ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿದೆ ಬದನವಾಳು ಖಾದಿ ಕೇಂದ್ರ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗಾಂಧೀಜಿ ಕರ್ನಾಟಕದಲ್ಲಿ ಹಲವಾರು ಸಲ ಪ್ರವಾಸ ಮಾಡಿದ್ದರು. ಅವರ ಪ್ರವಾಸದ ನೆನಪುಗಳನ್ನು ಉಳಿಸಿಕೊಂಡಿರುವ ಹಲವು ಸ್ಥಳಗಳಿವೆ. ಅವುಗಳಲ್ಲಿ ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ಕೇಂದ್ರವೂ ಒಂದು. ಗ್ರಾಮ ಸ್ವರಾಜ್ಯ ಹಾಗೂ ವಿಧಾಯಕ ಕಾರ್ಯಕ್ರಮಗಳ ಮೂಲಕ ಜನರನ್ನು ಸ್ವಾತಂತ್ರ್ಯ ಚಳವಳಿಗೆ ಸಜ್ಜುಗೊಳಿಸುವುದು ಅವರ ಪ್ರವಾಸದ ಆಶಯವಾಗಿತ್ತು. ಅದಕ್ಕೆ ಪೂರಕವಾಗಿ ಗ್ರಾಮೀಣ ಜನರಿಗೆ ಸ್ವದೇಶಿ ವಸ್ತುಗಳ ತಯಾರಿಕೆ ಮತ್ತು ಬಳಕೆಯನ್ನು ಕಲಿಸಿಕೊಡುವುದು ಅವರ ಇನ್ನೊಂದು ಉದ್ದೇಶ. ಖಾದಿ ಮತ್ತು ಗ್ರಾಮೋದ್ಯೋಗಳ ಮೂಲಕ ಗ್ರಾಮಗಳ ಉದ್ದಾರ ಗಾಂಧೀಜಿ ಅವರ ಕನಸಾಗಿತ್ತು.

1927ರಲ್ಲಿ ಗಾಂಧೀಜಿ ಮೈಸೂರು ಸಂಸ್ಥಾನಕ್ಕೆ ಆಗಮಿಸಿದ್ದರು. ಆಗ ಅವರು ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೂ ಭೇಟಿ ನೀಡಿದ್ದರು. ಆಗ ಬದನವಾಳು ಹಾಗೂ ಸುತ್ತಲಿನ ಗ್ರಾಮಗಳು ನೂಲುವ, ನೇಯುವ ಕಾಯಕಗಳಿಗೆ ತೆರೆದುಕೊಂಡಿದ್ದವು. ಗಾಂಧೀಜಿ ನೂಲುವ ವೃತ್ತಿಯ ಪುನರುಜ್ಜೀವನಕ್ಕೆ ಯತ್ನಿಸಿದರು.

ಅವರ ಭೇಟಿ ಬಳಿಕ ಬದನವಾಳು ಸುತ್ತಲಿನ ಅರವತ್ತು ಊರುಗಳಲ್ಲಿ `ಚರಕ ಸಂಸ್ಕೃತಿ~ ನೆಲೆಯೂರಿತು. ಖಾದಿ ಬಟ್ಟೆ ತಯಾರಿಸುವ ಕೇಂದ್ರ ಆರಂಭವಾಯಿತು. 1936ರಲ್ಲಿ ಗಾಂಧೀಜಿ ಮತ್ತೊಮ್ಮೆ ಬದನವಾಳಕ್ಕೆ ಭೇಟಿ ನೀಡಿ ಚರಕ ಸಂಘ ಸ್ಥಾಪಿಸಿ ಖಾದಿ ಕೇಂದ್ರಕ್ಕೆ ಶಾಶ್ವತ ನೆಲೆ ಕಲ್ಪಿಸಲು ನೆರವಾದರು.

ಗಾಂಧೀಜಿಯವರು ಬರುವುದಕ್ಕೂ ಮೊದಲೇ ಇಲ್ಲಿ ಕೈ ನೂಲುವ ಉದ್ಯಮ ಆರಂಭವಾಗಿತ್ತು. ಬದನವಾಳು ಸುತ್ತಲಿನ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಅದೇ ಮೂಲವಾಗಿತ್ತು. ವಿದೇಶಿ ಬಟ್ಟೆಗಳು ದೇಶದೊಳಕ್ಕೆ ಬಂದ ನಂತರ ಕೈಯಿಂದ ನೂಲು ತೆಗೆದು ಬಟ್ಟೆ ತಯಾರಿಸುವ ದೇಶಿ ಉದ್ಯಮ ಮೂಲೆಗುಂಪಾಯಿತು. ನೇಕಾರರು ಗಿರಣಿಗಳತ್ತ ವಾಲಿದರು. ಬದನವಾಳು ಗ್ರಾಮಸ್ಥರ ಆದಾಯ ಮೂಲವಾಗಿದ್ದ ನೂಲುವ ವೃತ್ತಿಗೆ ಗ್ರಹಣ ಹಿಡಿಯಿತು. ರಾಟೆಗಳು ಅಟ್ಟ ಸೇರಿದವು. 

1927ರಲ್ಲಿ ಗಾಂಧೀಜಿ ಬಂದು ಹೋದ ನಂತರ ಅಂದಿನ ಮೈಸೂರು ಸರ್ಕಾರ ಬದನವಾಳು ಗ್ರಾಮದತ್ತ ಗಮನ ಹರಿಸಿತು. ಅದೇ ವರ್ಷದ ನವೆಂಬರ್ 1ರಂದು ಇಲ್ಲಿಗೆ ಬಂದ ಅಖಿಲ ಭಾರತ ಖಾದಿ ಚರಕ ಸಂಘದ ಕಾರ್ಯದರ್ಶಿಯವರು ಮತ್ತೆ ನೂಲುವುದನ್ನು ಆರಂಭಿಸುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಿದರು. ಹತ್ತಿ ಕೊಟ್ಟು, ನೂಲು ಖರೀದಿ ಮಾಡುವ ಭರವಸೆ ಕೊಟ್ಟರೆ ಮತ್ತೆ ಚರಕ ತಿರುಗಿಸುತ್ತೇವೆ ಎಂಬುದು ನೂಲುವವರ ಆಗ್ರಹವಾಗಿತ್ತು.

ಚರಕ ಸಂಘದ ಕಾರ್ಯದರ್ಶಿಯವರು ನೂಲುವ ತರಬೇತಿ ನೀಡಲು `ಖಾದಿ ಕೇಂದ್ರ~ ಸ್ಥಾಪಿಸಿದರು. ಕೇಂದ್ರ ಆರಂಭವಾದ ಮೂರು ತಿಂಗಳಲ್ಲಿ 740 ಪೌಂಡು ನೂಲು ಸಿದ್ಧವಾಯಿತು. ರಾಟೆಗಳ ಸಂಖ್ಯೆ ಸಾವಿರಕ್ಕೆ ಏರಿತು. ಆಗಸ್ಟ್ 1928ರ ವೇಳೆಗೆ ಹತ್ತು ತಿಂಗಳಲ್ಲಿ 7744 ಪೌಂಡು ನೂಲು ಉತ್ಪಾದನೆಯಾಯಿತು!

ಬದನವಾಳಿನ ಜನರು ನೂತ ನೂಲನ್ನು ಬಳಸಿಕೊಂಡು ಬಟ್ಟೆ ನೇಯುವುದಕ್ಕೂ ಕೇಂದ್ರ ವ್ಯವಸ್ಥೆ ಮಾಡಿತು. ಆರಂಭದಲ್ಲಿ ಟವೆಲ್‌ಗಳನ್ನು ತಯಾರಿಸುತ್ತಿದ್ದರು. ತೆಳು ನೂಲು ಸಿದ್ಧವಾದ ನಂತರ ವಿವಿಧ ಉಡುಪು ತಯಾರಿಕೆಗೆ ಬಟ್ಟೆ ಉತ್ಪಾದನೆ ಆರಂಭವಾಯಿತು. ಒಟ್ಟು ಅರವತ್ತೆರಡು ಕೈ ಮಗ್ಗಗಳು ಕಾರ್ಯ ಪ್ರವೃತವಾದವು. ಆ ವರ್ಷ 3741ರೂ ಬೆಲೆಯ ಖಾದಿ ಉತ್ಪನ್ನಗಳು ತಯಾರಾದವು. 1928ರ ಜೂನ್ ಅಂತ್ಯಕ್ಕೆ 3372 ರೂ ಮೊತ್ತದ ಖಾದಿ ಉತ್ಪನ್ನಗಳು ಮಾರಾಟವಾದವು.

ಮುಂದಿನ ಹತ್ತು ವರ್ಷಗಳಲ್ಲಿ ಚರಕ ಸಂಘ ಬದನವಾಳು ಕೇಂದ್ರವನ್ನು ಬಲಗೊಳಿಸಿತು. ಆರಂಭದಲ್ಲಿ 60 ಮಂದಿ ನೂಲುವವರು, 9 ನೇಕಾರರಿದ್ದರು. 3500 ರೂ ಬಂಡವಾಳವಿತ್ತು. ಮುಂದಿನ ಐದು ವರ್ಷಗಳಲ್ಲಿ 2000 ನೂಲುವವರು, 140 ನೇಕಾರರು ತಯಾರಾದರು. ಬದನವಾಳು ಸುತ್ತಲಿನ 60 ಹಳ್ಳಿಗಳಲ್ಲಿ ಖಾದಿ ಕಂಪು ಪಸರಿಸಿತು. ನೇಯ್ಗೆ ಕೆಲಸಕ್ಕೆ ಅನುಕೂಲವಾಗಲೆಂದು ನಂಜನಗೂಡಿನಲ್ಲಿ ಬಣ್ಣ ಹಾಕುವ ಘಟಕ ಆರಂಭವಾಯಿತು.

`ದುಶ್ಚಟಗಳನ್ನು ತಗ್ಗಿಸಿ ಗಳಿಕೆಯ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿ ಅದನ್ನು ಕಾಯ್ದುಕೊಳ್ಳಿ~ ಎಂದು ಗಾಂಧೀಜಿ ನೀಡಿದ ಕರೆಯನ್ನು ಬದನವಾಳಿನ ನೂಲುವವರು ಮತ್ತು ನೇಕಾರರು ಅಕ್ಷರಶಃ ಪಾಲಿಸಿದರು. ಮೈಸೂರು ಸಂಸ್ಥಾನದ ಸರ್ಕಾರ ನೂಲುವುದಕ್ಕೆ ನೀಡಿದ್ದ ಪ್ರೋತ್ಸಾಹ ಕುರಿತು ಗಾಂಧೀಜಿ ತಮ್ಮ `ಯಂಗ್ ಇಂಡಿಯಾ~ (1928ರ ನವೆಂಬರ್ 20ರ ಸಂಚಿಕೆ) ಪತ್ರಿಕೆಯಲ್ಲಿ ವಿಸ್ತೃತ ಲೇಖನ ಬರೆದು ಪ್ರಕಟಿಸಿದ್ದರು. 
 
`ಮೈಸೂರು ಸರ್ಕಾರ ಕಡು ಬಡಜನರನ್ನು ಆರ್ಥಿಕವಾಗಿ ಮೇಲೆತ್ತಲು ತೋರುತ್ತಿರುವ ಉತ್ಸಾಹಕ್ಕೆ ಅಭಿನಂದಿಸುತ್ತಾ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಮೈಸೂರಿನ ಶ್ರಿಮಂತರು ಮತ್ತು ಅಧಿಕಾರಿಗಳು ಖಾದಿ ಬಟ್ಟೆ ಬಳಸದಿದ್ದರೆ, ಮೈಸೂರು ನಗರದ ಮನೆಗಳಲ್ಲಿ ಖಾದಿ ಶಾಶ್ವತವಾಗಿ ನೆಲೆಸಲಾರದು. ತಾವು ಬಯಸಿದಷ್ಟು ಖಾದಿ ಪಡೆಯಲು ಸಾಧ್ಯ ಎಂದು ಅವರು ಈಗ ಬಲ್ಲರು. ಆದರೆ ಉತ್ತಮ ವರ್ಗದವರು ಎಂದು ಹೇಳಿಕೊಳ್ಳುವವರು ನುಡಿದಂತೆ ನಡೆಯುವವರಲ್ಲವೆಂದು ಸರಳ ಹಳ್ಳಿಗರು ಬಲ್ಲರು. ಅವರನ್ನು ಗೊಂದಲಕ್ಕೆ ಗುರಿಪಡಿಸಬೇಡಿ~ ಎಂದು ಗಾಂಧೀಜಿ ಹೇಳಿದ್ದರು.

ಎಲ್ಲಿ ಆ ಮಗ್ಗಗಳು?... ಗಾಂಧೀಜಿಯವರಿಂದ ಖಾದಿ ದೀಕ್ಷೆ ಪಡೆದ ಬದನವಾಳಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿ ಜಾತಿ ಸಂಘರ್ಷ ನಡೆದಿದೆ. ಈಗಿನ ಖಾದಿ ತರಬೇತಿ ಕೇಂದ್ರಕ್ಕೂ ಹಿಂದಿನ ಕೇಂದ್ರಕ್ಕೂ ಭಾರೀ ವ್ಯತ್ಯಾಸವಿದೆ. ಏಳು ಎಕರೆ ಪ್ರದೇಶದಲ್ಲಿರುವ ಕೇಂದ್ರದ ಬಹುತೇಕ ಕಟ್ಟಡಗಳು ಈಗ ಸ್ಮಾರಕಗಳಂತಾಗಿವೆ.

ಈಗಲೂ ನಲವತ್ತು ಮಹಿಳೆಯರು ನೂಲು ತೆಗೆಯುತ್ತಾರೆ. ಅರವತ್ತೆರಡು ಮಗ್ಗಗಳಲ್ಲಿ ಎಂಟು ಮಾತ್ರ ಉಳಿದಿವೆ. ಮೂರು ಮಗ್ಗಗಳಲ್ಲಿ ಖಾದಿ ಸಿದ್ಧವಾಗುತ್ತಿದೆ. ಉಳಿದ ಐದು ಮಗ್ಗಗಳನ್ನು ಬಳಸುವವರಿಲ್ಲ. ಕೂಲಿ ಕಡಿಮೆ ಎಂಬ ಕಾರಣಕ್ಕೆ ಕಾರ್ಮಿಕರು ಈ ಕೇಂದ್ರದತ್ತ ತಲೆ ಹಾಕುತ್ತಿಲ್ಲ.

ಕೈಮಗ್ಗ ಮಾತ್ರವಲ್ಲದೇ ಹಲವು ಉಪ ಕಸುಬು ಇಲ್ಲಿ ನೆಲೆಗೊಂಡಿದ್ದವು. ಗಾಣದಿಂದ ಎಣ್ಣೆ ತೆಗೆಯುವುದು. ಬೆಂಕಿ ಪೊಟ್ಟಣ ತಯಾರಿಕೆ, ಬಡಗಿ ಕೆಲಸ, ರೇಷ್ಮೆ ಹುಳು ಸಾಕಣೆ ಇತ್ಯಾದಿಗಳು ಇಲ್ಲಿ ನಡೆಯುತ್ತಿದ್ದವು. ಈಗ ಇವೆಲ್ಲವೂ ಸ್ಥಗಿತಗೊಂಡಿವೆ. ಎಣ್ಣೆ ಗಾಣ ಮೂಲೆ ಸೇರಿದೆ. ಮರಗೆಲಸದ ಸಾಮಗ್ರಿಗಳು ತುಕ್ಕು ಹಿಡಿದಿವೆ, ಬೆಂಕಿ ಪೊಟ್ಟಣ ಘಟಕದ ಕಟ್ಟಡ ಶಿಥಿಲವಾಗಿದೆ. ಇಲ್ಲಿನ ಕಟ್ಟಡಗಳಿಗೆ ರಕ್ಷಣೆ ಇಲ್ಲ. ಅಲ್ಪಸ್ವಲ್ಪ ದುರಸ್ತಿ ಕಂಡಿರುವ ಒಂದೆರಡು ಕಟ್ಟಡಗಳಲ್ಲಿ  ನೂಲುವ, ನೇಯುವ ಕೆಲಸ ನಡೆಯುತ್ತಿದೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 3ಗಂಟೆ ವರೆಗೆ ನೇಯ್ಗೆ ಕೆಲಸ ಮಾಡಿದರೂ ರೂ.100 ಕೂಲಿ ಸಿಗುವುದಿಲ್ಲ. ಒಂದು ಮೀಟರ್ ಖಾದಿಗೆ ನೇಯ್ಗೆ ಕೇಂದ್ರ ರೂ.12 ನೀಡುತ್ತಿದೆ. ದಿನವಿಡೀ ದುಡಿದರೂ 5 ಮೀಟರ್ ನೇಯಬಹುದು. ನೂಲುವವರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದಿನವೊಂದಕ್ಕೆ 8-10 ಲಡಿ ನೂಲು ಸಿದ್ಧ ಮಾಡಿದರೆ 30- 40 ರೂ ಸಿಗುತ್ತದೆ.

`10 ಪೈಸೆ ಕೂಲಿ ಇದ್ದಾಗಿಂದ ಕೆಲಸ ಮಾಡುತ್ತಿದ್ದೇನೆ. ಒಮ್ಮೆಯೂ ಕೈತುಂಬ ಹಣ ತೆಗೆದುಕೊಂಡು ಮನೆಗೆ ಹೋಗಿಲ್ಲ. ಸರ್ಕಾರ ನಮಗೆ ಮನೆ ಕಟ್ಟಿಸಿ ಕೊಟ್ಟಿಲ್ಲ. ನಿವೇಶನ ಇದ್ದರೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಜಾಗ ಎಲ್ಲಿಂದ ತರುವುದು? ಕೂಲಿಯನ್ನಾದರೂ ಹೆಚ್ಚಿಸಿದರೆ ಜೀವನ ನಿರ್ವಹಣೆಗೆ ಅನೂಕೂಲ~ ಎನ್ನುತ್ತಾರೆ 40 ವರ್ಷಗಳಿಂದ ಇಲ್ಲಿ ನೂಲುತ್ತಿರುವ ಮಹದೇವಮ್ಮ. ಇಲ್ಲಿನ ಪುಟ್ಟಮ್ಮ, ತಾಯಮ್ಮ, ಶಾಂತಾ ಎಲ್ಲರದೂ ಇದೇ ಮಾತು.

ಕಾಯಕಲ್ಪದ ನಿರೀಕ್ಷೆ: 1986ರಿಂದ ಬದನವಾಳು ಖಾದಿ ಕೇಂದ್ರವು ಹೊಳೆನರಸೀಪುರದ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ನಿಯಂತ್ರಣಕ್ಕೆ ಒಳಪಟ್ಟಿದೆ. ಈಗಲೂ ಖಾದಿ ಸಿದ್ಧವಾಗುತ್ತದೆ. ಮೈಸೂರಿನ ಖಾದಿ ವಸ್ತ್ರಾಲಯದ ಮೂಲಕ ಬದನವಾಳು ಖಾದಿ ಉಡುಪುಗಳು ಗ್ರಾಹಕರಿಗೆ ತಲುಪುತ್ತಿವೆ.

ಹೊಳೆನರಸೀಪುರ ಕೇಂದ್ರದಿಂದ ಒಬ್ಬ ಅಧಿಕಾರಿಯನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಗ್ರಾಮಸ್ಥರು ಆಸಕ್ತಿಯಿಂದ ಬಂದರೆ ಈಗಲೂ ಇಲ್ಲಿ ನೂಲುವ, ನೇಯುವ ಕೆಲಸ ಲಭ್ಯ.

ಇತ್ತೀಚೆಗೆ ಚಾಮರಾಜನಗರ ಕ್ಷೇತ್ರದ ಸಂಸದ ಆರ್. ಧ್ರುವನಾರಾಯಣ ಹಾಗೂ ನಂಜನಗೂಡು ಶಾಸಕ ವಿ. ಶ್ರಿನಿವಾಸ್ ಪ್ರಸಾದ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿ ಹೋಗಿದ್ದಾರೆ.
ಬದನವಾಳು ಖಾದಿ ಕೇಂದ್ರಕ್ಕೆ ಕಾಯಕಲ್ಪ ಸಿಕ್ಕೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT