ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ನಿಲುಗಡೆಗೆ ಪರಿಹಾರ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಗರಗಳಲ್ಲಿ ಶ್ರೀಮಂತರ ಬಂಗಲೆಗಳ ಅಂಗಳದಲ್ಲಿ, ಅಂಗಳದಾಚೆ 4-5 ಐಶಾರಾಮಿ ಕಾರುಗಳು ಇರುವುದು ಸಹಜ.  ಇತ್ತೀಚೆಗೆ  ಮೇಲ್ಮಧ್ಯಮ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳೂ ಸ್ವಂತಕ್ಕೆ ಒಂದು ಕಾರು ಹೊಂದಿರುವುದು ಸಾಮಾನ್ಯ ಎನ್ನುವಂತಾಗಿದೆ.

ರೂ1 ಲಕ್ಷ ನೀಡಿದರೆ ತಕ್ಕಮಟ್ಟಿಗಿರುವ ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತದೆ. ರೂ1.35 ಲಕ್ಷ ಇದ್ದರೆ ಟಾಟಾ ನ್ಯಾನೊ ಹೊಸ ಕಾರೇ ಮನೆ ಬಾಗಿಲಿಗೆ ಬರುತ್ತದೆ. ರೂ 3 ಲಕ್ಷಕ್ಕೆ ಮಾರುತಿ, ಇನ್ನಷ್ಟು ಲಕ್ಷ ಸೇರಿಸಿದರೆ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) ಮಾದರಿ ಕಾರುಗಳೂ ಲಭ್ಯ. ಅದರಲ್ಲೂ ಬ್ಯಾಂಕ್‌ಗಳು ಕರೆದು ಕಾರು ಸಾಲ ನೀಡುತ್ತವೆ.  ಬಡ್ಡಿಯೂ ಶೇ 12ರಿಂದ 14ರಷ್ಟಿರುತ್ತದೆ. ತಿಂಗಳಿಗೆ ರೂ. 4500 ಕಂತು ಕಟ್ಟಿದರಾಯಿತು. ಪರಿಣಾಮವೇ ನಗರಗಳ ಎಲ್ಲ ರಸ್ತೆಗಳಲ್ಲಿ, ಫುಟ್‌ಪಾತ್‌ನಲ್ಲಿ, ಮನೆಅಂಗಳದಲ್ಲಿ ಎಲ್ಲೆಲ್ಲೂ ಕಾರ್.. ಕಾರ್... ಕಾರ್...

ಮಧ್ಯಮ ವರ್ಗದವರಿಗೆ ಈಗ ಕಾರು ಐಶಾರಾಮಿ ಅಲ್ಲ ಅಗತ್ಯ ಎನಿಸಿಬಿಟ್ಟಿದೆ. ಕನಿಷ್ಠ ರೂ 25,000 ಸಂಬಳ ತೆಗೆದುಕೊಳ್ಳುವವರಿಗೂ ಸ್ವಂತಕ್ಕೆ ಕಾರು ಇರಬೇಕಾದ್ದೇ ಜೀವನ ನಿಯಮ ಎನ್ನುವಂತಾಗಿದೆ.

ಮನೆಗೊಂದು ಕಾರು-ಬೈಕ್!
ಅದೇನೋ ಸರಿ, ಕಾರು-ಬೈಕ್‌ಗಳೆರಡಕ್ಕೂ ನಿಲ್ಲಿಸಲು ಜಾಗ ಬೇಡವೇ? 20-30 ಅಥವಾ 30-40 ಅಡಿ ಉದ್ದಗಲದ ನಿವೇಶನದಲ್ಲಿ ಪಾರ್ಕಿಂಗ್‌ಗೆ ಜಾಗ ಬಿಡುವುದೆಂದರೆ, ಮಿನಿ ಮೀಲ್ಸ್ ದುಡ್ಡಿಗೆ ಫುಲ್ ಮೀಲ್ಸ್ ಕೋರಿದಂತೆ... ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ!

`ಮನೆ ಕಿರಿದಾಗಬಾರದು, ಕಾರು ನಿಲುಗಡೆಗೂ ಜಾಗ ಬೇಕು. ಅಂಥ ಪ್ಲಾನ್ ಹಾಕಿಕೊಡಿ' ಎನ್ನುವ ಮಧ್ಯಮ ವರ್ಗದ ಗ್ರಾಹಕರನ್ನು ಸಂತೃಪ್ತಿಗೊಳಿಸುವುದೆಂದರೆ `ವಾಸ್ತುಶಿಲ್ಪಿ'ಗಳಿಗೆ ದೊಡ್ಡ ಸವಾಲೇ ಸರಿ.

ನಿವೇಶನದಲ್ಲಿ ಸೆಲ್ಲಾರ್ ಮಾಡೋಣವೆಂದರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೀಲನಕ್ಷೆ ತಿರಸ್ಕೃತವಾಗುತ್ತದೆ. ಚಿಕ್ಕ ಅಳತೆ ನಿವೇಶನದಲ್ಲಿ ಸೆಲ್ಲಾರ್‌ಗೆ ಅನುಮತಿ ಇಲ್ಲ. 20-30 ಅಥವಾ 30-40  ಅಡಿ ಉದ್ದಗಲದ ನಿವೇಶನದಲ್ಲಿ ಪೋರ್ಟಿಕೊ ವಿನ್ಯಾಸ ಮಾಡಿದರೆ ಮನೆ ಒಳಭಾಗ 10-12 ಅಡಿ ಕಿರಿದಾಗುತ್ತದೆ.

ಇದಕ್ಕೆ ಸೂಕ್ತ ಪರಿಹಾರ `ಡ್ಯುಪ್ಲೆಕ್ಸ್ ಮನೆ' ಅಥವಾ `ಎರಡು ಸ್ಥರದ ಮನೆ' ಎನ್ನುತ್ತಾರೆ ಅನುಭವಿ ವಾಸ್ತುಶಿಲ್ಪಿಗಳು.
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಸಾಮಾನ್ಯವಾಗಿ ಚಿಕ್ಕ ಗಾತ್ರದ ಕಾರು ಖರೀದಿಸುತ್ತಾರೆ. ಇವುಗಳ ಉದ್ದ-ಅಗಲ-ಎತ್ತರ ಕ್ರಮವಾಗಿ 10.5-5-4.6 ಅಡಿ ಇರುತ್ತದೆ. ಇದಕ್ಕಾಗಿ ಪೋರ್ಟಿಕೊ ನಿರ್ಮಿಸಬೇಕಿಲ್ಲ. ನೆಲ ಅಂತಸ್ತು ನಿರ್ಮಿಸುವಾಗ 20-30 ನಿವೇಶನವಾದರೆ 10 ಅಡಿ ಅಗಲ, 12 ಅಡಿ ಉದ್ದ, 30-40 ಅಡಿ ನಿವೇಶನವಾದರೆ 20 ಅಡಿ ಅಗಲ ಮತ್ತು 12 ಅಡಿ ಉದ್ದ ಜಾಗ ಬಿಟ್ಟರಾಯಿತು. ಇಲ್ಲಿ 1.5 ಅಥವಾ 2 ಅಡಿ ಆಳ ಮಣ್ಣು ಅಗೆದು ಒಟ್ಟು 7 ಅಡಿ ಎತ್ತರಕ್ಕೆ ತಾರಸಿ ನಿರ್ಮಿಸಿದರೆ ಕಾರು ನಿಲುಗಡೆಗೆ ಜಾಗ ಸಾಕಾಗುತ್ತದೆ.

ಅಂದರೆ ನೆಲ ಮಟ್ಟದಿಂದ 4.5 ಅಥವಾ 5 ಅಡಿ ಎತ್ತರಕ್ಕೆ ಒಂದು ತಾರಸಿ ನಿರ್ಮಾಣವಾಗುತ್ತದೆ. ನಂತರ ಮನೆಯ ಗೋಡೆ ಕಟ್ಟುವಾಗ ತಳಪಾಯ ನೆಲದಿಂದ 2 ಅಡಿ ಮೇಲೆ ಬರುವಂತೆ ವಿನ್ಯಾಸ ಮಾಡಬೇಕು. ಆಗ ಕಾರಿನ ನಿಲುಗಡೆ ಜಾಗದ ತಾರಸಿ ಮನೆಯ ಒಳಭಾಗದಲ್ಲಿ ಫ್ಲೋರಿಂಗ್‌ನಿಂದ ಕೇವಲ ಎರಡೂವರೆ ಅಡಿ ಎತ್ತರದಲ್ಲಿ ಇರುತ್ತದೆ. ಅಂದರೆ, ನೆಲ ಅಂತಸ್ತಿನಲ್ಲಿಯೇ ಎರಡು ಹಂತಗಳು ಬರುತ್ತವೆ. ಇಲ್ಲಿ ಒಂದೆಡೆ ದೊಡ್ಡ ಹಾಲ್ ಮತ್ತು ಅಡುಗೆ ಕೋಣೆ, ಮತ್ತೊಂದೆಡೆ ಒಂದು ಕೊಠಡಿ ಮತ್ತು ಸ್ನಾನದ ಮನೆ ಬರುವಂತೆ ವಿಭಜಿಸಿಕೊಳ್ಳಬಹುದು. ಇದರಿಂದ ಮನೆಯೊಳಗೆ ಎರಡು ಹಂತದ ಭಿನ್ನ ವಿನ್ಯಾಸ, ಜತೆಗೆ ಕಾರು ನಿಲ್ಲಿಸಲು ಸುರಕ್ಷಿತ ಜಾಗ ಎರಡೂ ಕೈಗೂಡುತ್ತದೆ.

`ಗೇಟ್' ಪರಿಹಾರ!
ಮೊದಲು ಮನೆ ನಿರ್ಮಿಸಿ ನಂತರ ಕಾರು ಖರೀದಿಸಿದವರು ಪಾರ್ಕಿಂಗ್ ಸಮಸ್ಯೆಗೆ `ಗೇಟಿನ ವಿನ್ಯಾಸ ಬದಲಾವಣೆ' ಮೂಲಕ ಪರಿಹಾರ ಕಂಡುಕೊಳ್ಳುತ್ತಿರುವುದು ನಗರಗಳಲ್ಲಿ ಬಹಳಷ್ಟು ಕಡೆ ಕಣ್ಣಿಗೆ ಬೀಳುತ್ತದೆ. ಕಾಂಪೌಂಡ್‌ಗೆ ಸಮಾನಾಂತರವಾಗಿರುವ ಗೇಟನ್ನು ಕಿತ್ತುಹಾಕುವುದು, ಗೇಟಿನ ಎಡ-ಬಲ ಮಗ್ಗಲು ಕಾಂಪೌಂಡ್‌ನಿಂದ 2-3 ಅಡಿ ಮುಂದಕ್ಕೆ ಚಾಚಿಕೊಂಡಿರುವಂತೆ (ಚಿತ್ರಗಳಲ್ಲಿರುವಂತೆ) ವಿನ್ಯಾಸಗೊಳಿಸುವುದು ಸಾಮಾನ್ಯವಾಗಿದೆ.

ಪಾದಚಾರಿ ಮಾರ್ಗವೇ ಗತಿ
ಕೆಲವು ಹಳೆಯ ಬಡಾವಣೆಗಳಲ್ಲಿ ಪುಟ್ಟ ಮನೆಗಳ ಅಂಗಳದಲ್ಲಿ ಪೋರ್ಟಿಕೊ ನಿರ್ಮಿಸಲಾಗಲೀ, ಗೇಟು  ಮರು ವಿನ್ಯಾಸಕ್ಕಾಗಲೀ ಜಾಗವಿರುವುದಿಲ್ಲ. ಅಂತಹವರ ಕಾರುಗಳಿಗೆ ಪಾದಚಾರಿ ಮಾರ್ಗವೇ(ಅನಧಿಕೃತ) ಪಾರ್ಕಿಂಗ್ ಪ್ಲೇಸ್!
ಎಲ್ಲವೂ `ಎಲ್ನೋಡಿ ಕಾರ್' ಎಂಬುದರ ಮಹಿಮೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT