ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟರ್‌ ಆಟಕ್ಕೆ ಕಂಗೆಟ್ಟ ಭಾರತ

ಕ್ರಿಕೆಟ್‌: ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸ್‌ ‘ಎ’ ತಂಡ ಜಯಭೇರಿ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಜೊನಾಥನ್‌ ಕಾರ್ಟರ್‌ ಕಟ್ಟಿದ ಸುಂದರ ಇನಿಂಗ್ಸ್‌ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ವೆಸ್ಟ್‌ ಇಂಡೀಸ್‌ ‘ಎ’ ತಂಡ ಭಾರತ ‘ಎ’ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶ ಕಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ 55 ರನ್‌ಗಳ ಗೆಲುವು ಪಡೆದ ಕೀರನ್‌ ಪೊವೆಲ್‌ ಬಳಗ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 1–1 ರಲ್ಲಿ ಸಮಬಲ ಸಾಧಿಸಿದೆ. ಈ ಕಾರಣ ಗುರುವಾರ ಇದೇ ತಾಣದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಕುತೂಹಲ ಮೂಡಿಸಿದೆ.

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 279 ರನ್‌ ಪೇರಿಸಿತು. ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಏಕಾಂಗಿ ಹೋರಾಟ ನಡೆಸಿ 133 ರನ್‌ ( 132 ಎಸೆತ, 18 ಬೌಂ, 3 ಸಿಕ್ಸರ್‌) ಕಲೆಹಾಕಿದ ಕಾರ್ಟರ್‌ ವಿಂಡೀಸ್‌ನ ಸವಾಲಿನ ಮೊತ್ತಕ್ಕೆ ಕಾರಣರಾದರು.

ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಯುವರಾಜ್‌ ಸಿಂಗ್‌ ಬಳಗ 48.4 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲೌಟಾಯಿತು. ಮಿಗುಯೆಲ್‌ ಕಮಿನ್ಸ್‌ (31ಕ್ಕೆ 4) ಆತಿಥೇಯ ತಂಡದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರೆ, ಕಾರ್ಟರ್‌ (33ಕ್ಕೆ 2) ಬೌಲಿಂಗ್‌ನಲ್ಲೂ ತಮ್ಮ ‘ಕರಾಮತ್ತು’ ತೋರಿದರು.

ಬೆಳಿಗ್ಗೆ ಟಾಸ್‌ ಗೆದ್ದ ಯುವರಾಜ್‌ ಫೀಲ್ಡಿಂಗ್‌ ನಡೆಸಲು ನಿರ್ಧರಿಸಿದರು. ಆರ್‌. ವಿನಯ್‌ ಕುಮಾರ್‌ (56ಕ್ಕೆ 3) ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಆಂಡ್ರೆ ಫ್ಲೆಚರ್‌ (15) ಮತ್ತು ಕೀರನ್‌ ಪೊವೆಲ್‌ (4) ಪ್ರವಾಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವಲ್ಲಿ ಎಡವಿದರು.

ಕಾರ್ಟರ್‌ ಮತ್ತು ಕರ್ಕ್‌ ಎಡ್ವರ್ಡ್ಸ್‌  (36, 58 ಎಸೆತ) ಜೋಡಿ ಮೂರನೇ ವಿಕೆಟ್‌ಗೆ 79 ರನ್‌ಗಳನ್ನು ಸೇರಿಸಿತು. ಈ ಜೊತೆಯಾಟ ತಂಡದ ಇನಿಂಗ್ಸ್‌ಗೆ ಅಗತ್ಯವಿದ್ದ ಬಲ ನೀಡಿತು. ಎಡ್ವರ್ಡ್ಸ್‌ ವಿಕೆಟ್‌ ಪಡೆದ ಯೂಸುಫ್‌ ಪಠಾಣ್‌ ಈ ಜೊತೆಯಾಟ ಮುರಿದರು. ಬಳಿಕ ಕ್ರೀಸ್‌ಗಿಳಿದ ಆಂಡ್ರೆ ರಸೆಲ್‌ ‘ಆವೇಶ’ ಬಂದವರಂತೆ ಎರಡು ಸಿಕ್ಸರ್‌ ಸಿಡಿಸಿದರೂ, ಮತ್ತೊಂದು ಸಿಕ್ಸರ್‌ಗೆ ಮುಂದಾಗಿ ಔಟಾದರು.

ಈ ಹಂತದಲ್ಲಿ ಭಾರತದ ಬೌಲರ್‌ಗಳಿಗೆ ಮೇಲುಗೈ ಸಾಧಿಸುವ ಅವಕಾಶವಿತ್ತು. ಆದರೆ ಕಾರ್ಟರ್‌ ಮತ್ತು ಲಿಯೊನ್‌ ಜಾನ್ಸನ್‌ (39, 46 ಎಸೆತ) ಅದಕ್ಕೆ ಅವಕಾಶ ನೀಡಲಿಲ್ಲ. ಇವರು ಐದನೇ ವಿಕೆಟ್‌ಗೆ 109 ಎಸೆತಗಳಲ್ಲಿ 131 ರನ್‌ ಕಲೆಹಾಕಿದರು.

ಒತ್ತಡವನ್ನು ಮೆಟ್ಟಿನಿಂತು ಸುಂದರ ಇನಿಂಗ್ಸ್‌ ಕಟ್ಟಿದ ಕಾರ್ಟರ್‌ ಆತಿಥೇಯ  ತಂಡವನ್ನು ಇನ್ನಿಲ್ಲದಂತೆ ಕಾಡಿದರು. ಭಾರತದ ಆಟಗಾರರ ಕಳಪೆ ಕ್ಷೇತ್ರರಕ್ಷಣೆ ಕೂಡಾ ಅವರಿಗೆ ನೆರವಾಯಿತು ಎಂಬುದನ್ನು ಮರೆಯುವಂತಿಲ್ಲ.

ಆರು ರನ್‌ ಗಳಿಸಿದ್ದ ಸಂದರ್ಭ ಕಾರ್ಟರ್‌ಗೆ ಜೀವದಾನ ಲಭಿಸಿತ್ತು. ಶಹಬಾಜ್‌ ನದೀಮ್‌ ಎಸೆತದಲ್ಲಿ ಕಾರ್ಟರ್‌ ಬ್ಯಾಟ್‌ನ ಅಂಚಿಗೆ ತಾಗಿ ಮೇಲಕ್ಕೆ ಚಿಮ್ಮಿದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿದ್ದ  ಪಠಾಣ್‌ ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾಗಿದ್ದರು. ಈ ತಪ್ಪಿಗೆ ತಂಡ ಭಾರಿ ಬೆಲೆಯನ್ನೇ ತೆರಬೇಕಾಯಿತು.

ಬಾರ್ಬಡೀಸ್‌ನ ಈ ಎಡಗೈ ಬ್ಯಾಟ್ಸ್‌ಮನ್‌ ಪರಿಸ್ಥಿತಿಗೆ ಹೊಂದಿಕೊಳ್ಳಲು ಅಲ್ಪ ಸಮಯ ತೆಗೆದುಕೊಂಡರು. ಮೊದಲ 30 ಎಸೆತಗಳಲ್ಲಿ ಅವರು ಗಳಿಸಿದ್ದು ಕೇವಲ ಏಳು ರನ್‌. ಆ ಬಳಿಕ ತೋರಿದ ಆಟ ಚೇತೋಹಾರಿಯಾಗಿತ್ತು. ಆಕ್ರಮಣ ಹಾಗೂ ರಕ್ಷಣೆಯನ್ನು ಮೈಗೂಡಿಸಿಕೊಂಡು ತಮ್ಮ ಇನಿಂಗ್ಸ್‌ ಬೆಳೆಸಿದರು. ವಿಂಡೀಸ್‌ ಕೊನೆಯ 10 ಓವರ್‌ಗಳಲ್ಲಿ 97 ರನ್‌ಗಳನ್ನು ಕಲೆಹಾಕಿತು.

ಆರಂಭದಲ್ಲೇ ಆಘಾತ: ಸವಾಲಿನ ಗುರಿ ಬೆನ್ನಟ್ಟತೊಡಗಿದ ಭಾರತ ತಂಡದ ಆರಂಭ ಚೆನ್ನಾಗಿರಲಿಲ್ಲ. ರಾಬಿನ್‌ ಉತ್ತಪ್ಪ 10 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಕಾರ್ಟರ್‌ ಎಸೆತದಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್‌ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಆದರೆ ಅವರ ಕಾಲಿಗೆ ತಾಗಿದ ಚೆಂಡು ನಿಧಾನವಾಗಿ ಉರುಳುತ್ತಾ ಸ್ಪಂಪ್‌ಗೆ ಬಡಿಯಿತು. ಈ ಪಂದ್ಯದಲ್ಲಿ ‘ಅದೃಷ್ಟ’ ಭಾರತದ ಪರ ಇರಲಿಲ್ಲ ಎಂಬುದಕ್ಕೆ ರಾಬಿನ್‌ ಔಟಾದ ರೀತಿಯೇ ಸಾಕ್ಷಿ.

ತಂಡದ ಮೊತ್ತಕ್ಕೆ ಮತ್ತೆ ಮೂರು ರನ್‌ಗಳು ಸೇರುವಷ್ಟರಲ್ಲಿ ಮನ್‌ದೀಪ್‌ ಸಿಂಗ್‌ ಕೂಡಾ ಪೆವಿಲಿಯನ್‌ಗೆ ಮರಳಿದರು. ಯುವರಾಜ್‌ ಸಿಂಗ್‌ (40, 58 ಎಸೆತ, 3 ಬೌಂ, 1 ಸಿಕ್ಸರ್‌) ಮತ್ತು ಉನ್ಮುಕ್ತ್‌ ಚಾಂದ್‌ ಮೂರನೇ ವಿಕೆಟ್‌ಗೆ 64 ರನ್‌ ಸೇರಿಸಿದಾಗ ಭಾರತ ಮರುಹೋರಾಟದ ಸೂಚನೆ ನೀಡಿತ್ತು.  

ಉನ್ಮುಕ್ತ್‌ 38 ರನ್‌ಗಳಿಗೆ 72 ಎಸೆತಗಳನ್ನು ತೆಗೆದುಕೊಂಡರು. ಕ್ರೀಸ್‌ನಲ್ಲಿ ಅವರು ತಡಕಾಡಿದ್ದೇ ಹೆಚ್ಚು. ಆತ್ಮವಿಶ್ವಾಸದಿಂದ ಕೂಡಿದ ಹೊಡೆತ ಅವರ ಬ್ಯಾಟ್‌ನಿಂದ ಬರಲೇ ಇಲ್ಲ. 28ನೇ ಓವರ್‌ನಲ್ಲಿ ನಾಲ್ಕನೇ ವಿಕೆಟ್‌ ರೂಪದಲ್ಲಿ ಯುವರಾಜ್‌ ಔಟಾಗುವ ವೇಳೆ ತಂಡದ ಮೊತ್ತ 114. ಬಳಿಕ ಬಂದ ಯೂಸುಫ್‌ ಪಠಾಣ್‌ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ಆಗಲೇ ಭಾರತ ತಂಡದ ಮೇಲೆ ಸೋಲಿನ ಕರಿನೆರಳು ಆವರಿಸತೊಡಗಿತ್ತು.

ಕೇದಾರ್‌ ಜಾಧವ್‌ (35, 38 ಎಸೆತ) ಮತ್ತು ನಮನ್‌ ಓಜಾ (34, 48 ಎಸೆತ) ಕೊನೆಯಲ್ಲಿ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರುಮಾಡುವ ತಾಕತ್ತು ಅವರ ಇನಿಂಗ್ಸ್‌ಗೆ ಇರಲಿಲ್ಲ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡ ಬ್ಯಾಟಿಂಗ್‌ ವೈಭವ ತೋರಿತ್ತು. ‘ಯುವಿ’ ಅಮೋಘ ಶತಕ ಸಿಡಿಸಿದ್ದರು. ಈ ಕಾರಣ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಳು ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೆರೆದಿದ್ದರು. ಆದರೆ ಭಾರತ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ಅವರು ನಿರಾಸೆ ಅನುಭವಿಸಿದರು.

ಸ್ಕೋರ್ ವಿವರ
ವೆಸ್ಟ್‌ ಇಂಡೀಸ್‌ ‘ಎ’ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 279
ಆಂಡ್ರೆ ಫ್ಲೆಚರ್‌ ಸಿ ಓಜಾ ಬಿ ವಿನಯ್‌ ಕುಮಾರ್‌  15
ಕೀರನ್‌ ಪೊವೆಲ್‌ ಸಿ ಓಜಾ ಬಿ ವಿನಯ್‌ ಕುಮಾರ್‌  04
ಕರ್ಕ್‌ ಎಡ್ವರ್ಡ್ಸ್‌ ಸ್ಟಂಪ್‌ ಓಜಾ ಬಿ ಯೂಸುಫ್‌ ಪಠಾಣ್‌  36
ಜೊನಾಥನ್‌ ಕಾರ್ಟರ್‌ ಎಲ್‌ಬಿಡಬ್ಲ್ಯು ಬಿ ಜಯದೇವ್‌ ಉನದ್ಕತ್‌  133
ಆಂಡ್ರೆ ರಸೆಲ್‌ ಸಿ ನರ್ವಾಲ್‌ ಬಿ ಯೂಸುಫ್‌ ಪಠಾಣ್‌  12
ಲಿಯೊನ್‌ ಜಾನ್ಸನ್‌ ಸಿ ಚಾಂದ್‌ ಬಿ ವಿನಯ್‌ ಕುಮಾರ್‌  39
ಡೆವೊನ್‌ ಥಾಮಸ್‌ ಔಟಾಗದೆ  13
ಆಶ್ಲೆ ನರ್ಸ್‌ ಔಟಾಗದೆ  12
ಇತರೆ (ಲೆಗ್‌ಬೈ–8, ವೈಡ್‌–7)  15
ವಿಕೆಟ್‌ ಪತನ: 1–20 (ಪೊವೆಲ್‌; 6.1), 2–21 (ಫ್ಲೆಚರ್‌; 8.4), 3–100 (ಎಡ್ವರ್ಡ್ಸ್‌; 27.1), 4–112 (ರಸೆಲ್‌; 27.5), 5–243 (ಜಾನ್ಸನ್‌; 45.6), 6–260 (ಕಾರ್ಟರ್‌; 48.1)

ಬೌಲಿಂಗ್‌: ಜಯದೇವ್‌ ಉನದ್ಕತ್‌ 10–1–57–1, ಸುಮಿತ್‌ ನರ್ವಾಲ್‌ 10–2–52–0, ಆರ್‌. ವಿನಯ್‌ ಕುಮಾರ್‌ 10–1–56–3, ಶಹಬಾಜ್‌ ನದೀಮ್‌ 10–0–38–0, ಯೂಸುಫ್‌ ಪಠಾಣ್‌ 9–0–61–2, ಮನ್‌ದೀಪ್‌ ಸಿಂಗ್‌ 1–0–7–0
ಭಾರತ ‘ಎ’: 48.4 ಓವರ್‌ಗಳಲ್ಲಿ 224
ರಾಬಿನ್‌ ಉತ್ತಪ್ಪ ಬಿ ಜೊನಾಥನ್‌ ಕಾರ್ಟರ್‌  10
ಉನ್ಮುಕ್ತ್‌ ಚಾಂದ್‌ ಸಿ ಫ್ಲೆಚರ್‌ ಬಿ ಆಶ್ಲೆ ನರ್ಸ್‌  38
ಮನ್‌ದೀಪ್‌ ಸಿಂಗ್‌ ಸಿ ಥಾಮಸ್‌ ಬಿ ಮಿಗುಯೆಲ್‌ ಕಮಿನ್ಸ್‌  03
ಯುವರಾಜ್‌ ಸಿಂಗ್‌ ಸಿ ಪೊವೆಲ್‌ ಬಿ ನಿಕಿತಾ ಮಿಲ್ಲರ್‌  40
ಕೇದಾರ್‌ ಜಾಧವ್‌ ಸಿ ಥಾಮಸ್‌ ಬಿ ಮಿಗುಯೆಲ್‌ ಕಮಿನ್ಸ್‌  35
ಯೂಸುಫ್‌ ಪಠಾಣ್‌ ಸಿ ನರ್ಸ್‌ ಬಿ ನಿಕಿತಾ ಮಿಲ್ಲರ್‌  00
ನಮನ್‌ ಓಜಾ ಬಿ ಮಿಗುಯೆಲ್‌ ಕಮಿನ್ಸ್‌  34
ಸುಮಿತ್‌ ನರ್ವಾಲ್‌ ಸಿ ಥಾಮಸ್‌ ಬಿ ಆಂಡ್ರೆ ರಸೆಲ್‌  18
ಆರ್‌. ವಿನಯ್‌ ಕುಮಾರ್‌ ಬಿ ಮಿಗುಯೆಲ್‌ ಕಮಿನ್ಸ್‌  01
ಶಹಬಾಜ್‌ ನದೀಮ್‌ ಔಟಾಗದೆ  21
ಜಯದೇವ್‌ ಉನದ್ಕತ್‌ ಸಿ ಪೆರುಮಾಳ್‌ ಬಿ ಜೊನಾಥನ್‌ ಕಾರ್ಟರ್‌  15
ಇತರೆ: (ಲೆಗ್‌ಬೈ–1, ವೈಡ್‌–6, ನೋಬಾಲ್‌–2)  09
ವಿಕೆಟ್‌ ಪತನ: 1–15 (ರಾಬಿನ್‌; 5.1), 2–18 (ಮನ್‌ದೀಪ್‌; 6.2), 3–82 (ಚಾಂದ್‌; 20.1), 4–114 (ಯುವರಾಜ್‌; 27.3), 5–114 (ಪಠಾಣ್‌; 27.4), 6–148 (ಜಾಧವ್‌; 34.3), 7–177 (ಓಜಾ; 40.5) 8–187 (ವಿನಯ್‌; 42.3), 9–187 (ನರ್ವಾಲ್‌; 43.1), 10–224 (ಉನದ್ಕತ್‌; 48.4)
ಬೌಲಿಂಗ್‌: ಮಿಗುಯೆಲ್‌ ಕಮಿನ್ಸ್‌ 10–0–31–4, ಆಂಡ್ರೆ ರಸೆಲ್‌ 10–0–56–1, ಜೊನಾಥನ್‌ ಕಾರ್ಟರ್‌ 6.4–0–33–2, ಆಶ್ಲೆ ನರ್ಸ್‌ 8–0–32–1, ವೀರಸ್ವಾಮಿ ಪೆರುಮಾಳ್‌ 5–0–25–0, ನಿಕಿತಾ ಮಿಲ್ಲರ್‌ 9–1–46–2
ಫಲಿತಾಂಶ: ವೆಸ್ಟ್‌ ಇಂಡೀಸ್‌ ‘ಎ’ ತಂಡಕ್ಕೆ 55 ರನ್‌ ಗೆಲುವು;
ಸರಣಿ 1–1 ರಲ್ಲಿ ಸಮಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT