ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಮಾತಿಗೆ ಅಂಗನವಾಡಿ ಸಿಬ್ಬಂದಿ ಆಗ್ರಹ

Last Updated 20 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಡಿಸಿ ಸುಪರ್ದಿಗೆ ಖಂಡನೆ
ಮಧುಗಿರಿ: ಅಂಗನವಾಡಿ ಕೇಂದ್ರಗಳಿಗೆ ಆಹಾರ ವಿತರಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸುವುದನ್ನು ಖಂಡಿಸಿ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ಕಾಡುತ್ತಿದೆ. ಸರ್ಕಾರ ಅಪೌಷ್ಠಿಕತೆ ಹೋಗಲಾಡಿಸಲು ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅಂಗನವಾಡಿಗಳಲ್ಲಿ  ಅಪೌಷ್ಠಿಕ ಮಕ್ಕಳಿಗೆ ಹಾಲು, ಕೋಳಿಮೊಟ್ಟೆ ವಿತರಿಸಬೇಕೆಂಬ ನಿಯಮವಿದ್ದರೂ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಆಹಾರ ವಿತರಣೆ ಮಾಡದೆ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಸರ್ಕಾರ ಕೈತೊಳೆದುಕೊಳ್ಳಲು ಯತ್ನಿಸಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪದಾಧಿಕಾರಿಗಳಾದ ಕೆ.ವಿ.ಭಾಭ, ಸಾವಿತ್ರಮ್ಮ, ಸರೋಜಾ, ನಾಗಮಣಿ, ಐ.ಡಿ.ಹಳ್ಳಿ ಗಂಗಚೌಡಮ್ಮ, ಮುದ್ದೇನಹಳ್ಳಿ ಟಿ.ಕೆ.ರತ್ನ, ಶ್ಯಾಮಲಾ, ಸುಶೀಲಾ, ಆವಲಮ್ಮ, ತಾಯಿ ಮುದ್ದಮ್ಮ, ಜಯಲಕ್ಷ್ಮೀ, ನಾಗರತ್ನ, ಮಮತಾ, ಶಾಂತಾ, ಸಿಐಟಿಯು ಖಜಾಂಚಿ ವಿಶ್ವನಾಥ್, ಎಪಿಎಂಸಿ ಹಮಾಲಿ ಸಂಘದ ಅಶ್ವತ್ಥಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಖಾಸಗಿ ಸುಪರ್ದಿಗೆ ಬೇಡ
ತುರುವೇಕೆರೆ: ಸಮಗ್ರ ಶಿಶು ಕಲ್ಯಾಣ ಯೋಜನೆಯಡಿ ಆಹಾರದ ಸರಬರಾಜು ಹಾಗೂ ಅಂಗನವಾಡಿ ಕೇಂದ್ರದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿರ್ಧಾರ ಕೈ ಬಿಡಬೇಕು ಎಂದು ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷೆ ವಸಂತಕುಮಾರಿ ಒತ್ತಾಯಿಸಿದರು.

ಧರಣಿ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಸರ್ಕಾರ ಖಾಸಗಿ ಹಾಗೂ ಬೃಹತ್ ಉದ್ಯಮ ಸಂಸ್ಥೆಗಳಿಗೆ ಅಂಗನವಾಡಿ ಕೇಂದ್ರಗಳ ಜವಾಬ್ದಾರಿ ಹೊರಿಸಿದರೆ ಹೋರಾಟದ ಮೂಲಕ ಪಡೆದಿರುವ ಸೌಲಭ್ಯಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ವಂಚಿಸಿದಂತಾಗುತ್ತದೆ ಎಂದರು.

ಕಾರ್ಯದರ್ಶಿ ಮಂಜುಳಾ, ಮುಖಂಡರಾದ ರಂಗಮಣಿ, ವರಲಕ್ಷ್ಮಿ, ಸೌಭಾಗ್ಯ ಮತ್ತಿತರರು ಪಾಲ್ಗೊಂಡಿದ್ದರು.

ಬೇಡಿಕೆ ಈಡೇರಿಸಲು ಆಗ್ರಹ

ಪಾವಗಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ, ಅಕ್ಷರ ದಾಸೋಹ ಕಾರ್ಯಕರ್ತೆಯರು ಮತ್ತು ಸಹಾಯಕರು ಪಾವಗಡದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಪಿಂಚಣಿ ನೀಡಬೇಕು. ಕಾರ್ಯಕರ್ತೆಯರಿಗೆ ರೂ 1 ಲಕ್ಷ ಹಾಗೂ ಸಹಾಯಕರಿಗೆ ರೂ 50 ಸಾವಿರ ಹಣವನ್ನು ನಿವೃತ್ತಿ ಸಂದರ್ಭದಲ್ಲಿ ನೀಡಬೇಕು. ನೌಕರರ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.

ಸೌಲಭ್ಯ ನೀಡಲು ಒತ್ತಾಯ
ಕುಣಿಗಲ್: ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಗುಲ್ಜಾರ್, ಸಮಗ್ರ ಶಿಶು ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿ 37 ವರ್ಷ ಕಳೆದಿದ್ದರೂ, ಅದನ್ನು ಯೋಜನೆಯಾಗಿಯೇ ಮುಂದುವರೆಸಿರುವುದು ದುರದೃಷ್ಟಕರ ಎಂದರು.

ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಗಿರಿಜಮ್ಮ ಮಾತನಾಡಿ, ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಮುಖಂಡರಾದ ಶಾಂತಕುಮಾರ್, ಜಯಲಕ್ಷ್ಮಮ್ಮ, ಸಂಚಾಲಕ ಅಬ್ದುಲ್‌ಮುನಾಫ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT