ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಹಗರಣ: ಅಧಿಕಾರಿಗಳ ವಿಚಾರಣೆ ನಡೆಸಿದ ಸಂಸತ್ ಸಮಿತಿ

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣಕ್ಕೆ ಸಂಬಂಧಿಸಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳ ಬಗ್ಗೆ ಸಂಸತ್ತಿನ ಸಮಿತಿ ಮಂಗಳವಾರ ನಗರಾಭಿವೃದ್ಧಿ ಸಚಿವಾಲಯ ಮತ್ತು ನಾಗರಿಕ ಸಂಸ್ಥೆಗಳ ಉನ್ನತ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿತು.

ಎನ್‌ಡಿಎ ಸಂಚಾಲಕ ಶರದ್ ಯಾದವ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ವ್ಯಾಪಾರಿಗಳು ಮತ್ತು ಗುತ್ತಿಗೆದಾರರ ಆಯ್ಕೆ, ನಿರ್ಮಾಣ ಉಪಕರಣಗಳ ಮೇಲಿನ ಹಣ ಹೂಡಿಕೆ ಮತ್ತು ಸ್ಪರ್ಧಾತ್ಮಕ ದರದಲ್ಲಿ ಬೆಲೆ ಇರಿಸಲಾಗಿತ್ತೇ ಎಂಬ ಮುಂತಾದ ಅಂಶಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ಮಾಹಿತಿಗಳನ್ನು ಪಡೆದುಕೊಂಡಿತು.

ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್.ಸಿ.ಮಿಶ್ರಾ, ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು, ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಅಧಿಕಾರಿಗಳು ಸಮಿತಿ ಮುಂದೆ ಹಾಜರಾಗಿದ್ದರು.

ಕ್ರೀಡಾಕೂಟದ ವಿವಿಧ ಯೋಜನೆಗಳಿಗೆ ಅಗತ್ಯವಿದ್ದ ನಿರ್ದಿಷ್ಟ ಉತ್ಪನ್ನಗಳನ್ನು ನಿರ್ದಿಷ್ಟ ವ್ಯಾಪಾರಿಗಳಿಂದಲೇ ಖರೀದಿಸಿರುವುದಕ್ಕೆ ಕಾರಣ ಸೇರಿದಂತೆ, ವಿವಿಧ ಪ್ರಶ್ನೆಗಳಿಗೆ ಸಮಿತಿ ಮಾಹಿತಿ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಿತು. ವಿದೇಶಗಳಿಂದ ಖರೀದಿಸಿರುವ ಕೆಲವು ಉಪಕರಣ ಮತ್ತು ವಸ್ತುಗಳು ದೇಶದಲ್ಲಿಯೇ ಲಭ್ಯವಾಗುತ್ತಿದ್ದವೇ ಎಂಬುದರ ಕುರಿತು ಪ್ರತ್ಯೇಕ ವರದಿಗಳನ್ನು ನೀಡುವಂತೆ ಸಮಿತಿ ಸೂಚಿಸಿದೆ. ಕ್ರೀಡಾಗ್ರಾಮದ ನಿರ್ಮಾಣದ ಗುತ್ತಿಗೆ ಸೇರಿದಂತೆ ಇತರ ಯೋಜನೆಗಳಿಗೆ ವಿದೇಶಿ ಗುತ್ತಿಗೆದಾರರ ಆಯ್ಕೆ ಮತ್ತು ಉಪಕರಣಗಳನ್ನು ಕೊಳ್ಳಲು ತಗುಲಿದ ವೆಚ್ಚಗಳ ಬಗ್ಗೆ ಸಹ ಅದು ಮಾಹಿತಿ ಬಯಸಿದೆ.

ಕ್ರೀಡಾಕೂಟ ಪ್ರಾರಂಭಕ್ಕೆ ತಿಂಗಳು ಮುನ್ನವೇ ಸುರಿದ ಮಳೆನೀರಿನಲ್ಲಿ ಕಟ್ಟಡಗಳ ತಳಪಾಯ  ಮುಳುಗಿ ಹೋಗಿತ್ತು ಎಂಬ ವರದಿ  ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ.
ಮುಂದಿನ ಇಪ್ಪತ್ತು ದಿನಗಳ ಒಳಗೆ ಈ ಎಲ್ಲಾ ಮಾಹಿತಿಗಳನ್ನು ಸಂಸ್ಥೆಗಳು ಒಪ್ಪಿಸಬೇಕೆಂದು ಸಮಿತಿ ನಿರ್ದೇಶನ ನೀಡಿದೆ.

ಖಾಸಗಿ ಸಂಸ್ಥೆ ಮಾಲೀಕನ ಬಂಧನ: ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನಾ ಸಮಿತಿಯಿಂದ ನವೀಕರಣ ಕಾಮಗಾರಿಯ 150 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದ್ದ ಖಾಸಗಿ ಸಂಸ್ಥೆಯೊಂದರ ಮಾಲೀಕನನ್ನು ಸಿಬಿಐ ತನಿಖಾ ದಳ ಬಂಧಿಸಿದೆ.

ಕಟ್ಟಡ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರದ ಆರೋಪದಡಿಯಲ್ಲಿ ಜಿಎಲ್ ಇವೆಂಟ್ಸ್-ಮೆರೊಫಾರ್ಮ್ ಎಂಬ ಕಂಪೆನಿ ನಿರ್ದೇಶಕ ಬಿನು ನನು ಎಂಬಾತನನ್ನು ಬಂಧಿಸಲಾಗಿದ್ದು, ನಾಲ್ಕು ದಿನಗಳ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಟ್ಟಡ ನವೀಕರಣ ಕಾಮಗಾರಿಯ ಸುಮಾರು 600 ಕೋಟಿ ರೂಪಾಯಿ ಹಗರಣದ ಆರೋಪದಡಿಯಲ್ಲಿ ಸಿಬಿಐ ಜನವರಿಯಲ್ಲಿ ನನು ಅವರ ಕಚೇರಿ ಮತ್ತು ನಿವಾಸಗಳನ್ನು ತಪಾಸಣೆಗೊಳಪಡಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT