ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್-ಕೆ ಕೌನ್ಸೆಲಿಂಗ್: ಪೋಷಕರ ಆತಂಕ

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಆರಂಭವಾಗುವ ಮೊದಲೇ ಕಾಮೆಡ್-ಕೆ ಕೌನ್ಸೆಲಿಂಗ್ ಆರಂಭಿಸಿರುವುದರಿಂದ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಸರ್ಕಾರಿ ಕೋಟಾ ಸೀಟುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ನಡೆಸಿದ ನಂತರವೇ ಕಾಮೆಡ್ - ಕೆ ಕೌನ್ಸೆಲಿಂಗ್ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ವರ್ಷ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಶುರುವಾಗುವ ಮೊದಲೇ ಕಾಮೆಡ್- ಕೆ ಕೌನ್ಸೆಲಿಂಗ್ ಪ್ರಾರಂಭಿಸಿರುವುದು ವಿದ್ಯಾರ್ಥಿಗಳು, ಪೋಷಕರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

`ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಆರಂಭವಾಗುವುದಕ್ಕೂ ಮೊದಲೇ ಕಾಮೆಡ್-ಕೆ  ಕೌನ್ಸೆಲಿಂಗ್ ಆರಂಭಿಸಿರುವುದು ಸರಿಯಲ್ಲ. ಮುಂದೆ ಸರ್ಕಾರಿ ಕೋಟಾ ಸೀಟು ದೊರೆತರೆ, ಆಗ ಕಾಮೆಡ್-ಕೆ ಪೂರ್ತಿ ಹಣ ವಾಪಸ್ ಮಾಡುವುದಿಲ್ಲ. ಒಟ್ಟು  ರೂ 3.57 ಲಕ್ಷ ಶುಲ್ಕ ಪಾವತಿಸಿದ್ದರೆ, ರೂ  55 ಸಾವಿರ ಹಿಡಿದುಕೊಳ್ಳುತ್ತಾರೆ. ಇದರಿಂದ ನಮಗೆ ನಷ್ಟವಾಗಲಿದೆ ಎಂದು ಹುಬ್ಬಳ್ಳಿಯ ರವೀಂದ್ರ ಬೇಸರ ವ್ಯಕ್ತಪಡಿಸಿದರು.

ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ನಡೆಯುತ್ತಿರುವ ಕಾಮೆಡ್ -ಕೆ ಕೌನ್ಸೆಲಿಂಗ್‌ನಲ್ಲಿ ತಮ್ಮ ಪುತ್ರಿಗೆ ಸೀಟು ಆಯ್ಕೆ ಮಾಡಿಕೊಳ್ಳಲು ಹುಬ್ಬಳ್ಳಿಯಿಂದ ಬಂದಿದ್ದ ಅವರು `ಪ್ರಜಾವಾಣಿ'ಯೊಂದಿಗೆ ಮಾತನಾಡುತ್ತಾ ಅಳಲು ತೋಡಿಕೊಂಡರು.

`ನನ್ನ ಮಗಳು ಪಿಯುಸಿಯಲ್ಲಿ ಶೇ 95ರಷ್ಟು ಅಂಕಗಳನ್ನು ಪಡೆದಿದ್ದಾಳೆ. ಸಿಇಟಿಯಲ್ಲಿ 5 ಸಾವಿರ ರ‍್ಯಾಂಕಿಂಗ್ ಇದೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತದ ಅಂಕಗಳು ಮತ್ತು ಸಿಇಟಿ ರ‍್ಯಾಂಕಿಂಗ್ ಎರಡನ್ನೂ ಪರಿಗಣಿಸುತ್ತಾರೆ. ಆದರೆ, ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಕೇವಲ ಸಿಇಟಿ ರ‍್ಯಾಂಕಿಂಗ್ ಮಾತ್ರ ಪರಿಗಣಿಸಲಾಗುವುದು ಎನ್ನುತ್ತಾರೆ. ಕಷ್ಟಪಟ್ಟು ರೂ 3.57 ಲಕ್ಷ ರೂಪಾಯಿ ಮೊತ್ತದ ಡಿಡಿ ತೆಗೆದುಕೊಂಡು ಬಂದಿದ್ದೆ. ಆದರೆ ಸೀಟು ಸಿಕ್ಕಿಲ್ಲ' ಎಂದು ನೋವಿನಿಂದ ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾಳಜಿ ಉಳ್ಳವರು ಎಂಬ ಅಭಿಪ್ರಾಯವಿದೆ. ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಅದನ್ನು ತಡೆಯಲು ಏಕೆ ಮುಂದಾಗುತ್ತಿಲ್ಲ. ಕಾಮೆಡ್-ಕೆಗೆ ಮೊದಲು ಕೌನ್ಸೆಲಿಂಗ್ ಆರಂಭಿಸಲು ಅನುಮತಿ ನೀಡಿದ್ದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಅಮ್ಜದ್ ನಿಸಾನಿ ಮಾತನಾಡಿ, ಎನ್‌ಇಇಟಿ ಫಲಿತಾಂಶ ಪ್ರಕಟವಾಗಿದ್ದರೂ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಆತಂಕ ಎದುರಿಸುವಂತಾಗಿದೆ. ಎನ್‌ಇಇಟಿ ಕೌನ್ಸೆಲಿಂಗ್ ಆರಂಭವಾಗಿದ್ದರೆ ರೂ 16 ಸಾವಿರಕ್ಕೆ ದೇಶದ ಯಾವುದೇ ಭಾಗದಲ್ಲಿ ಸೀಟು ಸಿಗುವ ವಿಶ್ವಾಸ ಇತ್ತು ಎಂದರು.

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳು ಹಣವಿದ್ದವರಿಗೆ ಮಾತ್ರ ಎನ್ನುವಂತಾಗಿದೆ. ಕೆಲವು ದಲ್ಲಾಳಿಗಳು ಖಾಸಗಿ ಕಾಲೇಜುಗಳಲ್ಲಿ ಸೀಟು ದೊರಕಿಸಿ ಕೊಡುವುದಾಗಿ ಮೊಬೈಲ್‌ಗೆ ಮಾಹಿತಿ ರವಾನಿಸುತ್ತಿದ್ದಾರೆ. ನಮಗೆ ಸಿಗದ ಸೀಟುಗಳು ದಲ್ಲಾಳಿಗಳಿಂದ ಕೊಡಿಸಲು ಹೇಗೆ ಸಾಧ್ಯ. ಇದಕ್ಕೆ ಕಡಿವಾಣ ಹಾಕುವವರು ಯಾರು? ಎಂದು ಪ್ರಶ್ನಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ: `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ವಿವಿಧ ಭಾಗಗಳಿಂದ ಬಂದಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು, `ವೈದ್ಯಕೀಯ ಸೀಟೂ ಇಲ್ಲ. ದಂತ ವೈದ್ಯಕೀಯ ಸೀಟೂ ಇಲ್ಲ. ಎಲ್ಲ ಆಕಾಶ ನೋಡುತ್ತಿದ್ದೇವೆ. ಬೇಜವಾಬ್ದಾರಿ ಸರ್ಕಾರ, ಕಾಮೆಡ್-ಕೆಗೆ ತಮ್ಮ ಕೋಟಾದ ಸೀಟುಗಳನ್ನು ಮೊದಲು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಅವರು ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ನೀಡುತ್ತಿಲ್ಲ. ಕೆಲವರು ನಿರಾಕರಿಸುವ ಸೀಟುಗಳನ್ನೂ ನಮಗೆ ನೀಡುತ್ತಿಲ್ಲ. ತಮ್ಮ ಬಳಿಯೇ ಉಳಿಸಿಕೊಂಡು ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ' ಎಂದು ಆರೋಪಿಸಿದರು.

`ರಾಜ್ಯದ ಡೀಮ್ಡ ವಿಶ್ವವಿದ್ಯಾಲಯಗಳು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸುತ್ತವೆ. ರೂ 2,500 ಶುಲ್ಕ ಕಟ್ಟಿ ಪರೀಕ್ಷೆ ಬರೆಯಬೇಕು. ಬಳಿಕ ಪೋಷಕರನ್ನು ಕೂರಿಸಿ ಎಷ್ಟು ಲಕ್ಷ ಕೊಡುತ್ತೀರಿ ಎಂದು ವ್ಯವಹಾರ ಆರಂಭಿಸುತ್ತಾರೆ. ಈ ಬಗ್ಗೆ ಯಾರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

33,386 ವಿದ್ಯಾರ್ಥಿಗಳಿಂದ ಸೀಟುಗಳ ಆಯ್ಕೆ
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಸೀಟುಗಳನ್ನು ಗುರುತಿಸುವ ಪ್ರಕ್ರಿಯೆ ಮಂಗಳವಾರ ರಾತ್ರಿಯಿಂದ ಆರಂಭವಾಗಿದ್ದು, ಬುಧವಾರ ಸಂಜೆವರೆಗೆ 33,386 ವಿದ್ಯಾರ್ಥಿಗಳು 15,15,249 ಆಯ್ಕೆಗಳನ್ನು ಗುರುತಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ತಿಳಿಸಿದ್ದಾರೆ.

ಈ ತಿಂಗಳ 7ರಂದು ಬೆಳಿಗ್ಗೆ 11ರವರೆಗೂ ಆಯ್ಕೆಗಳನ್ನು ಗುರುತಿಸಲು ಅವಕಾಶ ಇದೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜು, ಕೋರ್ಸ್‌ನ ಸೀಟುಗಳನ್ನು ಆದ್ಯತೆ ಮೇಲೆ ಗುರುತಿಸಬಹುದು ಎಂದು ಅವರು ಹೇಳಿದರು.

400 ಸೀಟುಗಳು ಖಾಲಿ
ಕಾಮೆಡ್ - ಕೆ ಕೋಟಾದಲ್ಲಿ 762 ದಂತ ವೈದ್ಯಕೀಯ ಸೀಟುಗಳು ಇದ್ದವು. ಆದರೆ, 362 ಸೀಟುಗಳು ಮಾತ್ರ ಭರ್ತಿಯಾಗಿದ್ದು, ಇನ್ನೂ 400 ಸೀಟುಗಳು ಉಳಿದಿವೆ. ಈ ವರ್ಷವೂ ದಂತ ವೈದ್ಯಕೀಯ ಸೀಟುಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ವೈದ್ಯಕೀಯ ವಿಭಾಗದಲ್ಲಿ 683 ಸೀಟುಗಳು ಲಭ್ಯವಿದ್ದವು. ಎರಡನೇ ದಿನದ ಕೌನ್ಸೆಲಿಂಗ್ ಅಂತ್ಯಗೊಂಡ ನಂತರ 73 ಸೀಟುಗಳು ಖಾಲಿ ಉಳಿದಿವೆ. ಮಂಗಳೂರಿನ ಫಾದರ್ ಮುಲ್ಲಾ ವೈದ್ಯಕೀಯ ಕಾಲೇಜಿನಲ್ಲಿ 57 ಸೀಟುಗಳು ಹಾಗೂ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ 16 ಸೀಟುಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT