ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪ ಕಾಣದ ಬಸ್ ‘ತಂಗುದಾಣ’

Last Updated 16 ಡಿಸೆಂಬರ್ 2013, 5:55 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧ ಪ್ರಮುಖ ರಸ್ತೆ, ಬಡಾವಣೆ­ಗಳಲ್ಲಿ ಸಂಸದ ಎಸ್‌.ಫಕ್ಕೀರಪ್ಪ ಅವರ ಅನುದಾನದಲ್ಲಿ ಹಾಗೂ ಇತರ ಸಂಘ ಸಂಸ್ಥೆಗಳು ನಿರ್ಮಾಣ ಮಾಡಿರುವ  ಬಸ್ ತಂಗುದಾಣಗಳು ಸಮರ್ಪಕ ನಿರ್ವಣೆಯಿಲ್ಲದೆ ಕಸದ ತೊಟ್ಟಿಗಳಂತಾಗಿವೆ. ಇನ್ನು ಪ್ರಯಾಣಿಕರು ತಂಗುದಾಣಗಳಿಗೆ ಹೋಗಲು ಮನಸ್ಸು ಮಾಡುತ್ತಿಲ್ಲ.

ಈವರೆಗೆ ನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಅಷ್ಟು ಸಮರ್ಪಕವಾಗಿರಲಿಲ್ಲ. ಕೆವಲ 4ರಿಂದ 5 ಬಸ್ ಸಂಚರಿಸುತ್ತಿದ್ದವು. ಆದರೆ, ಈಗ ನೂತನ 20 ಬಸ್ ಹಾಗೂ ಹಳೆ 10 ಬಸ್‌ಗಳು ಪ್ರಯಾಣಿಕರ ಅನುಕೂಲಕ್ಕೆ ಸಂಚಾರ ಆರಂಭಿಸಿವೆ. ಹಿಂದೆಂದಿಗಿಂತಲೂ ಈಗ ಸಿಟಿಬಸ್ ನಿಲುಗಡೆ ಸ್ಥಳದಲ್ಲಿ, ಸಾರ್ವಜನಿಕ ಪ್ರಯಾಣಿಕರ ಅನುಕೂಲ ಇರುವ ಸ್ಥಳಗಳಲ್ಲಿ ಬಸ್ ತಂಗುದಾಣ ಅಗತ್ಯ.

ಆದರೆ ಬಸ್‌ ಇವೆ. ತಂಗಲು ತಂಗುದಾಣಗಳು ಸುಸ್ಥಿಯಲ್ಲಿ ಇಲ್ಲ. ಈಗ ಕೆಲ ಕಡೆ ಇರುವ ಬಸ್ ತಂಗುದಾಣಗಳು ಕೆಲ ಕಡೆ ಸಾರ್ವಜನಿಕರಿಗೆ ಉಪಯುಕ್ತವಾಗಿದ್ದರೆ ಮತ್ತೊಂದು ಕಡೆ ಸಾರ್ವಜನಿಕರಿಗೆ ಉಪಯುಕ್ತವಾಗುತ್ತಿಲ್ಲ. ಉದಾಹರಣೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಸಂಸದ ಎಸ್. ಫಕ್ಕೀರಪ್ಪ ಅನುದಾನದಲ್ಲಿ ನಿರ್ಮಿಸಿದ ಬಸ್‌ ತಂಗುದಾಣ ಇದೆ. ಪ್ರಯಾಣಿಕರಿಗೆ ಉಪಯುಕ್ತವಾಗುತ್ತಿಲ್ಲ .

ಗಂಜ್ ರಸ್ತೆಯ ಮಹಾಬಳೇಶ್ವರ ದೇವಸ್ಥಾನ ಹತ್ತಿರ ಲಯನ್ಸ್ ಕ್ಲಬ್‌ ರಾಯಚೂರು ಸಂಸ್ಥೆ ಹಲವು ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಾಣ ಮಾಡಿದ್ದು, ಈಗ ಅದು ಶಿಥಿಲಾವಸ್ಥೆಯಲ್ಲಿದೆ. ಯರಮಸ್, ಎಂಜಿನಿಯರಿಂಗ್ ಕಾಲೇಜು, ಚಂದ್ರಬಂಡಾ, ಬುರ್ದಿಪಾಡ ಸುತ್ತಮುತ್ತ ಹೋಗುವ ಗ್ರಾಮಸ್ಥರಿಗೆ ಇದೇ ಬಸ್ ತಂಗುದಾಣ ಆಸರೆ. ಹೆಸರಿಗೆ ಬಸ್ ತಂಗುದಾಣ ಆಗಿದ್ದರೂ ಬಸ್ ನಿಲುಗಡೆ ಅಷ್ಟಕ್ಕಷ್ಟೇ! ಇಲ್ಲಿಂದ ಟೆಂಪೊ, ಜೀಪು, ಟಂಟಂಗಳಲ್ಲಿ ಜನ ಪ್ರಯಾಣಿಸುತ್ತಾರೆ.  ಹೀಗಾಗಿ ನಿತ್ಯ ನೂರಾರು ಜನರಿಗೆ ಈ ಬಸ್‌ ತಂಗುದಾಣವೇ ಆಸರೆ. ಆದರೆ, ಶಿಥಿಲಾವಸ್ಥೆಯಲ್ಲಿರುವುದರಿಂದ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಗರಸಭೆ ಈ ಬಸ್ ತಂಗುದಾಣ ದುರಸ್ತಿ ಪಡಿಸಿ ಸದಾ ಸ್ವಚ್ಛಗೊಳಿಸಬೇಕು. ಸ್ವಚ್ಛತೆಯಿಲ್ಲದೆ ಇರುವ ಕಾರಣ ಜನತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಬಸ್‌, ಜೀಪು, ಟೆಂಪೊಕ್ಕೆ ಕಾದು ಹೋಗಬೇಕಾಗುತ್ತದೆ. ಬಿಸಿಲು ಕಾಲದಲ್ಲಿ ಇದು ಇನ್ನೂ ಕಷ್ಟ ಎಂದು ಜನ ಸಮಸ್ಯೆ ವಿವರಿಸಿದರು.

ಹೈದರಾಬಾದ್ ರಸ್ತೆಯ ಕನಕದಾಸ ವೃತ್ತದ ಹತ್ತಿರ ಈಚೆಗೆ ಸಂಸದ ಎಸ್. ಫಕ್ಕೀರಪ್ಪ ಅವರ ಸಂಸದರ ನಿಧಿಯಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ. ಮೆಟಲ್ ಗ್ರಿಲ್, ಪಾರದರ್ಶಕ ಬೋರ್ಡ್, ಕಬ್ಬಿಣದ ಆಸನಗಳನ್ನು ಅಳವಡಿಸಲಾಗಿದೆ. ಆದರೆ, ಈ ತಂಗುದಾಣದ ಕಾಂಕ್ರೀಟ್ ಮೆಟ್ಟಿಲುಗಳು ಒಡೆದು ಹಾಳು ಮಾಡಲಾಗಿದೆ. ದುರಸ್ತಿಯಾಗದೇ ಹಾಗೆಯೇ ಇದ್ದು , ದಿನದಿಂದ ದಿನಕ್ಕೆ ಒಡೆದು ಹೋಗುತ್ತಿದೆ. ಅಲ್ಲದೇ ನಗರಕ್ಕೆ ಬಂದು ಪುನಃ ಹಳ್ಳಿಗೆ ಹೋಗುವ ವೃದ್ಧರು, ಅಶಕ್ತರು, ಮಹಿಳೆಯರು, ಮಕ್ಕಳು ಈ ಬಸ್ ತಂಗುದಾಣದಲ್ಲಿ  ಕುಳಿತಿರುತ್ತಾರೆ. ಬಸ್‌ ತಂಗುದಾಣ ತಿಪ್ಪೆಯಂತಿದ್ದು, ಅನಾರೋಗ್ಯ ವಾತಾವರಣ ಇದೆ. ರಸ್ತೆ ಸ್ವಚ್ಛಗೊಳಿಸುವ ನಗರಸಭೆ ಸಿಬ್ಬಂದಿ ಒಂದಿಷ್ಟು ಈ ಬಸ್ ತಂಗುದಾಣ ಸ್ವಚ್ಛಗೊಳಿಸಿದರೆ ಜನತೆಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಇನ್ನು ಜನಾರೋಗ್ಯ ಸಂರಕ್ಷಣೆಯ ಸ್ಥಳವಾದ ರಾಯಚೂರು ಜಿಲ್ಲಾ ಆಸ್ಪತ್ರೆ ಎದುರು ಇರುವ ಬಸ್ ತಂಗುದಾಣ ಕಸದ ತೊಟ್ಟಿ, ತಿಪ್ಪೆ ಎಂಬುದನ್ನು ಎಂದೋ ಘೋಷಿಸಿಕೊಂಡಂತಿದೆ. ಅಸ್ವಚ್ಛತೆ, ದುರ್ನಾತ ವಾತಾವರಣ ಇಲ್ಲಿದೆ. ಅಶಕ್ತರು, ಅಲೆಮಾರಿ, ಅಸಹಾಯಕರು, ಮಾನಸಿಕ ಅಸ್ವಸ್ಥರು ಇಲ್ಲಿ ಇದ್ದಿರುವುದು ಕಂಡು ಬರುತ್ತದೆ.  ಇದರ ದುರಸ್ತಿಗೂ ಗಮನ ಹರಿಸಿಲ್ಲ.

ಜಿಲ್ಲಾ ಆಸ್ಪತ್ರೆಗೆ ಬರುವ ಜನ ಆಸ್ಪತ್ರೆ ಮುಂಭಾಗದಲ್ಲಿಯೇ ನಿಂತು ಬಸ್, ಟೆಂಪೋ, ಜೀಪು, ಟಾಂ ಟಾಂ ಹತ್ತಿ ಹೋಗುವುದು ನಿತ್ಯ ಕಾಣುವ ದೃಶ್ಯವಾಗಿದೆ.

ನಗರಸಭೆ ಇಂಥ ಬಸ್ ತಂಗುದಾಣದ ದುರಸ್ತಿಪಡಿಸಿ ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಸ್ವಚ್ಛವಾಗಿಟ್ಟರೆ ಜನತೆಗೆ ಅನುಕೂಲ. ಆ ಕೆಲಸ ಎಂದು ಮಾಡುತ್ತದೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT