ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿರುವ ಶಾಲ್ಮಲಾ ಹಾಸ್ಟೆಲ್

Last Updated 4 ಡಿಸೆಂಬರ್ 2012, 6:31 IST
ಅಕ್ಷರ ಗಾತ್ರ

ಧಾರವಾಡ: ಸಮರ್ಪಕ ಕುಡಿಯುವ ನೀರಿಲ್ಲ. ಸ್ನಾನಕ್ಕೆ ಬಿಸಿ ನೀರು ಒದಗಿಸುತ್ತಿದ್ದ ಸೌರಶಕ್ತಿ ಸಾಧನಗಳು ಕೆಲಸ ನಿಲ್ಲಿಸಿ  ವರ್ಷಗಳು ಉರುಳಿವೆ. ಇನ್ನು ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನೋಡುವಂತಿಲ್ಲ. ಅದರತ್ತ ಕಣ್ಣಾಡಿಸಿದರೆ ವಾಕರಿಕೆ ಬರುತ್ತದೆ.... ಇದಾವುದೋ ಕೊಳಚೆಪ್ರದೇಶದ ದೃಶ್ಯವಲ್ಲ. ಬದಲಿಗೆ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಹಾಸ್ಟೆಲ್‌ನ ದೃಶ್ಯಾವಳಿ.

1968ರಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಈ ಹಾಸ್ಟೆಲ್ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಶಾಲ್ಮಲೆ ನದಿ ಹರಿಯುವ ಕಣಿವೆಯ ಪಕ್ಕದಲ್ಲೇ ಈ ಹಾಸ್ಟೆಲ್ ಇದ್ದುದರಿಂದ ಇದನ್ನು ಪ್ರೀತಿಯಿಂದ ಶಾಲ್ಮಲಾ ಎಂದು ಕರೆದಿದ್ದರು.

ನಿಸರ್ಗದ ರಮಣೀಯತೆ, ಪ್ರಶಾಂತ ವಾತಾವರಣ ಹಾಗೂ ಭಾವುಕರಿಗೆ ಅತ್ಯಂತ ಆಕರ್ಷಕ ಸ್ಥಳವಾಗಿದ್ದ ಇದು ತನ್ನ ಮೊದಲಿನ ಚೆಲುವನ್ನು ಕಳೆದುಕೊಂಡು ಭೂತ ಬಂಗಲೆಯಂತಾಗುತ್ತಿದೆ. ಕೆಳ ಅಂತಸ್ತಿನಲ್ಲಿ ಕ್ಯಾಂಟೀನ್‌ಗೆಂದು ಕಟ್ಟಿಸಲಾದ ಬೃಹತ್ ಕೊಠಡಿ ದೂಳು ಹಿಡಿದಿದೆ. ಬಾಗಿಲುಗಳು ಮುರಿದಿವೆ.

ವಿದ್ಯುತ್ ಸಂಪರ್ಕ ಆಗಾಗ ಕೈಕೊಡುತ್ತಲೇ ಇರುವುದರಿಂದ ಇಲ್ಲಿ ಓಡಾಡಲು  ಎಂತಹವರಿಗೂ ಭಯವಾಗುತ್ತದೆ. ಸುಮಾರು 340 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ನ ಬಹುತೇಕ ಕಿಟಕಿಗಳು, ಕಟ್ಟಿಗೆಯ ಕುರ್ಚಿಗಳು, ಮೇಜುಗಳು ಮುರಿದಿವೆ. ಬಾಗಿಲುಗಳೂ ಮುರಿದಿರುವುದರಿಂದ ಅವುಗಳಿಗೆ ಕಾಗದಗಳನ್ನು ತೂಗು ಹಾಕಲಾಗಿದೆ. ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಸರಿಯಾಗಿ ಜೋಡಣೆಯಾಗದ ಪ್ಲಗ್ ಪಾಯಿಂಟ್‌ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಈ ಬಗ್ಗೆ ಇಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೂ ಸಿಟ್ಟಿದೆ. `ಶುದ್ಧೀಕರಿಸಿದ ನೀರನ್ನು ಪಡೆಯಬೇಕು ಎಂದರೆ ಕೆಳಗಿನ ಅಂತಸ್ತಿನಲ್ಲಿರುವ ಫಿಲ್ಟರ್‌ನಿಂದ ಪಡೆಯಬೇಕು. ಮೊದಲ ಹಾಗೂ ಎರಡನೇ ಅಂತಸ್ತಿನಲ್ಲಿರುವ ಫಿಲ್ಟರ್ ಕೆಟ್ಟು ಹೋಗಿ ಎರಡು ತಿಂಗಳಾಯಿತು. ನಾನು ಈ ಹಾಸ್ಟೆಲ್‌ಗೆ ಬಂದು ಆರು ತಿಂಗಳಾಯಿತು. ಆಗಿನಿಂದಲೂ ಸೌರಶಕ್ತಿ ಸಾಧನ ಕೆಲಸ ಮಾಡುತ್ತಿಲ್ಲ. ಇಂತಹ ಚಳಿಯಲ್ಲೂ ಸ್ನಾನಕ್ಕೆ ತಣ್ಣೀರೇ ಗತಿ. ಈ ಬಗ್ಗೆ ಹೇಳಿದರೆ ನಮ್ಮ ಮನವಿಗೆ ಯಾರೂ ಸ್ಪಂದಿಸುವುದಿಲ್ಲ' ಎಂದು ಹಾಸ್ಟೆಲ್‌ನ ಅವ್ಯವಸ್ಥೆಯಿಂದ ನೊಂದಿರುವ ರವಿ, ರಾಜು ಅಸಹಾಯಕತೆ ವ್ಯಕ್ತಪಡಿಸಿದರು.

`ಮೆಸ್ ಇಲ್ಲದ್ದಿರುವುದು ಇಲ್ಲಿನ ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಕಾಡುತ್ತಿದೆ. ವ್ಯಾಸಂಗಕ್ಕಾಗಿ ಹಾಸ್ಟೆಲ್ ಸೇರಿರುವ ನಾವು ಕೊಠಡಿಯಲ್ಲಿಯೇ ಅಡುಗೆ ಮಾಡಿಕೊಳ್ಳುವುದು ಅನಿವಾರ್ಯ. ಹೋಟೆಲ್ ಹಾಗೂ ಖಾನಾವಳಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ರತಿನಿತ್ಯ ಊಟ ಮಾಡುವುದು ಅಸಾಧ್ಯ' ಎನ್ನುತ್ತಾರೆ ಅವರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಲ್ಮಲಾ ಹಾಸ್ಟೆಲ್ ವಾರ್ಡನ್ ಡಾ.ಎಂ.ಜಯರಾಜ, `ಶೌಚಾಲಯ, ಸ್ನಾನದ ಕೊಠಡಿಯಲ್ಲಿನ ಸ್ವಚ್ಛತೆಯ ಸಮಸ್ಯೆಯ ಬಗ್ಗೆ ಯಾವ ವಿದ್ಯಾರ್ಥಿಗಳೂ ನನ್ನ ಗಮನಕ್ಕೆ ತಂದಿಲ್ಲ. ಇಲ್ಲಿ ಮೆಸ್ ಆರಂಭಿಸುವ ಬಗ್ಗೆ ಹಲವು ಬಾರಿ ಅಧಿಸೂಚನೆ ಹೊರಡಿಸಿದರೂ ಯಾವ ಗುತ್ತಿಗೆದಾರರೂ ಆಸಕ್ತಿ ವಹಿಸಿಲ್ಲ. ಹಾಸ್ಟೆಲ್ ದೂರ ಇರುವುದು ಇದಕ್ಕೆ ಕಾರಣ. ಅಲ್ಲದೇ, ವಿದ್ಯಾರ್ಥಿಗಳು ಆಹಾರ ಕಳಪೆಯಾಗಿದೆ ಎಂದು ದೂರಿ ಹೊರಗೇ ಊಟ ಮಾಡುತ್ತಾರೆ' ಎಂದರು.

`ಹಾಸ್ಟೆಲ್ ವಾರ್ಡನ್ ಅವರನ್ನು ಕರೆಯಿಸಿ ಈ ಬಗ್ಗೆ ಚರ್ಚಿಸಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ' ಎಂದು ವಿ.ವಿ.ಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ. ಎಂ.ಟಿ.ಕಾಂಬಳೆ, ಭರವಸೆ ನೀಡಿದರು.

`ರೂ 75 ಲಕ್ಷ ವೆಚ್ಚದಲ್ಲಿ ನವೀಕರಣ'
`ವಿ.ವಿ. ಅಧೀನದಲ್ಲಿರುವ ಎಲ್ಲ ವಿದ್ಯಾರ್ಥಿನಿಲಯಗಳನ್ನು ರೂ 75 ಲಕ್ಷ ವೆಚ್ಚದಲ್ಲಿ ನವೀಕರಿಸಲು ಉದ್ದೇಶಿಸಲಾಗಿದೆ. ಎರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈ ಹಣದಲ್ಲಿ ಹಾಸ್ಟೆಲ್‌ಗೆ ಹೊಸ ಕುರ್ಚಿ, ಮಂಚ, ಮೇಜುಗಳನ್ನು ಒದಗಿಸಲಾಗುವುದು. ಬಳಸಲು ಯೋಗ್ಯವಾಗಿರುವ ಹಳೆಯವನ್ನು ರಿಪೇರಿ ಮಾಡಲಾಗುವುದು. ಜತೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು' ಎಂದು ಕುಲಪತಿ ಡಾ. ಎಚ್.ಬಿ.ವಾಲೀಕಾರ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT