ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಮಾತಿ, ಕನಿಷ್ಠ ಕೂಲಿ ಕನಸಿನ ಗಂಟು:ಸಿಐಟಿಯು ಪ್ರತಿಭಟನೆ

Last Updated 20 ಅಕ್ಟೋಬರ್ 2012, 8:20 IST
ಅಕ್ಷರ ಗಾತ್ರ

ಕಾರವಾರ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ಶುಕ್ರವಾರ ತಹಶೀಲ್ದಾರ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿತು.

 ಉದಾರೀಕರಣದ ಪರಿಣಾಮದಿಂದಾಗಿ ಕಳೆದ 20 ವರ್ಷಗಳ ಅವಧಿಯಲ್ಲಿ ವಿಭಿನ್ನ ಯೋಜನೆ ಅಥವಾ ಕಾರ್ಯಕ್ರಮಗಳ ಮೂಲಕ ಆಹಾರ, ವಿದ್ಯಾಭ್ಯಾಸ, ಆರೋಗ್ಯ ಮುಂತಾದ ಮೂಲ ಅವಶ್ಯಕತೆಗಳನ್ನು ಸಮುದಾಯಕ್ಕೆ ಒದಗಿಸಲು ಆರಂಭಿಸಿದೆ. ಆದರೆ, ಈ ಯೋಜನೆ ಅಥವಾ ಕಾರ್ಯಕ್ರಮಗಳು ಶಾಶ್ವತವಾದವುಗಳಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇಂತಹ ಯೋಜನೆ ಅಥವಾ ಕಾರ್ಯಕ್ರಮದಡಿ ದುಡಿಯುವ ನೌಕರರನ್ನು ಸಾಮಾಜಿಕ ಕಾರ್ಯಕರ್ತರು ಸ್ವಯಂ ಸೇವಕರು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಈ ಮೂಲಕ ಯೋಜನೆಗಳಲ್ಲಿ ಕೆಲಸ ಮಾಡುವವರನ್ನು ಕಾರ್ಮಿಕ ಸವಲತ್ತುಗಳು ಹಾಗೂ ಹಕ್ಕುಗಳಿಂದ ವಂಚಿಸಲಾಗುತ್ತಿದೆ ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ.

ಐಸಿಡಿಎಸ್‌ನಲ್ಲಿರುವ 26 ಲಕ್ಷ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು, ಎನ್‌ಆರ್‌ಎಚ್‌ಎಮ್‌ನಲ್ಲಿ ದುಡಿಯುತ್ತಿರುವ 8.5 ಲಕ್ಷ ಆಶಾ ಕಾರ್ಯಕರ್ತೆಯರು, ತಿಂಗಳಿಗೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಮತ್ತು ಸ್ವಸಹಾಯ ಗುಂಪುಗಳಿಂದಲೇ ಹೆಚ್ಚಾಗಿ ಬಂದಿರುವ 28 ಲಕ್ಷ ಬಿಸಿಯೂಟದ ನೌಕರರಿದ್ದಾರೆ. ಸ್ವಯಂ ಸೇವಕರು, ಗೆಳೆಯರು ಎಂದು ಬೇರೆಬೇರೆ ರಾಜ್ಯಗಳಲ್ಲಿ ಕರೆಯಲ್ಪಡುವ ಲಕ್ಷಾಂತರ ವಿದ್ಯಾವಂತ ಯುವಕರು ದೇಶದಾದ್ಯಂತ ಸರ್ವಶಿಕ್ಷ ಅಭಿಯಾನದಡಿ ಕನಿಷ್ಠ ಕೂಲಿಗೆ ದುಡಿಯುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಜನರು ದುಡಿಯುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳೆಯರು. ಮಹಿಳೆಯರನ್ನು ಯೋಗ್ಯ ಮತ್ತು ಸೂಕ್ಷ್ಮ ಉದ್ಯೋಗದ ಸವಲತ್ತುಗಳಿಂದ ವಂಚಿಸಿ ದುಡಿಸಿಕೊಳ್ಳುವುದೆಂದರೆ ಸರ್ಕಾರದ ಲೆಕ್ಕದಲ್ಲಿ ಮಹಿಳಾ ಸಬಲೀಕರಣದ ಕ್ರಮವಾಗಿದೆ ಎಂದು ಭಾಸವಾಗುತ್ತಿದೆ ಎನ್ನುವ ಅಂಶವನ್ನು  ಸಿಐಟಿಯು ಮನವಿಯಲ್ಲಿ ಉಲ್ಲೇಖಿಸಿದೆ.

ಎಲ್ಲ ನೌಕರರ ಪಾಲಿಗೆ ಕಾಯಮಾತಿ, ಕನಿಷ್ಠಕೂಲಿ ಮತ್ತಿತರರ ಸಾಮಾಜಿಕ ಭದ್ರತಾ ಸೌಲಭ್ಯಗಳು ಕನಸಿನ ಗಂಟಾಗಿಯೇ ಉಳಿದಿದೆ. ನೌಕರರ ಈ ಸಮಸ್ಯೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಐಸಿಡಿಎಸ್ ನಂತೆಯೇ ಉಳಿದ ಯೋಜನೆಗಳನ್ನು ಖಾಸಗೀಕರಣಗೊಳಿಸುವ ನೀತಿಗೆ ಅದು ಅಂಟಿಕೊಂಡಿದೆ ಎಂದು ಸಿಐಟಿಯು ಹೇಳಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಉನ್ನತೀಕರಿಸಲು ಪ್ರೊ.ಆರ್.ಗೋವಿಂದ ಸಮಿತಿ ನೇಮಿಸಿದ್ದು, ಒಂದರಿಂದ ಏಳನೇ ತರಗತಿಯಲ್ಲಿ ಮಕ್ಕಳ ಸಂಖ್ಯೆ 30 ಕಡಿಮೆ ಇರುವ 2700 ಶಾಲೆಗಳನ್ನು ವಿಲೀನಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು ಸರ್ಕಾರ ಜಾರಿ ಮಾಡಲು ಹೊರಟರೆ ಗ್ರಾಮಾಂತರ ಪ್ರದೇಶದ ಬಡವರ, ಹಿಂದುಳಿದವರ, ದಲಿತರ ಮತ್ತು ಹೆಣ್ಣು ಮಕ್ಕಳು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರಾಗುವ ಸಂಭವ ಇದೆ ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ.

ಸಿಐಟಿಯು ಅಧ್ಯಕ್ಷ ಕೆ.ಜೊಸ್ ಥಾಮಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ್, ಕಾರ್ಯದರ್ಶಿ ಮೋಹಿನಿ ನಮ್ಸೆಕರ್, ಜಯಶ್ರಿ ಗೌಡ,  ಸುಚಿತಾ, ಸುಮಲತಾ, ಆಶಾ ಮಾಂಜ್ರೆಕರ್, ವೀಣಾ ಕುವಾಳೇಕರ್, ರಜನಿ ಹಬ್ಬು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT