ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮತ ಕುಟೀರ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಒಂದು ಸಂಜೆ ಡಾ. ಜ್ಯೋತ್ಸ್ನಾಕಾಮತ ಅವರು ಹೊನ್ನಾವರದ ತಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಅಂದು ನಾನು ಭಾಗವಹಿಸಿದ್ದ ಸಾಹಿತ್ಯ ಕಾರ್ಯಕ್ರಮದಲ್ಲಿ ನಮ್ಮ ಮೊದಲ ಭೇಟಿಯಾಗಿತ್ತು.

ಜ್ಯೋತ್ಸ್ನಾರವರ ಬಗ್ಗೆ ಈ ಮೊದಲು ನಾನು ಕೇಳಿದ್ದೆ. ಮುಖತಃ ಮಾತಾಡಿರಲಿಲ್ಲ. ಅವರ ಆದರದ ಆತಿಥ್ಯದ ಕರೆಯಲ್ಲಿ ಹೃದಯವನ್ನು ತಟ್ಟುವ ಆತ್ಮೀಯತೆ ಇತ್ತು. ಅಭಿಮಾನವಿತ್ತು. ಸನಿಹದಲ್ಲಿದ್ದು ಅವರ ಪರಿಚಯವಾಗದೆ ಇದ್ದದ್ದು ಖೇದವೆನಿಸಿತು.

ಅವರು ತಮ್ಮ ಮನೆಯನ್ನು ಕುಟೀರ ಎಂದು ಕರೆದಾಗ ಆ ಶಬ್ದದಲ್ಲಿ ಕೃಷ್ಣಾನಂದರ ಆಶೋತ್ತರಗಳು ಧ್ವನಿಸಿ, ಅದೊಂದು ರೂಪಕವಾಗಿ ನನ್ನನ್ನು ಆ ಕ್ಷಣದಿಂದ ಕಾಡಲು ತೊಡಗಿತು. ಅಲೆಮಾರಿಯಂತೆ ಎಲ್ಲೆಲ್ಲೋ ಅಲೆದಾಡಿದ ಕೃಷ್ಣಾನಂದರಿಗೆ ಜೀವನದ ಸಂಧ್ಯಾಕಾಲವನ್ನು ಸಮುದ್ರ ತೀರದ ತನ್ನ ಪ್ರೀತಿಯ ತವರಿನಲ್ಲಿ ಅರ್ಥಪೂರ್ಣವಾಗಿ ಕಳೆಯಬೇಕೆಂಬ ಅಪೇಕ್ಷೆ ಇತ್ತು, ಎಂದು ಜ್ಯೋತ್ಸ್ನಾ ಹೇಳಿದರು.
 
ಅವರ ಮಾತಿನಂತ್ಯದಲ್ಲಿ ತೊಟ್ಟಿಕ್ಕಿದ್ದ ವಿಷಾದವನ್ನು ನಾನು ಆಲಿಸಿದೆ. ಕುಟೀರ ನಿಶ್ಯಬ್ಧವಾಗಿತ್ತು. ಮೌನವನ್ನು ಇಷ್ಟಪಡುತ್ತಿದ್ದ ಅವರ ನೆನಪು ಮುಸ್ಸಂಜೆಯ ನೀರವತೆಯಲ್ಲಿ ಜಿನುಗುತ್ತಿತ್ತು. ಮನೆಯಾಚೆ, ಕೇರಿಯ ರಸ್ತೆ ದಾಟಿ ಗ್ರಂಥಾಲಯಕ್ಕೆ ಕರೆದೊಯ್ದರು. ಅದೊಂದು ಸಭಾಭವನವೂ ಆಗಿತ್ತು.

ಕೃಷ್ಣಾನಂದರು ಓದಿದ ಅಮೂಲ್ಯ ಗ್ರಂಥಗಳನ್ನು ಸಾರ್ವಜನಿಕರ ಓದಿಗಾಗಿ ಬಾಗಿಲು ತೆರೆದಿಟ್ಟಿದ್ದರು. ಪುಟ ಮಡಚಿದ ಪುಸ್ತಕವೊಂದನ್ನು ಮೇಜಿನ ಮೇಲೆ ಬೋರಲಾಗಿಟ್ಟಿದ್ದರು. ಅರ್ಧ ಓದಿಸಿಕೊಂಡ ಆ ಪುಸ್ತಕ, ಇಟ್ಟೆಲ್ಲೊ ವಾಯುವಿಹಾರಕ್ಕೆ ಹೋಗಿರುವ ಕೃಷ್ಣಾನಂದರು ವಾಪಸ್ಸಾಗುವುದನ್ನು ಕಾಯುತ್ತಿರುವಂತೆ ಭಾಸವಾಯಿತು!

ಕೃಷ್ಣಾನಂದರನ್ನು ನಾನು ಓದಿಕೊಂಡಿದ್ದೆ ಅವರನ್ನು ಭೌತಿಕವಾಗಿ ನೋಡುವ ಮಾತನಾಡುವ ಅವಕಾಶದಿಂದ ನಾನು ವಂಚಿತನಾಗಿದ್ದೆ. ಅವರ ಸಾಹಿತ್ಯವನ್ನು ಓದುತ್ತಿರುವ ಕ್ಷಣದಲ್ಲಿ ಅವರೊಂದಿಗೆ ಸಹಯಾತ್ತಿ ವೀಕ್ಷಕನಾಗಿ ತಿರುಗಾಡಿದ ಅನುಭವ ಉಂಟಾದ್ದರಿಂದ ಜರುಗದೆ ಹೋದ ಮುಖಾಮುಖಿ ದೊಡ್ಡ ನಷ್ಟವೆಂದು ನನಗನ್ನಿಸಲಿಲ್ಲ. ಅವರ ವ್ಯಕ್ತಿತ್ವದ ಚಿತ್ರಾವಳಿ ಅವರ ಸಾಹಿತ್ಯ, ಓದಿನ ಮೂಲಕ ನನ್ನೊಳಗೆ ಮೂಡಿತ್ತು. ಕಾಣುವುದನ್ನೆ ಕಣ್ಣ ಕಾಯಕ ಮಾಡಿಕೊಂಡ ಮೌನ ಪ್ರವಾಸಿಗನಂತೆ, ನಿರ್ಲಿಪ್ತ ಕ್ಯಾಮೆರಾ ಕೆಲಸದಂತೆ.

ಕೃಷ್ಣಾನಂದರದು ಮಿತ ಭಾಷೆ, ವರ್ತಕರ ಮನೆತನದಲ್ಲಿ ಜನಿಸಿಯೂ ಹಣದ ವ್ಯಾಮೋಹಕ್ಕೆ ಸಿಕ್ಕವರಲ್ಲ; ಲೌಕಿಕ ಮಾಯೆಗೆ ಅಂಟಿಕೊಳ್ಳದ ಸಂತನಂತಿದ್ದವರು. ಆಧುನಿಕ ಕಾಲದ ಆಡಂಬರದ, ಜಾಹೀರಾತು ಪ್ರದರ್ಶನಕ್ಕೆ ಮೆಲುದನಿಯ ಪ್ರತಿಭಟನೆಯಂತಿರುವ ಸಂಕೋಚ ಪ್ರವೃತ್ತಿಯನ್ನು ಎಲ್ಲ ಆಮಿಷವನ್ನು ತೊರೆದು ಕಾಪಾಡಿಕೊಂಡವರು, ವಿನೋದಶೀಲ ಗುಣದಿಂದಾಗಿ ಎಲ್ಲರೊಂದಿಗೆ ಬೆರತವರು.

ಜೀವನದ ಸಣ್ಣ ಸಂಗತಿಯಿಂದಲೂ ಆನಂದಪಡಬಲ್ಲವರು. ನಿರಂತರ ಆದಾಯ ತರುವ ನೌಕರಿ ತನಗೆ ದೊರೆಯದಿದ್ದಕ್ಕೆ ಸಿನಿಕ್ ಆದ ಹೃದಯವನ್ನು ಕಹಿಯಾಗಿರಿಸಿಕೊಂಡವರಲ್ಲ. ತಾನಿರುವ ವಸ್ತು ತನ್ನೊಳಗಿರುವ ವಿಶ್ವದ ಕುರಿತು ಸದಾ ಬೆಚ್ಚಗಿನ ಕುತೂಹಲ, ವಿಸ್ಮಯ, ಪ್ರಯೋಗಶೀಲತೆಯನ್ನು ಸಹಜ ಇರುವಿಕೆಯಾಗಿ ಪಡೆದರು.
 
ಈ ಎಲ್ಲ ಗುಣ ವಿಶೇಷಗಳು ಮಗುವಿನ ಮುಗ್ಧ ಅಂತಃಕರಣವಾಗಿ ಕೃಷ್ಣಾನಂದರಲ್ಲಿ ಅತ್ಯಂತ ಸ್ವಾಭಾವಿಕವಾಗಿ ಇದ್ದವು. ಅವರ ವ್ಯಕ್ತಿತ್ವದ ಅಚ್ಚೊತ್ತುಗಳು, ಅತ್ಯಂತ ಅಚ್ಚರಿಯ ರೀತಿಯಲ್ಲಿ ತಮ್ಮ ಜೀವನದ ಮೈಲುಗಲ್ಲುಗಳ ಕಥೆಯನ್ನು ಜ್ಯೋತ್ಸ್ನಾರವರು ಸಾಂದರ್ಭಿಕವಾಗಿ, ಚಲ್ಲಾಪಿಲ್ಲಿಯಾಗಿ ನಿರೂಪಿಸುತ್ತಿರುವಾಗ ದೃಢೀಕರಿಸಲ್ಪಟ್ಟವು.

ಕೃಷ್ಣಾನಂದರು ಬರೆದದ್ದಕ್ಕೂ ಅವರು ಬದುಕಿದ ರೀತಿಗೂ ವ್ಯತ್ಯಾಸವಿಲ್ಲವೆಂದು ನನಗೆ ಖಾತ್ರಿಯಾಯಿತು. ಏಕೆಂದರೆ. ಧರ್ಮಪತ್ನಿಯಾಗಿ ಕೃಷ್ಣಾನಂದರನ್ನು ಅರಿತುಕೊಂಡ ಜ್ಯೋತ್ಸ್ನಾರವರ ನೆನಪಿನ ವಿವರಗಳೂ ನಾನು ಓದಿನಿಂದ ಪಡೆದ ಅವರ ಗುಣ-ವಿಶೇಷಗಳೂ ತಾಳೆಯಾಗಿದ್ದವು.

ಪರಿಸರ ಮತ್ತು ಪ್ರವಾಸ ಅವರ ಆಸಕ್ತ ಕ್ಷೇತ್ರಗಳಾಗಿವೆ. ಫೋಟೋಗ್ರಪಿ ಅವರಿಗೆ ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿಯಲು ಉಪಯೋಗಿಸಬಹುದಾದ ಹವ್ಯಾಸಿ ಕಲಾಸಾಧನ ಮಾತ್ರವಾಗಿರಲಿಲ್ಲ. ಚಲನಶೀಲ ಜಗತ್ತನ್ನು ಸ್ಥಗಿತಗೊಳಿಸಿ ವಸ್ತುಸಂಗ್ರಹಾಲಯದಲ್ಲಿ ನಿರ್ಜೀವ ಪ್ರದರ್ಶನಕ್ಕೆ ಯೋಗ್ಯವಾದ, ಐತಿಹಾಸಿಕ ದಾಖಲಾತಿಗೆ ಸೀಮಿತವಾದ ಹವ್ಯಾಸವನ್ನಾಗಿಯೂ ಫೋಟೋಗ್ರಫಿಯನ್ನು ಅವರು ಸ್ವೀಕರಿಸಲಿಲ್ಲ.
 
ಸಾಮಾನ್ಯರ ಕಣ್ಣಿಗೆ ಗೋಚರಿಸದ, ಮರೆಯಾಗಿ ಹೋಗುತ್ತಿರುವ ಜೀವ ಪ್ರಪಂಚದ ಅಪೂರ್ವ ಅಂತರ್ಜಾಲದ ಅಂತಃಪಠ್ಯದ ಸಾಂಸ್ಕೃತಿಕ ಕಥನವನ್ನು ಕೃಷ್ಣಾನಂದರು ಕ್ಯಾಮೆರಾದ ಮೂಲಕ ಪುನರ‌್ರೂಪಿಸಿದ್ದಾರೆ. ನಿರ್ಲಿಪ್ತತೆಯಿಂದ ಪ್ರಪಂಚದ ವಾಸ್ತವವನ್ನು ವೀಕ್ಷಿಸುವ ಶಿಸ್ತಿನ ದೀಕ್ಷೆಯನ್ನು ಅವರು ಕ್ಯಾಮೆರಾದಿಂದ ಪಡೆದಿರಬಹುದು.

ಬಿಂಬದಲ್ಲಿ ಜಗತ್ತನ್ನು ಪ್ರತಿರೂಪಿಸುವ ಕ್ಯಾಮೆರಾ ತನ್ನ ಇರುವಿಕೆಯನ್ನು ಬಹಿರಂಗಗೊಳಿಸದೆ ಕಾರ್ಯಪ್ರವೃತ್ತರಾಗುವಂತೆ ಕೃಷ್ಣಾನಂದರು ಕೆಲಸದಲ್ಲಿ ತೊಡಗಿಕೊಂಡೂ ಅಂಟಿಕೊಂಡವರಲ್ಲ. ಅವರ ಶಾಬ್ದಿಕ ಮೌನ ಮತ್ತು ನಿಸ್ಸಂಗ ವರ್ತನೆ ಅವರ ಸಾಹಿತ್ಯದ ಗುಣಗಳಾಗಿವೆ. ಜೀವ ಸಂಕುಲದ ವಿಸ್ಮಯಗಳು, ವಿಸ್ಮೃತಿ ಸರಿಯುತ್ತಿರುವ ಸ್ಥಳೀಯ ವೈವಿಧ್ಯಪೂರ್ಣ ಜೀವನಶೈಲಿಗಳು, ಅವರ ಫೋಟೋ ಆಲ್ಬಂನಲ್ಲಿ ಜೀವಂತವಾಗಿ ಸ್ಪಂದಿಸುತ್ತಿವೆ. ಅವರಿಗೆ ಜೀವಜಗತ್ತೇ ಒಂದು ಫ್ಯಾಮಿಲಿ ಆಲ್ಬಂನಂತಾಗಿದೆ.

ಪರಿಸರದಲ್ಲಿ ಜರುಗುತ್ತಿರುವ ಪ್ರತಿಕ್ಷಣದ ವಿಲಕ್ಷಣ ವಿದ್ಯಮಾನಗಳನ್ನು ಅವರು ವಸ್ತುನಿಷ್ಠ ವಿಜ್ಞಾನಿಯಾಗಿಯೊ, ನಿರ್ಭಾವುಕ ತಾಂತ್ರಿಕ ಪರಿಣಿತನಂತೆಯೊ, ನೋಡದೆ ಜೀವ ವಿಲಾಸದ ಸಂಭ್ರಮವನ್ನು ಗುರುತಿಸುವ ಕವಿಯಾಗಿ ವಿವರಿಸುತ್ತಾರೆ. ಆದ್ದರಿಂದ ಅವರು ಅರಿಯುವ ವಿಧಾನದಲ್ಲಿ ಸಿದ್ಧಾಂತದ ಭಾರವಿಲ್ಲ.

ತಾಂತ್ರಿಕ ಪದಪ್ರಯೋಗಗಳ, ಪಾರಿಭಾಷಿಕ ವ್ಯಾಕರಣ ಸೂತ್ರಗಳ, ಅಚ್ಚುಕಟ್ಟಾದ ಮಾಹಿತಿ ಶಿಲ್ಪಗಳಿಲ್ಲ. ಚಿಗುರಿನ ತಾಜಾತನವನ್ನು ಕುತೂಹಲ ತನ್ಮಯತೆಯಲ್ಲಿ ನೋಡುತ್ತಿರುವ, ವಸ್ತು ಮತ್ತು ಕ್ರಿಯೆಯೊಂದಿಗೆ ಒಂದಾಗಿಬಿಡುವ, ಮಗುವಿನ ಸರಳ, ನೇರ, ಸತ್ಯಸ್ಪಂದನವಾಗಿಬಿಡುತ್ತದೆ.

ಮನುಷ್ಯ ಸಹಜವಾದ ಕಾಮ, ಪ್ರೇಮ, ಸ್ಪರ್ಧೆ, ಯುದ್ಧ, ಶೃಂಗಾರ, ಸಂತಾನಪಾಲನೆ, ಕೌಟುಂಬಿಕ ಆಡಳಿತ, ಆಹಾರ ಪದ್ಧತಿ ಎಲ್ಲವೂ ಕೃಷ್ಣಾನಂದರು ತೋರಿಸುವ ಪ್ರಾಣಿ, ಪಕ್ಷಿ, ಕೀಟಗಳ ಪ್ರಪಂಚದಲ್ಲಿ ಅತ್ಯಂತ `ಮಾನುಷ~ ರೂಪದಲ್ಲಿ ಪ್ರಕಟಗೊಂಡಿವೆ. ಪ್ರಕೃತಿಯಲ್ಲಿ ಮನುಷ್ಯರಂತೆಯೇ ಇತರೇ ಜೀವಿಗಳಿಗೂ ನಾಗರಿಕ ಜೀವನ ವಿಧಾನವಿದೆ ಎಂದು ಅವರು ಪರಿಭಾವಿಸುವ ಕ್ರಮದಲ್ಲೇ ಮಾನವೀಯತೆಯ ದರ್ಶನವಿದೆ.

ಪ್ರವಾಸವನ್ನು ಅವರು ಮಾಹಿತಿ ಸಂಗ್ರಹಣೆಗೊ, ಮನರಂಜನೆಗೊ, ಪುಣ್ಯ ಸಂಪಾದನೆಗೊ ಇರುವ ದಾರಿಯನ್ನಾಗಿ ಕೈಗೊಂಡವರಲ್ಲ. ಆಧುನಿಕ ನಾಗರಿಕತೆಯಿಂದ ಕಲುಷಿತಗೊಳ್ಳದಂತೆ ಹೋರಾಟ ನಡೆಸಿರುವ, ಪ್ರಕೃತಿಯ ಲಯಕ್ಕನುಸಾರವಾಗಿ ಹೆಜ್ಜೆ ಹಾಕುವ ಆದಿವಾಸಿಗಳ ಜೀವನಾನುಭವಕ್ಕೆ ಹಾತೊರೆದು ಅವರೊಂದಿಗೆ ಉಳಿದರು.

ವ್ಯಕ್ತಿ ಕೇಂದ್ರಿತ ಇಷ್ಟಾನಿಷ್ಟಗಳನ್ನು ಮುನ್ನಡೆಗೆ ತರದೆ, ಇಡೀ ಸಮುದಾಯದ ನೈಜ ಜೀವನವನ್ನು ನಿರೂಪಿಸುವ ಕೃಷ್ಣಾನಂದರು ಒಬ್ಬ ಪ್ರಜ್ಞಾಪೂರ್ವಕ ಸಾರಥಿಯಂತೆ ಕೃತಕವೆನಿಸುವುದಿಲ್ಲ. ಒಂದು ವಿಶಿಷ್ಟ ರೀತಿಯಲ್ಲಿ ಹಲವು ವರ್ಷಗಳಿಂದ ಅಕ್ಷರಗಳಾಚೆ ಚರಿತ್ರೆಯ ಸುಪ್ತವಾಹಿನಿಯಾಗಿ ಹರಿಯುತ್ತಿರುವ ಆದಿವಾಸಿಗಳ ಸ್ವಯಂ ಪೂರ್ಣ ಜೀವನ ವಿಧಾನ ಕೃಷ್ಣಾನಂದರ ಕ್ಯಾಮೆರಾ ಮತ್ತು ಪೆನ್ನಿನ ಮೂಲಕ ನವ ಗುಲಾಮಗಿರಿ ಪದ್ಧತಿಗೆ ಪರ್ಯಾಯವಾಗಿ ನಿಂತಿವೆ. ಆದ್ದರಿಂದಲೇ ಅವರು ಮಧ್ಯಪ್ರದೇಶದ ಗುಡ್ಡಗಾಡು ಜನರೊಂದಿಗೆ ಒಂದಾಗಿ ಕೆಲ ಕಾಲ ಅಲ್ಲೇ ಉಳಿದರು. ಆದಿವಾಸಿಗಳ ಜೀವನವನ್ನು ತಮ್ಮ ಪ್ರವಾಸಿ ಬರಹಕ್ಕೆ ಪ್ರಯೋಗ ವಸ್ತುವನ್ನಾಗಿ ಅವರು ಆಯ್ದುಕೊಳ್ಳಲಿಲ್ಲ.

ಜೀವ ಜಗತ್ತನ್ನು ಅಮಾನವೀಯಗೊಳಿಸುತ್ತ ಅಸಂಗತವೂ ನಿರ್ದಯವೂ ಆದ ದುರಹಂಕಾರದ ಗತ್ತಿನಲ್ಲಿ ಸಾಗುತ್ತಿರುವ ಆಧುನಿಕ ಯಂತ್ರ ಸಂಸ್ಕೃತಿಯ ಅತಿಯಾದ ವ್ಯಾಮೋಹದ ಬಗೆ ಕೃಷ್ಣಾನಂದರ ಪ್ರತಿರೋಧವಿತ್ತು. ತೀವ್ರ ತೆರನಾದ ಅವರ ಪ್ರತಿರೋಧಕ್ಕೆ ವೇದಿಕೆಯ ಮೇಲಿನ ಪಾಂಡಿತ್ಯ ಪ್ರದರ್ಶನದ ಚಪಲವಿಲ್ಲ.

ಜಾಹೀರಾತಿನ ಅಗ್ಗದ ಪ್ರಚಾರದ ಗೀಳೂ ಇರಲಿಲ್ಲ. ಬೀದಿ ಜಗಳ ಅಥವಾ ಚಳವಳಿಯ ಸಾರ್ವಜನಿಕ ರೂಪವೂ ಇರಲಿಲ್ಲ. ಆಧುನಿಕ ಸ್ವಯಂ ಚಾಲಿತ ಯಂತ್ರ ಮಾಯೆಯಿಂದ ಅಪಾಯಕಾರಕ ವೇಗದಲ್ಲಿ ಬದಲಾಗುತ್ತಿರುವ, ಆ ಮೂಲಕ ನಿರ್ಮಾಣಗೊಳ್ಳುತ್ತಿರುವ ಕೈಮೀರಿದ ಪ್ರಕ್ಷುಬ್ಧ ಬದುಕಿನ ಬಗ್ಗೆ ಇರುವ ಪ್ರಾಮಾಣಿಕ ಕಾಳಜಿ ಅವರ ಬರವಣಿಗೆಯ ಉತ್ಕಟತೆಯಲ್ಲಿ ಸದ್ದಿಲ್ಲದ ಸರಳ ದಿನಚರಿಯಲ್ಲಿ ವ್ಯಕ್ತವಾಗಿರುವುದನ್ನು ಓದುಗ ಗಮನಿಸದೆ ಇರಲಾರ.

ಕೃಷ್ಣಾನಂದರು ಅಘೋಷಿತ ಗಾಂಧಿವಾದಿಯಾಗಿದ್ದರು. `ಹಿಂದ್ ಸ್ವರಾಜ್~ ಅವರನ್ನು ಗಾಢವಾಗಿ ಪ್ರಭಾವಿಸಿತ್ತು. ಆತ್ಮ ಸಂಯಮ, ಸ್ವಯಂ ಆಡಳಿತ, ಮಿತವಾದ ಸರಳ ಜೀವನ ಶೈಲಿ, ವೇಗವಿಲ್ಲದ ಸಮಾಧಾನ ಚಿತ್ತ, ಕಷ್ಟಸಹಿಷ್ಣುತೆ ಅವರ ಬದುಕು-ಬರಹಗಳನ್ನು ಪರೋಕ್ಷವಾಗಿ ರೂಪಿಸಿವೆ. ಅವರ ಮೊದಲ ಪುಸ್ತಕ `ನಾನೂ ಅಮೇರಿಕಕ್ಕೆ ಹೋಗಿದ್ದೆ~ ಇಂದ `ಮರುಪಯಣ~ದವರೆಗಿನ ಸಾಹಿತ್ಯದ ಒಲವು ನಿಲುವುಗಳು ಸ್ಥೂಲವಾಗಿ ಗಾಂಧಿ ಆಶಯವನ್ನು ಧ್ವನಿಸುತ್ತವೆ.

ಕರಕುಶಲ ಕೈಗಾರಿಕೆಗಳು, ಸ್ವಯಂ ಆಡಳಿತ ವ್ಯವಸ್ಥೆ, ಸರ್ವೋದಯ ಗ್ರಾಮ ಕಲ್ಪನೆ, ಪರಿಸರ ಪ್ರೀತಿ, ಭಿನ್ನ ವರ್ಣ, ರೂಪಗಳಲ್ಲಿ ಪುನರಾವರ್ತನೆಯಾಗಿರುವುದು, ನನ್ನ ಮಾತಿಗೆ ಸಾಕ್ಷಿ. ಗಾಂಧಿಯ ಮೂಲ ಶಿಕ್ಷಣವನ್ನು ವಿದ್ಯಾಭ್ಯಾಸದ ಪಠ್ಯ ಮತ್ತು ಕಾರ್ಯಾನುಭವವಾಗಿ ಪಡೆದ ಅವರಿಗೆ ಆದಾಗಲೇ ಒಂದು ಸ್ಥಿರವಾಗಿ ಜೀವನದೃಷ್ಟಿ ಸಿದ್ಧವಾಗಿತ್ತು.

ಆದ್ದರಿಂದ ಅವರಿಗೆ ಆಧುನಿಕ ಶಿಕ್ಷಣದ ಭೊಗೋತ್ಪಾದನೆಯಾದ, ಮನಸ್ಸನ್ನೂ ಮಾರುಕಟ್ಟೆಯನ್ನಾಗಿಸಿದ ನೌಕರಿಯಲ್ಲಿ ಸುರಕ್ಷಿತವಾಗಿ ಸೆಟ್ಲ್ ಆಗುವುದರ ಬಗ್ಗೆ ಅಷ್ಟೇನೂ ಮೋಹವಿರಲಿಲ್ಲ. ಅಚ್ಚರಿಯೆಂದರೆ, ಆರ್ಥಿಕ ಅಸ್ಥಿರತೆ ಅವರಿಗೆ ಅಸುರಕ್ಷತೆ ಎಂದನಿಸಲಿಲ್ಲ. ಬದಲಿಗೆ ಪರಿಸರ ನಾಶ, ಸಮುದಾಯ-ಕೇಂದ್ರಿತ ದೇಸೀಜೀವನ ವಿಧಾನ, ಅವನತಿಯ ಹಾದಿ ಹಿಡಿದಾಗ ಅಸಾಧ್ಯ ಅಸುರಕ್ಷಿತತೆಯಿಂದ ತಲ್ಲಣಿಸಿ ಹೋದರು.

ಆಯುಷ್ಯದ ಬದುಕಿನ ದೀರ್ಘಕಾಲವನ್ನು ತವರಿನಿಂದ ಹೊರಗೆ ಕಳೆದ ಯಶವಂತ ಚಿತ್ತಾಲರಿಗೆ ಈಗ ಹನೇಹಳ್ಳಿ ಹೇಗೊ ಹಾಗೆಯೇ ಕೃಷ್ಣಾನಂದರಿಗೆ ಹೊನ್ನಾವರ ವಿಷಾದಯೋಗವಾಗಿತ್ತು. ದಿನಕರ ದೇಸಾಯಿ, ಸುಬ್ಬಣ್ಣ, ತೇಜಸ್ವಿ ಊರಲ್ಲಿ ನಿರಂತರ ತೊಡಗಿಕೊಂಡದ್ದರಿಂದ ವಿಷಾದ ಬಾಧಿಸಲಿಲ್ಲ.
 
ಆದರೆ, ಕೃಷ್ಣಾನಂದರದು ಅಲೆಮಾರಿ ಜೀವನ ! ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಸ್ಥಾನ ಭ್ರಷ್ಟರಾದ ಬಗೆ ಆಧುನಿಕ ಕಾಲದ ಯುವಕರಿಗೆ ಕನ್ನಡಿಯಾದೀತು! ಅವರ ಸಾಹಿತ್ಯದ ಮುಖ್ಯ ಧೋರಣೆ ನಮ್ಮ ಕಾಲದ ತಲ್ಲಣವನ್ನು ದಾಖಲಿಸಿದ ಪಠ್ಯವಾಗಿದೆ.

ಜಿಲ್ಲೆಯ ಅನನ್ಯತೆ ಮತ್ತು ಅಭಿವೃದ್ಧಿಯ ಕುರಿತು ನಡೆಸುವ ವಾಗ್ವಾದಕ್ಕೆ ಅವರ ಸಾಹಿತ್ಯವೇ ಆರಂಭವಾಗಬಹುದು. ಆದರೆ ಅಲೆಮಾರಿಯಾಗಿದ್ದ ಕೃಷ್ಣಾನಂದರು ಅಂತರ್ಜಾಲ ವಿಶ್ವವನ್ನು ಹೊಕ್ಕು ನಮ್ಮ ವಾಗ್ವಾದಗಳಿಗೆ ಅಮೂರ್ತ ನೆಲೆಯನ್ನು ಮಾತ್ರ ಒದಗಿಸಿದರೇನೊ! ಎಂಬ ಅನುಮಾನ ಕಾಡುತ್ತಿದೆ.

ಹೊನ್ನಾವರದಲ್ಲಿ ಇಂದು ದೇಸಿ ಸಂವೇದನೆಯ ಬರಹಗಾರ ಡಾ.ಕೃಷ್ಣಾನಂದ ಕಾಮತರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಾಮತರ 77ನೇ ಜನ್ಮದಿನದ ಆಚರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT