ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ ಸಂಗೀತ ಶುಭ ಸಂಧ್ಯಾ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಾರ್ತಿಕ ಮಾಸ ಬೆಳಕಿನ ಮಾಸ. ಧಾರ್ಮಿಕ-ಸಾಂಸ್ಕೃತಿಕ ಸಂಸ್ಥೆಗಳು ಕಾರ್ತಿಕವನ್ನು ಭಿನ್ನ ರೀತಿಯಲ್ಲಿ ಆಚರಿಸಿದವು. ನಾದಜ್ಯೋತಿ ತ್ಯಾಗರಾಜಸ್ವಾಮಿ ಭಜನ ಸಭಾದವರು ಕಾರ್ತಿಕ ಸಂಗೀತ ಶುಭ ಸಂಧ್ಯಾವನ್ನು ಮಲ್ಲೇಶ್ವರದ ಕನ್ನಿಕಾಪರಮೇಶ್ವರಿ ದೇವಸ್ಥಾನದ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ಸಂಭ್ರಮದಿಂದ ಆಚರಿಸಿದರು.

ಇದೇ ಸಂದರ್ಭದಲ್ಲಿ ಕನಕದಾಸ ಜಯಂತಿ ಮತ್ತು ರಾಜ್ಯೋತ್ಸವಗಳ ಪ್ರಯುಕ್ತ ತನಿ ಪಿಟೀಲು, ಗೋಟುವಾದ್ಯ, ಗಮಕ ಹಾಗೂ ಹಾಡುಗಾರಿಕೆ ಕಾರ್ಯಕ್ರಮಗಳೂ ನಡೆದವು. ಹಾಗೆಯೇ ಶ್ರಿಲಂಕಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ (ಕೊಲಂಬೊ) ಅವರಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ. ಸೂತ್ರಂ ನಾಗರಾಜ ಶಾಸ್ತ್ರೀ ಅವರನ್ನು ಅಭಿನಂದಿಸಲಾಯಿತು.

ನಂತರ ಕಲಾಭಿಮಾನಿಗಳಿಗೆ ಸುಪರಿಚಿತರಾದ ಕಲಾವತಿ ಅವಧೂತ್ ಚಿಕ್ಕದಾದರೂ ಚೊಕ್ಕನಾದ ಕಛೇರಿ ನಡೆಸಿಕೊಟ್ಟರು. ಸಂಗೀತಗಾರರ ಕುಟುಂಬದಿಂದ ಬಂದ ಕಲಾವತಿ, ಸಂಗೀತ ಸ್ನಾತಕೋತ್ತರ ತರಗತಿಯಲ್ಲಿ ಸುವರ್ಣ ಪದಕ ವಿಜೇತೆ. ಕರ್ನಾಟಕ ಗಾನಕಲಾ ಪರಿಷತ್ತಿನಿಂದ  ಗಾನಕಲಾಶ್ರಿ ಬಿರುದಿಗೂ ಭಾಜನರಾಗಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಕಲಾವತಿ ಅವಧೂತ್ ಶಂಕರಿ ನೀವೆಯನ್ನು ಹಸನಾಗಿ ಹಾಡಿದರು. ಮುತ್ತಯ್ಯ ಭಾಗವತರ  ಭುವನೇಶ್ವರೀಯ ಲಾಲಿತ್ಯದಿಂದ ಗಮನ ಸೆಳೆದರೆ ಸುಬ್ರಹ್ಮಣ್ಯೇನ ರಕ್ಷಿತೋ ಹಂ ಘನವಾಗಿ ನಿರೂಪಿತವಾಯಿತು. ಪೂರ್ವಿ ಕಲ್ಯಾಣಿಯೂ ರಂಜನೀಯ. ತೋಡಿಯ ಆಲಾಪನೆಯೂ ಪ್ರೌಢ. ದಾಶರಥೆ  ಕೀರ್ತನೆಯನ್ನು ಚೇತೋಹಾರಿಯಾಗಿ ಅರಳಿಸಿ ಲಯವಾದ್ಯದ (ವಿ. ಕೃಷ್ಣ) ತನಿಗೆ ದಾರಿಯಾಯಿತು. ಒಳ್ಳೆಯ ಕಂಠ, ಮಾಧುರ್ಯ, ಸಾಂಪ್ರದಾಯಿಕ ನಿರೂಪಣೆಗಳಿಂದ ಕಲಾವತಿ ಕೇಳುಗರ ಗೌರವಕ್ಕೆ ಪಾತ್ರರಾದರು. ಪಿಟೀಲಿನಲ್ಲಿ ನಳಿನಾ ಮೋಹನ್ ಒತ್ತಾಸೆ ನೀಡಿದರು.

ರಾಗ ರಂಗ್ ಸಮಯ ಯಾತ್ರಾ
ಬೆಂಗಳೂರು ಲಲಿತಕಲಾ ಪರಿಷತ್ ಆಶ್ರಯದಲ್ಲಿ ನಡೆದ ರಾಗ್ ರಂಗ್ ಸಮಯ ಯಾತ್ರಾ ಒಂದು ಭಿನ್ನ ರೀತಿಯ ಕಾರ್ಯಕ್ರಮ. ರಾಗ- ಪ್ರಹರ್‌ಗಳನ್ನು ಆಧರಿಸಿ ರಾಗಗಳನ್ನು ಗುಂಪಾಗೂ- ತನಿಯಾಗೂ ಹಾಡಿದರು. ಸೂರ್ಯ ಉದಯವಾಗಿ ಸಾಗುತ್ತಿದ್ದಂತೆಯೇ ಭಿನ್ನ ಪ್ರಹರ್‌ಗಳಲ್ಲಿ ಹಾಡುವ ರಾಗಗಳನ್ನು ನಿರೂಪಿಸಿದರು.

ಭೈರವ್ ರಾಗದ ಶಿವಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಮೊದಲ ಜಾವಕ್ಕೆ ಹೊಂದುವಂತೆ ಅಲಾಯ ಬಿಲಾವಲ್‌ನಲ್ಲಿ ಒಂದು ಖ್ಯಾಲ್ ಹಾಡಿದರು. ಮುಂದೆ ಗುರ್ಜರಿ ತೋಡಿ ಹಾಗೂ ಕೋಮಲ್ ರಿಷಬ್ ಅಸಾವೇರಿ. ನಂತರ ಪೂರ್ವಾಂಗ ಪ್ರಧಾನ್ ರಾಗಗಳು! ಭೀಂ ಪಲಾಸ್ ಹಾಗೂ ಭಜನ್ ಹರಿ ಕೆ ಚರಣ್. ರಾಗಗಳ ರಾಜ ಯಮನ್‌ಕಲ್ಯಾಣ್ ಹಾಡಿ, ಅಡಾ ಚೌತಾಳ್ ಬಂದೀಶ್ ಮತ್ತು ಗೌಡ ಮಲ್ಹಾರ್ ರಾಗಗಳನ್ನು ಲಾಲಿತ್ಯವಾಗಿ ಹಾಡಿದರು. ಮಳೆಗಾಲದ ರಾಗಗಳು ಸೌಖ್ಯವಾಗಿದ್ದವು. ದರ್ಬಾರಿ ಕಾನಡವು ಆಕರ್ಷಕ. ಕೊನೆಯಲ್ಲಿ ಭೈರವಿಯಲ್ಲಿ ಪಾಯಲಿಯ ಬಾಜೆ ಹಾಡಿದರು.

ರಾಗಧಾರಿ ಪದ್ಧತಿಯಲ್ಲಿ 18 ರಾಗಗಳನ್ನು, ಗುಂಪಾಗೂ, ಯುಗಳ ಹಾಗೂ ತನಿಯಾಗೂ ಮಾಧುರ್ಯವಾಗಿ ಹಾಡಿದರು. ಹಿರಿಯ ವಿದುಷಿ ಲಲಿತ ಜೆ. ರಾವ್ ಅವರ ದಕ್ಷ ನಿರ್ದೇಶನದಲ್ಲಿ ಕಿರಿಯ ಕಲಾವಿದರು ರಾಗಗಳ ಭಿನ್ನರುಚಿಯನ್ನು ಪರಿಚಯಿಸಿದರು. 14ರಿಂದ 70 ವರ್ಷದವರೆಗಿನ 9 ಗಾಯಕರು ದ್ರುಪದ್, ಖ್ಯಾಲ್, ತರಾನ, ದಾದ್ರ, ಕಜ್ರಿ ಮುಂತಾದವುಗಳನ್ನು ಸಂತೋಷಭರಿತರಾಗಿ ಹಾಡಿದರು.

ಹಾರ್ಮೊನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಹಾಗೂ ತಬಲದಲ್ಲಿ ಗುರುಮೂರ್ತಿ ವೈದ್ಯ ಮತ್ತು ಶಶಿಭೂಷಣ ಗುರ್ಜರ್ ಸಾಥ್ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT