ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿಗೆ ಈಗ ಕೊಳೆ ರೋಗ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈ ವರ್ಷ ಕಾಫಿ ಬೀಜಕ್ಕೆ ಉತ್ತಮ ಬೆಲೆ ಇದೆ. ಆದರೆ ಬೆಳೆಗಾರರ ಮುಖದಲ್ಲಿ ನಗುವಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ತೋಟದ ನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಆಳುಗಳ ಕೂಲಿ ಹೆಚ್ಚಳವಾಗಿದೆ. ಹೆಚ್ಚು ವೇತನ ಕೊಟ್ಟರೂ ಆಳುಗಳು ಕೆಲಸಕ್ಕೆ ಬರುತ್ತಿಲ್ಲ. ರಸ ಗೊಬ್ಬರಗಳ ಬೆಲೆ ಏರಿದೆ. ಹಣ ಕೊಟ್ಟರೂ ಸಾಕಷ್ಟು ಗೊಬ್ಬರ ಸಿಗುತ್ತಿಲ್ಲ. ಈ ಸಮಸ್ಯೆಗಳ ಜತೆಗೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.

ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಬಿದ್ದ ಮಳೆಯ ಪ್ರಮಾಣ ಕಾಫಿ ಪ್ರದೇಶಗಳಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಕಾಫಿ ಗಿಡಗಳ ಎಲೆಗಳು ಮತ್ತು ಕಾಯಿಗಳು ಉದುರುತ್ತಿವೆ. ಕೊಡಗು ಜಿಲ್ಲೆಯ ಕೌಕುಡಿ ಎಸ್ಟೇಟ್‌ನ ಅರುಣ್ ಭಾವೆ ಅವರ ತೋಟದಲ್ಲಿ 150 ಅಂಗುಲಕ್ಕಿಂತ ಹೆಚ್ಚು ಮಳೆಯಾಗಿದೆ. ಅವರು ಎರಡು ಸಲ ಬೋರ್ಡೋ ದ್ರಾವಣ ಸಿಂಪಡಿಸಿದರೂ ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಶೇ 20 ರಷ್ಟು ಕಾಯಿಗಳು ಉದುರಿವೆ.

ಮಳೆ ಹೆಚ್ಚಾದರೆ ಅರೇಬಿಕಾ ಕಾಫಿಗೆ ಕೊಳೆರೋಗ ಬರುತ್ತದೆ. ಆದರೆ ಹಾಸನ ಜಿಲ್ಲೆಯ ಪ್ರಾಕೃತಿಕ ಎಸ್ಟೇಟ್‌ನಲ್ಲಿ ರೊಬಾಸ್ಟಾ ಕಾಫಿ ಗಿಡಗಳಿಗೂ ಕೊಳೆರೋಗ ಬಂದಿದೆ ಎಂದು ತೋಟದ ಮಾಲೀಕ ನಿಶ್ಚಲ್ ಹೇಳುತ್ತಾರೆ. ಈ ವರ್ಷ ಹಾಸನ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಕಾಪರ್‌ಸಲ್ಫೇಟ್ ಪೂರೈಕೆಯಾಗಿದ್ದೇ ಇದಕ್ಕೆಕಾರಣ ಎಂದು ಆರೋಪಿಸುತ್ತಾರೆ ನಿಶ್ಚಲ್.

 ಚಿಕ್ಕಮಗಳೂರು ಜಿಲ್ಲೆಯ ಚಿನ್ನನಹಳ್ಳಿ ಎಸ್ಟೇಟ್‌ನ ಉತ್ತಮ್ ಗೌಡರಿಗೆ ಈ ವರ್ಷ ಕಾರ್ಮಿಕರ ಕೊರತೆಯಿಂದ ಔಷಧಿ ಸಿಂಪರಣೆ ಸರಿಯಾದ ಸಮಯಕ್ಕೆ ಮಾಡಲು ಆಗಲಿಲ್ಲವಂತೆ. ಅಷ್ಟೇ ಅಲ್ಲ ಮರಕಸಿ ಮಾಡಲೂ ಆಗಲಿಲ್ಲ. ಇದರಿಂದ ತೋಟದಲ್ಲಿ ದಟ್ಟವಾದ ನೆರಳಿನ ಜತೆಗೆ ಮಂಜು ಹೆಚ್ಚಾಗಿ ವಿಪರೀತ ಶೀತವಾಗಿ ಕೊಳೆ ರೋಗ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಾನಿ ಆಗುವ ಸಾಧ್ಯತೆ ಇರುವುದರಿಂದ ಕಾಫಿ ಮಂಡಳಿ ಕೂಡಲೇ ಬೆಳೆಗಾರರ ರಕ್ಷಣೆಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅನೇಕ ಬೆಳೆಗಾರರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

 ಸತತ ಮಳೆಯಿಂದ ಕೊಳೆ ರೋಗ ಹೆಚ್ಚಾಗಿದೆ. ಕೊಳೆ ರೋಗದಿಂದ ಎಲೆ ಮತ್ತು ಕಾಯಿಗಳು ಉದುರುತ್ತವೆ. ರೋಗ ತೀವ್ರವಾಗಿರುವ ಪ್ರದೇಶಗಳಲ್ಲಿ ತುರ್ತಾಗಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಶೇ 10 ರಿಂದ 20ರಷ್ಟು ಫಸಲು ಹಾನಿಯಾಗುತ್ತದೆ ಎಂದಿದ್ದಾರೆ ಬಾಳೆಹೊನ್ನೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯ ಸಸ್ಯರೋಗ ವಿಭಾಗದ ಮುಖ್ಯಸ್ಥ ಡಾ. ಸುಧಾಕರ್ ಭಟ್.

ಕೊಳೆರೋಗ ಕಂಡು ಬರುವ ಪ್ರದೇಶಗಳ ಕಾಫಿ ಗಿಡಗಳ ಮೇಲಿನ ಹಂತದ ನೆರಳನ್ನು ಮಳೆಗಾಲಕ್ಕೆ ಮುಂಚೆ ತೆಳು ಮಾಡಿ, ಗಿಡಗಳ ನೆತ್ತಿ ಬಿಡಿಸಿ ಗಾಳಿ, ಬೆಳಕು ಆಡುವಂತೆ ಮಾಡಬೇಕು. ಗಿಡಗಳಲ್ಲಿ ಕೊಳೆಯುತ್ತಿರುವ ಒಣ ಎಲೆ, ರೆಕ್ಕೆ ಚಿಗುರುಗಳನ್ನು ಶಿಲೀಂದ್ರಗಳನ್ನು ಸ್ವಚ್ಛಗೊಳಿಸಬೇಕು.

ಮಳೆಗಾಲಕ್ಕೆ ಸ್ವಲ್ಪ ಮುಂಚೆ ಮತ್ತು ಮಳೆಗಾಲದ ಬಿಡುವಿನಲ್ಲಿ ರೋಗಪೀಡಿತ ಗಿಡಗಳಿಗೆ ಶೇ 1.0 ಬೋರ್ಡೋ ದ್ರಾವಣದ ಸಿಂಪಡಿಸಬೇಕು. ರೋಗಪೀಡಿತ ಪ್ರದೇಶಗಳಲ್ಲಿ 120 ಗ್ರಾಂ ಬಾವಿಸ್ಟಿನ್‌ಅನ್ನು ಒಂದು ಬ್ಯಾರಲ್ ನೀರಿನಲ್ಲಿ ಕರಗಿಸಿ ರೋಗದ ಪಟ್ಟೆಗಳಲ್ಲಿನ ಗಿಡಗಳಿಗೆ ಸಿಂಪರಣೆ ಮಾಡಬೇಕು. 45 ದಿನಗಳ ನಂತರ ಎರಡನೇ ಸಿಂಪಡಣೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

 ಕೆಲವು ಬೆಳೆಗಾರರು ಕೊಳೆರೋಗಕ್ಕೆ ಅಂತರ್‌ವ್ಯಾಪಿ ಶಿಲೀಂದ್ರ ನಾಶಕವಾದ ಕಾಂಟೆಫ್ ಸಿಂಪರಣೆ ಮಾಡಿದ್ದಾರೆ. ಇದರಿಂದ ರೋಗ ನಿಯಂತ್ರಣಕ್ಕೆ ಬರುವುದಿಲ್ಲ. ಬೋರ್ಡೋ ದ್ರಾವಣಕ್ಕೆ ಯೂರಿಯಾವನ್ನು ಬೆರಸಿ ಸಿಂಪರಣೆ ಮಾಡುವುದರಿಂದಲೂ ರೋಗ ನಿಯಂತ್ರಣ ಸಾಧ್ಯವಿಲ್ಲ ಎಂದು ಭಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT