ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹಕ್ಕೆ ಸ್ಕ್ಯಾನರ್ ಅಳವಡಿಕೆ ಶೀಘ್ರ

Last Updated 20 ಜನವರಿ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಾರಕಾಸ್ತ್ರ, ಮೊಬೈಲ್ ಫೋನ್ ಮತ್ತು ಮಾದಕ ವಸ್ತುಗಳನ್ನು ಕಾರಾಗೃಹದೊಳಗೆ ಸಾಗಿಸಲು ನೆರವು ನೀಡುತ್ತಿರುವ ಪೊಲೀಸ್ ಅಧಿಕಾರಿಗಳೇ ಇದೀಗ ಈ ಅಕ್ರಮ ತಡೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಕ್ಯಾನರ್‌ಗಳನ್ನು ಕಾರಾಗೃಹಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ.

ಕಾರಾಗೃಹಗಳಲ್ಲಿ ಹ್ಯಾಂಡ್ ಮೆಟಲ್ ಡಿಟೆಕ್ಟರ್‌ಗಳಿಂದ (ಲೋಹ ಶೋಧಕ) ಕೈದಿಗಳ ಹಾಗೂ ಇತರೆ ವ್ಯಕ್ತಿಗಳ ತಪಾಸಣೆ ನಡೆಸುವ ವ್ಯವಸ್ಥೆ ಸದ್ಯ ಜಾರಿಯಲ್ಲಿದೆ.ಆದರೆ ಕೈದಿಗಳು ಹಾಗೂ ಅವರ ಸಂಬಂಧಿಕರಿಂದ ಹಣ ಪಡೆಯುವ ಕಾರಾಗೃಹ ಸಿಬ್ಬಂದಿ ಮಾರಕಾಸ್ತ್ರ, ಮಾದಕ ವಸ್ತುಗಳನ್ನು ಜೈಲಿನೊಳಗೆ ಕೊಂಡೊಯ್ಯಲು ಅವಕಾಶ ನೀಡುತ್ತಿರುವ ಪ್ರಕರಣಗಳು ಅವ್ಯಾಹತವಾಗಿ ಮುಂದುವರೆದಿವೆ. ಇದರಿಂದ ಜೈಲಿನೊಳಗೆಯೇ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಮತ್ತೊಂದೆಡೆ ಕೈದಿಗಳು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ಮೂಲಕ ಸಹಚರರನ್ನು ಸಂಪರ್ಕಿಸಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಈ ರೀತಿ ಕಾನೂನು ಬಾಹಿರವಾಗಿ ಕೈದಿಗಳಿಗೆ ನೆರವು ನೀಡುತ್ತಿರುವ ಸಿಬ್ಬಂದಿಯ ಅಕ್ರಮಗಳಿಗೆ ಕಡಿವಾಣ ಹಾಕಲು ವಿಫಲರಾಗಿರುವ ಕಾರಾಗೃಹ ಇಲಾಖೆ ಅಧಿಕಾರಿಗಳು ‘ಎಕ್ಸ್‌ರೇ ಬ್ಯಾಗೇಜ್’ ಸ್ಕ್ಯಾನರ್‌ಗಳನ್ನು ಜೈಲುಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ.

‘ಪ್ರಥಮ ಹಂತದಲ್ಲಿ ಬೆಂಗಳೂರು, ಬಳ್ಳಾರಿ, ಮಂಗಳೂರು, ಬೆಳಗಾವಿ, ಚಿತ್ರದುರ್ಗ, ಧಾರವಾಡ ಹಾಗೂ ವಿಜಾಪುರ ಕೇಂದ್ರ ಕಾರಾಗೃಹಗಳಲ್ಲಿ ಎಕ್ಸ್‌ರೇ ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆಯ (ಡಿಎಇ) ಅಧೀನದಲ್ಲಿರುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಕಾರಾಗೃಹ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜೈಲುಗಳ ಸುಧಾರಣೆಯ ಹಿನ್ನೆಲೆಯಲ್ಲಿ ಸ್ಕ್ಯಾನರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಎರಡು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು.

ಕಾನೂನಿನಲ್ಲಿ ಅವಕಾಶ: ಕೆಲವು ವಿಶೇಷ ಸಂದರ್ಭಗಳಲ್ಲಿ ಕೈದಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಹೊರಗಡೆಯಿಂದ ಜೈಲಿಗೆ ಆಹಾರ ತರಿಸಿಕೊಳ್ಳಲು ಅವಕಾಶವಿದೆ. ಅಲ್ಲದೇ ಕಾರಾಗೃಹ ಕೈಪಿಡಿ (ಮ್ಯಾನ್ಯುಯಲ್) ಅನ್ವಯ ಜೈಲು ಅಧೀಕ್ಷಕರು ಕೈದಿಗಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಹೊರಗಡೆಯಿಂದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲು ಅನುಮತಿ ನೀಡಬಹುದು. ಈ ಅವಕಾಶಗಳನ್ನು ಹೊರತುಪಡಿಸಿ ಕೈದಿಗಳು ಬೇರೆ ಯಾವುದೇ ರೀತಿಯಲ್ಲಿ ಆಹಾರ ಇನ್ನಿತರ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳುವುದು ಕಾನೂನು ಪ್ರಕಾರ ಅಕ್ರಮವಾಗುತ್ತದೆ.

ಕೆಲ ಪ್ರಕರಣಗಳು
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಗುಲ್ಬರ್ಗ ಜೈಲಿನಲ್ಲಿದ್ದ ತಡಕಲ್ ರಮೇಶ್ ಎಂಬ ಕೈದಿಯ ಕೊಠಡಿಯಲ್ಲಿ 2010ರ ಡಿಸೆಂಬರ್‌ನಲ್ಲಿ ಪಿಸ್ತೂಲ್ ಮತ್ತು ಎಂಟು ಸಜೀವ ಗುಂಡುಗಳು ಪತ್ತೆಯಾಗಿದ್ದವು. ಅದೇ ಜೈಲಿನಲ್ಲಿದ್ದ ರೌಡಿ ಬೆತ್ತನಗೆರೆ ಸೀನನನ್ನು ಕೊಲ್ಲಲು ಭೂಗತ ಪಾತಕಿ ಚೋಟಾ ರಾಜನ್‌ನ ಸಹಚರ ಯೂಸೂಫ್ ಬಚ್ಕಾನಾ, ತಡಕಲ್ ರಮೇಶ್‌ಗೆ ಸುಪಾರಿ ಕೊಟ್ಟಿದ್ದ. ಈ ಕೃತ್ಯಕ್ಕೆ ಬೇಕಿದ್ದ ಪಿಸ್ತೂಲ್ ಮತ್ತು ಗುಂಡುಗಳನ್ನು ರಮೇಶ್, ಪೊಲೀಸರ ನೆರವಿನಿಂದಲೇ ಸಿಹಿ ತಿಂಡಿಯ ಬಾಕ್ಸ್‌ನಲ್ಲಿ ಜೈಲಿನೊಳಗೆ ತರಿಸಿಕೊಂಡಿದ್ದ.

ಇದೇ ಕಾರಾಗೃಹದಲ್ಲಿ ಮಹಿಳಾ ವಾರ್ಡನ್ ಆಗಿದ್ದ ಜ್ಯೋತಮ್ಮ ಎಂಬುವರು ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದರು. ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಅವರು ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ಕೈದಿಗಳ ಬಳಿ 50ಕ್ಕೂ ಹೆಚ್ಚು ಮೊಬೈಲ್‌ಗಳ ಪತ್ತೆಯಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲೂ ಕಾರಾಗೃಹ ಸಿಬ್ಬಂದಿಯೇ ಮಾರಕಾಸ್ತ್ರ, ಮೊಬೈಲ್ ಮತ್ತು ಮಾದಕ ವಸ್ತುಗಳನ್ನು ಜೈಲಿನೊಳಗೆ ಸಾಗಿಸಲು ನೆರವು ನೀಡಿದ್ದ ವಿಷಯ ತನಿಖೆಯಿಂದ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT