ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳು ಕಳಪೆ, ವಿಳಂಬ: ಶಾಸಕ ಕಿಡಿ

Last Updated 5 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ನಾಗಮಂಗಲ: ಕಳಪೆ ಕಾಮಗಾರಿ ಮತ್ತು ವಿಳಂಬ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶಾಸಕ ಸುರೇಶ್‌ಗೌಡ  ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ತಪ್ಪಿತಸ್ಥರ  ವಿರುದ್ಧ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ 150 ಅಂಗನವಾಡಿ ಕೇಂದ್ರಗಳಿದ್ದು 120 ಅಂಗನವಾಡಿ ಕೇಂದ್ರಗಳು ಈಗಾಗಲೆ ಶಿಥಿಲಗೊಂಡಿದ್ದು  ಈ ಸಾಲಿನ ಅನುದಾನದಲ್ಲಿ ಕೆಲವು ಕಟ್ಟಡಗಳ ದುರಸ್ತಿಯನ್ನು ಕೈಗೆತ್ತಿಕ್ಕೊಳ್ಳಲಾಗಿದೆ ಎಂದು ಸಿ.ಡಿ.ಪಿ.ಓ ಇಲಾಖೆಯ ದೇವರಾಜೇಗೌಡ ತಿಳಿಸಿದರು.

ಇದರಿಂದ ಕೋಪಗೊಂಡ ಶಾಸಕ ಸುರೇಶ್‌ಗೌಡ ಕಟ್ಟಡಗಳು ನಿರ್ಮಾಣಗೊಂಡು ಕೇವಲ 2 ವರ್ಷದ  ಅವಧಿಯಲ್ಲಿ ಕಟ್ಟಡಗಳ ಮೇಲ್ಛಾವಣಿ ಕುಸಿದಿರುವುದು ಮತ್ತು ಕಿಟಕಿ ಬಾಗಿಲುಗಳು ಮುರಿದು ಬಿದ್ದಿರುವುದು ಕಳಪೆ  ಕಾಮಗಾರಿಗೆ ಕಾರಣ ಎಂದು ತಿಳಿದು ಬಂದಿದ್ದು ತಪ್ಪಿತಸ್ಥ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮೇಲಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಯ ಶಾಲಾ ಕಟ್ಟಡಗಳ ನಿರ್ಮಾಣದ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಗಮನಿಸಿದ  ಶಾಸಕರು ಭೂ ಸೇನಾ ನಿಗಮವನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಪ್ರಾರಂಭಿಸುವುದಕ್ಕೂ ಮುನ್ನ ಹಣ  ಬಿಡುಗಡೆ ಮಾಡಿದರೂ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೇ ಕಳಪೆ ಕಾಮಗಾರಿ ಮಾಡಲಾಗುತ್ತಿದ್ದು  ಇವೆಲ್ಲವನ್ನು ಸರಿಪಡಿಸಿಕೊಂಡು ಮುಂದಿನ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು ಎಂದು ಹೇಳಿದರು.

ಶಾಲೆಗೆ ಹೋಗದೆ ಅನಗತ್ಯವಾಗಿ ಗೈರು ಹಾಜರಾಗುತ್ತಿರುವ ಶಿಕ್ಷಕರುಗಳ ಬಗ್ಗೆ ದೂರು ಬರುತ್ತಿದ್ದು ಅಂತಹ  ಶಿಕ್ಷಕರ ವಿರುದ್ಧ ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಕೀತು ಮಾಡಿದರು. ಕದಬಹಳ್ಳಿಯಲ್ಲಿ 10.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕಾದ ವಸತಿ ಶಾಲೆಯ ಕಾಮಗಾರಿ ವಿಳಂಬಕ್ಕೆ ಗರಂ  ಆದ ಶಾಸಕರು ವಾರದ ಗಡುವು ನೀಡಿ ಕಾಮಗಾರಿ ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಸಾಮಾನ್ಯವಾಗಿ ಸ್ಥಿರ ಬೆಲೆ ಹಾಗೂ ಆದಾಯದ ಮೂಲವಾಗಿರುವ ರೇಷ್ಮೆ ಕೃಷಿಯನ್ನು ತಾಲ್ಲೂಕಿನಾದ್ಯಂತ  ರೈತರು ಬೆಳೆಯುವಂತೆ ಇಲಾಖೆ ನೂತನ ಯೋಜನೆ ರೂಪಿಸಬೇಕು. ತಾಲ್ಲೂಕಿನ ಪ್ರಾಥಮಿಕ ಆರೋಗ್ಯ  ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಅನೇಕ ದೂರುಗಳು ಬಂದಿವೆ, ಆರೋಗ್ಯ ಇಲಾಖೆ ತಪಾಸಣೆ ನಡೆಸಿ  ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ 2009-10 ನೇ ಸಾಲಿನ ರಾಗಿ ಬೆಳೆ ಬೆಳೆಯುವಲ್ಲಿ ಪ್ರಥಮ ಸ್ಥಾನಗಳಿಸಿದ ವಡ್ಡರಹಳ್ಳಿ  ಕೆ.ಕೃಷ್ಣಮೂರ್ತಿ 10 ಸಾವಿರ, ತ್ಯಾಪೇನಹಳ್ಳಿ ಶಿವಣ್ಣ ದ್ವಿತೀಯ 5 ಸಾವಿರ ಮತ್ತು ಸುಖಧರೆ ಕೃಷ್ಣೇಗೌಡ ತೃತೀಯ 3 ಸಾವಿರ ರೂಗಳ ಚೆಕ್‌ನ್ನು ಕೃಷಿ ಇಲಾಖೆಯಿಂದ ಮತ್ತು ಸವರ್ಣಿಯರಿಂದ ದೌರ್ಜನ್ಯಕ್ಕೊಳಗಾಗಿದ್ದ  ದಂಡಿಗನಹಳ್ಳಿಯ ಮಣಿಯಮ್ಮ ಕೋಂ ಕೃಷ್ಣ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 25 ಸಾವಿರದ  ಚೆಕ್‌ನ್ನು ಶಾಸಕರು ವಿತರಿಸಿದರು.

ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಕೃಷ್ಣ, ಯೋಜನಾಧಿಕಾರಿ ತಮ್ಮಣ್ಣಗೌಡ, ಜಿ.ಪಂ     ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಎಸ್.ಸುರೇಶ್ ಮತ್ತು ಜಿ.ಪಂ ಸದಸ್ಯ ಚಂದ್ರೇಗೌಡ ಉಪಸ್ಥಿತರಿದ್ದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT