ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಜಿಲ್ಲೆಯ ಗಣಿ ಉದ್ಯಮಿಗಳಲ್ಲಿ ತಳಮಳ

Last Updated 10 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ಕಾರವಾರ: ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಸಿಬಿಐ ಬಲೆಗೆ ಬಿದ್ದಿರುವುದು ಜಿಲ್ಲೆಯ ಗಣಿ ಉದ್ಯಮಿಗಳಲ್ಲಿ ತಳಮಳವನ್ನುಂಟು ಮಾಡಿದೆ. ರಾಜಕೀಯವಾಗಿ ರೆಡ್ಡಿ ಬಣದಲ್ಲಿ ಗುರುತಿಸಿಕೊಂಡವರಿಗಂತೂ ಈ ಸುದ್ದಿ ಆಘಾತವನ್ನುಂಟು ಮಾಡಿದೆ.

ಕೇವಲ ಆಂಧ್ರಪ್ರದೇಶದಲ್ಲಷ್ಟೇ ಅಲ್ಲ ಕರ್ನಾಟಕದ ವಾಣಿಜ್ಯ ಬಂದರುಗಳಿಂದ ಅಕ್ರಮವಾಗಿ ರಫ್ತಾಗಿರುವ ಅದಿರಿನ ಕುರಿತೂ ತನಿಖೆ ನಡೆಸುವುದಾಗಿ ಸಿಬಿಐ ಹೇಳಿರುವುದು ಗಣಿ ಧಣಿಗಳ ನಿದ್ದೆಗೆಡಿಸಿದೆ. `ಪ್ರಜಾವಾಣಿ~ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಲ್ಲ ಗಣಿ ಧಣಿಗಳು ಸಂಭವನೀಯ ದಾಳಿಯಿಂದ ಪಾರಾಗುವ ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ರಫ್ತಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಸರ್ಕಾರ ವರದಿ ಸಲ್ಲಿಸಿದ್ದು ಜಿಲ್ಲೆಯ ಕಾರವಾರ ಮತ್ತು ಬೇಲೆಕೇರಿ ವಾಣಿಜ್ಯ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತಾಗಿರುವ ಬಗ್ಗೆ ಒಂದು ಅಧ್ಯಾಯವೇ ಇದೆ.

ಲೋಕಾಯುಕ್ತರ ವರದಿ ಮತ್ತು ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮತ್ತು ಸಿಐಡಿ ತನಿಖೆ ಆಧರಿಸಿ ಸಿಬಿಐ ದಾಳಿ ನಡೆದಲ್ಲಿ ಜಿಲ್ಲೆಯ ಗಣಿ ಧಣಿಗಳು ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಬಹುದು.

ಅರಣ್ಯ ಇಲಾಖೆ ಅಧಿಕಾರಿಗಳು ಮಾ 3, 2010ರಂದು ಬೇಲೆಕೇರಿ ಬಂದರಿನ ಮೇಲೆ ದಾಳಿ ನಡೆಸಿ ಎಂಟು ಲಕ್ಷ ಅದಿರು ವಶಪಡಿಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ಬಂದರು ಸಂರಕ್ಷಣಾಧಿಕಾರಿಗೆ ಹಸ್ತಾಂತರ ಮಾಡಿದ್ದರು.
ಈ ಅದಿರು ವಶಪಡಿಸಿಕೊಂಡಿರುವ ಎಂಟು ಲಕ್ಷ ಅದಿರಿನ ಪೈಕಿ ಅಂದಾಜು ಐದು ಲಕ್ಷ ಟನ್ ಅದಿರು ಕಳವು ಮಾಡಿರುವುದು 2010 ಜೂನ್‌ನಲ್ಲಿ ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬಂದರು ಸಂರಕ್ಷಣಾಧಿಕಾರಿ, ಕಂಪೆನಿಗಳು ಮತ್ತು ಇತರ ಏಜೆನ್ಸಿಗಳ ಮೇಲೆ ದೂರು ದಾಖಲಿಸಿತ್ತು.

ರಾಜ್ಯವನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದ ತನಿಖೆಯನ್ನು ಅರಣ್ಯ ಇಲಾಖೆ, ಸಿಐಡಿ ಸೇರಿದಂತೆ ಅನೇಕ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಈ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸಿಬಿಐ ಅಧಿಕಾರಿಗಳು ಬೇಲೆಕೇರಿ ಬಂದರು ಮತ್ತು ಅದಿರು ವಹಿವಾಟು ನಡೆಸುತ್ತಿರುವ ಕಂಪೆನಿಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಅಧಿಕಾರಿಗಳಿಗೂ ಭಯ:
ಲೋಕಾಯುಕ್ತರ ವರದಿ ಬಹಿರಂಗ, ಮಾಜಿ ಸಚಿವರ ಬಂಧನದ ನಂತರ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದಾರೆ.

ಅದಿರು ಪ್ರಕರಣಕ್ಕೆ ಹೊರತಾದ ವಿಷಯಗಳ ಬಗ್ಗೆ ಮಾಹಿತಿ ಕೇಳಲು ಹೋದರೂ ಅಧಿಕಾರಿಗಳು ಕೈ ಮುಗಿಯಲು ಬರುತ್ತಾರೆ. ದೂರವಾಣಿ ಕರೆಯನ್ನಂತೂ ಸ್ವೀಕರಿಸುವುದೇ ಇಲ್ಲ. ಅಧಿಕಾರಿಗಳು ಈ ರೀತಿಯ ಭಯಪಡಲು ಕಾರಣ ಏನು ಎನ್ನುವುದು ಮಾತ್ರ ಗುಪ್ತವಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT