ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್-ಕೆ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ ಶಂಕೆ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದರೂ, ಈ ವರ್ಷ ಮತ್ತೆ `ಕಾಮೆಡ್-ಕೆ~ ಪ್ರವೇಶ ಪರೀಕ್ಷೆ ಬರೆದಿರುವ 15 ವಿದ್ಯಾರ್ಥಿಗಳಿಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

`ಕಾಮೆಡ್-ಕೆ~ ಮೂಲಕ ಹಂಚಿಕೆಯಾಗುವ ವೈದ್ಯಕೀಯ ಸೀಟುಗಳಲ್ಲೂ ಅವ್ಯವಹಾರ ನಡೆದಿದೆ ಎಂಬ ಸಂಶಯ ವ್ಯಕ್ತವಾಗಿರುವುದರಿಂದ ನೋಟಿಸ್ ನೀಡಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಕಾಮೆಡ್-ಕೆ ಮುಖ್ಯಕಾರ್ಯನಿರ್ವಾಹಕ ಎ.ಎಸ್. ಶ್ರೀಕಾಂತ್ `ಪ್ರಜಾವಾಣಿ~ಗೆ ತಿಳಿಸಿದರು.

ಕಳೆದ ವರ್ಷ ಕಾಮೆಡ್-ಕೆ ಪ್ರವೇಶ ಪರೀಕ್ಷೆ ತೆಗೆದುಕೊಂಡಿದ್ದವರ ಪೈಕಿ 35 ವಿದ್ಯಾರ್ಥಿಗಳು ಈ ವರ್ಷವೂ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 15 ವಿದ್ಯಾರ್ಥಿಗಳು ಕಳೆದ ವರ್ಷ ಸೀಟು ಆಯ್ಕೆ ಮಾಡಿಕೊಂಡು ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರು ಎಂದು ಅವರು ಹೇಳಿದರು.

ಇವರೆಲ್ಲ ಬಿಹಾರ, ರಾಜಸ್ತಾನ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ ವರ್ಷ ಎರಡು ಸಾವಿರವರೆಗೆ ರ‌್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳು ಹಾಗೂ ಈ ವರ್ಷ 2000 ದವರೆಗೆ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ ತುಲನೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದರು.

ಇದರ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆ ನಂತರವೇ ಗೊತ್ತಾಗಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ ಸಹಕಾರ ನೀಡಿದರೆ ಇದನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಕಳೆದ ವರ್ಷ ಈ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕಾಲೇಜಿನ ವಿಳಾಸಕ್ಕೆ ನೋಟಿಸ್ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ವಾಮ ಮಾರ್ಗದ ಮೂಲಕ ಸೀಟು ಮಾರಾಟ ದಂಧೆ ನಡೆಯುತ್ತದೆ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಈಗ ಕಾಮೆಡ್-ಕೆ ಮೂಲಕವೇ ಇದು ಪತ್ತೆ ಆಗಿರುವುದು ನೋಡಿದರೆ ಇದರ ಹಿಂದೆ ದೊಡ್ಡ ಜಾಲ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಬಹುತೇಕ ಸೀಟು ಭರ್ತಿ
ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್-ಕೆ ಶನಿವಾರ ನಡೆಸಿದ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಬಹುತೇಕ ಸೀಟುಗಳು ಭರ್ತಿಯಾಗಿವೆ.ವೈದ್ಯಕೀಯ ವಿಭಾಗದಲ್ಲಿ ಒಟ್ಟು 695 ಸೀಟುಗಳು ಲಭ್ಯವಿದ್ದವು. ಈ ಪೈಕಿ 596 ಸೀಟುಗಳು ಮೊದಲ ದಿನವೇ ಭರ್ತಿಯಾಗಿದ್ದು, ಕೇವಲ 99 ಸೀಟುಗಳು ಖಾಲಿ ಇವೆ. ಈ ಸೀಟುಗಳು ತುಳು ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸೇರಿದವಾಗಿವೆ.

ಮಂಗಳೂರಿನ ಫಾದರ್ ಮುಲ್ಲಾ ಕಾಲೇಜಿನಲ್ಲಿ ಒಟ್ಟು 82 ಸೀಟುಗಳು ಲಭ್ಯವಿದ್ದವು. ಕೇವಲ 2 ಸೀಟುಗಳು ಮಾತ್ರ ಭರ್ತಿಯಾಗಿವೆ. ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ ಅಂಡ್ ಹಾಸ್ಪಿಟಲ್‌ನಲ್ಲಿ ಲಭ್ಯವಿದ್ದ 20 ಸೀಟುಗಳಲ್ಲಿ ಒಂದು ಸೀಟು ಮಾತ್ರ ಭರ್ತಿಯಾಗಿದೆ. ಭಾನುವಾರ ಕೌನ್ಸೆಲಿಂಗ್ ಮುಂದುವರಿಯಲಿದ್ದು, ಮೇಲಿನ ಎರಡು ಕಾಲೇಜುಗಳಲ್ಲಿ ಮಾತ್ರ ಸೀಟುಗಳು ಹಂಚಿಕೆಗೆ ಲಭ್ಯವಾಗಲಿವೆ. ಉಳಿದ ಕಾಲೇಜುಗಳಲ್ಲಿನ ಎಲ್ಲ ಸೀಟುಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT