ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ನ್ಯಾಯಾಧೀಶರಿಲ್ಲ; ಕಲಾಪವೂ ಇಲ್ಲ

Last Updated 21 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಜಗಳೂರು: ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಕಾಯಂ ನ್ಯಾಯಾಧೀಶರು ಇಲ್ಲದ ಕಾರಣ ಅತ್ಯಂತ ಹಿಂದುಳಿದ ತಾಲ್ಲೂಕಿನ ಕಕ್ಷಿದಾರರಿಗೆ ತೀವ್ರ ಸಮಸ್ಯೆಯಾಗಿದೆ.ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ನಿಯೋಜಿತ ದಾವಣಗೆರೆ, ಹರಪನಹಳ್ಳಿ ನ್ಯಾಯಾಲಯಗಳಿಗೆ ತೆರಳಬೇಕಾದ ಅನಿವಾರ್ಯತೆಯಿಂದ ಬಡ ಕಕ್ಷಿದಾರರು ಮತ್ತು ವಕೀಲರಿಗೆ ಅನಗತ್ಯ ಹೊರೆಯಾಗುತ್ತಿದೆ. ಕೂಡಲೇ ಕಾಯಂ ನ್ಯಾಯಾಧೀಶರನ್ನು ನೇಮಿಸಬೇಕು’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವೈ. ಹನುಮಂತಪ್ಪ ಒತ್ತಾಯಿಸಿದ್ದಾರೆ.

ಕಾಯಂ ನ್ಯಾಯಾಧೀಶರಿಲ್ಲದೆ ತಾಲ್ಲೂಕಿನ ಕಕ್ಷಿದಾರರು ಮತ್ತು ವಕೀಲರಿಗೆ ಅನನುಕೂಲವಾಗಿದೆ.  ನ್ಯಾಯಾಲಯದ ಕಲಾಪಗಳು ಸುಸೂತ್ರವಾಗಿ ನಡೆಯದ ಕಾರಣ ಸಕಾಲದಲ್ಲಿ ಪ್ರಕರಣಗಳು ಇತ್ಯರ್ಥವಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಸಾವಿರಕ್ಕೂ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಇಥ್ಯರ್ಥಕ್ಕೆ ಬಾಕಿ ಉಳಿದಿವೆ. ವರ್ಷದ ಹಿಂದೆ ನ್ಯಾಯಾಧೀಶರು ನಾಲ್ಕು ತಿಂಗಳು ತರಬೇತಿಗೆ ತೆರಳಿದ್ದರು. ನಂತರ ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಅಂದಿನಿಂದ ಇದುವರೆಗೆ ನ್ಯಾಯಾಧೀಶರ ನೇಮಕವಾಗಿಲ್ಲ.

ಪ್ರಸ್ತುತ ವಾರದಲ್ಲಿ ಕೇವಲ ಎರಡು ದಿನಗಳು ಮಾತ್ರ ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದು, ಉಳಿದ ದಿನಗಳಲ್ಲಿ ದಾವಣಗೆರೆಯ ನ್ಯಾಯಾಲಯಕ್ಕೆ ನಿಯೋಜನೆ ಮಾಡಲಾಗಿದೆ. ಇದರಿಂದ ಬಡ ಕಕ್ಷಿದಾರರಿಗೆ ತೀವ್ರ ಸಮಸ್ಯೆಯಾಗಿದೆ. ಪಟ್ಟಣದಿಂದ 50 ಕಿ.ಮೀ. ದೂರದ ನ್ಯಾಯಾಲಯಕ್ಕೆ ಹಾಜರಾಗಲು ಹೆಚ್ಚುವರಿ ಸಮಯ ಹಾಗೂ ನೂರಾರು ರೂ ಖರ್ಚು ಭರಿಸಬೇಕಾದ ಅನಿವಾರ್ಯತೆ ಇದೆ.

ಆರು ತಿಂಗಳ ಹಿಂದೆ ಹರಪನಹಳ್ಳಿ ನ್ಯಾಯಾಲಯಕ್ಕೆ ನಿಯೋಜನೆ ಮಾಡಲಾಗಿತ್ತು. ಪಟ್ಟಣದಿಂದ ಸುಮಾರು 80 ಕಿ.ಮೀ. ದೂರದ ಹರಪನಹಳ್ಳಿ ನ್ಯಾಯಾಲಯಕ್ಕೆ ಹಾಜರಾಗಲು ಕಕ್ಷಿದಾರರು ಮತ್ತು ವಕೀಲರಿಗೆ ತ್ರಾಸದಾಯಕವಾಗಿ ಪರಿಣಮಿಸಿತ್ತು. ಈಗ 50 ಕಿ.ಮೀ. ದೂರದ ದಾವಣಗೆರೆಗೆ ತೆರಳಬೇಕಿದೆ.

ಸಕಾಲದಲ್ಲಿ  ನ್ಯಾಯವಿತರಣೆ ಆಗಬೇಕು ಎಂಬ ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇತ್ತೀಚೆಗೆ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಬಡವರ ಮನೆಬಾಗಿಲಿಗೆ  ಕಾನೂನು ಸೇವೆ ತಲುಪಬೇಕು ಎಂಬ ಧೋರಣೆಯಿಂದ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಪ್ರಕರಣಗಳ ಶೀಘ್ರ ವಿಲೇವಾರಿ ಸಮಸ್ಯೆ ಎದುರಾಗಿರುವುದು ವಿಪರ್ಯಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT