ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಹಗರಣ;ಲಲ್ಲಿ, ಅರುಣ ಹೊಣೆ: ಶುಂಗ್ಲು ಸಮಿತಿ

Last Updated 1 ಫೆಬ್ರುವರಿ 2011, 17:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದ ಬಗ್ಗೆ ಮೊದಲ ಮಧ್ಯಂತರ ತನಿಖಾ ವರದಿ ಸಲ್ಲಿಸಿರುವ ಶುಂಗ್ಲು ಸಮಿತಿಯು, 135 ಕೋಟಿ ರೂಪಾಯಿ ಮೌಲ್ಯದ ಪ್ರಸಾರದ ಹಕ್ಕು ನೀಡಿಕೆ ವ್ಯವಹಾರದಲ್ಲಿನ ಅಕ್ರಮಗಳಲ್ಲಿ ಪ್ರಸಾರ ಭಾರತಿಯಿಂದ ಅಮಾನತುಗೊಂಡಿರುವ ಸಿಇಒ ಬಿ.ಎಸ್.ಲಲ್ಲಿ ಹಾಗೂ ದೂರದರ್ಶನದ ಮಹಾ ನಿರ್ದೇಶಕ ಅರುಣ ಶರ್ಮ ಅವರನ್ನು ಪ್ರಧಾನವಾಗಿ ಹೆಸರಿಸಿದೆ.

ಮಾಜಿ ಮಹಾಲೇಖಪಾಲ ವಿ.ಕೆ.ಶುಂಗ್ಲು ನೇತೃತ್ವದ ದ್ವಿಸದಸ್ಯ ಸಮಿತಿಯು ಈ ಇಬ್ಬರು ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವಂತೆ ಶಿಫಾರಸು ಮಾಡಿದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಶಂತನು ಕಾನ್ಸುಲ್ ಸಮಿತಿಯ ಮತ್ತೊಬ್ಬ ಸದಸ್ಯರಾಗಿದ್ದಾರೆ.

ಸೋಮವಾರ ಸರ್ಕಾರಕ್ಕೆ ಸಲ್ಲಿಕೆಯಾದ 236 ಪುಟಗಳ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ವರದಿಯನ್ನು ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅವರ ಅವಗಾಹನೆಗಾಗಿ ಕಳುಹಿಸಲಾಗಿದೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಅವರಿಗೆ ತಿಳಿಸಲಾಗಿದ್ದು, ಅದರ ಆಧಾರದ ಮೇಲೆ ಕಠಿಣ ಕ್ರಮಗಳನ್ನು ಜರುಗಿಸುವ ಸಾಧ್ಯತೆ ಇದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಅಧಿಕಾರಿಗಳು ಬ್ರಿಟನ್ ಮೂಲದ ಸಿಸ್ ಲೈವ್ ಎಂಬ ಸಂಸ್ಥೆಗೆ ಆತಿಥ್ಯ ಪ್ರಸಾರದ ಹಕ್ಕು ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 135 ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವುದಾಗಿ ವರದಿ ಅಭಿಪ್ರಾಯಪಟ್ಟಿದೆ.

ಅವಧಿ ವಿಸ್ತರಣೆಗೆ ಮನವಿ: ‘ಕ್ರೀಡಾಕೂಟದ ವ್ಯವಹಾರ ಸುಮಾರು 28,000 ಕೋಟಿಯಷ್ಟು ಭಾರಿ ಮೊತ್ತದ್ದಾಗಿರುವುದರಿಂದ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಅದಕ್ಕಾಗಿ ಅವಧಿ ವಿಸ್ತರಿಸಬೇಕು’ ಎಂದು ಶುಂಗ್ಲು ಮಂಗಳವಾರ ಹೇಳಿದ್ದಾರೆ.

‘ಕೇವಲ 3 ತಿಂಗಳ ಅವಧಿಯಲ್ಲಿ ನಾನು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸಾಧ್ಯವೇ?’ ಎಂದು ಅವರು  ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಂತಿಮ ವರದಿ ನೀಡಲು ಸಮಿತಿಗೆ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಸಮಿತಿಯನ್ನು ಕಳೆದ ಅಕ್ಟೋಬರ್ 25ರಂದು ಪ್ರಧಾನಿ ನೇಮಿಸಿದ್ದರು. ಆಗ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು.

ಹಗರಣ ಕುರಿತಂತೆ  ಸಿಬಿಐ ಕೂಡ ತನಿಖೆ ನಡೆಸುತ್ತಿದ್ದು, ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರ ಕೆಲವು ಸಹವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು; ಕಲ್ಮಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಲಲಿತ್ ಬಾನೋಟ್ ಅವರನ್ನು ತನಿಖೆಗೆ ಒಳಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT