ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿಗೆ ವರ್ಷದ ಗರಿಷ್ಠ ಬೆಲೆ

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಕಳಸ: ಒಂದೆಡೆ ಅರೇಬಿಕಾ ಕಾಫಿಯ ಬೆಲೆ ಬೆಳೆಗಾರರಿಗೆ ಚಿಂತೆ ತರುತ್ತಿದ್ದರೆ, ಇನ್ನೊಂದೆಡೆ ರೊಬಸ್ಟಾ ಕಾಫಿ ವರ್ಷದ ಗರಿಷ್ಠ ಬೆಲೆ ಕಂಡಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ 50 ಕೆ.ಜಿ. ರೊಬಸ್ಟಾ ಚೆರಿ ಕಾಫಿ ಬೆಲೆ ರೂ.3,200ಕ್ಕೆ ಏರಿಕೆಯಾಗಿದೆ. ಇದು ಈ ವರ್ಷದಲ್ಲೇ ಅತ್ಯಧಿಕ ಬೆಲೆ ಎಂಬುದು ಬೆಳೆಗಾರರ ವಲಯದಲ್ಲಿ ಉತ್ಸಾಹ ಮೂಡಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಟನ್ ರೊಬಸ್ಟಾ ಕ್ಲೀನ್ ಕಾಫಿ ಬೆಲೆ 2100 ಡಾಲರ್‌ಗೆ ತಲುಪಿದ ಹಿನ್ನೆಲೆಯಲ್ಲಿ ರಾಜ್ಯದ ಬೆಳೆಗಾರರಿಗೂ ಕಾಫಿ ಬೆಲೆ ಏರಿಕೆಯ ಪ್ರಯೋಜನ ಆಗಿದೆ.

ಡಿಸೆಂಬರ್ ವೇಳೆಗೆ ಚೀಲವೊಂದಕ್ಕೆ ರೂ. 2600 ಬೆಲೆ ಪಡೆದಿದ್ದ ರೊಬಸ್ಟಾ ಕಾಫಿ ಈಗ ಈ ಪರಿಯ ಏರಿಕೆ ಕಾಣಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಯ ಪೂರೈಕೆಯಲ್ಲಿನ ಕಡಿತ ಮತ್ತು ಬೇಡಿಕೆ ಹೆಚ್ಚಿರುವುದೇ ಪ್ರಮುಖ ಕಾರಣ. ಜತೆಗೆ ರೊಬಸ್ಟಾ ಕಾಫಿ ಉತ್ಪಾದಿಸುವ ಇಂಡೋನೇಷ್ಯಾ, ವಿಯೆಟ್ನಾಂ ಮತ್ತಿತರ ದೇಶಗಳಲ್ಲಿ ಕಳೆದ ಸಾಲಿನ ಫಸಲು ಕಡಿಮೆ ಆಗಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಬಹುತೇಕ ಬೆಳೆಗಾರರು ಮಾರ್ಚ್ ಅಂತ್ಯದ ವೇಳೆಗೇ ಕಾಫಿ  ಮಾರುವುದರಿಂದ ಅವರಿಗೆ ಬೆಲೆ ಏರಿಕೆಯ ಲಾಭ ಸಿಕ್ಕಿಲ್ಲ.

`ಬ್ಯಾಂಕ್ ಸಾಲ, ಗೊಬ್ಬರ ಅಂತ ನಾವು ಕಾಫಿ ಪೂರಾ ಮಾರಿ ಆಗಿತ್ತು. ಈಗ ಬೆಲೆ ಏರಿದ್ರೂ ನಮ್ಮಂತೋರಿಗೆ ಲಾಭ ಆಗಲ್ಲ~ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಣ್ಣ ಬೆಳೆಗಾರರೊಬ್ಬರು.

`ಶೇ 10ರಿಂದ 20ರಷ್ಟು ಬೆಳೆಗಾರರ ಬಳಿ ಮಾತ್ರ ಕಾಫಿ ದಾಸ್ತಾನು ಇದೆ. ಅವರಿಗೆ ಖಂಡಿತವಾಗಿಯೂ ಬೆಲೆ ಏರಿಕೆಯ ಲಾಭ ಸಿಗುತ್ತದೆ. ಆದರೆ, ಸಣ್ಣ ಬೆಳೆಗಾರರು ಕೂಡ ಬೆಳೆ ಉಳಿಸಿಕೊಂಡು ಒಳ್ಳೆಯ ಬೆಲೆಗೆ ಬಂದಾಗ ಮಾರುವಂತಾಗಬೇಕು. ಬೆಳೆದ ಫಸಲನ್ನು ಮಾರಲು ಕೂಡ ಬುದ್ಧಿವಂತಿಕೆ ಬೇಕು~ ಎನ್ನುವುದು ಬೆಳೆಗಾರರೊಬ್ಬರ ಅನುಭವದ ಮಾತು.

`ಕಾಫಿಗೆ ಈಗ ಬಂದಿರುವ ಬೆಲೆ ಬಂಪರ್ ಬೆಲೆ ಅಲ್ಲವೇ ಅಲ್ಲ. ಏಕೆಂದರೆ 1993ರಲ್ಲಿ ಕಾರ್ಮಿಕರ ಸಂಬಳ ರೂ. 20 ಇದ್ದಾಗಲೇ ಮೂಟೆಯೊಂದಕ್ಕೆ ರೂ. 3000  ಬೆಲೆ ಬಂದಿತ್ತು. ಈಗ ಕಾರ್ಮಿಕರ ಸಂಬಳ ರೂ.200ಗೆ ಮುಟ್ಟಿರುವಾಗ ಈ ಬೆಲೆ ಸಮಾಧಾನಕರ ಬೆಲೆ ಅಷ್ಟೆ~ ಎಂಬ ಅಭಿಪ್ರಾಯವೂ ಕೆಲವರದ್ದಾಗಿದೆ.

ಎರಡು ದಶಕಗಳ ಹಿಂದೆ ರೂ.100 ಕ್ಕೆ ಸಿಗುತ್ತಿದ್ದ ಗೊಬ್ಬರದ ಮೂಟೆಗೆ ಇಂದು ರೂ.950 ಬೆಲೆ ಆಗಿದೆ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕಾಫಿಗೆ ರೂ. 5 ಸಾವಿರ ಬೆಲೆ ಬಂದರೆ ಮಾತ್ರ ಬಂಪರ್ ಬೆಲೆ ಎಂಬುದು ಬೆಳೆಗಾರ ಸಮುದಾಯದ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT