ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಿಣಗಾದಲ್ಲಿ ನಿಲ್ಲದ ಕಪಿಚೇಷ್ಟೆ!

Last Updated 20 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಕಾರವಾರ: ಅಂಗಳದಲ್ಲಿ ಒಣಗಿಸಿದ ಬಟ್ಟೆಗಳು ಬೆಳಗಾಗುವುದರೊಳಗೆ ಮರದ ಟೊಂಗೆಯ ಮೇಲಿರುತ್ತವೆ. ದಿನಕ್ಕೊಂದರಂತೆ ಹೆಂಚುಗಳು ಒಡೆ ಯುತ್ತವೆ. ಟಿ.ವಿ. ಆ್ಯಂಟೆನ್, ಡಿಶ್‌ಗಳು ಪದೇಪದೇ ದಿಕ್ಕು ಬದಲಿಸಿಕೊಂಡಿ ರುತ್ತವೆ. ಅಡುಗೆ ಮನೆಯಲ್ಲಿ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಇದು ಕಳ್ಳರೋ, ಕಿಡಿಗೇಡಿಗಳೋ ರಾತ್ರಿ ಬೆಳಗಾಗುವುದರೊಳಗೆ ಎಸಗುವ ಕೃತ್ಯವಲ್ಲ. ಇವೆಲ್ಲವೂ ಕಪಿಚೇಷ್ಟೆ!

ಕಿರುಮಂಗಗಳ ಕಾಟದಿಂದ ನಗರದ ಬಿಣಗಾ ಸುತ್ತಮುತ್ತಲಿನ ಬ್ರಾಹ್ಮಣ ವಾಡಾ, ಕಾಮತ್ ವಾಡಾ ಮತ್ತು ಬಿಣಗಾ ಚರ್ಚ್ ರಸ್ತೆಯ ನಿವಾಸಿಗಳು ಕಂಗಾಲಾಗಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಇಲ್ಲಿಯ ನಿವಾಸಿಗಳು ಕಪಿ ಚೇಷ್ಟೆಯಿಂದ ಹೈರಾಣಾಗಿ ಹೋಗಿದ್ದಾರೆ. ಮರದಿಂದ ಮರಕ್ಕೆ ಛಂಗನೆ ಜಿಗಿಯುವ ಮಂಗಗಳು ನೀಡುವ ಉಳಪಟದಿಂದ ಜನರು ಬೇಸತ್ತು ಹೋಗಿದ್ದಾರೆ.

ಬಿಣಗಾ ತೆಂಗಿನಕಾಯಿಗಳಿಗೆ ತುಂಬಾ ಖ್ಯಾತಿ ಪಡೆದ ಊರು. ಸುತ್ತಮುತ್ತಲ ಹಳ್ಳಿಗಳ ಜನರು ಇಲ್ಲಿಂದಲೇ ಅಡುಗೆ, ಮಾರಾಟಕ್ಕೆಂದು ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ, ಮಂಗಗಳ ಕಾಟ ಪ್ರಾರಂಭವಾದಾಗಿ ನಿಂದ ಫಲ ಬೆಳಗಾರರ ಕೈಗೆ ಸಿಗುತ್ತಿಲ್ಲ. ಸಿಯಾಳದೊಳಗಿರುವ ಗಂಜಿ ಮಂಗಗಳಿಗೆ ಬಲು ಇಷ್ಟದ ಆಹಾರ. ತೆಂಗಿನ ಮರದ ಮೇಲೆ ದಾಳಿ ನಡೆಸುವ ಮಂಗಗಳು ಸಿಯಾಳ ಸುಲಿದು ಗಂಜಿ ತಿನ್ನುವುದರಿಂದ ತೆಂಗಿನಕಾಯಿ ಮನೆ ಬಳಕೆಗೂ ಸಿಗುತ್ತಿಲ್ಲ.

ತೆಂಗಿನ ಮರದಲ್ಲಿ ಬರೀ ಗರಿ ಮತ್ತು ಕೊನೆಯಲ್ಲಿ ಬಿಟ್ಟ ಹೂಗಳಷ್ಟೇ ಕಾಣಲು ಸಿಗುತ್ತವೆ. `ಬಿಣಗಾದಲ್ಲಿ ತೆಂಗಿನ ಫಸಲು ಚೆನ್ನಾಗಿ ಬರುತ್ತದೆ. ತಾಲ್ಲೂಕಿನ ಬೇರೆಬೇರೆ ಭಾಗಗಳಿಂದ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಜನ ಇಲ್ಲಿಗೆ ಬರುತ್ತಾರೆ. ಆದರೆ ಮಂಗಗಲ ಕಾಟದಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ತೆಂಗಿನಕಾಯಿಗಳಿಗೆ ನಾವು ಬೇರೆಡೆ ಹೋಗಬೇಕಾಗಿದೆ~ ಎನ್ನುತ್ತಾರೆ ಬಿಣಗಾ ಸಮೀಪ ಒಕ್ಕಲಕೇರಿಯ ನಿವಾಸಿ ರಮೇಶ ಗೌಡ.

ಅಂದಾಜು 200ರಿಂದ 300 ಮಂಗ ಗಳು ಈ ಪ್ರದೇಶದಲ್ಲಿ ಬಿಡಾರ ಹೂಡಿವೆ. ಮನೆಯಲ್ಲಿ ಯಾರು ಇಲ್ಲದಿದ್ದರೆ ಮಂಗಗಳಿಗೆ ಹಬ್ಬ. ಅಡುಗೆ ಮನೆಯೊಳಗೂ ಹೋಗಿ ಪಾತ್ರೆ- ಪಗಡೆಗಳನ್ನು ಕೆಳಗೆ ಹಾಕಿ ಅನ್ನ, ಹಾಲು ಸೇವಿಸಿ ಪರಾರಿಯಾಗುತ್ತವೆ. ಮರದ ಮೇಲಿಂದ ಮನೆಗಳ ಮೇಲ್ಛಾವಣಿಯ ಮೇಲೆ ಬಗ್ಗೆ ಜಿಗಿಯುವುದರಿಂದ ಹೆಂಚು ಗಳು ಪಟಪಟನೆ ಒಡೆದು ಹೋಗುತ್ತಿವೆ. ಹೊಸ ಹೆಂಚುಗಳನ್ನು ಹಾಕಿಹಾಕಿ ಸುಸ್ತಾಗಿರುವ ನಿವಾಸಿಗಳು ಹೋದಷ್ಟು ಹೋಗಲಿ ಎಂದು ಸುಮ್ಮನಾಗಿದ್ದಾರೆ.

ಪಟಾಕಿ, ಏರ್‌ಗನ್‌ಗೂ ಮಂಗಗಳೂ ಹೆದರುತ್ತಿಲ್ಲ. ಆರಂಭದಲ್ಲಿ ಒಮ್ಮೆ ಬೆದರಿದಂತೆ ನಟನೆ ಮಾಡುವ ಕಪಿಗಳು ಮತ್ತೊಮ್ಮೆ ಏರ್‌ಗನ್ ತೋರಿಸಿದರೆ ಎಲೆಗಳ ಮರೆಯಲ್ಲಿ ನಿಂತು ಗನ್ ಹಿಡಿದುಕೊಂಡವರನ್ನೇ ಅಣುಕಿಸುತ್ತಿ ರುತ್ತವೆ. ಮಂಗನ ಉಳಪಟಕ್ಕೆ ನಿಯಂತ್ರಿಸಲು ಎಲ್ಲ ಸ್ಥಳೀಯರು ಪ್ರಯತ್ನಗಳನ್ನು ಮಾಡಿ ಸುಸ್ತಾಗಿದ್ದಾರೆ.

`ಬೇರೆ ಪ್ರದೇಶಗಳಿಂದ ಮಂಗಗಳನ್ನು ಹಿಡಿದು ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು, ಅವು ಜನವಸತಿ ಪ್ರದೇಶದತ್ತ ಬಂದು ತೊಂದರೆ ನೀಡು ತ್ತಿವೆ. ಇಲ್ಲೇ  ಅವುಗಳ ಸಂತಾನೋತ್ಪತ್ತಿ ಆಗಿದ್ದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾ ಗಿದೆ. ಇವುಗಳ ಕಾಟದಿಂದ ನಾವು ತರಕಾರಿ ಬೆಳೆಯುವುದನ್ನೇ ನಿಲ್ಲಿಸಿದ್ದೇವೆ~ ಎನ್ನುತ್ತಾರೆ ಆಗ್ನೇಲ್ ಫರ್ನಾಂಡೀಸ್, ರವಿಕಾಂತ ನಾಯ್ಕ, ಅರವಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT