ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮುಗಿಸಲು ಗಡುವು ನಿಗದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ
Last Updated 7 ಸೆಪ್ಟೆಂಬರ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಾರ್ಕ್‌ಹೌಸ್ ರಸ್ತೆ, ಜಯಮಹಲ್ ರಸ್ತೆ, ಮೇಖ್ರಿ ವೃತ್ತ, ಸಿ.ವಿ.ರಾಮನ್ ರಸ್ತೆ, ಸಿ.ಎನ್.ಆರ್.ರಾವ್ ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಪದ್ಮನಾಭನಗರದ ದೊರೆಕೆರೆ, ಅಗರ ಕೆರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಡುವಿನೊಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಶಿವಾನಂದ ವೃತ್ತದ ಬಳಿ ಮತ್ತು ಪಾರ್ಕ್‌ಹೌಸ್ ರಸ್ತೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಕಾಂಕ್ರಿಟ್ ರಸ್ತೆ (ವೈಟ್ ಟಾಪಿಂಗ್ ರಸ್ತೆ) ವೀಕ್ಷಿಸಿದ ಅವರು, `ನಗರದ ಮುಖ್ಯರಸ್ತೆಗಳಿಗೆ ಕಾಂಕ್ರಿಟ್ ಹಾಕುವುದರಿಂದ ಅಲ್ಪಾವಧಿಯಲ್ಲಿ ದೀರ್ಘ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಬಹುದು. ಈ ರಸ್ತೆಗಳು ಗುಂಡಿ ಬೀಳುವುದಿಲ್ಲ. ನಿರ್ವಹಣೆಯೂ ಸುಲಭ. ಹೀಗಾಗಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮೇಖ್ರಿ ವೃತ್ತ ಮಾರ್ಗವಾಗಿ ಯಶವಂತಪುರ ಬಳಿಯ ಸಿ.ಎನ್.ಆರ್.ರಾವ್ ವೃತ್ತದ ಅಂಡರ್‌ಪಾಸ್ ಕಾಮಗಾರಿ ವೀಕ್ಷಿಸಿದರು.`ಅಂಡರ್‌ಪಾಸ್ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿದೆ. ಇನ್ನೂ ಕಾಮಗಾರಿ ಕುಂಟುತ್ತಾ ಸಾಗಿದೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ದಂಡ ವಿಧಿಸಲಾಗುವುದು' ಎಂದರು.

ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ನಂತರ ರಾಜಾಜಿನಗರದಲ್ಲಿ ನಿರ್ಮಾಣವಾಗುತ್ತಿರುವ `ನಮ್ಮ ಮೆಟ್ರೊ' ನಿಲ್ದಾಣಕ್ಕೆ ಭೇಟಿ ನೀಡಿದರು. `ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶ ನೀಡಬೇಕು. ಕಾಮಗಾರಿ ವೇಳೆ ಉತ್ಪತ್ತಿಯಾಗುವ ಕಟ್ಟಡ ಅವಶೇಷವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳನ್ನು ಮೆಟ್ರೊ ನಿಗಮ ಹಾಗೂ ಬಿಬಿಎಂಪಿ ಜಂಟಿಯಾಗಿ ನಿರ್ವಹಣೆ ಮಾಡಬೇಕು' ಎಂದು ತಿಳಿಸಿದರು.

ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಿದ್ದರಾಮಯ್ಯ, `ನವೆಂಬರ್ ಅಂತ್ಯದ ವೇಳೆಗೆ ಮೇಲ್ಸೇತುವೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕು' ಎಂದು ಸೂಚಿಸಿದರು. ಸಮೀಪದ ಪಂತರಪಾಳ್ಯ ಕೊಳೆಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಉಚಿತವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಕಾವೇರಿ ನಾಲ್ಕನೇ ಹಂತದ ಯೋಜನೆಯಡಿ ಹೆಚ್ಚುವರಿ ನೀರು ನಗರಕ್ಕೆ ಬರುತ್ತಿದೆ. ಈ ನೀರು ವ್ಯರ್ಥವಾಗುವ ಬದಲು ಕೊಳೆಗೇರಿಯ ಜನರಿಗೆ ಉಪಯೋಗವಾಗಲಿ. ಹೀಗಾಗಿ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಿ' ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

`ಕೊಳೆಗೇರಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ 912 ಮನೆಗಳು ಖಾಲಿ ಇದೆ ಎಂದು ಹೇಳಲಾಗುತ್ತಿದೆ. ಇವನ್ನು ಕೊಳೆಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಬೇಕು. ಕೊಳೆಗೇರಿ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು'  ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪದ್ಮನಾಭನಗರದ ದೊರೆಕೆರೆಗೆ ಭೇಟಿ ನೀಡಿದ ಅವರು, `ಒತ್ತುವರಿಯಾಗಿರುವ ಕೆರೆಯ ಜಾಗ ತೆರವುಗೊಳಿಸಬೇಕು. ಸರ್ಕಾರಿ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗಿದ್ದರೂ  ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವಾಯು ವಿಹಾರಕ್ಕಾಗಿ ಕೆರೆಯ ಸುತ್ತ ನಡಿಗೆ ಮಾರ್ಗ ಅಭಿವೃದ್ಧಿಪಡಿಸಬೇಕು' ಎಂದರು.

ನಂತರ ಅಗರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. `ಕೆರೆಗೆ ಕೊಳಚೆ ನೀರು ಸೇರುವುದನ್ನು ನಿಲ್ಲಿಸಬೇಕು. ಕೊಳಚೆ ನೀರನ್ನು ಸಂಸ್ಕರಿಸಿ ಕೆರೆಗೆ ಬಿಡಲು ಒಂದು ಎಕರೆ ಪ್ರದೇಶದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಬಿಎಂಪಿ ಜಂಟಿಯಾಗಿ ಕೆರೆ ಅಭಿವೃದ್ಧಿಗೆ ಮುಂದಾಗಬೇಕು' ಎಂದು ಹೇಳಿದರು.

`ಕೊಳಚೆ ನೀರು ಕೆರೆ ಸೇರದಂತೆ ಪ್ರತ್ಯೇಕವಾದ ಪೈಪ್ ಲೈನ್ ಅಳವಡಿಸಬೇಕು. 8 ತಿಂಗಳೊಳಗೆ ಕೆರೆ ಅಭಿವೃದ್ಧಿಯಾಗಬೇಕು. ಕೆರೆ ಅಭಿವೃದ್ಧಿಯ ಬಗ್ಗೆ ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲ ಮಂಡಳಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು' ಎಂದರು.

ಆನೇಪಾಳ್ಯ, ರಿಚ್ಮಂಡ್ ರಸ್ತೆ, ಕಸ್ತೂರ ಬಾ ರಸ್ತೆ, ರಾಜಭವನ ರಸ್ತೆ ಮಾರ್ಗವಾಗಿ ಗೃಹ ಕಚೇರಿ `ಕೃಷ್ಣಾ'ಗೆ ಹಿಂದಿರುಗಿದರು. ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,`ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು' ಎಂದರು.

`ಶಿವಾನಂದ ವೃತ್ತದಲ್ಲಿ ರೂ 25 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ರೂ 35 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ' ಎಂದರು.

`ನಗರದ ಕಸದ ಸಮಸ್ಯೆ ತಗ್ಗಿಸಲು ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕಸದ ಸಮಸ್ಯೆಯ ಬಗ್ಗೆ ಹೈಕೋರ್ಟ್ ಹಾಗೂ ರಾಜ್ಯಪಾಲರು ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನವೇ ರಸ್ತೆ ಚರಂಡಿಗಳ ಹೂಳು ತೆಗೆಯಲು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.

`ಮಳೆ ನೀರು ಸಂಗ್ರಹ ವ್ಯವಸ್ಥೆ ಸರಿಯಾಗಿ ಆಗುತ್ತಿಲ್ಲ. ನನ್ನ ಮನೆಯಲ್ಲೇ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಯಾಗಿಲ್ಲ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ನಗರ ಪ್ರದಕ್ಷಿಣೆ ಮಾಡಿದ್ದೇನೆ. ಇನ್ನು ಮುಂದೆ ಎರಡು ತಿಂಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆ ಪರಿಶೀಲಿಸುತ್ತೇನೆ. ಚೀನಾ ಪ್ರವಾಸದಿಂದ ಹಿಂದಿರುಗಿ ಬಂದ ಮೇಲೆ ನಗರದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT