ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಬದಿಗಿಟ್ಟು ಬಸ್ ಏರಿದ ಮುಖ್ಯಮಂತ್ರಿ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಸಾರಿಗೆಯ ಬಗ್ಗೆ ಬೆಂಗಳೂರಿಗರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ 2010ರ ಫೆಬ್ರವರಿಯಲ್ಲಿ ಆರಂಭಿಸಲಾದ ಬಸ್ ದಿನವನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಾರ್ವಜನಿಕರೊಂದಿಗೆ ಬಸ್ ಏರುವುದರ ಮೂಲಕ ಬಸ್ ದಿನಕ್ಕೆ ಹೊಸ ಕಳೆ ತಂದುಕೊಟ್ಟರು.

ತಮ್ಮ ಸರ್ಕಾರಿ ಕಾರನ್ನು ಬದಿಗಿಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರದ ತಮ್ಮ ಪ್ರಯಾಣಕ್ಕೆ ಆಯ್ದುಕೊಂಡಿದ್ದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ‘ವಜ್ರ’ ಹವಾನಿಯಂತ್ರಿತ ಬಸ್ ಅನ್ನು.

ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಅತ್ತಿಬೆಲೆಗೆ ಸಾಗುವ ಬಸ್ ಅನ್ನು ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದ ಬಳಿ ಹತ್ತಿದ ಮುಖ್ಯಮಂತ್ರಿಗಳಿಗೆ ಸಾರಿಗೆ ಸಚಿವ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ. ಸತೀಶ್ ಸಾಥ್ ನೀಡಿದರು.

ಎಲ್ಲರಂತೆ ತಾವೂ ಬಸ್ ನಿರ್ವಾಹಕರಿಂದ ಟಿಕೆಟ್ ಪಡೆದುಕೊಂಡ ಮುಖ್ಯಮಂತ್ರಿಗಳು ಮಾರ್ಗದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದರು.‘ಬಸ್‌ನಲ್ಲಿ ಹೆಚ್ಚು ಮಂದಿ ಪ್ರಯಾಣಿಸುವಂತೆ ಆಗಬೇಕು. ಬೆಂಗಳೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಮೂಲಕ ಪ್ರಯಾಣಿಸಲು ಆರಂಭಿಸಿದರೆ ಇಲ್ಲಿನ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ತಗ್ಗುತ್ತದೆ’ ಎಂದರು.

2020ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ದಾಟುವ ನಿರೀಕ್ಷೆ ಇದೆ. ಇಲ್ಲಿ ಇನ್ನೂ ಉತ್ತಮ ಗುಣಮಟ್ಟದ ಸಾರಿಗೆ ಸಂಪರ್ಕದ ಅವಶ್ಯಕತೆ ಇದೆ. ಮೆಟ್ರೊ ಮತ್ತು ಮಾನೊ ರೈಲುಗಳು ಸಂಚಾರ ಆರಂಭಿಸಿದ ನಂತರ ಇಲ್ಲಿನ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ ಎಂದರು.

‘ಇಷ್ಟೇ ಸಾಲದು, ಇನ್ನಷ್ಟು ಉಪನಗರಗಳು ಬೆಳೆಯಬೇಕು. ಆಗ ಮಾತ್ರ ಜನಸಂಖ್ಯಾ ದಟ್ಟಣೆಯಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.
2011ರ ಜನಗಣತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ‘ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲೂ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಅಲ್ಲಿನ ಸಂಚಾರದಟ್ಟಣೆ ನಿವಾರಿಸಬೇಕು’ ಎಂದರು.

ಗತಕಾಲ ನೆನಪಿಸಿಕೊಂಡ ಸಿಎಂ: ತಾವು ವಿರೋಧಪಕ್ಷದ ನಾಯಕ ಆಗುವುದಕ್ಕಿಂತ ಮೊದಲು ಬಸ್‌ನಲ್ಲೇ ಸಂಚರಿಸುತ್ತಿದ್ದನ್ನು ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು, ‘ಸುಮಾರು 11 ವರ್ಷಗಳ ನಂತರ ಮತ್ತೆ ಬಸ್ ಪ್ರಯಾಣ ಮಾಡುತ್ತಿದ್ದೇನೆ’ ಎಂದರು. ರಸ್ತೆಯ ಪಕ್ಕದಲ್ಲಿ ಜನರಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಲೇ ಕೈಬೀಸುತ್ತಿದ್ದರು.

ಚಕಿತಗೊಂಡ ಸಹಪ್ರಯಾಣಿಕರು: ‘ಇಂದು ಬಸ್‌ದಿನ ಎಂದು ಗೊತ್ತಿತ್ತು, ಆದರೆ ಮುಖ್ಯಮಂತ್ರಿಗಳು ಈ ಬಸ್‌ನಲ್ಲಿ ಬರುತ್ತಾರೆ ಎಂಬುದು ತಿಳಿದಿರಲಿಲ್ಲ’ ಎಂದು ಐಟಿ ಕಂಪೆನಿಯೊಂದರ ಉದ್ಯೋಗಿಯೊಬ್ಬರು ಹೇಳಿದರು.

ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಎಂಟು ಮಂದಿ ಪ್ರಯಾಣಿಕರು ಬಸ್‌ನಲ್ಲಿದ್ದರು. ಮುಖ್ಯಮಂತ್ರಿಗಳಿಗೆ ತಮ್ಮ ಪರಿಚಯ ಹೇಳಿಕೊಂಡ ಅವರು, ‘ಸರ್ಕಾರಿ ನೌಕರರಿಗೂ ತಿಂಗಳಲ್ಲಿ ಕನಿಷ್ಠ ಒಂದು ಬಾರಿ ಬಸ್‌ನಲ್ಲೇ ಸಂಚರಿಸುವಂತೆ ಸೂಚಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ‘ಇದು ಒಳ್ಳೆಯ ಸಲಹೆ. ಇದರಿಂದ ಇಂಧನವೂ ಉಳಿಯುತ್ತದೆ, ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ’ ಎಂದು ಉತ್ತರಿಸಿದರು.
ಆದಾಯ ಹೆಚ್ಚಾಗಿದೆ: ಬಸ್ ದಿನಾಚರಣೆ ಆರಂಭವಾದ ನಂತರ ಬಿಎಂಟಿಸಿಯ ವಾರ್ಷಿಕ ಆದಾಯ ಒಂದು ಸಾವಿರ ಕೋಟಿ ರೂಪಾಯಿಯಿಂದ 1,250 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.

ಕೇರಳ ಸರ್ಕಾರ ಕೂಡ ಇದೇ ಮಾದರಿಯನ್ನು ಅನುಸರಿಸಲು ಆರಂಭಿಸಿದೆ. ಕೊಚ್ಚಿಯಲ್ಲಿ ಈಗಾಗಲೇ ಬಸ್ ದಿನಾಚರಣೆ ಆರಂಭವಾಗಿದೆ ಎಂದರು.ಮುಖ್ಯಮಂತ್ರಿಗಳು ಪ್ರಯಾಣಿಸಿದ ಬಸ್‌ನಲ್ಲಿದ್ದ ಒಟ್ಟು 28 ಮಂದಿ ಪ್ರಯಾಣಿಕರಿಂದ 1,600 ರೂಪಾಯಿ ಸಂಗ್ರಹವಾಗಿದೆ ಎಂದು ಬಸ್‌ನ ನಿರ್ವಾಹಕರು ತಿಳಿಸಿದರು. ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಯ್ಯದ್ ಜಮೀರ್ ಪಾಷಾ ಬಸ್ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅತ್ತಿಬೆಲೆಯಲ್ಲಿ ಬಸ್ ಇಳಿದ ಮುಖ್ಯಮಂತ್ರಿ ಮತ್ತು ಸಚಿವ ಅಶೋಕ ಅವರು ಅಲ್ಲಿಂದ ತಮಿಳುನಾಡಿನ ತಲ್ಲಿ, ಹೊಸೂರು ಮತ್ತು ಕೃಷ್ಣಗಿರಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT