ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮುಕ ನಕಲಿ ಫಾರೆಸ್ಟರ್ ಬಂಧನ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ಫಾರೆಸ್ಟರ್ ಎಂದು ಹೇಳಿಕೊಂಡು ಬನ್ನೇರುಘಟ್ಟ ಉದ್ಯಾನದ ಸುತ್ತಮುತ್ತ ಪ್ರೇಮಿಗಳನ್ನು ವಂಚಿಸಿ, ಯುವತಿಯರಿಗೆ ಕಿರುಕುಳ ಕೊಡುತ್ತಿದ್ದ ನಕಲಿ ಫಾರೆಸ್ಟರ್‌ನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಆಂಧ್ರ ಮೂಲದ ಭರತ್ ಅಲಿಯಾಸ್ ಶಿವರಾಮರೆಡ್ಡಿ ಎಂದು ಗುರುತಿಸಲಾಗಿದೆ. ಖಾಕಿ ಪ್ಯಾಂಟ್, ಕೆಂಪು ಬೂಟು ಧರಿಸಿ ಅರಣ್ಯ ಇಲಾಖೆ ಸಿಬ್ಬಂದಿಯ ವೇಷದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕಗ್ಗಲೀಪುರ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಆರೋಪಿಯು ಕದ್ದುಮುಚ್ಚಿ ತನ್ನ ಮೊಬೈಲ್ ಫೋನ್‌ನಲ್ಲಿ ಪ್ರೇಮಿಗಳ ಚೆಲ್ಲಾಟವನ್ನು ಚಿತ್ರಿಸಿಕೊಂಡು, ನಂತರ ಜೋಡಿಗಳ ಬಳಿಗೆ ಬಂದು ತಾನು ಫಾರೆಸ್ಟರ್ ಎಂದು ಅವರಿಂದ ಆಭರಣ, ಮೊಬೈಲ್ ತೆಗೆದಿರಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ಎನ್ನಲಾಗಿದೆ.

ನಂತರ ಹುಡುಗಿಯರ ಮೊಬೈಲ್ ನಂಬರ್ ಪಡೆದು, ಅವರಿಗೆ ವಿಚಾರಣೆಗೆ ಒಂಟಿಯಾಗಿ ಬರಲು ತಿಳಿಸಿ, ಇಲ್ಲದಿದ್ದರೆ ನಿಮ್ಮ ತಂದೆ-ತಾಯಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ.ಒಂಟಿ ಹೆಣ್ಣು ಮಕ್ಕಳಿಂದ ಹಣ ವಸೂಲಿ ಮಾಡಿ ಕೆಲವೊಮ್ಮೆ ಕಾಮತೃಷೆಗೂ ಬಳಸಿಕೊಳ್ಳುತ್ತಿದ್ದ ವಿಕೃತಕಾಮಿ ಎನ್ನಲಾಗಿದೆ.

ದೂರು ನೀಡಿದ ಚಿತ್ರಾ (ಹೆಸರು ಬದಲಿಸಲಾಗಿದೆ): ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಚಿತ್ರಾ ನಕಲಿ ಫಾರೆಸ್ಟರ್ ಭರತ್‌ನ ಕಾಟ ತಡೆಯಲಾರದೇ, ಸೋಮವಾರ ಬನ್ನೇರುಘಟ್ಟ ಠಾಣೆಗೆ ಬಂದು ಆರೋಪಿ ವಿರುದ್ಧ ದೂರು ನೀಡಿ, ಭರತ್ ಆ.19ರಂದು ಬೆಂಗಳೂರಿಗೆ ಡ್ರಾಪ್ ನೀಡುವ ನೆಪದಲ್ಲಿ ತನ್ನ  ಕಾರ್‌ನಲ್ಲಿ ಕರೆದೊಯ್ದು, ಬನ್ನೇರುಘಟ್ಟ ಕಾಡಿನತ್ತ ತೆರಳಿ ಅಸಭ್ಯವಾಗಿ ವರ್ತಿಸಿದ. ತಾನು ತಪ್ಪಿಸಿಕೊಂಡು ಬಂದು, ಭವಿಷ್ಯದ ದೃಷ್ಟಿಯಿಂದ ಯಾರಿಗೂ ವಿಷಯ ತಿಳಿಸದಿದ್ದರೂ ಸಹ ಪದೇಪದೇ ಮೊಬೈಲ್‌ಗೆ ಫೋನ್ ಮಾಡಿ ರೂ 8 ಸಾವಿರ ತರುವಂತೆ ಪೀಡಿಸುತ್ತಿದ್ದಾನೆ ಎಂದು ದೂರು ನೀಡಿದ್ದಳು.

ಇದೇ ರೀತಿ ಜಿಗಣಿಯ ಇಬ್ಬರು ಮಹಿಳೆಯರು ದೂರು ನೀಡಿದ್ದರು, ಇವರ ದೂರನ್ನು ಅನುಸರಿಸಿ ಬನ್ನೇರುಘಟ್ಟ ಠಾಣೆಯ ಪಿಎಸ್‌ಐ ವಿಶ್ವನಾಥ್ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಗೊಟ್ಟಿಗೆರೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನು ನಡೆಸಿದ ಕೃತ್ಯಗಳ ಬಗ್ಗೆ ಬಾಯಿಬಿಟ್ಟಿದ್ದಾನೆ. ಹಲವಾರು ಪ್ರಕರಣಗಳಲ್ಲಿ ಮಾನಮರ್ಯಾದೆಗೆ ಅಂಜಿ ದೂರನ್ನು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆನೇಕಲ್ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ಎಸ್.ವೆಂಕಟೇಶ್ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT