ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪ ಕಾಣದ ಅರಣ್ಯ ಇಲಾಖೆ ಕಟ್ಟಡ

Last Updated 8 ಜನವರಿ 2011, 10:05 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅರಣ್ಯ ಇಲಾಖೆ ವ್ಯಾಪ್ತಿಯ ಮೂರು ಗಣಿ ಕಂಪೆನಿಗಳಿಂದ  ಸರ್ಕಾರಕ್ಕೆ ಬರುವ ವಾರ್ಷಿಕ ಆದಾಯ ` 25 ಕೋಟಿ! ಆದರೆ, ಇಲ್ಲಿನ ಅರಣ್ಯ ಇಲಾಖೆ ಕಟ್ಟಡ, ವಸತಿಗೃಹಗಳು ಮಾತ್ರ ಸಾಕ್ಷಾತ್ ಭೂತ ಬಂಗಲೆ. ಪಟ್ಟಣದ ಮುಖ್ಯ ವೃತ್ತಕ್ಕೆ ಅಂಟಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ-13ಕ್ಕೆ ಹೊಂದಿಕೊಂಡಿರುವ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಆವರಣಕ್ಕೆ ಹೋದರೆ, ಯಾವುದೋ ಎಸ್ಟೇಟಿನ ಪಾಳುಬಿದ್ದ ಪ್ರಾಚೀನ ಬಂಗಲೆಯ ನೆನಪಾಗುತ್ತದೆ. ಬಿರುಕುಬಿಟ್ಟ ಗೋಡೆಗಳು, ಮುರಿದ ತೊಲೆಗಳು, ಹೊಡೆದ ಹೆಂಚುಗಳು ಇರುವ ಕಚೇರಿ ಮತ್ತು ವಸತಿಗೃಹದ ಒಳಗೆ ಕಾಲಿಡಲೂ ಭಯವಾಗುತ್ತದೆ.

1914ರಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಈ ಪ್ರಾಚೀನ ಕಚೇರಿ ಕಟ್ಟಡಕ್ಕೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ಕಿಟಕಿ, ಬಾಗಿಲು, ಹೆಂಚು, ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆನೀರು ಒಳಗೆ ಸುರಿಯುತ್ತದೆ. ಇದೇ ಚಿಕ್ಕ ಕಟ್ಟಡದಲ್ಲೇ ಇನ್ನೂ ಅರಣ್ಯ ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿತ್ತಿವೆ. ಕೊಠಡಿಗಳು ಇಕ್ಕಟ್ಟಾಗಿರುವುದರಿಂದ ಪೀಠೋಪಕರಣ, ಅಲ್ಮೆರಾ ಇಡಲೂ ಜಾಗವಿಲ್ಲ.ಇದರಲ್ಲೇ ಕಂಪ್ಯೂಟರ್ ಕೂಡ ಇಟ್ಟಿದ್ದು, ಸದಾ ದೂಳು, ಸುರಿಯುತ್ತಿರುತ್ತದೆ.

ಶತಮಾನ ಕಂಡ ಕಟ್ಟಡ ಯಾವಾಗ ಮೈಮೇಲೆ ಬೀಳುತ್ತದೋ ಎಂಬ ಆತಂಕದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಯದು. ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು ನಿಂತುಕೊಂಡೇ ಇರಬೇಕು. ಮುಖ್ಯವಾಗಿ ಬಾಗಿಲು, ಕಿಟಕಿ ಸಡಿಲಗೊಂಡಿದ್ದು, ಕಳ್ಳಕಾಕರು ಸುಲಭವಾಗಿ ಒಳ ಪ್ರವೇಶ ಮಾಡುವ ಸಂಭವವೂ ಇದೆ. ಇದರಿಂದ ಇಲಾಖೆಯ ಮಹತ್ವದ ದಾಖಲೆಗಳ ರಕ್ಷಣೆಯೂ ಒಂದು ದೊಡ್ಡ ಸಾವಾಲಾಗಿದೆ.

ಮುರಿದ ಮನೆಯಲ್ಲೇ ವಾಸ: ಇಲಾಖೆಯಲ್ಲಿ ಇಬ್ಬರು ವಲಯ ಮತ್ತು ಸಾಮಾಜಿಕ ಅರಣ್ಯಾಧಿಕಾರಿಗಳು, 6 ವನಪಾಲಕರು, 10 ಅರಣ್ಯ ರಕ್ಷಕರು, 15 ಅರಣ್ಯ ವೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಿಬ್ಬಂದಿ ಇಲ್ಲಿನ ಮುರುಕಲು ಮನೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಮೇಲ್ಚಾವಣೆ ಶಿಥಿಲಗೊಂಡಿದ್ದು, ಮೇಲೆ ಬೀಳುವ ಆತಂಕದಲ್ಲೇ ಇವರು ಜೀವನ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ನೀರು ಸೋರುವುದರಿಂದ ಇವರ ಬದುಕು ಇನ್ನೂ ದುಸ್ತರ. ಒಟ್ಟು 6 ವಸತಿಗೃಹಗಳು ಇಲ್ಲಿದ್ದು, ಒಂದೂ ವಾಸಕ್ಕೆ ಯೋಗ್ಯವಾಗಿಲ್ಲ.

ಕಚೇರಿಯ ಆವರಣದ ಪಕ್ಕದಲ್ಲಿರುವ ಹೋಟೆಲ್, ಖಾಸಗಿ ವಸತಿಗೃಹಗಳಿಂದ ಅನುಪಯುಕ್ತ ನೀರು ಹರಿದು ಬರುತ್ತದೆ. ಇದರಿಂದ ಕಚೇರಿಗೆ ಕಾಲಿಟ್ಟ ತಕ್ಷಣ ದುರ್ವಾಸನೆ ಮೂಗಿಗೆ ರಾಚುತ್ತದೆ.ಕಚೇರಿ ಎದುರಿಗೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ವಾಹನಗಳ ಕರ್ಕಶ ಶಬ್ದದಿಂದ ಸಿಬ್ಬಂದಿಗೂ ಸದಾ ಕಿರಿಕಿರಿ. ಕಾಂಪೌಂಡ್ ಕೂಡ ಕುಸಿದು ಬಿದ್ದಿದ್ದು, ಇಲ್ಲಿ ಯಾವುದೇ ಭದ್ರತೆ ಇಲ್ಲ.

ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುವುದರಿಂದ ಆಗಾಗ ಅಕ್ರಮ ಅದಿರು ಸಾಗಾಟದ ಲಾರಿ, ಜೆಸಿಬಿ, ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಈ ವಾಹನಗಳನ್ನು ನಿಲ್ಲಿಸಲೂ ಇಲ್ಲಿ ಸಾಕಷ್ಟು ಜಾಗವಿಲ್ಲ. ವಶಪಡಿಸಿಕೊಂಡ ಅದಿರನ್ನು ಸಂಗ್ರಹಿಸಿಡಲು ಇಲ್ಲಿ ಜಾಗವೂ ಇಲ್ಲ, ರಕ್ಷಣೆಯೂ ಇಲ್ಲ. ಆದ್ದರಿಂದ ಇಲಾಖೆಯನ್ನು ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಸಾರ್ವಜನಿಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT