ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ನೆನೆಗುದಿಗೆ: ಜನತೆಗೆ ಕಿರಿಕಿರಿ

Last Updated 6 ಜನವರಿ 2012, 9:35 IST
ಅಕ್ಷರ ಗಾತ್ರ

ಅಥಣಿ: ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸುತ್ತಿರುವ ಜತ್ ಜಾಂಬೋಟಿ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಇದೀಗ ಬರೋಬ್ಬರಿ ಒಂದು ವರ್ಷ ಗತಿಸಿದೆ. ಆದರೆ ಇದುವರೆಗೂ ಕೂಡ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದರಿಂದ ನಿತ್ಯ ಪಟ್ಟಣ ಪ್ರದೇಶದ ನಾಗರಿಕರು ಮತ್ತು ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉದ್ದೇಶಿತ ಈ 1.080 ಕಿ.ಮೀ. (ಶ್ರೀ ಶಿವಯೋಗಿ ವತ್ತದಿಂದ ಬಿರಾದಾರ ಪೆಟ್ರೋಲ್ ಬಂಕ್) ವರೆಗಿನ ದ್ವಿಪಥ ರಸ್ತೆಯ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಈ ಮೊದಲು ಅಧಿಕೃತವಾಗಿ ಟೆಂಡರ್ ಕರೆಯದಿದ್ದರೂ ಕೂಡ ಸಾರ್ವಜನಿಕರ ಅನಾನುಕೂಲತೆಯನ್ನು ಗಮನದಲ್ಲಿಟ್ಟು ಕೊಂಡು ಸಹಕಾರ ಸಚಿವ ಲಕ್ಷ್ಮಣ ಸವದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಯನ್ನು ಆರಂಭಿಸುವಂತೆ ಮೌಖಿಕ ಸೂಚನೆ ನೀಡಿದ್ದರು.
 
ಅದರನ್ವಯ ಸದರಿ ಕಾಮಗಾರಿಯನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಆರಂಭಿಸಲಾಗಿದ್ದರೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪೂರ್ಣಗೊಳಿಸಲು ಇದುವರೆಗೆ ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಸ್ ಬುರ್ಲಿ `ಪ್ರಜಾವಾಣಿ~ಗೆ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ 20 ಮೀಟರ್ ಅಗಲದ ರಸ್ತೆ ನಿರ್ಮಿಸುವುದಾಗಿ ಲೋಕೋಪಯೋಗಿ ಇಲಾಖೆ ಹೇಳಿಕೊಂಡ ನಂತರ ಈ ವ್ಯಾಪ್ತಿಯ ರಸ್ತೆಯ ಮಧ್ಯ ಭಾಗದಿಂದ ಎರಡೂ ಬದಿಗೆ ಸುಮಾರು 15 ಮೀಟರ್ ಅಂತರದಲ್ಲಿ ಬರುವ ಎಲ್ಲ ತರಹದ ಗಿಡ ಮರಗಳನ್ನು ಅರಣ್ಯ ಇಲಾಖೆ ತರಾತುರಿಯಲ್ಲಿ ತೆರವುಗೊಳಿಸಿ ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಟ್ಟಿತು.

ಆದರೆ ಬದಲಾದ ಇಲಾಖೆಯ ನಿರ್ಧಾರದ ಅನ್ವಯ ಉದ್ದೇಶಿತ ರಸ್ತೆಯ ಅಗಲವನ್ನು ಕೇವಲ 11 ಮೀಟರ್‌ಗೆ ಮಾತ್ರ ಸೀಮಿತ ಗೊಳಿಸಿದ್ದರಿಂದ ರಸ್ತೆಯ ಬದಿಗೆ ತಮ್ಮ ಪಾಡಿಗೆ ತಾವಿದ್ದ ಗಿಡ ಮರಗಳನ್ನು ಅನಗತ್ಯವಾಗಿ ಕಡಿದು ಹಾಕಿದ್ದ ಬಗ್ಗೆ ಅರಣ್ಯ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿತ್ತು. ಆದರೆ ಇದೇ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಲು ಮಾತ್ರ ಹೆಸ್ಕಾಂ ಅಧಿಕಾರಿಗಳು ಆಡಳಿತಾತ್ಮಕ ಕಾರಣ ಮುಂದೊಡ್ಡಿ ನಿರಾಕರಿಸಿರುವುದರಿಂದ ಬೀದಿ ದೀಪದ ಹಳೆಯ ಕಂಬ, ಟಿ.ಸಿ ಹಾಗೂ ಅತಿಕ್ರಮಣಗಳು ಈಗಲೂ ಕೂಡ ರಸ್ತೆಗೆ ಹೊಂದಿಕೊಂಡಿವೆ. ಅದರಿಂದ ಏಕ ಮುಖ ಸಂಚಾರದ ರಸ್ತೆಯಲ್ಲಿ ಸಂಚಾರ ಸಮಸ್ಯೆ ಆರಂಭಗೊಂಡಿತು.

ಕಳೆದ ಎರಡು ತಿಂಗಳಿನಿಂದ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿದ ನಂತರ ಟ್ರ್ಯಾಕ್ಟರ್, ಲಾರಿ ಸೇರಿದಂತೆ ಸರಕು ಸಾಗಣೆ ವಾಹನಗಳ ಓಡಾಟದಲ್ಲಿ ಸಾಕಷ್ಟು ಏರಿಕೆ ಕಂಡು ಬಂದಿದ್ದು, ಇದರಿಂದ ದ್ವಿಚಕ್ರ ವಾಹನ, ಕಾರು, ಜೀಪ್ ಸೇರಿದಂತೆ ವಿವಿಧ ಲಘುವಾಹನಗಳು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ತೊಂದರೆ  ಅನುಭವಿಸುವಂತಾಗಿದೆ.  ಪಾದಚಾರಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಮುರುಘೇಂದ್ರ ವೃತ್ತದ ಸಮೀಪ ಪ್ರಯಾಣಿಕ ವಾಹನಗಳ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ ಚಾಲಕರು ಮಾತ್ರ ಇದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ.

ದೂಳಿನ ತೊಂದರೆ: ಈಗಷ್ಟೆ ಎರಡು ಪದರಿನ ಮೆಟಲಿಂಗ್ ಕಂಡಿರುವ ಈ ರಸ್ತೆಯ ಗುಂಟ ಸಾಗುವ ವಾಹನಗಳಿಂದ ವಿಪರೀತ ದೂಳು ಏಳುತ್ತಿರುವುದಿಂದ ಕಳೆದ ಒಂದು ವರ್ಷದಿಂದ ಕಿರಿಕಿರಿ ಅನುಭವಿಸುತ್ತಿರುವ  ನಾಗರಿಕರು ಸಂಬಂಧಪಟ್ಟವರಿಗೆ ದೂರು ನೀಡುತ್ತ ಬಂದಿದ್ದಾರೆ.

`ದೂರು ನೀಡಿದ ದಿನ ಮಾತ್ರ  ದೂಳನ್ನು ನಿಯಂತ್ರಿಸಲು ಕಾಟಾಚಾರಕ್ಕೆ ನೀರು ಸಿಂಪಡಿಸಿದ್ದು ಬಿಟ್ಟರೆ ಇದುವರೆಗೆ ಶಾಶ್ವತ ಪರಿಹಾರವಾಗಿ ಯಾವುದೇ ಕ್ರಮ ಕೈಗೊಳ್ಳಲು ಆಸಕ್ತಿ ತೋರುತ್ತಿಲ್ಲ~ ಎಂದು ಅಟೋಮೊಬೈಲ್ಸ್ ಅಂಗಡಿ ಮಾಲಿಕರೊಬ್ಬರು ದೂರುತ್ತಾರೆ.

ಈ ಕುರಿತು ಪುರಸಭೆ ಸದಸ್ಯೆ ಅನಸೂಯಾ ಸುನಧೋಳಿ ನೇತತ್ವದಲ್ಲಿ ಮೂರು ಬಾರಿ ಪ್ರತಿಭಟನೆ ನಡೆಸಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸುತ್ತಿಲ್ಲ ಎಂದು ಅನೇಕರು ದೂರಿದ್ದಾರೆ.

ಬಿರಾದಾರ ಪೆಟ್ರೋಲ್ ಬಂಕ್ ಹತ್ತಿರ ಡಿವೈಡರ್ ಗುಂಟ ಅಳವಡಿಸಲು ತೋಡಲಾಗಿರುವ ಗುಂಡಿಗಳನ್ನು ವಿದ್ಯುತ್ ಕಂಬ ನೆಡದೇ ಹಾಗೇ ಬಿಟ್ಟಿರುವುದರಿಂದ ರಾತ್ರಿಯ ವೇಳೆ ಅಪಘಾತದ ಪ್ರಮಾಣಗಳು ಹೆಚ್ಚುತ್ತಿವೆ. ಸೋಮವಾರ ರಾತ್ರಿ ಹಲ್ಯಾಳ ಕಡೆಯಿಂದ ಬರುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಈ ಗುಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT