ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ: ತಪ್ಪದ ಗೋಳು

Last Updated 19 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಕುಣಿಗಲ್: ಅಭಿವೃದ್ಧಿ ನೆಪದಲ್ಲಿ ಕೈಗೊಂಡ ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

2005ರಲ್ಲಿ ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸುವ ಸಲುವಾಗಿ 50 ವರ್ಷದಹಳೆಯ ಪುರಸಭೆ ಬಸ್‌ನಿಲ್ದಾಣವನ್ನು ಮುನ್ಸೂಚನೆ ನೀಡದೆ ಒತ್ತುವರಿ ತೆರವಿನ ನೆಪದಲ್ಲಿ ಕೆಡವಲಾಯಿತು. ಆದರೆ ಇದುವರೆವಿಗೂ ಹೈಟೆಕ್ ಬಸ್ ನಿಲ್ದಾಣದ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನಿತ್ಯವೂ ಸಾವಿರಾರು ಪ್ರಯಾಣಿಕರು ಅಗತ್ಯ ಸೌಲಭ್ಯಗಳಿಲ್ಲದೆ ತೊಂದರೆಗೊಳಗಾಗುತ್ತಿದ್ದಾರೆ.

ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಮತ್ತು ಈ ವ್ಯಾಪ್ತಿಯಲ್ಲಿ ನೆಲ ಬಾಡಿಗೆ ಆಧಾರದ ಮೇಲೆ ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ವ್ಯಾಪಾರಿಗಳು ಪರ್ಯಾಯ ವ್ಯವಸ್ಥೆ ಕಾಣದೆ ಕೆಲವರು ಊರನ್ನು ತೊರೆದಿದ್ದಾರೆ. ಇನ್ನೂ ಹಲವರು ಬೇರೆ ಯಾವ ವ್ಯವಹಾರ ಮಾಡಲು ಸಾಧ್ಯವಾಗದೆ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುವಂತಹ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಶಶಿಕುಮಾರ್, ಕೃಷ್ಣಪ್ಪ, ವೆಂಕಟೇಶ್, ಮಾಜಿ ಪುರಸಭೆ ಸದಸ್ಯ ಶಂಕರ್ ಆರೋಪಿಸಿದ್ದಾರೆ.

ಗ್ರಾಮ ದೇವತೆ ವೃತ್ತದ ಬಳಿ ಇದ್ದ ತರಕಾರಿ ಮಾರುಕಟ್ಟೆ ಹಾಗೂ ಮದ್ದೂರು ರಸ್ತೆಯಲ್ಲಿನ ತಾಲ್ಲೂಕು ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳನ್ನು ಯಾವುದೇ ಯೋಜನೆ ರೂಪಿಸದೆ ಅಭಿವೃದ್ಧಿಯ ಕುಂಟು ನೆಪವೊಡ್ಡಿ ಕೆಡವಿಹಾಕಿ ಏಳು ವರ್ಷ ಕಳೆದರೂ; ಪುನರ್ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿವೆ ಹೊರತು ಪ್ರಗತಿ ಕಂಡಿಲ್ಲ.

ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-48ನ್ನು ಸಂಬಂಧಪಟ್ಟ ಇಲಾಖೆ ಅನುಮತಿ ಪಡೆಯದೆ ಸ್ಥಳೀಯ ಜನಪ್ರತಿನಿಧಿಗಳು, ವರ್ತಕರು, ನಾಗರಿಕರೊಂದಿಗೆ ಚರ್ಚಿಸಿ ಮೊದಲಿಗೆ 90ಅಡಿಗೆ ನಿಗದಿಗೊಳಿಸಲಾಗಿತ್ತು. ಈ ನೆಪದಲ್ಲಿ ಮನೆ ಸೇರಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಮೂರು ವರ್ಷಗಳಾದರೂ ರಸ್ತೆ ಅಭಿವೃದ್ಧಿಯಾಗಿಲ್ಲ.

ಇದರ ಸದುಪಯೋಗ ಪಡೆದ ಕೆಲ ಪ್ರಭಾವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಜಾಗ ಅತಿಕ್ರಮಿಸಿಕೊಂಡು ಮಳಿಗೆ ಕಟ್ಟಿಕೊಂಡಿದ್ದು, ರಸ್ತೆ ನಿಗದಿ ಬಗ್ಗೆ ಗೊಂದಲ ಉಂಟಾಗಿ ಹಲವು ವಿವಾದಗಳಿಗೆ ಕಾರಣವಾಗಿದೆ.

7.5ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತ ಕುಡಿಯವ ನೀರಿನ ಯೋಜನೆ ರೂಪಿಸಿದ್ದು, ನಿಯಮಾವಳಿ ಪ್ರಕಾರ ಅನುಷ್ಠಾನಗೊಂಡಿಲ್ಲ. ಪುರಸಭೆ ವತಿಯಿಂದ ವಿತರಿಸಲಾಗುತ್ತಿರುವ ಅಶುದ್ಧ ನೀರನ್ನು ಉಪಯೋಗಿಸಿ ರೋಗಕ್ಕೆ ತುತ್ತಾಗಿ ಪ್ರತಿನಿತ್ಯ ಆಸ್ಪತ್ರೆಗಳಿಗೆ ಅಲೆಯುವ ದೃಶ್ಯ ಸಾಮಾನ್ಯವಾಗಿದೆ. ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆ ಮೇರೆಗೆ ಮಿನರಲ್ ವಾಟರ್‌ಗಳಿಗೆ ಮೊರೆ ಹೋಗಿರುವುದಾಗಿ ಗೃಹಿಣಿಯರಾದ ಜಯಮ್ಮ, ಶಶಿಕಲಾ, ಮಂಗಳಮ್ಮ, ಸಾವಿತ್ರಿ ತಿಳಿಸಿದ್ದಾರೆ.

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ವಿಳಂಬಕ್ಕೆ ಕಾರಣ ಎಂದು ಹಿರಿಯರಾದ ಕುಣಿಗಲ್ ಶಿವಣ್ಣ, ರಾಮಕೃಷ್ಣಪ್ಪ, ನಾರಾಯಣ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT