ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನಬಿಲ್ಲೇರಿದ ಚಿಟ್ಟೆ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಕ್ಕಳೇ ನೀವೆಲ್ಲ ಪಾತರಗಿತ್ತಿಯನ್ನು ನೋಡೇ ಇರುತ್ತೀರ. ಹೇಗೆ ಬಣ್ಣ ಬಣ್ಣವಾಗಿ ಸುಂದರವಾಗಿರುತ್ತದಲ್ವ? ಇದೇ ಪಾತರಗಿತ್ತಿಗೆ ಒಂದು ಕಾಲದಲ್ಲಿ ಬಣ್ಣವೇ ಇರಲಿಲ್ಲ ಅಂದರೆ ನಂಬುತ್ತೀರ? ಅದು ಬರೀ ಬಿಳಿಯ ಬಣ್ಣದ್ದಾಗಿತ್ತು. ಎಲ್ಲ ಪಾತರಗಿತ್ತಿಗಳೂ ಬಿಳಿಯ ಬಣ್ಣದ್ದೇ ಇರುತ್ತಿದ್ದವು.

ಒಂದು ದಿನ ಒಂದು ಪಾತರಗಿತ್ತಿಗೆ ತನಗೂ ಹೂಗಳಂತೆ ಬಣ್ಣಗಳಿದ್ದಿದ್ದರೆ ಅನ್ನಿಸಿತು. ಎಷ್ಟು ಚಂದ ಕಾಣುತ್ತವೆ ಈ ಹೂಗಳು. ಇಬ್ಬನಿಯ ಹನಿಗಳನ್ನು ಮೈಮೇಲೆ ಹೊತ್ತು ಸೂರ್ಯ ಕಿರಣಗಳಿಂದ ಪಳ್ಳನೆ ಹೊಳೆಯುತ್ತವೆ. ಇಲ್ಲ ನನಗೂ ಇಂಥದೇ ಬಣ್ಣ ಬೇಕು. ಏನು ಮಾಡಲಿ? ಎಂದು ಯೋಚಿಸಿತು.

ಸರಿ ಹೂಗಳನ್ನೇ ಹೋಗಿ ಕೇಳೋಣ ಎಂದುಕೊಂಡು ಒಂದು ಹಳದಿ ಬಣ್ಣದ ಹೂವಿನ ಬಳಿ ಹೋಗಿ, ಹೂವಕ್ಕ ನೀನೆಷ್ಟು ಚಂದ ಇದ್ದೀಯ. ನಿನ್ನ ಬಣ್ಣವನ್ನು ನನಗೂ ಒಂಚೂರು ಕೊಡುತ್ತೀಯ? ಎಂದು ಕೇಳಿತು. ಆಗ ಹಳದೀ ಹೂ ಬಿಂಕದಿಂದ ಹೇಳಿತು. ಇಲ್ಲಮ್ಮ. ಇದು ನನಗೆ ದೇವರು ಕೊಟ್ಟ ಬಣ್ಣ ಹಾಗೆಲ್ಲ ಕೊಡಕ್ ಬರಲ್ಲ. ಎಂದು ಬಿಟ್ಟಿತು.

ಪೆಚ್ಚು ಮೋರೆ ಹಾಕಿಕೊಂಡ ಚಿಟ್ಟೆ ಇನ್ನೊಂದು ನೀಲಿ ಬಣ್ಣದ ಹೂವಿನ ಬಳಿ ಕೇಳಿತು. ಅದು ಹೇಳಿತು. ನೋಡು ಹಾಗೆಲ್ಲ ಬಣ್ಣ ಕೊಡಲು ಬರುವುದಿಲ್ಲ. ನಿನಗೆ ಬಣ್ಣ ಬೇಕು ಎಂದರೆ ಕಾಮನಬಿಲ್ಲಿನ ಬಳಿ ಹೋಗಿ ಕೇಳು ಎಂದಿತು. ಕಾಮನಬಿಲ್ಲಿನ ಬಳಿಯ? ಅದು ಯಾವಾಗ ಮೂಡುತ್ತದೆ? ಎಂದು ಆಕಾಶದ ಕಡೆ ಪಿಳಿ ಪಿಳಿ ನೋಡಿತು. ಅದು ನಿನಗೆ ಬೇಕಾದಾಗ ಬರಲ್ಲ. ಅದಕ್ಕಾಗಿ ನೀನು ಕಾಯಬೇಕು. ಬಿಸಿಲು ಮಳೆ ಎರಡೂ ಒಟ್ಟಿಗೇ ಆದಾಗ ಬರುತ್ತದೆ. ಕಾಯುತ್ತಿರು ಎಂದಿತು.

ಅಂದಿನಿಂದ ಚಿಟ್ಟೆಗೆ ಕಾಮನಬಿಲ್ಲಿನದೇ ಧ್ಯಾನ. ದೇವರೇ ಮಳೆ ಸುರಿಸು. ಜೊತೆಗೆ ಬಿಸಿಲೂ ಬರಲಿ. ನನಗೆ ಕಾಮನಬಿಲ್ಲಿನ ಬಳಿ ಬಣ್ಣ ಕೇಳಬೇಕು ಎನ್ನುತ್ತ ಹಲವು ದಿನಗಳನ್ನು ಕಳೆಯಿತು. ಹೂವಿಂದ ಹೂವಿಗೆ ಹಾರಿದಾಗೆಲ್ಲ ತನಗೂ ಬಣ್ಣದ ಮೈ ಬೇಕು ಎಂಬ ಬಯಕೆ ತೀವ್ರವಾಗುತ್ತಿತ್ತು. ಹೀಗಿರಲು ಒಂದು ದಿನ ಶುಭ್ರವಾದ ಬಿಸಿಲಿತ್ತು. ಇದ್ದಕ್ಕಿದ್ದಂತೆ ಮೋಡಗಳು ಬಂದು ಗುಡುಗು ಸಿಡಿಲಿನ ಜೊತೆ ಮಳೆ ಸುರಿಯತೊಡಗಿತು.

ಮೋಡದ ಮರೆಯಿಂದ  ಬಿಸಿಲೂ ಹೊರ ಇಣುಕುತ್ತಿತ್ತು. ಪಾತರಗಿತ್ತಿಗೆ ಎಲ್ಲಿಲ್ಲದ ಸಂಭ್ರಮ. ತಲೆ ಎತ್ತಿ ಎತ್ತಿ ನೋಡಿತು. ಆಕಾಶದಲ್ಲಿ ಏನೂ ಕಾಣಲಿಲ್ಲ. ಮಳೆಯಿಂದ ತಪ್ಪಿಸಿಕೊಳ್ಳಲು ಯಾವುದೋ ಎಲೆ ಮರೆಯಲ್ಲಿ ಕುಳಿತುಕೊಂಡಿತ್ತು. ಒಂದಿಷ್ಟು ಹೊತ್ತು ಮಳೆ ಸುರಿದು ನಿಂತಿತು. ಬಿಸಿಲು ಹಾಗೇ ಇತ್ತು. ತಲೆ ಎತ್ತಿ ನೋಡಿದ ಪಾತರಗಿತ್ತಿಗೆ ಕಾಮನಬಿಲ್ಲು ಮೂಡಿರುವುದು ಕಾಣಿಸಿತು. ಬಣ್ಣದ ಕಾಮನಬಿಲ್ಲು! ಪಾತರಗಿತ್ತಿ ತಡ ಮಾಡಲೇ ಇಲ್ಲ. ಒಂದೇ ಗುಕ್ಕಿಗೆ ಕಾಮನಬಿಲ್ಲಿನತ್ತ ಹಾರತೊಡಗಿತು.

ಪಾಪ ಪಾತರಗಿತ್ತಿ. ಅಷ್ಟು ಪುಟ್ಟ ರೆಕ್ಕೆ ಇಟ್ಟುಕೊಂಡು ಎಷ್ಟು ದೂರ ಹಾರೀತು? ಹೇಗೋ ಕಷ್ಟಪಟ್ಟು ಗುಡ್ಡದ ಮರೆಯವರೆಗೆ ಹಾರಿತು. ಹಾರಿದಷ್ಟೂ ಕಾಮನಬಿಲ್ಲು ಇನ್ನಷ್ಟು ದೂರವೇ ಕಾಣುತ್ತಿತ್ತು. ಕಾಮನಬಿಲ್ಲು ಎಷ್ಟೊಂದು ಮೇಲಿದೆ. ನನಗೆ ಅಲ್ಲಿ ತನಕ ತಲುಪಲು ಸಾಧ್ಯವಾ? ಇಲ್ಲ ತನ್ನಿಂದ ಇನ್ನು ಹಾರಲು ಸಾಧ್ಯವಿಲ್ಲ ಅನ್ನಿಸಿ ಅಲ್ಲೇ ಒಂದು ಗಿಡದ ಮೇಲೆ ಕುಳಿತುಕೊಂಡಿತು. ಅಷ್ಟರಲ್ಲಿ ಕಾಮನಬಿಲ್ಲು ಮರೆಯಾಗಿಬಿಟ್ಟಿತ್ತು. ಚಿಟ್ಟೆಗೆ ಅಳುವೇ ಬಂದು ಬಿಟ್ಟಿತು.

ಅಯ್ಯೋ ಬಣ್ಣದ ಆಸೆಗೆ ಎಷ್ಟು ದೂರ ಬಂದು ಬಿಟ್ಟೆ. ನನ್ನವರನ್ನೆಲ್ಲ ಬಿಟ್ಟು ಬಂದುಬಿಟ್ಟೆ. ಈಗ ಏನು ಮಾಡಲಿ? ಎಂದು ಅಳತೊಡಗಿತು. ಅಲ್ಲೇ ಕುಳಿತಿದ್ದ ಹದ್ದಿಗೆ ಅದರ ಅಳು ಕೇಳಿತು. ಹತ್ತಿರ ಬಂದಿತು. ಚಿಟ್ಟೆ ಹದ್ದನ್ನು ನೋಡಿ ಭಯದಿಂದ ತತ್ತರಿಸಿತು. ಆಗ ಹದ್ದು, ಭಯಪಡಬೇಡ. ನಾನು ನಿನ್ನ ತಿನ್ನುವುದಿಲ್ಲ.

ನಿನ್ನ ತಿಂದರೆ ನನಗೆ ಹೊಟ್ಟೆ ತುಂಬುವುದೂ ಇಲ್ಲ. ಹೇಳು ಯಾಕೆ ಅಳುತ್ತಿರುವೆ ಕೇಳಿತು. ಆಗ ಚಿಟ್ಟೆ ತನ್ನ ಕಥೆಯೆಲ್ಲ ಹೇಳಿತು. ಅಷ್ಟೆ ತಾನೆ? ನಾನು ಹಕ್ಕಿಗಳಲ್ಲೆ ಅತಿ ಎತ್ತರಕ್ಕೆ ಹಾರುತ್ತೇನೆ. ಬಾ ನನ್ನ ರೆಕ್ಕೆಯ ಮೇಲೆ ಕುಳಿತುಕೊ. ನಾನು ನಿನ್ನ ಕಾಮನಬಿಲ್ಲಿನ ಬಳಿ ಕರೆದೊಯ್ಯುತ್ತೇನೆ ಎಂದಿತು. ಆದರೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲವಲ್ಲ. ಎಂದಿತು. ಅಷ್ಟರಲ್ಲಿ ಇನ್ನೊಂದು ಕಾಮನಬಿಲ್ಲು ಆಕಾಶದಲ್ಲಿ ಮೂಡಿರುವುದು ಕಂಡಿತು. ಚಿಟ್ಟೆ ತಡ ಮಾಡದೆ ಹದ್ದಿನ ರೆಕ್ಕೆಯೇರಿ ಕುಳಿತಿತು. ಹದ್ದು ರೊಂಯ್ಯನೆ ಎತ್ತರಕ್ಕೆ ಹಾರಿತು. ಚಿಟ್ಟೆಯನ್ನು ಕಾಮನಬಿಲ್ಲಿನ ಬಾಗಿಲಿಗೆ ಬಿಟ್ಟಿತ್ತು.

ಚಿಟ್ಟೆ ಕಣ್ಣಲ್ಲೇ ಹದ್ದಿಗೆ ಧನ್ಯವಾದ ತಿಳಿಸಿ ಕಾಮನಬಿಲ್ಲಿನ ಬಾಗಿಲಲ್ಲಿ ನಿಂತಿತು. ಎಂಥ ಅದ್ಭುತ ! ಎಷ್ಟೊಂದು ಬಣ್ಣಗಳು! ಚಿಟ್ಟೆ ಅರೆಕ್ಷಣ ಎಲ್ಲ ಮರೆತುಬಿಟ್ಟಿತು. ಅಷ್ಟರಲ್ಲಿ ಕಾಮನಬಿಲ್ಲು ಯಾಕೆ ಬಂದೆ ಎಂದು ಕೇಳಿತು. ಚಿಟ್ಟೆ ತನ್ನ ರೆಕ್ಕೆಗಳಿಗೂ ಬಣ್ಣಬೇಕು. ನೀನು ಆ ಬಣ್ಣ ಕೊಡುವೆ ಎಂದು ಯಾರೋ ಹೇಳಿದರು ಅದಕ್ಕೇ ಬಂದೆ ಎಂದಿತು. ಕಾಮನಬಿಲ್ಲು ಚಿಟ್ಟೆಯನ್ನು ಮುದ್ದಿನಿಂದ ಎತ್ತಿಕೊಂಡು ಒಳ ಕರೆದುಕೊಂಡಿತು. ಚಿಟ್ಟೆ ಕಾಮನಬಿಲ್ಲಿನ ಮೇಲೆಲ್ಲ ಓಡಾಡಿ, ಕೆಳಗೆ ಕಾಣುತ್ತಿರುವ ಭೂಮಿಯನ್ನು ನೋಡಿ ಜೋರಾಗಿ ಕೂಗಿ ಕೇಕೆ ಹಾಕಿತು. ಅದರ ಬಣ್ಣಗಳಲ್ಲಿ ತನ್ನ ರೆಕ್ಕೆ ಅದ್ದಿ ಅಂದ ನೋಡಿಕೊಂಡಿತು.

ಬಣ್ಣಗಳಲ್ಲೇ ಹೊರಳಾಡಿತು. ನೆಗೆದಾಡಿತು. ಸಂತೋಷದಿಂದ ತನ್ನನ್ನೇ ಮರೆಯಿತು. ಇದನ್ನೆಲ್ಲ ನೋಡುತ್ತಿದ್ದ ಕಾಮನಬಿಲ್ಲಿಗೆ ಚಿಟ್ಟೆಯ ಮೇಲೆ ಕರುಣೆ ಉಕ್ಕಿಬಂತು. ಅಯ್ಯೋ ಎನ್ನಿಸಿತು. ಆದರೂ ಹೇಳದೇ ವಿಧಿಯಿಲ್ಲ. ಚಿಟ್ಟೆಯನ್ನು ಕರೆದು ಹೇಳಿತು. ಮುದ್ದು ಚಿಟ್ಟೆಯೆ, ನಾನೀಗ ಹೊರಡುವ ಸಮಯವಾಯಿತು. ನೀನು ಬೇಗ ಇಲ್ಲಿಂದ ನಿರ್ಗಮಿಸು... ಚಿಟ್ಟೆಗೆ ದಿಗಿಲಾಯಿತು.

ಹಾಗಾದರೆ ನನಗೆ ಬಣ್ಣ? ಎಂದು ಕೇಳಿತು. ಅಯ್ಯೋ ಮುದ್ದು ಚಿಟ್ಟೆ, ಇದು ನನ್ನ ಬಣ್ಣಗಳು ಅಂದ್ಕೊಂಡ್ಯ? ನಾನು ಹೀಗಾಗಲು ಬಿಸಿಲು, ಮೋಡ, ಗಾಳಿ, ಮಳೆ ಎಲ್ಲರೂ ಕಾರಣ. ನನ್ ಹತ್ರ ನಿಂಗೆ ಬಣ್ಣ ಕೊಡೋ ಶಕ್ತಿ ಇಲ್ಲ ಎಂದು ಬಿಟ್ಟಿತು. ಚಿಟ್ಟೆಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅಷ್ಟರಲ್ಲಿ ಕಾಮನಬಿಲ್ಲು ಒಂದೆಡೆಯಿಂದ ಕರಗತೊಡಗಿತು. ಅಯ್ಯೋ ನನಗೆ ಮರಳಿ ಹೋಗುವ ಶಕ್ತಿಯಿಲ್ಲ. ಬಣ್ಣದ ಆಸೆಗೆ ಇಲ್ಲೆ ತನಕ ಬಂದೆ.

ನನ್ನವರನ್ನೆಲ್ಲ ಬಿಟ್ಟುಬಂದೆ. ಹಾಗಾದರೆ ನನ್ನ ಗತಿ? ಎಂದಿತು. ಕಾಮನಬಿಲ್ಲು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆಗಲೇ ಅರ್ಧ ಕರಗಿಹೋಗಿತ್ತು. ಇನ್ನೇನು ಕೊಂಚ ಉಳಿದಿರುವಾಗ ಚಿಟ್ಟೆ ಕಣ್ಣೀರು ಹಾಕತೊಡಗಿತು. ಕಾಮನಬಿಲ್ಲು ಅದನ್ನೆತ್ತಿಕೊಂಡು ಅತ್ಯಂತ ಪ್ರೀತಿಯಿಂದ ಮುತ್ತು ಕೊಟ್ಟಿತು.

ಆಗ ಕಾಮನಬಿಲ್ಲಿನ ಜೊತೆ ಚಿಟ್ಟೆಯೂ ಕರಗತೊಡಗಿತು. ಆದರೆ ಚಿಟ್ಟೆಯ ಕಣ್ಣೀರು ನೆಲಕ್ಕೆ ಬೀಳತೊಡಗಿತು. ಅದೇ ಸಮಯಕ್ಕೆ ಮಳೆಯೂ ಸುರಿಯತೊಡಗಿತು. ಮಳೆಯೊಂದಿಗೆ ಚಿಟ್ಟೆಯ ಕಣ್ಣೀರು ಭೂಮಿ ಸೇರಿತು. ಆಶ್ಚರ್ಯವೆಂದರೆ ಅಂದಿನಿಂದ ಭೂಮಿಯ ಮೇಲಿನ ಎಲ್ಲ ಚಿಟ್ಟೆಗಳೂ ಬಣ್ಣದ ರೆಕ್ಕೆ ಪಡೆದವು. ಎಲ್ಲ ಚಿಟ್ಟೆಗಳೂ ಥರಥರದ ಬಣ್ಣಗಳಿಂದ ಹಾರಾಡತೊಡಗಿದವು. ಆದರೆ ಇತ್ತ ಕಾಮನಬಿಲ್ಲೇರಿದ ಚಿಟ್ಟೆ ಮಾತ್ರ ಕಾಮನಬಿಲ್ಲಿನ ಜೊತೆ ಕರಗಿಹೋಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT