ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರಕ್ಕೆ ಬಂದ ‘ವಿಕ್ರಮಾದಿತ್ಯ’

ನೌಕೆಗೆ ಹೆಚ್ಚಿನ ಭದ್ರತೆ, ನೌಕಾನೆಲೆಯಲ್ಲಿ ವಾರ ಕಾಲ ಲಂಗರು
Last Updated 9 ಜನವರಿ 2014, 6:47 IST
ಅಕ್ಷರ ಗಾತ್ರ

ಕಾರವಾರ: ಏಷ್ಯಾ ಖಂಡದಲ್ಲೇ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆಯಾದ ಐಎನ್‌ಎಸ್‌ ‘ವಿಕ್ರಮಾದಿತ್ಯ’ ಮಂಗಳವಾರ ರಾತ್ರಿ ಇಲ್ಲಿನ ಕದಂಬ ನೌಕಾನೆಲೆಯನ್ನು ತಲುಪಿದ್ದು, ಒಂದು ವಾರ ಕಾಲ ಇಲ್ಲಿಯೇ ಲಂಗರು ಹಾಕಲಿದೆ.

ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ರಷ್ಯಾದ ಈ ನೌಕೆ­ಯನ್ನು 2004ರಲ್ಲಿ ಭಾರತ ಖರೀದಿಸಿ ಇನ್ನಷ್ಟು ಆಧುನೀಕರಣಕ್ಕಾಗಿ ರಷ್ಯಾಕ್ಕೆ ನೀಡಿತ್ತು. ಬಳಿಕ 2013, ನ. 16ರಂದು ರಷ್ಯಾದ ಸೆವ್‌ರೋಡ್ವಿಂಕ್‌ ಬಂದರಿನಲ್ಲಿ ಈ ನೌಕೆಯನ್ನು ಭಾರತಕ್ಕೆ ಹಸ್ತಾಂತ­ರಿಸಲಾಗಿತ್ತು. ನ.27ರಂದು ಅಲ್ಲಿಂದ ಪ್ರಯಾಣ ಬೆಳೆಸಿದ ಈ ನೌಕೆಯು 8,500 ನಾಟಿಕಲ್‌ ದೂರ ಕ್ರಮಿಸಿ ಕಾರವಾರ ತಲುಪಿದೆ.

ಈ ನೌಕೆ 1987ರಿಂದಲೇ ರಷ್ಯಾ ನೌಕಾಪಡೆಯಲ್ಲಿ ‘ಬಾಕು’ ಎನ್ನುವ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆನಂತರ ಇದಕ್ಕೆ ಅಡ್ಮಿರಲ್‌ ಗೋರ್‌ಷ್ಕೋವ್‌್ ಎಂದು ಹೆಸರಿ-­ಡಲಾಗಿತ್ತು. ಬಳಿಕ ಈ ನೌಕೆಗೆ ‘ವಿಕ್ರಮಾದಿತ್ಯ’ ಎಂದು ನಾಮಕರಣ ಮಾಡಲಾಗಿತ್ತು. ರಷ್ಯಾ 1996ರಲ್ಲಿ ಈ ನೌಕೆಯನ್ನು ಸೇವೆಯಿಂದ ಮುಕ್ತಗೊಳಿಸಿತ್ತು.

ಆಧನೀಕರಣಗೊಂಡ ಈ ಯುದ್ಧ ನೌಕೆಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನ ರನ್‌ವೇ ಸೇರಿದಂತೆ ಮತ್ತಿತರರ ಆಧುನಿಕ ಸೌಲಭ್ಯವಿದೆ.

ಬಲಿಷ್ಠಗೊಂಡ ನೌಕಾ ಪಡೆ: ಐಎನ್‌ಎಸ್‌ ವಿಕ್ರಮಾದಿತ್ಯ ಭಾರತೀಯ ನೌಕಾ ಪಡೆಗೆ ಸೇರ್ಪಡೆಯಾಗಿರುವುದು ನೌಕಾ ಪಡೆಗೆ ಹೆಚ್ಚಿನ ಬಲ ಬಂತಾಗಿದೆ. ಅಲ್ಲದೇ ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ.

ಈ ಯುದ್ಧ ನೌಕೆ ಅರಬ್ಬಿ ಸಮುದ್ರ ಹಾಗೂ ಕರಾವಳಿಯ ಭದ್ರತೆಗೆ ಸಹಕಾರಿಯಾಗಲಿದೆ. ಸದ್ಯ ಕಾರವಾರದ ಸೀಬರ್ಡ್‌ನಲ್ಲಿ ಇನ್ನೂ ಒಂದು ವಾರ ಕಾಲ ಐಎನ್ಎಸ್ ವಿಕ್ರಮಾದಿತ್ಯ ಉಳಿಯಲಿದ್ದು, ಬಳಿಕ ವಿಶಾಖಪಟ್ಟಣಕ್ಕೆ ಪ್ರಯಾಣ ಬೆಳೆಸಲಿದೆ. ನಂತರ ಮತ್ತೇ ಅಲ್ಲಿಂದ ಕಾರವಾರಕ್ಕೆ ಮರಳಲಿದ್ದು, ಇಲ್ಲಿನ ಕದಂಬ ನೌಕೆಯಲ್ಲಿ ಲಂಗರು ಹಾಕಲಿದೆ.

ವಸತಿ ವ್ಯವಸ್ಥೆ: ನೌಕೆಯಲ್ಲಿ 1,600 ಅಧಿಕಾರಿಗಳು ಹಾಗೂ 183 ರಷ್ಯಾದ ತಂತ್ರಜ್ಞರಿದ್ದಾರೆ. ನೌಕಾ ಅಧಿಕಾರಿಗಳ ವಸತಿ ಸೌಲಭ್ಯಕ್ಕಾಗಿ ಕಾರವಾರದ ವಸತಿಗೃಹಗಳಲ್ಲಿ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಅವರ ರಕ್ಷಣೆ ಹಾಗೂ ಆಹಾರದ ವ್ಯವಸ್ಥೆಗಳನ್ನು ಇಲ್ಲಿನ ಸೀಬರ್ಡ್‌ ಅಧಿಕಾರಿಗಳು ವಹಿಸಿಕೊಂಡಿದ್ದಾರೆ.

ನೌಕೆಯ ವಿಶೇಷತೆ: ಈ ನೌಕೆಯು 284 ಮೀಟರ್ (932 ಅಡಿಗಳು) ಉದ್ದವಿದ್ದು, 44,500 ಟನ್‌ ತೂಕ ಹೊಂದಿದೆ. 7 ಸಾವಿರ ನಾಟಿಕಲ್ ಮೈಲುವರೆಗೂ (13,000 ಕಿ.ಮೀ) ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 1600 ರಿಂದ 2000 ಸಿಬ್ಬಂದಿ ಕಾರ್ಯನಿರ್ವಹಿಸಬಹುದು. 24 ಮಿಗ್ -29ಕೆ, 10 ಹೆಲಿಕಾಪ್ಟರ್ ಸೇರಿದಂತೆ ಒಟ್ಟು 34 ವಿಮಾನ ವಾಹಕಗಳನ್ನು ಸಾಗಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

ಭದ್ರತೆ: ಸುಮಾರು 5ಕ್ಕಿಂತ ಹೆಚ್ಚು ಯುದ್ಧ ನೌಕೆಗಳ ಬೆಂಗಾವಲಿನಲ್ಲಿ ವಿಕ್ರಮಾದಿತ್ಯ ನೌಕೆಯನ್ನು ಕಾರವಾರಕ್ಕೆ ತರಲಾಗಿದೆ. ಸದ್ಯ ಈ ನೌಕೆ ಕದಂಬ ನೌಕಾನೆಲೆಯ ಜಟ್ಟಿಗೆ ಬಾರದೇ ಅರ್ಗಾ ಬಳಿಯಲ್ಲಿ ಲಂಗರು ಹಾಕಿತ್ತು. ವಿಕ್ರಮಾದಿತ್ಯ ಬಂದಿರುವ ಹಿನ್ನೆಲೆಯಲ್ಲಿ ನೌಕಾನೆಲೆ ಪ್ರವೇಶ ದ್ವಾರ ಹಾಗೂ ಸುತ್ತಮುತ್ತಲು ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT