ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನಾಡರ ರಂಗದರ್ಪಣ

Last Updated 22 ಜನವರಿ 2011, 11:20 IST
ಅಕ್ಷರ ಗಾತ್ರ

ನಾಟಕ ಪ್ರಕಾರವನ್ನು ಅಭಿವ್ಯಕ್ತಿಯ ಪ್ರಮುಖ ಪ್ರಕಾರವನ್ನಾಗಿ ಆರಿಸಿಕೊಂಡ ಆಧುನಿಕ ಕನ್ನಡದ ಏಕೈಕ ಮುಖ್ಯ ಲೇಖಕರು ಗಿರೀಶ ಕಾರ್ನಾಡ. ‘ಕಾರ್ನಾಡರು ನಾಟಕದ ನಾಡಿಯನ್ನೇ ಹಿಡಿದರು’ ಎಂದು ಪ್ರಸಿದ್ಧ ರಂಗನಿರ್ದೇಶಕ ಬಿ.ವಿ.ಕಾರಂತರು ಬಣ್ಣಿಸಿರುವುದು ಸರಿಯಾಗಿಯೇ ಇದೆ. ಕಾರ್ನಾಡರ ನಾಟಕ ಸಿದ್ಧಿ ಕನ್ನಡದ ಮೂಲಕ ಹೊರಹೊಮ್ಮಿ, ನಂತರದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಇಂಥ, ಅನನ್ಯ ನಾಟಕಕಾರನ ರಂಗಸಾಧನೆಯನ್ನು ಗುರ್ತಿಸುವ ವಿಮರ್ಶಾ ಕೃತಿ ‘ಗಿರೀಶ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ’.

ಈ ಕೃತಿ ಕಾರ್ನಾಡರ ನಾಟಕಗಳ ಬಗ್ಗೆ ಕನ್ನಡದಲ್ಲಿ ಬಂದಿರುವ ವಿಮರ್ಶೆಗಳನ್ನಷ್ಟೇ ದಾಖಲಿಸಿದೆ. ಈ ವಿಮರ್ಶೆಗಳಲ್ಲಿ ರಂಗ ವಿಮರ್ಶೆಗಳಿದ್ದರೂ, ಸಾಹಿತ್ಯ ವಿಮರ್ಶೆಗಳ ಪಾಲೇ ಹೆಚ್ಚು. ರಂಗಭೂಮಿ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಈ ಕೃತಿ ರೂಪಿಸಿರುವುದಾಗಿ ಸಂಪಾದಕರು (ಕೆ.ಮರುಳಸಿದ್ದಪ್ಪ, ಕೃಷ್ಣಮೂರ್ತಿ ಹನೂರು) ಸ್ಪಷ್ಟಪಡಿಸಿದ್ದಾರೆ.

ಕಾರ್ನಾಡರ ರಂಗದರ್ಪಣದಂತಿರುವ ಈ ಪುಸ್ತಕದಲ್ಲಿ ಬರಹಗಳು ತಮ್ಮ ವೈವಿಧ್ಯದಿಂದ ಗಮನಸೆಳೆಯುತ್ತವೆ. ಬಿ.ವಿ.ಕಾರಂತ, ಜಿ.ಎಸ್.ಆಮೂರ, ಸಿ.ಎನ್.ರಾಮಚಂದ್ರನ್, ಲಿಂಗದೇವರು ಹಳೆಮನೆ, ಜಿ.ಎಚ್.ನಾಯಕ, ಕೀರ್ತಿನಾಥ ಕುರ್ತಕೋಟಿ, ಲಂಕೇಶ್, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಶಾಂತಿನಾಥ ದೇಸಾಯಿ ಅವರಂಥ ಹಿರಿಯರ ಬರಹಗಳು ಇಲ್ಲಿವೆ. ಕಾರ್ನಾಡರ ಕೃತಿಗಳನ್ನು ಕುರಿತಂತೆ ರಂಗಕರ್ಮಿಗಳ ಒಳನೋಟಗಳೂ ಸಂಕಲನಗೊಂಡಿವೆ.

ಜಯಪ್ರಕಾಶ ಮಾವಿನಕುಳಿ ಅವರು ಕಾರ್ನಾಡರೊಂದಿಗೆ ನಡೆಸಿರುವ ವಿಶೇಷ ಸಂದರ್ಶನ ಪುಸ್ತಕದ ಆಕರ್ಷಣೆ ಗಳಲ್ಲೊಂದು. ಅನುಬಂಧದಲ್ಲಿ ಕಾರ್ನಾಡರನ್ನು ಕುರಿತ ಗ್ರಂಥಗಳು, ವ್ಯಕ್ತಿ ವಿವರ ಹಾಗೂ ಅವರ ನಾಟಕದ ಚಿತ್ರಗಳನ್ನು ನೀಡಲಾಗಿದೆ.

ನಾಟಕಕಾರರಾಗಿ ಕಾರ್ನಾಡರನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಮಾರ್ಗದರ್ಶಿಯಂತಿದೆ. (‘ಗಿರೀಶ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ’ ಕೃತಿ ಇಂದು ಮೈಸೂರಿನಲ್ಲಿ ಬಿಡುಗಡೆಗೊಳ್ಳಲಿದೆ)

ಗಿರೀಶ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ
ಸಂ: ಕೆ.ಮರುಳಸಿದ್ದಪ್ಪ, ಕೃಷ್ಣಮೂರ್ತಿ ಹನೂರು; ಪು:504; ಬೆ: ರೂ.350; ಪ್ರ: ಸಂವಹನ, 12/1ಎ, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT