ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಯಿ'ಯಲ್ಲಿ ಅರಳಿತು ಕಲೆ

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸಿಪ್ಪೆ ಸುಲಿಯದ ತೆಂಗಿನ ಕಾಯಿಯಲ್ಲಿ ವಿಘ್ನ ವಿನಾಶಕ ಗಣೇಶ, ಶಾಂತಿ ಸ್ವರೂಪನಾದ ಬುದ್ಧ, ಐಶ್ವರ್ಯಲಕ್ಷ್ಮಿ, ಕೋತಿ, ಆನೆ ಇತ್ಯಾದಿಗಳನ್ನು ಸೃಷ್ಟಿಸಲು ಸಾಧ್ಯವೆ?

ಸಾಧ್ಯ ಎಂದು ಸಾಧಿಸಿತೋರಿಸುತ್ತಾರೆ, ಶಿವನಹಳ್ಳಿಯ ಕೆ. ಚಂದ್ರು ಎಂಬ ಕುಶಲ ಕಲೆಗಾರ.

ಸಿಪ್ಪೆ ಸುಲಿಯದ ತೆಂಗಿನಕಾಯಿಗಳು ಇವರ ಕೈಯಲ್ಲಿ ಕಲ್ಪನೆಯ ಆಕಾರ, ರೂಪ ಪಡೆದು ನಳನಳಿಸುತ್ತವೆ.

ಆತ್ಮೀಯರ ಪಾಲಿನ ಈ `ಚಂದ್ರಣ್ಣ'ನ ಕಾರ್ಯಸ್ಥಳ ಬಸವೇಶ್ವರನಗರ ಬಳಿಯ ಶಿವನಹಳ್ಳಿ ವೃತ್ತದ ತಿಮ್ಮಯ್ಯ ರಸ್ತೆಯಲ್ಲಿರುವ ಕಾವೇರಿ ಎಲೆಕ್ಟ್ರಿಕಲ್ಸ್ ಅಂಗಡಿ ಪಕ್ಕದ ಫುಟ್‌ಪಾತ್.

ಒಣಗಿದ ತೆಂಗಿನಕಾಯಿ, ಒಂದೆರಡು ಹರಿತವಾದ ಚಾಕು, ಬ್ಲೇಡುಗಳು, ಕರಿಮಣಿ, ಫೆವಿಕಾಲ್ ಗಮ್ ಜತೆಗೊಂದು ಬಡಿಗೆ ಸಿಕ್ಕಿದರೆ ಸಿಪ್ಪೆಯಿರುವ ತೆಂಗಿನಕಾಯಿಗೆ ಕೆಲವೇ  ಗಂಟೆಯಲ್ಲಿ ಅದ್ಭುತ ಕಲಾಕೃತಿಯ ರೂಪ ನೀಡಿ ಬೆರಗಾಗಿಸುತ್ತಾರೆ.

ಮಂಗ ಸ್ಫೂರ್ತಿ!
ಸರಿಯಾಗಿ 12 ವರ್ಷಗಳ ಹಿಂದೆ... ಅಯ್ಯಪ್ಪನ ಪರಮ ಭಕ್ತರಾದ ಚಂದ್ರಣ್ಣ ಶಬರಿಯಲೆಯಿಂದ ದರ್ಶನ ಮುಗಿಸಿಕೊಂಡು ವಾಪಸಾಗುವಾಗ ತಿರುವನಂತಪುರದ ಬಳಿ ಅವರ ವಾಹನ ನಿಂತಿತು. ಪಕ್ಕದಲ್ಲೇ ಇದ್ದ ಅಂಗಡಿಗೆ ಏನೋ ತರಲು ಹೋದ ಚಂದ್ರಣ್ಣನನ್ನು ಅಲ್ಲಿದ್ದ ತೆಂಗಿನಕಾಯಿಯಿಂದ ಮಾಡಿದ್ದ ಮಂಗನ ಮೂರ್ತಿಯೊಂದು ಗಮನ ಸೆಳೆಯಿತಂತೆ.

`ನನ್ನತ್ರ ಆ ಮೂರ್ತಿ ಕೊಂಡುಕೊಳ್ಳುವುದಕ್ಕೆ ಹಣವಿರಲಿಲ್ಲ. ಆದ್ದರಿಂದ ಆ ಮೂರ್ತಿಯನ್ನು ಹತ್ತಾರು ಸಲ ಮುಟ್ಟಿ ಮುಟ್ಟಿ ನೋಡಿ ಅಲ್ಲಿಯೇ ಬಿಟ್ಟು ಬಂದೆ. ನಾನು ಮನೆ ಸೇರುವವರೆಗೂ ನನ್ನ ಮನಸ್ಸೆಲ್ಲಾ ಆ ಮಂಗನ ಮೂರ್ತಿಯ ಮ್ಯಾಲೆ ಇತ್ತು. ಆಗ ನಾನು ಆಟೊ ಓಡಿಸುತ್ತಿದ್ದೆ. ಆದರೂ ಮನಸ್ಸಿನಲ್ಲಿ ಅದೇ ತುಡಿತ. ಒಂದು ದಿನ ಮಾರುಕಟ್ಟೆಗೆ ಹೋಗಿ ಸಿಪ್ಪೆ ತೆಗೆಯದ ಹತ್ತಿಪ್ಪತ್ತು ಒಣಗಿದ ತೆಂಗಿನಕಾಯಿಗಳನ್ನು ಖರೀದಿಸಿ ತಂದೆ. ಬೇಗ ಬೇಗ ಮನೆಗೆ ಬಂದವನೇ ತಿರುವನಂತಪುರದಲ್ಲಿ ನೋಡಿದ ಆ ಮಂಗನ ಮೂರ್ತಿಯನ್ನು ಮನಸ್ಸಲ್ಲಿ ನೆನಪಿಸಿಕೊಂಡು ಕೆತ್ತತೊಡಗಿದೆ.  ಸುಮಾರು ನಾಲ್ಕು ತಿಂಗಳವರೆಗೆ ಬಿದ್ದರೂ ಬಿಡದಂತೆ ಕಷ್ಟಪಟ್ಟು ಮಂಗನ ಮೂರ್ತಿ ಮಾಡುವುದನ್ನು ಕರಗತ ಮಾಡಿಕೊಂಡೆ' ಎನ್ನುತ್ತಾರೆ ಚಂದ್ರಣ್ಣ.

ಗುರುವಿಲ್ಲದೆ, ಕೇವಲ ಒಂದು ತದೇಕಚಿತ್ತ ನೋಟದಿಂದಲೇ ಒಣಗಿದ ತೆಂಗಿನಕಾಯಿಯಲ್ಲಿ ಕಲಾಕೃತಿ ಮೂಡಿಸುವುದನ್ನು ಸ್ವಂತ ಪರಿಶ್ರಮದಿಂದ ಕಲಿತುಕೊಂಡ ಚಂದ್ರಣ್ಣನವರಿಗೆ ಈಗ ಗಣಪತಿ, ಲಕ್ಷ್ಮಿ, ಗಂಡಭೇರುಂಡ, ಬುದ್ಧ, ಆನೆ, ಮೀನು, ಕೋತಿ, ಗಣೇಶ ಮತ್ತು ಮಂಗನ ದ್ವಿಮುಖ ಮೂರ್ತಿಗಳೆಲ್ಲ ಕರಗತ.

ಐದನೇ ಕ್ಲಾಸ್‌ವರೆಗೂ ಓದಿರುವ ಚಂದ್ರಣ್ಣನವರಿಗೆ ಆಗ ಚಿತ್ರ ಬಿಡಿಸುವುದೆಂದರೆ ತುಂಬಾ ಇಷ್ಟವಂತೆ. `ನಾನು ಮೂರ್ತಿ ಕೆತ್ತುವುದನ್ನು ಕಲಿಯೋಕೆ ಅದು ಸ್ವಲ್ಪ ಹೆಲ್ಪ್ ಆಯ್ತು. ಹನ್ನೆರಡು ವರ್ಷದಿಂದ ಮೂರ್ತಿಗಳನ್ನು ಮಾಡ್ತಾ ಇದೀನಿ. ನನ್ನಿಬ್ಬರು ಹೆಣ್ಣು ಮಕ್ಕಳ ಮದುವೆಯಾಗಿದೆ. ಸದ್ಯ ನನ್ನ ಜೀವನಕ್ಕೆ ಈ ಕಲೆಯೇ ಆಧಾರ' ಎಂದು 50ರ ಆಸುಪಾಸಿನಲ್ಲಿರುವ ಚಂದ್ರಣ್ಣ ನುಡಿಯುತ್ತಾರೆ.

ದಿನಕ್ಕೆ ಏನಿಲ್ಲವೆಂದರೂ ಮೂರೋ ನಾಲ್ಕೋ ಮೂರ್ತಿಗಳನ್ನು ಮಾಡಬಲ್ಲ ಚಂದ್ರಣ್ಣನವರಿಂದ ಆರಂಭದಲ್ಲಿ ಗಿಫ್ಟ್ ಸೆಂಟರ್‌ನವರೊಬ್ಬರು ಮೂರ್ತಿಯೊಂದಕ್ಕೆ ಕೇವಲ ನೂರು ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಿದ್ದರಂತೆ. ಆದರೆ, ಕೆಲ ತಿಂಗಳಿನಿಂದ ಚಂದ್ರಣ್ಣ ಸ್ವತಃ ತಾವೇ ಮೂರ್ತಿ ಮಾರಲಾರಂಭಿಸಿದ್ದಾರೆ. `ನಾನು ಮೂರ್ತಿಗಳಿಗೆ ಇಷ್ಟೇ ಬೆಲೆ ಎಂದು ಹೇಳುವುದಿಲ್ಲ. ನನ್ನ ಕೆಲಸ ನೋಡಿ ಅವರೇ 400ರಿಂದ 500 ರೂಪಾಯಿ ಬೆಲೆ ಕಟ್ಟಿ ಕೊಂಡುಕೊಳ್ಳುತ್ತಾರೆ. ಕಾಯಿ ಒಣಗಿ ಕೊಬ್ಬರಿಯಾಗುವುದರಿಂದ ಎಷ್ಟು ವರ್ಷವಾದರೂ ಈ ಮೂರ್ತಿಗಳು  ಕೆಡುವುದಿಲ್ಲ. ಅಲ್ಲದೆ, ಪುಟ್‌ಪಾತ್‌ನಲ್ಲಿ ನನ್ನ ಕೆಲಸ ನೋಡಿ ಕೆಲವರು ಆರ್ಡರ್ ಕೊಟ್ಟು ಮೂರ್ತಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ' ಎಂದು ಚಂದ್ರಣ್ಣ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಮ್ಮ ಈ ವಿಶಿಷ್ಟ ಕಲೆಗೆ ಉದ್ಯಮ ಸ್ವರೂಪ ಕೊಡುವಷ್ಟು ಬುದ್ಧಿವಂತಿಕೆ, ಮಹಾತ್ವಾಕಾಂಕ್ಷೆ  ಚಂದ್ರಣ್ಣನವರಲ್ಲಿ ಇಲ್ಲದಿದ್ದರೂ, ತಮ್ಮ ಸ್ವಂತ ಶ್ರಮದ ಈ ಕಲೆಯನ್ನು ಇಬ್ಬರು ಸಂಬಂಧಿಕ ಹುಡುಗರಿಗೆ ಹೇಳಿಕೊಟ್ಟಿದ್ದಾರೆ.

ನಿಮಗೂ ಒಣಗಿದ ತೆಂಗಿನ ಕಾಯಿಯಿಂದ ಮಾಡಿರುವ  ಬಗೆಬಗೆಯ ಅದ್ಭುತ ಮೂರ್ತಿಗಳನ್ನು ಮನೆ ತುಂಬಿಸಿಕೊಳ್ಳುವ ಆಸೆ ಇದೆಯೇ? ಹಾಗಿದ್ದರೆ ಬಿಡುವಿನ ವೇಳೆಯಲ್ಲಿ ಒಮ್ಮೆ ಶಿವನಹಳ್ಳಿ ಸರ್ಕಲ್‌ಗೆ ಭೇಟಿ ಕೊಡಿ. ಚಂದ್ರಣ್ಣನ ಮೊಬೈಲ್ ಸಂಖ್ಯೆ 97432 13929.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT