ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿಗೆ ಉತ್ತಮ ಬೆಲೆ: ಕಾರ್ಮಿಕರಿಗೆ ಬರ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿಗೆ ಉತ್ತಮ, ಸ್ಥಿರ ಬೆಲೆ ಇದೆ; ಆದರೆ ಕಾಫಿ ತೋಟಗಳನ್ನು ಸದಾ ಜೀವಂತವಾಗಿಡಲು ಅಗತ್ಯವಾಗಿ ಬೇಕಾದ ಕಾರ್ಮಿಕರಿಗೇ `ಬರ~ ಬಂದಿದೆ. ಜಿಲ್ಲೆಯ ಕಾಫಿ ಬೆಳೆಗಾರರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಕೃಷ್ಟ ಗುಣಮಟ್ಟದ ಕಾಫಿಗೆ ಸಾಕಷ್ಟು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಕಾಫಿ ಅರೆಬಿಕಾ ಪಾರ್ಚ್‌ವೆುಂಟ್ 50 ಕೆ.ಜಿ ಮೂಟೆಗೆ ರೂ.10,200ರಿಂದ ರೂ.10250 ಬೆಲೆ ಇದೆ. ಮೇ- ಜೂನ್ ತಿಂಗಳಿಂದಲೂ ಇದೇ ದರ ಕಾಯ್ದುಕೊಂಡಿದೆ. ಅರೆಬಿಕಾ ಚೆರಿ 50 ಕೆ.ಜಿ. ಮೂಟೆ ರೂ.4850ರಿಂದ ರೂ.5100 ಬೆಲೆ ಇದೆ. ರೋಬಸ್ಟಾ ಪಾರ್ಚ್‌ಮೆಂಟ್ ರೂ.4950, ರೋಬಸ್ಟಾ ಚೆರಿ ರೂ.2625ರಿಂದ ರೂ.2700ಕ್ಕೆ  ಮಾರಾಟವಾಗುತ್ತಿದೆ.

ಎರಡು ವರ್ಷದಿಂದಲೂ ಮಾರುಕಟ್ಟೆಯಲ್ಲಿ ಕಾಫಿಗೆ ಸ್ಥಿರ ಬೆಲೆ ಬಂದಿದೆ. ನಾಲ್ಕೈದು ತಿಂಗಳಲ್ಲಿ ಒಂದೆರಡು ವಾರ ಮಾತ್ರ ರೂ.9 ಸಾವಿರಕ್ಕೆ ಇಳಿದಿತ್ತು. ಮತ್ತೆ ಬೆಲೆ ಕುಸಿದಿಲ್ಲ. ಎರಡು ವಾರ ರೂ.1080ಕ್ಕೆ ಬೆಲೆ ಏರಿಕೆಯಾಗಿತ್ತು. ಇದು ಕಾಫಿ ಮಾರುಕಟ್ಟೆಯಲ್ಲಿ ದಾಖಲೆ ಕೂಡ. ಹೊರ ನೋಟಕ್ಕೆ ಕಾಫಿ ಬೆಳೆಗಾರರು ಲಾಭ ಕಾಣುತ್ತಿದ್ದಾರೆ ಎನಿಸಬಹುದು. ಆದರೆ, ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆ, ಸಕಾಲದಲ್ಲಿ ರಸಗೊಬ್ಬರ ಲಭ್ಯವಾಗದಿರುವುದು, ಬೋರರ್ (ಕಾಂಡಕೊರಕ ಹುಳು ಬಾಧೆ) ಸಮಸ್ಯೆಯಿಂದಾಗಿ ಕಾಫಿ ತೋಟಗಳು ನಲುಗುತ್ತಿವೆ. ಐದಾರು ವರ್ಷಗಳಿಗೆ ಹೋಲಿಸಿದರೆ ಇಳುವರಿಯಲ್ಲಿ ಹಂತ ಹಂತವಾಗಿ ಭಾರಿ ಕುಸಿತ ಆಗುತ್ತಿದೆ. ಒಂದು ಎಕರೆ ಕಾಫಿ ತೋಟದಲ್ಲಿ 9ರಿಂದ 10 ಚೀಲ ಅರೆಬಿಕಾ ಪಾರ್ಚ್‌ಮೆಂಟ್ ಇಳುವರಿ ತೆಗೆಯುತ್ತಿದ್ದೆವು. ಈಗ ಅರ್ಧದಷ್ಟು ಕುಸಿದಿದೆ. ಎಲ್ಲೊ ಬೆರಳೆಣಿಕೆಯಷ್ಟು ತೋಟಗಳು ಉತ್ತಮ ಸ್ಥಿತಿಯಲ್ಲಿವೆ. ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಕೆಲವು ಬೆಳೆಗಾರರು ಈ ಬಾರಿ ಒಂದು ಎಕರೆಯಲ್ಲಿ ಮೂರು ಚೀಲ, ಮತ್ತೆ ಕೆಲವರು ಒಂದೂವರೆ ಚೀಲ ಕಾಫಿ ಕೊಯ್ದಿರುವ ನಿದರ್ಶನಗಳಿವೆ ಎನ್ನುತ್ತಾರೆ ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಆರ್.ಉತ್ತಮ್‌ಗೌಡ ಹುಲಿಕೆರೆ.

`ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯೇ. ಮಳೆ ಮಧ್ಯೆ ಬಿಡುವು ಕೊಡದೆ ಸತತವಾಗಿ ಸುರಿದಿದ್ದರಿಂದ ಕಾಫಿ ಗಿಡಗಳು ಬಿಸಿಲನ್ನೇ ಕಾಣಲಿಲ್ಲ. ಜಿಟಿಜಿಟಿ ಮಳೆ ಪರಿಣಾಮ ಕಾಯಿಗಟ್ಟುವ ಹಂತದಲ್ಲೇ ಕೊಳೆ ರೋಗ ಕಾಣಿಸಿಕೊಂಡು ಫಸಲು ಉದುರುತ್ತಿದೆ. ಇದು ಇಳುವರಿ ಮೇಲೂ ತೀವ್ರ ಪರಿಣಾಮ ಬೀರಲಿದೆ~ ಎನ್ನುತ್ತಾರೆ ಕಾಫಿ ಬೆಳೆಗಾರ ಕೊಡಾಳು ವಿರೂಪಾಕ್ಷ.

ಬಹಳಷ್ಟು ಕಾಫಿ ತೋಟಗಳು ಬೋರರ್ ಸಮಸ್ಯೆಗೆ ಸಿಲುಕಿವೆ. ರೀಪ್ಲಾಂಟ್ ಮಾಡಬೇಕಾದ ಸ್ಥಿತಿಯಲ್ಲಿವೆ. ಸತ್ತು ಹೋದ ಗಿಡಗಳ ಜಾಗಕ್ಕೆ ಮತ್ತೆ ಹೊಸ ಗಿಡ ನೆಡಲು ಮಳೆಯೂ ಅವಕಾಶ ನೀಡಿಲ್ಲ. ಹದಿನೈದು ವರ್ಷಗಳಲ್ಲಿ ಇಂಥ ಪರಿಸ್ಥಿತಿಯೇ ಬಂದಿರಲಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಕಾಫಿ ಬೆಳೆಗಾರರು.

ಸಕಾಲದಲ್ಲಿ ಕಾಫಿ ತೋಟದ ಕೆಲಸಗಳನ್ನು ಮಾಡದಿದ್ದರೆ ಕಾಫಿ ತೋಟ ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗುವುದಿಲ್ಲ. ಹಂಗಾಮಿನಲ್ಲೇ ಅಗತ್ಯ ರಸಗೊಬ್ಬರ ಬಹಳಷ್ಟು ಮಂದಿ ಬೆಳೆಗಾರರಿಗೆ ಸಿಗಲಿಲ್ಲ. ಕಾಫಿಗೆ ತೀರಾ ಅತ್ಯಗತ್ಯವಿರುವ ಪೊಟ್ಯಾಷ್ ಬಹುತೇಕರಿಗೆ ಸಿಗಲೇ ಇಲ್ಲ. ರೂ.250 ಮುಖಬೆಲೆ ರಸಗೊಬ್ಬರವನ್ನು ಕಾಳಸಂತೆಯಲ್ಲಿ ರೂ.450ರಿಂದ ರೂ.500 ನೀಡಿ ಖರೀದಿಸಿರುವ ಉದಾಹರಣೆಗಳೂ ಇವೆ. ಕೂಲಿ ದರ ಏರಿದ್ದರೂ ಅಗತ್ಯ ಕೂಲಿ ಕಾರ್ಮಿಕರು ಲಭ್ಯವಾಗುತ್ತಿಲ್ಲ. ಕಡೂರು, ಸಖರಾಯಪಟ್ಟಣ, ಬೇಲೂರು, ಹಳೆಬೀಡು ಭಾಗದಿಂದಲೂ ಕಾರ್ಮಿಕರನ್ನು ಕರೆತಂದು ಕೆಲಸ ಮಾಡುವ ಸ್ಥಿತಿ ಇದೆ. ಗಂಡಾಳಿಗೆ ರೂ.300 ಮತ್ತು ಹೆಣ್ಣಾಳಿಗೆ ರೂ.200ರಿಂದ ರೂ.250 ನೀಡುತ್ತಿದ್ದರೂ ದೂರದೂರಿನಿಂದ ಬರಲು ಕಾರ್ಮಿಕರು ಆಸಕ್ತಿ ತೋರುತ್ತಿಲ್ಲ. ಹೀಗಾದರೆ ಕಾಫಿ ತೋಟ ಉಳಿಸಿಕೊಳ್ಳುವುದಾದರೂ ಹೇಗೆ? ಎನ್ನುವುದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT