ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ ಕಾಯುವ ಯೋಗ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರಲ್ಲಿ ವ್ಯಾಯಾಮ ಹಾಗೂ ಆರೋಗ್ಯದ ಕೊರತೆ ಕಂಡುಬರುತ್ತಿದೆ. ಏಕೆಂದರೆ ಹಿಂದಿನ ಕಾಲದ ಮಹಿಳೆಯರಿಗೆ ಸಾಕಷ್ಟು ವ್ಯಾಯಾಮ ಆಗಬಲ್ಲ ಬಹಳಷ್ಟು ಕೆಲಸಗಳಿದ್ದವು. ಉದಾ: ರುಬ್ಬುವುದು, ಒನಕೆಯಲ್ಲಿ ಭತ್ತ ಕುಟ್ಟುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು ಇತ್ಯಾದಿ.  ಅಲ್ಲದೆ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಭಕ್ತಿಯಿಂದ ಭಜನೆ, ಧ್ಯಾನ, ದೇವರ ಪ್ರಾರ್ಥನೆಗಳನ್ನು ಮಾಡಿಕೊಂಡು ಶಾಂತಿ, ನೆಮ್ಮದಿಯಿಂದ ಇರುತ್ತಿದ್ದರು.

ಇಂದಿನ ಮುಂದುವರಿದ ಸಮಾಜದಲ್ಲಿ ಸೌಕರ್ಯಗಳು ಹೆಚ್ಚಿವೆ. ಮಹಿಳೆಯರು ತಮ್ಮ ಕೌಟುಂಬಿಕ ಮತ್ತು ಉದ್ಯೋಗ ನಿರ್ವಹಣೆ ದೃಷ್ಟಿಯಿಂದ ಅನಿವಾರ್ಯವಾಗಿ ಆಧುನಿಕ ಸೌಕರ್ಯಗಳನ್ನು ಳವಡಿಸಿಕೊಳ್ಳಬೇಕಾಗುತ್ತದೆ.  ಆದರೆ ಇದರಿಂದ ಅವರಲ್ಲಿ ದೈಹಿಕ ವ್ಯಾಯಾಮದ ಕೊರತೆ ಎದುರಾಗುತ್ತಿದೆ. ಇದನ್ನು ನಿವಾರಿಸಿ ಉತ್ತಮ ಆರೋಗ್ಯ ಪಡೆಯಲು ಯೋಗಾಸನಗಳು ಅತ್ಯವಶ್ಯಕ.

ದೈಹಿಕ ವ್ಯಾಯಾಮದ ಕೊರತೆ ಇರುವವರು ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ  15ರಿಂದ 20 ಆಸನಗ­ಳನ್ನು ಉಸಿರಿನ ಗತಿಯೊಂದಿಗೆ ಶಿಸ್ತುಬದ್ಧವಾಗಿ ಮಾಡಿದರೆ ಸಾಕು. ಯೋಗಾಭ್ಯಾಸದಿಂದ ಪ್ರತಿ ಅಂಗವೂ ಪ್ರಚೋದನೆ­ಗೊಂಡು ಸ್ಫೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲ ಲಭಿಸುತ್ತದೆ. ಯೋಗಾಸನಗಳು ನಮ್ಮ ಶರೀರ ರಚನಾ ಶಾಸ್ತ್ರದ ವೈಜ್ಞಾನಿಕ ಆಧಾರದ ಮೇಲೆ ನಿಂತಿವೆ.

ಕ್ರಮಬದ್ಧವಾದ ಯೋಗಾಸನದಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೆಚ್ಚ ಮತ್ತು ಹಿಂಸೆ ಇಲ್ಲದೆ ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಸೊಂಟನೋವು, ಬೆನ್ನುನೋವು, ಕಾಲು ಸೆಳೆತ, ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ಯೋಗಾಸನಗಳು ತುಂಬಾ ಸಹಕಾರಿ. ಆದರೆ, ಯೋಗಾಸನಗಳನ್ನು ಯಾವತ್ತೂ ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು.

ಯೋಗ ಎಂದರೇನು?
ಪತಂಜಲಿ ಯೋಗ ಸೂತ್ರವು ‘ಯೋಗಃ ಚಿತ್ತವೃತ್ತಿ ನಿರೋಧಃ’ ಎಂದು ತಿಳಿಸುತ್ತದೆ. ಅಂದರೆ, ಚಿತ್ತದ ವೃತ್ತಿಗಳನ್ನು ಅಥವಾ ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದೇ ಯೋಗ ಎಂದರ್ಥ. ಪತಂಜಲಿ ಋಷಿಯು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ.

ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾ­ಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಯೋಗಾಸನ ಕಲಿಯುವವರು ಕೆಳಕಂಡ ಸೂಚನೆಗಳನ್ನು ಪಾಲಿಸಬೇಕು:
1. ಆಸನಗಳನ್ನು ಪ್ರಾಯ, ಲಿಂಗ, ಜಾತಿ, ಮತ ಭೇದವಿಲ್ಲದೆ ಎಲ್ಲರೂ ಮಾಡಬಹುದು.
2. ಆದರೆ ಹೆಂಗಸರು ಕೆಲವು ಆಸನಗಳನ್ನು ಮುಟ್ಟಾದಾಗ, ಗರ್ಭಿಣಿಯಾದಾಗ, ಬಾಣಂತಿ ಇದ್ದಾಗ ಮಾಡಬಾರದು.
3. ಬಿಸಿಲಿನಿಂದ ಬಂದ ಕೂಡಲೇ ಯೋಗಾಸನ ಮಾಡಬಾರದು.
4. ಯೋಗ್ಯ ಗುರುವಿನ ಮಾರ್ಗದರ್ಶನ ಇಲ್ಲದೆಯೂ ಯೋಗಾಸನ ಮಾಡುವುದು ಸೂಕ್ತವಲ್ಲ.
5. ಆಸನವನ್ನು ಆಯಾಸ ಮಾಡಿಕೊಂಡು ಮಾಡಬಾರದು.

ಹೀಗೆ ಮಾಡಿ

ಆಧುನಿಕ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಇರುವ ಯೋಗಗಳ ಸಂಕ್ಷಿಪ್ತ ಪಟ್ಟಿ:
*ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ
*ಕಪಾಲಭಾತಿ, ತ್ರಾಟಕ ಇತ್ಯಾದಿ ಕ್ರಿಯೆಗಳು
*ಕುತ್ತಿಗೆ, ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)
*-ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು
*-ಸಾಧ್ಯ ಆಗುವವರಿಗೆ ಸೂರ್ಯ ನಮಸ್ಕಾರ
*-ತುಸು ವಿಶ್ರಾಂತಿ
*ಅಗತ್ಯದ ಯೋಗಾಸನಗಳು:


*ತಾಡಾಸನ, ಅರ್ಧ ಚಕ್ರಾಸನ, ಉತ್ತಾನಾಸನ, ಪಾದ ಹಸ್ತಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ವೀರ ಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ವಿಪರೀತ ಕರಣಿ, ಹಲಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ, ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ.

ಈ ಮುದ್ರೆ ಸೂಕ್ತ
*ಜ್ಞಾನ ಮುದ್ರೆ

*ವಾಯು ಮುದ್ರೆ
*ಅಪಾನ ಮುದ್ರೆ
*ಸೂರ್ಯ ಮುದ್ರೆ
*ಪ್ರಾಣ ಮುದ್ರೆ
*ವರುಣ ಮುದ್ರೆ
*ಶಂಖ ಮುದ್ರೆ
*ಜಲೋದರ ನಾಶಕ ಮುದ್ರೆ
*ಸುರಭಿ ಮುದ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT