ ಸರ್ಕಾರವೇ ಆಯೋಜಿಸಿದ್ದ ಈ ಮೇಳದ ವಿಷಯವಾಗಿ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಇಷ್ಟೊಂದು ಅಸಡ್ಡೆಯೇ' ಎಂದು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ರೈತರು ಕಿಡಿಕಾರಿದರು. `ಯಡಿಯೂರಪ್ಪ ಅವರ ರಾಜೀನಾಮೆ ಗುಂಗಿನಿಂದ ಅವರಿನ್ನೂ ಹೊರಬಂದಂತಿಲ್ಲ. ಇನ್ನು ಅವರಿಗೆ ರೈತರು ಕಾಣುವುದಾದರೂ ಹೇಗೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.


ಉಪನ್ಯಾಸ ಕೋಣೆಯಲ್ಲಿ ಕೂಡಿಸಿ ವಿದೇಶಿ ಅತಿಥಿಗಳಿಂದ ಪಾಠ ಮಾಡಿಸಿದ್ದು ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿತು. `ಅವರೇನು ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಅದರ ಅರ್ಥವನ್ನೂ ಸಂಘಟಕರು ಅನುವಾದಿಸಿ ಹೇಳುತ್ತಿಲ್ಲ. ಸುಮ್ಮನೇ ಮುಖ ನೋಡುತ್ತಾ ಕೂಡಬೇಕಾಯಿತು' ಎಂದು ಹೇಳಿದರು.
ಸಚಿವರು ಬಾರದ ಕಾರಣ ಸಮಾರೋಪ ಸಮಾರಂಭದಲ್ಲೂ ವಿದೇಶಿ ಪ್ರತಿನಿಧಿಗಳಿಂದ ಭಾಷಣ ಮಾಡಿಸಿದ ಸಂಘಟಕರು, ರೈತರ ಬೇಸರವನ್ನು ಮತ್ತಷ್ಟು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT