ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕೋತ್ಸಸಕ್ಕೆ ಲಕ್ಷದೀಪಗಳ ಮೆರುಗು

ಸಿದ್ಧಾರೂಢಮಠ, ಕೃಷ್ಣಮಂದಿರ, ಗೋಕುಲದಲ್ಲಿ ಹಣತೆಯ ಬೆಳಗು
Last Updated 3 ಡಿಸೆಂಬರ್ 2013, 8:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಿದ್ಧಾರೂಢರ ನೆಲ ಹುಬ್ಬಳ್ಳಿಯ ಹಲವೆಡೆ ಲಕ್ಷಾಂತರ ಹಣತೆಗಳ ಬೆಳಕು ಹರಡಿ ಸಂಭ್ರಮ ಮನೆ ಮಾಡಿತ್ತು.

ಒಂದೆಡೆ ಅಮಾವಾಸ್ಯೆಯ ಕತ್ತಲೆಗೆ ದೀಪಗಳ ಬೆಳಕು ಮೆರುಗು ನೀಡಿದ್ದರೆ, ಇನ್ನೊಂದೆಡೆ ಭಕ್ತಿ ಹಾಗೂ ಶ್ರದ್ಧೆಯ ಭಾವ ಮಿಳಿತಗೊಂಡು ಸಂಜೆಯ ಚಳಿಯಲ್ಲೂ ಕಣ್ಮನಗಳಲ್ಲಿ ಬೆಚ್ಚನೆಯ ಭಾವ ಮೂಡಿಸಿತ್ತು. ಹಣತೆಗಳ ಬೆಳಕಿನಲ್ಲಿ ತಲ್ಲೀನರಾಗಿದ್ದ ಸಾವಿರಾರು ಭಕ್ತರಲ್ಲಿ ಕಾರ್ತಿಕೋತ್ಸವ ಪುಳಕ ಸೃಷ್ಟಿಸಿತು. ಸಿದ್ಧಾರೂಢ ಸ್ವಾಮಿ ಮಠ, ಗೋಕುಲ ಗ್ರಾಮದ ವೀರಾಂಜನೇಯಸ್ವಾಮಿ ದೇವಸ್ಥಾನ, ಹಳೇಹುಬ್ಬಳ್ಳಿಯ ದುರ್ಗದ ಬೈಲ್‌ನ ಸಿದ್ಧಾರೂಢ ಮಂದಿರ, ವಿದ್ಯಾ­ನಗರದ ತಿಮ್ಮಸಾಗರ ಬಸವಣ್ಣನ ಗುಡಿ, ದೇಶಪಾಂಡೆ ನಗರದ ಉಡುಪಿ ಶ್ರೀಕೃಷ್ಣ ಮಂದಿರ,  ಕಾಮಾಕ್ಷಿ ಗುಡಿಯ ಪೌಳಿ, ಯಲ್ಲಾಪುರ ಓಣಿ, ದೇಸಾಯಿ ಓಣಿಯಲ್ಲಿ ಬರುವ ಶ್ರೀಶೈಲಮಠ, ಹನುಮಂತದೇವರ ಗುಡಿ, ದ್ಯಾಮವ್ವನ ಗುಡಿ, ಪರ್ವತ ಮಲ್ಲ­ಯ್ಯನ ದೇವಸ್ಥಾನ, ಬಸವಣ್ಣ ದೇವರ ಗುಡಿ, ಗಿರಿಮಲ್ಲೇಶ್ವರ ಮಠ, ಲಕ್ಷ್ಮಿದೇವಿ ದೇವಸ್ಥಾನ, ಹಾಡಕಾರಬಸವಣ್ಣನ ಗುಡಿ ಕಾರ್ತಿಕ ದೀಪೋತ್ಸವದ  ವೈಭವಕ್ಕೆ ಸಾಕ್ಷಿಯಾದವು.

ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವದ ವೈಭವ...: ಶಿವರಾತ್ರಿಯ ತೆಪ್ಪೋತ್ಸವ, ವಾರ್ಷಿಕ ರಥೋತ್ಸವ ಹಾಗೂ ವಿಶೇಷ ದಿನಗಳನ್ನು ಬಿಟ್ಟರೆ ಪ್ರತಿ ವರ್ಷ ಸಾವಿರಾರು ಭಕ್ತರ ಮೇಳಕ್ಕೆ ಸಾಕ್ಷಿಯಾಗುವ ಸಿದ್ಧಾರೂಢಮಠದಲ್ಲಿ ಕಾರ್ತಿಕ ಸೋಮವಾರದ ಲಕ್ಷ ದೀಪೋತ್ಸವ ವೈಭವದಿಂದ ನೆರವೇರಿತು.

ಮಠದ ಆಡಳಿತಗಾರರೂ ಆದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ರಮೇಶರಾವ್, ಸಂಜೆ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ, ಕಾರ್ತಿಕೋತ್ಸವದ ಮೂಲಕ ಸಿದ್ಧಾರೂಢರ ಆಶಯಗಳು ಜ್ಯೋತಿಯ ರೂಪದಲ್ಲಿ ಎಲ್ಲರ ಮನೆಗಳನ್ನು ಬೆಳಗಲಿ ಎಂದು ಹಾರೈಸಿದರು.

ಮಠದ ಆವರಣ, ಕೈಲಾಸ ಮಂಟಪ, ಉಭಯ ಶ್ರೀಗಳ ಗದ್ದುಗೆಗಳು, ಕಾರವಾರ ರಸ್ತೆಯಿಂದ ಮಠದ ಸಂಪರ್ಕ ಮಾರ್ಗ, ಕೆರೆಯ ದಂಡೆ ಸೇರಿದಂತೆ ಎಲ್ಲೆಡೆ ಲಕ್ಷಾಂತರ ಹಣತೆಗಳು ಬೆಳಗಿದವು. 30 ಸಾವಿರಕ್ಕೂ ಅಧಿಕ ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡರು.

ಮನೆಗಳಿಂದಲೇ ಬತ್ತಿ–ಹಣತೆಗಳನ್ನು ತಂದಿದ್ದ ಭಕ್ತರು ದೇವಸ್ಥಾನದ ಆವರಣದಲ್ಲಿ ಎಣ್ಣೆ ಖರೀದಿಸಿ ದೀಪ ಬೆಳಗಿಸಿದರು. ನಂತರ ಪಟಾಕಿ ಸಿಡಿಸಿ ಆವರಣದಲ್ಲಿ ವಿಶೇಷ ಮೆರುಗು ಸೃಷ್ಟಿಸಿದರು. ದೀಪ ಬೆಳಗಿಸಿದ ನಂತರ ಉಭಯ ಶ್ರೀಗಳ ದರ್ಶನ ಪಡೆದು, ಮಠದ ಆವರಣದಲ್ಲಿ ಕುಟುಂಬದ ಸದಸ್ಯರೊಂದಿಗೆ ಕುಳಿತು ಗಿರಮಿಟ್ಟು–ಮಿರ್ಚಿ ಸವಿಯುತ್ತಿದ್ದ ದೃಶ್ಯ ಕಂಡುಬಂದಿತು. ದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡವರಿಗೆ ಶ್ರೀಮಠದ ವತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಾದಯಾತ್ರೆಯ ಸೇವೆ: ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಸಿದ್ಧಾರೂಢರ ಅನುಯಾಯಿಗಳು ದೂರದ ಬೀದರ್, ವಿಜಾಪುರ, ಬಾಗಲಕೋಟೆ ಸೇರಿದಂತೆ ಪಕ್ಕದ ಬೆಳಗಾವಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಬಂದಿದ್ದರು. ಉಣಕಲ್ ನ ಸಿದ್ಧಪ್ಪಜ್ಜನ ಗುಡಿಯಲ್ಲಿ ಕಾರ್ತಿಕ ಮಾಸದ ಪ್ರವಚನ ಕೈಗೊಂಡಿದ್ದ ಚಿದ್ವಿನಾನಂದ ಭಾರತಿ ಸ್ವಾಮೀಜಿ ನೂರಾರು ಭಕ್ತರೊಂದಿಗೆ ಕಲ್ಮೇಶ್ವರ ಮಠದಿಂದ ಪಾದಯಾತ್ರೆಯಲ್ಲಿ ಬಂದು ದೀಪೋತ್ಸವದಲ್ಲಿ ಪಾಲ್ಗೊಂಡರು.

ಲಕ್ಷದೀಪೋತ್ಸವದ ಉದ್ಘಾಟನೆಯ ವೇಳೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಕಾಶ ನಾಡಿಗೇರ, ಮಠದ ಟ್ರಸ್ಟ್ ಸಮಿತಿ ಚೇರ್ಮನ್ ನಾರಾಯಣಪ್ರಸಾದ ಎ.ಪಾಠಕ, ನಾಸಿಕ್ ಶರಣಪ್ಪನವರ ಮಠದ ವಾಸುದೇವಾ­ನಂದ­ಸ್ವಾಮೀಜಿ, ಧರ್ಮದರ್ಶಿ ಶಾಮಾನಂದ ಪೂಜಾರಿ, ಮುಖಂಡರಾದ ರಂಗಾಬದ್ದಿ, ಮಹೇಂದ್ರ ಸಿಂಘಿ ಮತ್ತಿತರರು ಹಾಜರಿದ್ದರು.

ಗೋಕುಲ: ಹುಬ್ಬಳ್ಳಿ ಹೊರವ­ಲಯದ ಗೋಕುಲ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ನಡೆದ ಕಾರ್ತಿಕೋತ್ಸವಕ್ಕೆ ದೀಪಗಳ ಸಾಲು ಹಾಗೂ ಪಟಾಕಿಯ ಅಬ್ಬರ ವಿಶೇಷ ಬೆಳಕು ನೀಡಿತ್ತು. ಗ್ರಾಮದ ಹನುಮಾನ ಸೇವಾ ಸಮಿತಿ 14ನೇ ವರ್ಷ ಆಯೋಜಿಸಿದ್ದ ದೀಪೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ಹುಬ್ಬಳ್ಳಿಯಿಂದ ಬಂದಿದ್ದ ಸಾವಿರಾರು ಮಂದಿ ದೇವರ ದರ್ಶನ ಪಡೆದರು. ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡ ಗಣ್ಯರಾಗಿದ್ದರು. ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕರ ನೇತೃತ್ವ ವಹಿಸಿದ್ದರು. ಸಂಜೆಯಿಂದಲೇ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಳೇಹುಬ್ಬಳ್ಳಿಯ ದುರ್ಗದ ಬೈಲ್‌ನ ಸಿದ್ಧಾರೂಢ ಮಂದಿರದಲ್ಲೂ ದೀಪೋತ್ಸವ ನಡೆಯಿತು. ಇದೇ ವೇಳೆ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಸಂಭ್ರಮಿಸಿದರು. ವಿದ್ಯಾನಗರದ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದ ಪೌಳಿಯಲ್ಲೂ ದೀಪಗಳ ಮೆರುಗು ಕಾಣಿಸಿತು. ಭವಾನಿ ನಗರದ ರಾಯರ ಮಠದ ಅಂಗಳವೂ ಬೆಳಕಿನಿಂದ ಕಂಗೊಳಿಸಿತು. ಕಾರ್ತಿಕೋತ್ಸವದ ಅಂಗವಾಗಿ ಎಲ್ಲಾ ಕಡೆಯೂ ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT