ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಕಸ್ತೂರಿ ಕೆಂಡಸಂಪಿಗೆ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಇತಿಹಾಸ ಮರುಕಳಿಸುವಂತೆ ‘ಬೆಂಕಿ ಬಿರುಗಾಳಿ’ಯೂ ಮರುಕಳಿಸಿದೆ. ಸುಮಾರು ಎರಡೂವರೆ ದಶಕದ ಹಿಂದೆ ತೆರೆಕಂಡಿದ್ದ ‘ಬೆಂಕಿ ಬಿರುಗಾಳಿ’ ಹೆಸರಿನ ಹೊಸ ಚಿತ್ರ ಈಗ ಸೆಟ್ಟೇರಿದೆ.

ಹಳೆಯ ಚಿತ್ರ ನೆನಪಿಸಿಕೊಳ್ಳಿ: ವಿಷ್ಣುವರ್ಧನ್ ಹಾಗೂ ಶಂಕರನಾಗ್ ಬೆಂಕಿ-ಬಿರುಗಾಳಿ ಆಗಿ ಜೀವತುಂಬಿದ್ದ ಚಿತ್ರವದು. ಇಬ್ಬರೂ ಈಗ ನೆನಪಷ್ಟೇ. ಇವರಿಬ್ಬರ ಜಾಗಕ್ಕೆ ಯಾರು ಎಂದು ಊಹಿಸಿಕೊಳ್ಳುವ ಮೊದಲು, ಸ್ವಲ್ಪ ನಿಧಾನಿಸಿ. ಈ ಕಾಲದ ಬೆಂಕಿ-ಬಿರುಗಾಳಿಯಾಗಿ ನಟಿಸುತ್ತಿರುವುದು ನಾಯಕರಲ್ಲ, ನಾಯಕಿಯರು! ನಮಿತಾ ಹಾಗೂ ಸಲೋನಿ ಎನ್ನುವ ಆಮದು ಚೆಲುವೆಯರೇ ಈ ಪ್ರಚಂಡ ಜೋಡಿ.

ಕಳೆದ ವಾರ ನಡೆದ ಚಿತ್ರದ ಮುಹೂರ್ತದಲ್ಲಿ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ರವಿಚಂದ್ರನ್. ಎಸ್.ಕೆ.ಬಷೀದ್ ‘ಬೆಂಕಿ ಬಿರುಗಾಳಿ’ಯ ನಿರ್ದೇಶಕರು. ನಿರ್ಮಾಣ ಕೂಡ ಅವರದ್ದೇ. ಕನ್ನಡದಲ್ಲಿದು ಅವರ ಮೂರನೇ ಚಿತ್ರ. ಆಕ್ಷನ್ ಹಾಗೂ ಥ್ರಿಲ್ಲರ್ ಎಂದು ತಮ್ಮ ಚಿತ್ರವನ್ನು ಬಣ್ಣಿಸಿದ ನಿರ್ದೇಶಕರು, ಕಥೆಯನ್ನು ಗುಟ್ಟಾಗಿಡುವ ಉದ್ದೇಶದಿಂದ ಅಳೆದೂ ತೂಗಿ ಮಾತನಾಡಿದರು. ಅವರ ಪ್ರಕಾರ, ಚಿತ್ರದಲ್ಲಿ ನಮಿತಾ ಬೆಂಕಿಯಾಗಿ ಕಾಣಿಸಿಕೊಂಡರೆ, ಸಲೋನಿ ಬಿರುಗಾಳಿಯ ಪ್ರತೀಕ.

 

ಎಸ್.ಕೆ.ಬಷೀದ್

ಕೆಂಡಸಂಪಿಗೆ, ಕಾಮಕಸ್ತೂರಿಯಂಥ ಈರ್ವರು ಚೆಲುವೆಯರ ನಡುವೆ ರಿಷಿ ಎನ್ನುವ ಹೊಸ ಹುಡುಗ ನಟಿಸುತ್ತಿದ್ದಾನೆ. ಅಲ್ಲಿಗಿದು ತ್ರಿಕೋನ ಪ್ರೇಮಕಥೆ ಎಂದಾಯಿತು.

ನಮಿತಾ ಕನ್ನಡಕ್ಕೆ ಹೊಸಬಳೇನಲ್ಲ. ದಕ್ಷಿಣಭಾರತ ಚಿತ್ರರಂಗದಲ್ಲಿ ಸೆಕ್ಸಿ ತಾರೆಯೆಂದೇ ಹೆಸರಾದ ನಮಿತಾ, ‘ನೀಲಕಂಠ’ ಹಾಗೂ ‘ಹೂ’ ಚಿತ್ರಗಳಲ್ಲಿ ರವಿಚಂದ್ರನ್ ಜೊತೆ ಬಿಡುಬೀಸಾಗಿ ನಟಿಸಿದ್ದರು. ‘ನಮಿತಾ ಐ ಲವ್ ಯು’ ಎನ್ನುವ ಮತ್ತೊಂದು ಚಿತ್ರದಲ್ಲೂ ಆಕೆ ನಟಿಸುತ್ತಿದ್ದಾರೆ. ಸಲೋನಿ ಕೂಡ ಕನ್ನಡ ಪ್ರೇಕ್ಷಕರಿಗೆ ಪರಿಚಿತಳೇ. ‘ಬುದ್ಧಿವಂತ’ ಚಿತ್ರದ ಪಂಚರಂಗಿಯರಲ್ಲಿ ಸಲೋನಿಯೂ ಒಬ್ಬಳು.

ರಾಯಚೂರಿನ ಪ್ರತಿಭೆ ಶ್ರೀಲೇಖಾ ಸಂಗೀತ ನೀಡುತ್ತಿರುವ ‘ಬೆಂಕಿ ಬಿರುಗಾಳಿ’ಗಾಗಿ ಒಟ್ಟು ಎಂಬತ್ತೈದು ದಿನಗಳ ಚಿತ್ರೀಕರಣ ನಡೆಸಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಚೆನ್ನೈ ಜೊತೆಗೆ ಮಲೇಷಿಯಾ, ಬ್ಯಾಂಕಾಕ್ ಹಾಗೂ ಸ್ವಿಟ್ಜರ್‌ಲೆಂಡ್‌ಗಳಲ್ಲೂ ಚಿತ್ರೀಕರಣ ನಡೆಸಲಾಗುತ್ತದಂತೆ. ಕಡಲ ತಡಿಯಲ್ಲೇ ಹತ್ತು ದಿನಗಳ ಚಿತ್ರೀಕರಣ ನಡೆಯಲಿದೆಯಂತೆ.

ಬಷೀದ್ ‘ಬೆಂಕಿ ಬಿರುಗಾಳಿ’ ತೆರೆಕಂಡ ನಂತರ, ಅದನ್ನು ಇತರ ಭಾಷೆಗಳಿಗೂ ಡಬ್ ಮಾಡಲು ಉದ್ದೇಶಿಸಿದ್ದಾರೆ. ಹಾಗೆ ಡಬ್ ಮಾಡಿದರಷ್ಟೇ ಲೆಕ್ಕಾ ಪಕ್ಕಾ ಆಗುತ್ತದೆ ಎನ್ನುವ ಅಂದಾಜು ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT