ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳದ ಅನಂತಶಯನ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಕಾರ್ಕಳ ಪೇಟೆಯ ಮಧ್ಯ ಭಾಗದಲ್ಲಿ ಶ್ರೀ ಅನಂತಶಯನ ದೇವಸ್ಥಾನ ಸುಮಾರು 800 ವರ್ಷಗಳಷ್ಟು ಹಿಂದಿನದು. ಇದು ಕಲ್ಲಿನಿಂದಲೇ ನಿರ್ಮಾಣವಾದ ದೇವಸ್ಥಾನ.

ದೇವಸ್ಥಾನದ ಮೇಲ್ಛಾವಣಿಗೆ ಬೃಹತ್ತಾದ ಕಲ್ಲುಗಳನ್ನೇ ಹಾಸಲಾಗಿದೆ.  ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯವೆಂದರೆ ಗರ್ಭಗುಡಿ ಮತ್ತು ತೀರ್ಥ ಮಂಟಪ ಒಂದಕ್ಕೊಂದು ತಾಗಿಕೊಂಡಿವೆ.

ಅನಂತಶಯನ ಮೂರ್ತಿಯಂತೂ ಅತ್ಯಂತ ಚೆಂದವಾಗಿದೆ. ರಾಜ್ಯದ ಹತ್ತು ಅನಂತಶಯನ ದೇವಸ್ಥಾನಗಳಲ್ಲೇ ಇದು ಅತ್ಯಂತ ಸುಂದರ ಮೂರ್ತಿ ಎಂಬ ಅಭಿಪ್ರಾಯವಿದೆ. ಅನಂತಶಯನ ದೇವಸ್ಥಾನಗಳಿಲ್ಲಿ ಕೆಲವೆಡೆ ನಿಂತ ಭಂಗಿಯ ಮೂರ್ತಿಗಳಿದ್ದರೆ ಇಲ್ಲಿನ ಅನಂತಶಯನ ತಲೆ ಕೆಳಗೆ ಬಲಗೈಯಿರಿಸಿ ಮಲಗಿದ ಭಂಗಿಯಲ್ಲಿದೆ.
 
ಅನಂತಶಯನ ಮೂರ್ತಿಯ ಬಲಗೈಯಲ್ಲಿ ಶಂಖ, ಎಡಗೈಯಲ್ಲಿ ಗದೆ, ಹಿಂಬದಿಯ ಬಲಗೈಯಲ್ಲಿ ಪದ್ಮ, ಹಿಂಬದಿಯ ಎಡಗೈಯಲ್ಲಿ ಚಕ್ರ ವಿದೆ. ಇಂತಹ ಮೂರ್ತಿ ಬೇರೆಲ್ಲೂ ಕಾಣಸಿಗುವುದಿಲ್ಲ.

ಗರ್ಭಗುಡಿಯ ಮುಂದೆ ಎರಡೂ ಕಡೆಗಳಲ್ಲಿ ಕಾಷ್ಠ ಶಿಲ್ಪ ಅಮೋಘವಾಗಿದೆ. ತೀರ್ಥ ಮಂಟಪದ ಒಳಭಾಗದಲ್ಲಿ ನಾಲ್ಕು ಬೃಹತ್ ಕಲ್ಲಿನ ಕಂಬಗಳಿದ್ದು ಅವು ದೇವಸ್ಥಾನ ಒಳಾಂಗಣವನ್ನು ಸುಂದರಗೊಳಿಸಿವೆ.

ಇಲ್ಲಿ ಪ್ರಚಲಿತವಿರುವ ನಂಬಿಕೆಯೊಂದರ ಪ್ರಕಾರ ಶೃಂಗೇರಿಯ ಶ್ರೀ ನರಸಿಂಹಭಾರತೀ ಸ್ವಾಮಿಗಳವರು ಉಡುಪಿ ಜಿಲ್ಲೆಯ ಕಾರ್ಕಳ ಮಾರ್ಗವಾಗಿ ದಿಗ್ವಿಜಯ ಪ್ರವಾಸ ಹೋಗುತ್ತಿರುವಾಗ ಆಗ ಕಾರ್ಕಳದ ಅರಸರಾದ ಬೈರವ ಅರಸರು (ಅವರು ಜೈನ ಧರ್ಮಿಯರು) ಶ್ರೀಗಳವರನ್ನು ಸಕಲ ಮರ್ಯಾದೆಯಿಂದ ಸ್ವಾಗತಿಸಿ ಆತಿಥ್ಯ ನೀಡಿದ್ದರು.

ಆ ಸಂದರ್ಭದಲ್ಲಿ ಸ್ವಾಮೀಜಿಯವರು ದೇವಸ್ಥಾನ ಇಲ್ಲದ ಈ ತಾಣದಲ್ಲಿ ತಾನು ನಿಲ್ಲಲಾರನೆಂದು ಹೇಳಿದ್ದರಂತೆ.ಅದರಿಂದ ಬೇಸರಗೊಂಡು ಕಾರ್ಕಳದಿಂದ 10 ಕಿ.ಮೀ ದೂರದ ನೆಲ್ಲಿಕಾರು ಗ್ರಾಮದ ಕೆರೆಯ ಬಳಿ  ಶ್ರೀಅನಂತ ಪದ್ಮನಾಭನ ಚೆಂದದ ಪ್ರತಿಮೆ ಇರುವುದನ್ನು ತಿಳಿದು ಅದನ್ನು ತರಿಸಿ, ಕಾರ್ಕಳದಲ್ಲಿ ನಿರ್ಮಾಣವಾಗುತ್ತಿದ್ದ ಜೈನ ಬಸದಿಯಲ್ಲಿ ಅದನ್ನು ಪ್ರತಿಷ್ಠಾಪಿಸಿದರು  ಎಂಬ ಪ್ರತೀತಿ ಇದೆ.

ಕಾರ್ಕಳದ ಅನಂತಶಯನ ದೇವಸ್ಥಾನ ಕರ್ನಾಟಕದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು. ದೇವಸ್ಥಾನದ ಎಡ ಪಾರ್ಶ್ವದಲ್ಲಿ ನೋಡಿದರೆ ಜೈನ ಬಸದಿಯ ಸ್ವರೂಪ ಸ್ಪಷ್ಟವಾಗಿ ಕಾಣಿಸುತ್ತದೆ. ಹೆಬ್ಬಾಗಿಲಿನ ಕೆತ್ತನೆಗಳು 800 ವರ್ಷಗಳಾದರೂ ಇಂದಿಗೂ ಆಕರ್ಷಕವಾಗಿವೆ.

ಗರ್ಭಗುಡಿಯಲ್ಲಿರುವ ಓರಣದ ಹಾಸಿಯಂತೆ ಸುತ್ತುಗಟ್ಟಿದ ಆದಿಶೇಷನ ಮೇಲೆ ಶಂಖ, ಗದಾಧಾರಿ ವಿಷ್ಣು ಮಲವಿ ವಿಶ್ರಮಿಸುತ್ತಿರುವಂತೆ ಕಾಣುತ್ತದೆ. ಹಳೆಯ ಕಾಲದ ಉತ್ಕೃಷ್ಟ ಶಿಲ್ಪಗಳು, ತೀರ್ಥ ಮಂಟಪದ ನಾಲ್ಕು ಬೃಹತ್ ಕಂಬಗಳು ಅತ್ಯಂತ ಆಕರ್ಷಕವಾಗಿವೆ.
 
ಪ್ರತಿ ವರ್ಷ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಅನಂತ ಪದ್ಮನಾಭಸ್ವಾಮಿಗೆ ಭಾರೀ ಅಲಂಕಾರ ಮಾಡುತ್ತಾರೆ. ಅದನ್ನು ನೋಡಲೆಂದೇ ಸಾವಿರಾರು ಜನರು ದೇವಸ್ಥಾನಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಅನಂತಶಯನ ಸ್ವಾಮಿಗೆ ವಿಶೇಷ ಚಾಮರ ಸೇವೆಯೂ ನಡೆಯುತ್ತದೆ.

ದೇವಸ್ಥಾನದಲ್ಲಿ ನಿತ್ಯ ಮುಂಜಾನೆ 7.30ರಿಂದ 8.30ರವರೆಗೆ ಅರ್ಚನೆ ನಡೆಯುತ್ತದೆ. ಮಧ್ಯಾಹ್ನ 12.30ಕ್ಕೆ ಮಹಮಂಗಳಾರತಿ. ಸಂಜೆ 5 ರಿಂದ 9 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ದೇವಸ್ಥಾನದಲ್ಲಿ ಮದುವೆಗೆ ಅವಕಾಶವಿದೆ. ಮದುವೆ ಸಭಾಂಗಣವನ್ನು ಒಂದು ತಿಂಗಳ ಮೊದಲೇ ಹಣ ನೀಡಿ ಕಾಯ್ದಿರಿಸಬೇಕು.

ದೇವಸ್ಥಾನದಲ್ಲಿ ಮಹಾಮಂಗಳಾರತಿ ನಂತರ ಊಟದ ವ್ಯವಸ್ಥೆ ಇದೆ. ದೇವಸ್ಥಾನದ ಛತ್ರದಲ್ಲಿ ಭಕ್ತರಿಗೆ ಉಳಿಯಲು ಕೊಠಡಿಗಳಿವೆ. ಪುತ್ತೂರಿನಲ್ಲಿ ಖಾಸಗಿ ಲಾಡ್ಜ್‌ಗಳು ಸಾಕಷ್ಟಿವೆ. ಹೆಚ್ಚಿನ ಮಾಹಿತಿಗೆ ಪ್ರಶಾಂತ್ ಭಟ್ ಅವರನ್ನು ಸಂಪರ್ಕಿಸಬಹುದು.ಅವರ ದೂರವಣಿ ನಂಬರ್-9945984495.

ಅನಂತಶಯನ ದೇವಸ್ಥಾನವನ್ನು ಪ್ರಾಚ್ಯ ಸಂಶೋಧನಾ ಇಲಾಖೆಯವರು ಅಧ್ಯಯನ ಮಾಡುತ್ತಿದ್ದಾರೆ. ದೇವಸ್ಥಾನದ  ತೀರ್ಥ ಮಂಟಪ ಜೀರ್ಣಾವಸ್ಥೆಯಲ್ಲಿದೆ.
ಕಾರ್ಕಳಕ್ಕೆ ಬರುವವರು ಉಡುಪಿಯಿಂದ ಬೆಳ್ಮಣ್ಣು ಮಾರ್ಗವಾಗಿ ಬರಬಹುದು, ತೀರ್ಥಹಳ್ಳಿ ಶಿವಮೊಗ್ಗ ಕಡೆಯಿಂದ ಬರುವವರು ಆಗುಂಬೆ, ಹೆಬ್ರಿ, ಮಾರ್ಗವಾಗಿ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT