ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಬಂದರು ವಾಣಿಜ್ಯ ಹಿರಿಮೆ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ನೈಸಗಿರ್ಕವಾಗಿರುವ ಬಂದರುಗಳಲ್ಲಿ ಕಾರವಾರ ವಾಣಿಜ್ಯ ಬಂದರು ಒಂದಾಗಿದೆ. ಬ್ರಿಟಿಷರ ಆಳ್ವಿಕೆಯಿಂದಲೂ ಈ ಸರ್ವಋತು ಬಂದರಿನಲ್ಲಿ ವಹಿವಾಟು ನಡೆಯುತ್ತಿದೆ. ಕಾರವಾರ ಬಂದರು ಮುಂಬೈ ಮತ್ತು ಮಂಗಳೂರು ಬಂದರುಗಳ ಮಧ್ಯದಲ್ಲಿದ್ದು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.

ಅರಬ್ಬಿ ಸಮುದ್ರದಲ್ಲಿರುವ ಆಯಿಸ್ಟರ್ ರಾಕ್,  ದೇವಗಡ ಮತ್ತು ಕುರ್ಮಗಡ ದ್ವೀಪಗಳು ನೈರುತ್ಯ ಮಾನ್ಸೂನ್‌ನಿಂದ ಬಂದರಿಗೆ ರಕ್ಷಣೆ ನೀಡುತ್ತವೆ. ಸಮುದ್ರ ಎಷ್ಟೇ ಆರ್ಭಟಿಸಿದರೂ ಈ ಪ್ರದೇಶದಲ್ಲಿ ಸರಕು ಸಾಗಣೆ ಹಡಗು ಕಾರ್ಯಾಚರಣೆಗೆ ಯಾವ ಅಡ್ಡಿಯಿಲ್ಲ. ಇದೊಂದು ಸುರಕ್ಷಿತ ಬಂದರಾಗಿದೆ.

ಕಾರವಾರ ಬಂದರಿನಿಂದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಆಹಾರ ಧಾನ್ಯಗಳು, ಗ್ರಾನೈಟ್, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ರಫ್ತಾಗುತ್ತವೆ. ಕಲ್ಲಿದ್ದಲು, ಸಿಮೆಂಟ್, ಸಕ್ಕರೆ, ಆಹಾರ ಧಾನ್ಯ, ರಸಗೊಬ್ಬರ, ಇಂಡಸ್ಟ್ರಿಯಲ್ ಸಾಲ್ಟ್, ರಾಕ್ ಪಾಸ್ಪೇಟ್, ಅಡುಗೆ ಎಣ್ಣೆ, ಕಾಕಂಬಿ, ಫರ್ನೇಸ್ ಆಯಿಲ್ ಮತ್ತು ರಾಸಾಯನಿಕಗಳು ಆಮದಾಗುತ್ತವೆ.

ಬಂದರಿನಲ್ಲಿರುವ 355 ಮೀಟರ್ ಉದ್ದದ ಜಟ್ಟಿಯಲ್ಲಿ 3 ಸರಕು ಸಾಗಣೆ ಹಡಗು ನಿಲ್ಲುವಷ್ಟು ಸ್ಥಳಾವಕಾಶವಿದೆ. ಒಂದು ಹಡಗು ಬಂದರು ಪ್ರವೇಶ ಮಾಡಿದರೆ ಇಲಾಖೆಗೆ ರೂ. 8ಲಕ್ಷದಿಂದ 10 ಲಕ್ಷದವರೆಗೂ ಆದಾಯವಿದೆ. ಸರಕುಗಳವಹಿವಾಟಿನಿಂದ ಇಲಾಖೆಗೆ ಪ್ರತಿವರ್ಷ ಸರಾಸರಿ ರೂ. 15ಕೋಟಿಯಿಂದ 20 ಕೋಟಿವರೆಗೂ ಆದಾಯವಿದೆ.
ಅದಿರು ವಹಿವಾಟು ಸ್ಥಗಿತ:

ಕಾರವಾರ ಬಂದರಿನಿಂದ 2003ರಿಂದ 2010ರವರೆಗೆ ಕಬ್ಬಿಣದ ಅದಿರು ರಫ್ತು ನಡೆಯಿತು. ಅದಿರು ಅಕ್ರಮವಾಗಿ ರಫ್ತು ಮಾಡಿರುವ ಕುರಿತು ಸಿಐಡಿ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅದಿರು ಸಾಗಣೆ ವಹಿವಾಟು ಸ್ಥಗಿತಗೊಂಡಿದೆ.
ಅದಿರು ವಹಿವಾಟು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಬಂದರಿನಲ್ಲಿ ಹಡಗುಗಳ ಆಗಮನ-ನಿರ್ಗಮನ ಬಹಳವಾಗಿತ್ತು.

ಈ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಹಡಗುಗಳು ಬಂದರಿಗೆ ಆಗಮಿಸುತ್ತಿದ್ದವು. ಬಂದರಿನ ಆದಾಯವೂ ಏರುಮುಖವಾಗಿತ್ತು. ಅದಿರು ವಹಿವಾಟು ಸ್ಥಗಿತಗೊಂಡ ನಂತರ ಬಂದರಿನ ಆದಾಯವೂ ಅಷ್ಟೇ ವೇಗದಲ್ಲಿ ಪಾತಾಳಕ್ಕೆ ಇಳಿದಿದೆ. 2003-10ರ ವರೆಗೆ ಅಂದಾಜು ರೂ. 15 ಕೋಟಿ ಇದ್ದ ಆದಾಯ 2011-12ರಲ್ಲಿ ರೂ. 4. 86 ಕೋಟಿಗೆ ತಗ್ಗಿತು. ಈ ಅವಧಿಯಲ್ಲಿ ಕೇವಲ 87 ಹಡಗುಗಳು ಬಂದರಿನಲ್ಲಿ ಲಂಗರು ಹಾಕಿದ್ದು 4.86 ಲಕ್ಷ ಟನ್ ಸರಕು ಸಾಗಣೆ ವಹಿವಾಟು ನಡೆದಿದೆ.

`ಬಂದರಿನ ಆದಾಯ ಕಡಿಮೆ ಆಗಲು ಕೇವಲ ಅದಿರು ವಹಿವಾಟು ಸ್ಥಗಿತಗೊಂಡಿರುವುದಷ್ಟೇ ಕಾರಣವಲ್ಲ. ಹಡಗು ಸಂಚರಿಸುವ ಮಾರ್ಗ ಮತ್ತು ನಿಲ್ಲುವ ಸ್ಥಳದಲ್ಲಿ ಹೂಳು ತುಂಬಿರುವುದೂ ಇನ್ನೊಂದು ಕಾರಣ. ಇದರಿಂದ ಹೆಚ್ಚು ಸರಕು ಸಾಗಣೆ ಸಾಮರ್ಥ್ಯದ ದೊಡ್ಡ ಹಡಗುಗಳು ಬಂದರಿನೊಳಗೆ ಪ್ರವೇಶ ಮಾಡಲು ಆಗುತ್ತಿರಲಿಲ್ಲ.
 
ಈಗ ಹೂಳು ತೆಗೆಯುವ ಕಾರ್ಯ ಮುಗಿದಿದೆ. ಅಂದಾಜು 8 ಮೀಟರ್ ಅಳದವರೆಗೂ ನೀರು ಇದೆ. ದೊಡ್ಡ ಹಡಗುಗಳು ಈಗ ಸುಗಮವಾಗಿ ಬಂದರು ಪ್ರವೇಶ ಮಾಡಬಹುದು. ಹಡಗು ಬರುವುದು ಹೆಚ್ಚಾದಂತೆ ಆದಾಯವೂ ಹೆಚ್ಚಲಿದೆ~ ಎನ್ನುತ್ತಾರೆ ಬಂದರು ಇಲಾಖೆಯ ಅಧಿಕಾರಿ ಸುರೇಶ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT