ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಸಂಸ್ಕರಣೆಗೆ ಸೋಲಿಗರ ಸಾಂಪ್ರದಾಯಿಕ ಹಾದಿ

Last Updated 12 ಜೂನ್ 2011, 10:45 IST
ಅಕ್ಷರ ಗಾತ್ರ

ಯಳಂದೂರು: ಕೊಡಗು ಚಿಕ್ಕಮಗಳೂರನ್ನು ಬಿಟ್ಟರೆ ಕಾಫಿ ಬೆಳೆಗೆ ಹಿತಕರವಾದ ಹವಾಗುಣ ಹೊಂದಿರುವ ಪೂರ್ವಘಟ್ಟಗಳ ಸಾಲು ಹೇಳಿ ಮಾಡಿಸಿದಂತಿದೆ. ಇಲ್ಲಿಗೆ ಕಾಲಿಟ್ಟವರು ಕಾಫಿ ಹೂವಿನ ಪರಿಮಳವನ್ನು ಆಸ್ವಾದಿಸಬಹುದು.

ವಾಣಿಜ್ಯ ಬೆಳೆಯಾದ ಕಾಫಿ  ಎರಡು ಸಾವಿರ ಹೆಕ್ಟೇರ್ ಪ್ರದೇಶವನ್ನು ಜಿಲ್ಲೆಯ ಹೊನ್ನಮೇಟಿ, ಬೇಡಗುಳಿ, ಬೆಳಗಲಿ ಎಸ್ಟೇಟ್ ವ್ಯಾಪಿಸಿದೆ. ಆದರೆ ಅಲ್ಪ ಪ್ರಮಾಣದಲ್ಲಿ ಸೋಲಿಗ ಕುಟುಂಬಗಳು ಕಾಫಿ ಬೆಳೆಯುತ್ತಾರೆ.  ಆದರೆ ಸೋಲಿಗ ಮಹಿಳೆಯರು ಸಾಂಪ್ರದಾಯಿಕ ವಿಧಾನದಲ್ಲೇ ಕಲ್ಲಿನ ಗುಂಡು ಬಳಸಿ ಹಣ್ಣಿನಿಂದ ಬೀಜ ತೆಗೆಯಲು ಪರದಾಡುವಂತಾಗಿದೆ. ತಾಲ್ಲೂಕಿನ 18 ಪೋಡುಗಳಲ್ಲಿ ಈ ಪದ್ದತಿ ಇದೆ.

30 ವರ್ಷಗಳಿಂದೀಚೆಗಷ್ಟೇ ಏಲಕ್ಕಿ, ಮೆಣಸನ್ನು ಕಾಫಿ ಗಿಡಗಳೊಂದಿಗೆ ಬೆಳೆದು ಆದಾಯವನ್ನು ಪಡೆಯುತ್ತಿದ್ದಾರೆ. 18 ಪೋಡುಗಳಿಂದ 6 ಸಾವಿರ ಜನರು ಇಂದು ಕಾಫಿಯನ್ನೇ ಆಶ್ರಯಿಸಿದ್ದಾರೆ. ಸ್ತ್ರೀಯರ ಬಹುಪಾಲು ಕೆಲಸ ಕಾಫಿ ಬೀಜವನ್ನು ಬೇರ್ಪಡಿಸಲು ಕಲ್ಲನ್ನು ಉಪಯೋಗಿಸಬೇಕಾದ ಅನಿವಾರ್ಯತೆ ಇದೆ.

ಸೋಲಿಗರು 50 ರಿಂದ 500 ಕಿಲೋ ತನಕ ಕಾಫಿ ಹಣ್ಣನ್ನು ಸಂಗ್ರಹಿಸುತ್ತಾರೆ. ಕೆಲವರು ಗುಡಿಸಲುಗಳಲ್ಲೇ ಹಣ್ಣನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಸಂಗ್ರಹಿಸುತ್ತಾರೆ, ಒಳ್ಳೆಯ ಬೆಲೆಯೂ ಇದೆ. ಸ್ಥಳೀಯವಾಗಿ ಕಿಲೋಗೆ 170 ರೂ.ಗಳ ವರೆವಿಗೂ ಮಾರಾಟವಾಗುತ್ತದೆ. ಆದರೆ ಯಂತ್ರಗಳನ್ನು ಕೊಂಡು ಹೆಚ್ಚು ಉತ್ಪಾದಿಸುವ ಆರ್ಥಿಕ ಶಕ್ತಿ ಇವರಿಗಿಲ್ಲ. ಇದರಿಂದಾಗಿ ಹೆಚ್ಚು ಆದಾಯ ನಿರೀಕ್ಷಿಸಲಾಗದು ಎನ್ನುತ್ತಾರೆ. ಬಿಸಿಲುಕೆರೆ ಪೋಡಿನ ಮಾದಮ್ಮರವರು.

ಇತ್ತೀಚೆಗೆ ಹಾಡಿಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಸಚಿವ ಹಾಗೂ ಸಂಸದರಿಗೆ ಹಣ್ಣಿನಿಂದ ಬೀಜವನ್ನು ಸುಲಿಯುವ ಯಂತ್ರವನ್ನು ರಿಯಾಯ್ತಿ ದರದಲ್ಲಿ ಕೊಡಿಸುವಂತೆ ಮನವಿಪತ್ರ ನೀಡಿದ್ದೇವೆ. 150 ಪಲ್ಪಿಂಗ್ ಯಂತ್ರದ ಅವಶ್ಯಕತೆ ಇದೆ. ಒಂದೇ ತಾಸಿನಲ್ಲಿ 4 ಕಿಲೋ ಬೀಜವನ್ನು ಇವುಗಳಿಂದ ಪಡೆಯಬಹುದು.

ಕಲ್ಲುಗುಂಡುಗಳನ್ನು ಸುತ್ತಿ ಬೀಜಗಳನ್ನು ಸಂಗ್ರಹಿಸುವ ಕೆಲಸವಾಗಬೇಕಾದರೆ ಹೆಚ್ಚು ಸಮಯ ಬೇಡುತ್ತದೆ. ನೀಡಿಕೆ ಕಡಿಮೆ, ಶ್ರಮವೂ ಅಧಿಕ ಎಂದು ಕಲ್ಯಾಣಿ ಪೋಡಿನ ಜಡೇಮಾದಮ್ಮ ಹಾಗೂ ಸಿದ್ಧಮ್ಮ ಕಾಫಿ ಬೀಜ ಸಂಸ್ಕರಿಸುವ ಪ್ರಕ್ರಿಯೆಯನ್ನು ವಿವರಿಸಿದರು.

ಕಾಫಿ ಬೆಳೆಗಾರರ ಸ್ವಸಹಾಯ ಸಂಘ ಐದು ಪೋಡಿನ ಸದಸ್ಯರಿಗೆ ಯಂತ್ರಗಳನ್ನು ಪೂರೈಸಿದೆ. ಬೋರ್ಡ್ ವತಿಯಿಂದ ಇವರ ಮಕ್ಕಳಿಗೆ ಶಿಷ್ಯ ವೇತನವೂ ಲಭಿಸಿದೆ. ಆದರೆ ಕಾಡಿನ ನಡುವೆ ವಾಸಿಸುವ ಸೋಲಿಗರು ಹಳೇ ಪದ್ಧತಿಯಲ್ಲಿಯೇ ಬೀಜ ಸಂಗ್ರಹಿಸುವುದು ಕಷ್ಟ ಎಂದು ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ. ಮಾದೇಗೌಡ ~ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT