ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಡಿ, ಎಮೋಷನ್, ಕೋಮಲ್

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

`ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗುತ್ತವೆ, ಅದು ಮಳೆಗಾಲ ಮತ್ತು ಪರೀಕ್ಷೆ ಸಮಯದಲ್ಲಿ ಮಾತ್ರ~- ಈ ಪಂಚಿಂಗ್ ಡೈಲಾಂಗ್ ಹೇಳಿದ್ದು ನಗೆನಟ ಕೋಮಲ್.

`ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳ ಸಮಸ್ಯೆ ಹಿಂದಿನಿಂದಲೂ ಇದೆ. ಇದು ಹೊಸದೇನಲ್ಲ. ಆದರೆ ಈ ಸಮಸ್ಯೆ ಎಲ್ಲರಿಗೂ ಅನ್ವಯವಾಗುವುದಿಲ್ಲ, ಕೆಲವರಿಗೆ ಥಿಯೇಟರ್‌ಗಳು ಸಿಗುತ್ತವೆ, ಇನ್ನು ಕೆಲವರಿಗೆ ಸಿಗುವುದಿಲ್ಲ. ಸಿಗದವರು ಗುಡುಗುತ್ತಾರೆ, ಸಿಕ್ಕವರು ಸುಮ್ಮನಾಗುತ್ತಾರೆ. ಈ ಸಮಸ್ಯೆ ಕುರಿತು ಪತ್ರಿಕೆಗಳ ಹೆಡ್‌ಲೈನ್ ರೀತಿ ಹೇಳಲು ಆಗುವುದಿಲ್ಲ. ಏಕೆಂದರೆ ಈ ಸಮಸ್ಯೆ ಅಷ್ಟೊಂದು ಸರಳವಾಗಿಲ್ಲ~ ಎಂದು ನಕ್ಕರು ಕೋಮಲ್.

ಕೋಮಲ್ ಪ್ರಕಾರ `ಮಲ್ಟಿಫ್ಲೆಕ್ಸ್~ಗಳು ಕನ್ನಡ ಚಿತ್ರಗಳಿಗೆ ಶತ್ರುಗಳಾಗಿವೆ. 2-3 ಕೋಟಿ ವೆಚ್ಚದಲ್ಲಿ ತಯಾರಾಗುವ ಕನ್ನಡ ಸಿನಿಮಾಗಳಿಗೂ, 80-100 ಕೋಟಿ ರೂಪಾಯಿಗಳಲ್ಲಿ ನಿರ್ಮಾಣಗೊಳ್ಳುವ ಹಿಂದಿ, ತಮಿಳು, ತೆಲುಗು ಸಿನಿಮಾಗಳಿಗೂ ಪ್ರವೇಶ ದರ ಒಂದೇ.

ಪ್ರೇಕ್ಷಕ 130 ರೂಪಾಯಿ ಕೊಟ್ಟು ದೊಡ್ಡ ಬಜೆಟ್ ಸಿನಿಮಾ ನೋಡಲು ಹೋಗುತ್ತಾನೆಯೇ ಹೊರತು, 2-3 ಕೋಟಿ ಬಂಡವಾಳದ ಕನ್ನಡ ಸಿನಿಮಾವನ್ನು ಅಲ್ಲ~ ಎನ್ನುವುದು ಇವರ ವಾದ.

ಇಷ್ಟೆಲ್ಲ ಮಾತುಕತೆ ನಡೆದಿದ್ದು ಮೈಸೂರು ಸಮೀಪವಿರುವ ಡಿ ಪೌಲ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ. ಅಲ್ಲಿ `ಕರೋಡ್‌ಪತಿ~ ಚಿತ್ರೀಕರಣ ನಡೆಯುತ್ತಿತ್ತು.

ಥಿಯೇಟರ್‌ಗಳ ಕಡೆಯಿಂದ ಮಾತು `ಕರೋಡ್‌ಪತಿ~ಯತ್ತ ತಿರುಗಿತು. ಹಣ ಇಲ್ಲದ ವ್ಯಕ್ತಿಗೆ ಹಣ ಬಂದಾಗ ಆತ ಏನೇನು ಆಸೆಗಳನ್ನು ವ್ಯಕ್ತಪಡಿಸುತ್ತಾನೆ. ಆಮೇಲೆ ದುಡ್ಡು ಇದ್ದರೆ ಒಳ್ಳೆಯದಾ, ಇಲ್ಲದಿದ್ದರೆ ಒಳ್ಳೆಯದಾ ಎನ್ನುವುದು ಈ ಚಿತ್ರದ ನೀತಿಯಾಗಿದೆ. ಕೇವಲ ಕಾಮಿಡಿ ಇದ್ದರೆ ಸಾಲದು ಜೊತೆಗೆ ಎಮೋಷನ್ ಇರಬೇಕು. ಆದ್ದರಿಂದಲೇ ಚಾರ್ಲಿಚಾಪ್ಲಿನ್ ನೂರು ವರ್ಷ ಕಳೆದರೂ ಉಳಿದುಕೊಂಡಿದ್ದಾರೆ. ಹೀಗಾಗಿ ನನ್ನ ಸಿನಿಮಾಗಳಲ್ಲಿ ಕಾಮಿಡಿ, ಎಮೋಷನ್ ಇರುತ್ತದೆ~ ಎನ್ನುವುದು ಕೋಮಲ್ ಅಭಿಪ್ರಾಯ.

`ಶ್ರೀರಂಗಪಟ್ಟಣದ ವ್ಯಾಪಾರಿ ಸುರೇಶ್ ಚಿತ್ರದ ನಿರ್ಮಾಪಕರು. ಇವರಿಗೆ ಕೋಮಲ್ ಮೇಲೆ ತುಂಬಾ ನಂಬಿಕೆ. ಕಥೆ ಚೆನ್ನಾಗಿದೆ. ಜೊತೆಗೆ ಕೋಮಲ್ ಇದ್ದಾರೆ. ಅಂದಮೇಲೆ ಹೂಡಿರುವ ಬಂಡವಾಳದ ಬಗ್ಗೆ ಭಯವಿಲ್ಲ~ ಎಂದು ಆತ್ಮವಿಶ್ವಾಸದಿಂದಲೇ ಹೇಳಿದರು.

`ಮಠ~ದ ನಿರ್ದೇಶಕ ಗುರುಪ್ರಸಾದ್ `ಕರೋಡ್‌ಪತಿ~ ಯಲ್ಲಿಯೂ ನಿರ್ದೇಶಕರಾಗಿದ್ದಾರೆ. ಇಲ್ಲಿ ಇವರು ನಾಯಕ ಕೋಮಲ್ ಬದುಕನ್ನು ನಿರ್ದೇಶಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. `ಈ ಪಾತ್ರಕ್ಕೆ ನಾನೇ ಸೂಕ್ತ ಎನ್ನುವುದು ಕೋಮಲ್ ಭಾವನೆಯಾಗಿತ್ತು. ಅವರ ಆಸೆಯಂತೆ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಒಳ್ಳೆಯ ನಿರ್ದೇಶಕ ಕೆಟ್ಟ ನಟನಾಗಿರುತ್ತಾನೆ~ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡರು.

ತಮ್ಮ ನಿರ್ದೇಶನದ `ಡೈರೆಕ್ಟರ್ ಸ್ಪೆಷಲ್~ನಲ್ಲಿ ಮೈಸೂರಿನ ಹುಡುಗ ಧನಂಜಯ ನಾಯಕನಾಗಿದ್ದು, ಈ ಚಿತ್ರ ಯುಗಾದಿಗೆ ಬಿಡುಗಡೆಯಾಗುತ್ತದೆ ಎನ್ನುವ ಮಾತನ್ನು ಗುರುಪ್ರಸಾದ್ ಹೇಳಲು ಮರೆಯಲಿಲ್ಲ.

ನಿರ್ದೇಶಕ ಸುರೇಶ್ ತಮ್ಮ ತಂಡವನ್ನು ಪರಿಚಯಿಸಿ ಸುಮ್ಮನಾದರು. ನಾಯಕಿಯರಾದ ಮೀರಾ ನಂದನ್, ಜಾಸ್ಮಿನ್ ಒಂದೆರಡು ಮಾತಿಗೆ ಖಾಲಿಯಾದರು. ಸಂಕಲನಕಾರ ಜ್ಞಾನೇಶ್, ಕಥೆ ಬರೆದ ಶ್ರೀನಿವಾಸಬಾಬು, ಮೈಸೂರು ಸಂತೋಷ್, ನಾಗತಿಹಳ್ಳಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT