ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬಕ್ಕೆ ಜನತೆ ಆಕ್ರೋಶ

Last Updated 4 ಜೂನ್ 2011, 8:35 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ವಿವಿಧ ಕಡೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಳೆದ ಎರಡು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ  ಪುರಸಭೆಗೆ ತೊಡಕಾಗಿ ಪರಿಣಮಿಸಿದೆ.

ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ, ಕೈಕುಂಜೆ ಸಹಿತ ಜಕ್ರಿಬೆಟ್ಟು, ಬಾರೆಕಾಡು, ಬಡ್ಡಕಟ್ಟೆ, ಬಸ್ತಿಪಡ್ಪು, ಪಾಣೆಮಂಗಳೂರು, ಗೂಡಿನಬಳಿ ಮತ್ತಿತರ ಕಡೆ ರಸ್ತೆ ಬದಿ ಅಗೆದು ಒಳಚರಂಡಿ ಮತ್ತು ಮ್ಯಾನ್‌ಹೋಲ್ ನಿರ್ಮಾಣ ಕಾಮಗಾರಿ ನಡೆದಿದೆ.

ಈಗಾಗಲೇ ಪಾಣೆಮಂಗಳೂರು ಮತ್ತು ಕೈಕುಂಜೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಮಳೆಗಾಲದಲ್ಲಿ ಹೊಂಡ ಬಿದ್ದಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿತ್ತು.ಇದೀಗ ಬಂಟ್ವಾಳ ಕೆಳಗಿನಪೇಟೆಯಿಂದ ಬಸ್ತಿಪಡ್ಪು ರಸ್ತೆಯಲ್ಲಿ ಒಳಚರಂಡಿ ಮತ್ತು ಮ್ಯಾನ್‌ಹೋಲ್ ಕಾಮಗಾರಿ ನಡೆಸಿ ಮಣ್ಣು ಮುಚ್ಚಲಾಗಿದೆ.

ಇದರಿಂದಾಗಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಬದಿ ಅಲ್ಲಲ್ಲಿ ಕುಸಿತ ಉಂಟಾಗಿದೆ. ರಸ್ತೆಗಳು ಕೆಸರುಮಯವಾಗಿದೆ. ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರ ಒತ್ತಡಕ್ಕೆ ಮಣಿದು ಇದೀಗ ತರಾತುರಿಯಲ್ಲಿ ಹೊಂಡ ಕಾಣಿಸಿಕೊಂಡಲ್ಲಿ ಮರಳು ತುಂಬಿಸುವ ಕಾರ್ಯ ನಡೆಯುತ್ತಿದೆ.

ಈ ನಡುವೆ ಜಕ್ರಿಬೆಟ್ಟು ಪ್ರದೇಶದಲ್ಲಿ ಹಲವಾರು ಸಮಯದಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ವಿಳಂಬಗೊಂಡಿರುವ ಬಗ್ಗೆಯೂ ಪ್ರತಿಭಟನೆ ನಡೆದಿತ್ತು. ಇದೀಗ ಮತ್ತೆ ಚರಂಡಿಯಲ್ಲಿ ಕಲ್ಲು ಬಂಡೆ ಕಾಣಿಸಿಕೊಂಡಿದ್ದು ಇದನ್ನು ಒಡೆಯಲು ಸ್ಪೋಟಕ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇಲ್ಲಿ ಬಂಡೆ ಒಡೆಯದೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಒಳಚರಂಡಿ ಮಂಡಳಿ ಎಂಜಿನಿಯರ್ ಶುಭಲಕ್ಷ್ಮಿ ಅವರನ್ನು ಇತ್ತೀಚೆಗೆ ಪುರಸಭೆಯ ಸಾಮಾನ್ಯ ಸಭೆಗೆ ಕರೆಸಿ ಕಾಮಗಾರಿ ತ್ವರಿತಗೊಳಿಸುವಂತೆ ಒತ್ತಡ ಹೇರಲಾಗಿದೆ.

ಆರಂಭದಲ್ಲಿ ರೂ.14 ಕೋಟಿ ವೆಚ್ಚದಲ್ಲಿ ಸಂಪೂರ್ಣ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ನೀಡಲಾಗಿದ್ದು, ಇದೀಗ ರೂ.20ಲಕ್ಷ ಮೊತ್ತಕ್ಕೆ ತಲುಪಿದೆ. ಒಟ್ಟಿನಲ್ಲಿ ಪುರಸಭೆಗೆ ಸಂಬಂಧಪಡದಿದ್ದರೂ ಪ್ರತ್ಯೇಕವಾಗಿ ಆಮೆಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಒಳಚರಂಡಿ ಮಂಡಳಿಯಿಂದ ಪುರಸಭೆಗೆ ಮಾತ್ರ ಕೆಟ್ಟ ಹೆಸರು ಬರುತ್ತಿದೆ ಎಂದು ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಮೋಹನ್ ಕೆ.ಶ್ರೀಯಾನ್


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT