ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೆಂಟರಿ ಕಾವ್ಯಜಗತ್ತು

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಬಗಲಿನಲ್ಲೊಂದು ಬ್ಯಾಗು. ಅದರ ಬಾಯಿ ತೆರೆದುಕೊಂಡಿತ್ತು. ರಿಕ್ಷಾದಲ್ಲಿ ತುಂಬಿದ ಮಕ್ಕಳಂತೆ ಅಲ್ಲಿ ಒತ್ತರಿಸಿ ಕೂತಿದ್ದ ಹತಾರಗಳು! ಗರಗಸ, ಚೂಪು ಉಳಿ, ಸ್ಕ್ರೂ ಡ್ರೈವರ್...

ದಿನಾ ಹಲ್ಲುಜ್ಜುವ ಮಕ್ಕಳ ಹಲ್ಲುಗಳಂತೆ ಹತಾರಗಳು ಹೊಳೆಯುತ್ತಿದ್ದವು. ಅವುಗಳನ್ನು ಬೆರಗಿನಿಂದ ನೋಡುತ್ತಿರುವಾಗ, ಆ ಬ್ಯಾಗಿನ ಒಡೆಯ ಉಗ್ಗುತ್ತಾ ಹೇಳಿದ- `ಹತ್ತು ವರ್ಷದ ಹುಡುಗನಾದಾಗಿನಿಂದ ನಾನು ಇಂಡಿಪೆಂಡೆಂಟ್ ಆಗಿದೀನಿ~.

ಮುಖದ್ಲ್ಲಲ್ಲಿ ಅಮಾಯಕತೆಯ ಪಸೆ ಜಿನುಗುತ್ತಿತ್ತು. ಮಾತಿನಲ್ಲಿ ಮಾತ್ರ ಅಪಾರ ಆತ್ಮವಿಶ್ವಾಸ. `ನಾನು ಎಲ್ಲಿ ಹೋದರೂ ಈ ಬ್ಯಾಗು ನನ್ನ ಜೊತೆಗಿರುತ್ತೆ. ಅಷ್ಟು ಮಾತ್ರವಲ್ಲ, ಪುಸ್ತಕವೂ~. ಹೌದು, ಹತಾರಗಳ ನಡುವೆಯೊಂದು ಪುಸ್ತಕ! ಅದು ಕವಿತೆಗಳ ಕಟ್ಟು!

ಅನ್ನಕ್ಕಾಗಿ ಬಡಗಿ ಕೆಲಸ. ಖುಷಿಗಾಗಿ ಕಾವ್ಯದ ಸಂಗ. ಹೀಗೆ, ಒಂದು ಕೈಯಲ್ಲಿ ಉಳಿಯನ್ನೂ ಇನ್ನೊಂದು ಕೈಯಲ್ಲಿ ಲೇಖನಿಯನ್ನೂ ಹಿಡಿದ ತರುಣನ ಹೆಸರು ವಿ.ಆರ್. ನರಸಿಂಹಮೂರ್ತಿ. ಹಾಗೆಂದರೆ ಆತನ ಚಡ್ಡಿದೋಸ್ತ್‌ಗಳಿಗೂ ಗುರುತು ಸಿಗುವುದು ಕಷ್ಟ. `ಕಾರ್ಪೆಂಟರ್~ ಎಂದರೆ ಕೆಲವು ಸಹೃದಯರಿಗಾದರೂ ಕವಿಯ ಗುರುತಾದೀತು.

`ಸಿಗ್ನಲ್ ಟವರ್~, `ಐದನೇ ಗೋಡೆಯ ಚಿತ್ರಗಳು~ ಎನ್ನುವ ಕವನ ಸಂಕಲನಗಳ ಮೂಲಕ ಕವಿಯಾಗಿ ಗುರ್ತಿಸಿಕೊಂಡ ಕಾರ್ಪೆಂಟರ್ ಬೆಂಗಳೂರಿನ ಹೊರ ವಲಯದ ವೆಂಕಟಾಲದವರು. ಈಚೆಗವರು, `ಅಪ್ಪನ ಪ್ರೇಯಸಿ~ ಎನ್ನುವ ಕಾದಂಬರಿ ಪ್ರಕಟಿಸಿದ್ದಾರೆ. ಪ್ರೇಯಸಿಯ ಕಥನಕ್ಕೆ ಸಹೃದಯರ ಸ್ಪಂದನ ಬೆಚ್ಚಗಿದೆ. 

 ಅಪ್ಪನ ಪ್ರೇಯಸಿ! ಹೆಸರು ವಿಚಿತ್ರವಾಗಿದೆಯಲ್ಲವೇ? ಇಲ್ಲ, ಇದು ಸಚಿತ್ರ ಕಥನ ಎನ್ನುವುದು ಕಾದಂಬರಿಕಾರರ ಸ್ಪಷ್ಟನೆ. ಕಾರ್ಪೆಂಟರ್ ಪಾಲಿಗೆ ಈ ಕಥನ ತನ್ನದೇ ಬದುಕಿನ ಒಂದು ವಿರೋಧಾಭಾಸ. ಕಾದಂಬರಿಯಲ್ಲಿನ ಅಪ್ಪ ಸಕಲ ಕಲಾವಲ್ಲಭ. ಗಡಿಯಾರ ರಿಪೇರಿ ಮಾಡಬಲ್ಲ, ರೇಡಿಯೋ ಪೆಟ್ಟಿಗೆಗಳ ನರತಂತುಗಳ ಕಡಿದು ಜೋಡಿಸಿ ದನಿ ಹೊರಡಿಸಬಲ್ಲ, ಮರಮುಟ್ಟು ಸಿಕ್ಕಿದರೆ ಕೆತ್ತಲೂ ಬಲ್ಲ.
 
ಸಂತೆಯ ನಡುವೆಯೂ ಯಾವುದೋ ಕನಸನ್ನು ಗುಟ್ಟಾಗಿ ಕಾಣಬಲ್ಲ. ಹೀಗೆ, ತಿಳಿದದ್ದನ್ನು ತಿಳಿದಂತೆ ಮಾಡುತ್ತಿದ್ದ, ತನ್ನ ಮರ್ಜಿಗೆ ತಕ್ಕಂತೆ ಬದುಕುತ್ತಿದ್ದ ಕಾದಂಬರಿಯ ಅಪ್ಪ ಕಾರ್ಪೆಂಟರ್ ಅವರ ನಿಜದ ಅಪ್ಪನೂ ಹೌದು. ಬದುಕನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಈ ಅಪ್ಪ ವ್ಯಸನಗಳ ನಡುವೆ ಮನೆಯನ್ನು ಅಷ್ಟೇನೂ ಹಚ್ಚಿಕೊಳ್ಳದ ಆಸಾಮಿ.
 
ಒಮ್ಮೆ ತೀತಾ ಡ್ಯಾಂ ಕಡೆಗೆ ಹೋಗಿದ್ದವನು ಬೆಳಗಿನ ಸಂಕಟ ತೀರಿಸಿಕೊಂಡು ಶುಚಿಯಾಗಲು ಹೋಗಿ ಕಾಲು ಜಾರಿದ, ನೀರುಪಾಲಾದ. ಆತ ಇದ್ದಾಗಲೂ ಗಾರೆ ಕೆಲಸಕ್ಕೆ, ತೋಟದ ಕೆಲಸಕ್ಕೆ ಹೋಗುತ್ತಿದ್ದ ಯಜಮಾನತಿಯೇ ಮನೆಮಂದಿಯ ಹೊಟ್ಟೆ ಹೊರೆಯುತ್ತಿದ್ದುದು. ಆ ಕೆಲಸ ಈಗ ಅಧಿಕೃತವಾಯಿತು.

ಮಗನಲ್ಲಿ ರಮ್ಯ ಭಾವನೆಗಳನ್ನು ಚಿಗುರಿಸಿದ್ದ ಹುಡುಗಿಯೊಬ್ಬಳು, ಆ ಹುಡುಗನ ಅಪ್ಪನಲ್ಲೂ ಕಾಮನೆಗಳನ್ನು ಮೂಡಿಸಿದ್ದಳು. ಅದು ಅರಿವಾದ ಕ್ಷಣ, ಕಾರ್ಪೆಂಟರ್ ಪಾಲಿನ ಜ್ಞಾನೋದಯ. ಈ ಕಥನವೇ ಅವರ `ಅಪ್ಪನ ಪ್ರೇಯಸಿ~ ಕಾದಂಬರಿಯ ತಿರುಳು. ಅಂದಹಾಗೆ, ಈ ಪ್ರಣಯ ಪ್ರಸಂಗ ಶುರುವಿನಲ್ಲಿ ರೂಪುಗೊಂಡಿದ್ದು ಒಂದು ಸಣ್ಣಕಥೆಯಾಗಿ.

ಅಷ್ಟಕ್ಕೆ ಅದು ಮುಗಿಯಲಾರದು ಅನ್ನಿಸಿ ಕಥೆ ಮುಂದುವರಿದಿದೆ, ಕಾದಂಬರಿಯಾಗಿ ಬೆಳೆದಿದೆ. ಬರೆದದ್ದು ಮುಗಿದ ಮೇಲೆ ಕಾರ್ಪೆಂಟರ್ ತನ್ನ ಅಮ್ಮನಿಗೆ ಕಾದಂಬರಿಯನ್ನು ಓದಿ ಹೇಳಿದ್ದಾರೆ. ವಾಚನ ಮುಗಿದ ಮೇಲೆ ಅಮ್ಮ ಖುಷಿಯಿಂದ ಕಣ್ಣೀರು ಹಾಕಿದರಂತೆ. ಆಮೇಲೆ, ಅವರು ಹೇಳಿದರಂತೆ-

“ಹಂಗಿದ್ದ, ಹೋದ, ಏನೂ ಮಾಡಾಕೆ ಆಗಲ್ಲ”.
`ತನ್ನಮ್ಮ ತುಂಬಾ ಸ್ಟ್ರಾಂಗು~ ಎನ್ನುವ ಕಾರ್ಪೆಂಟರ್ ಮಾತಿನಲ್ಲಿ `ನನ್ನವ್ವ ಬನದ ಕರಡಿ~ ಎನ್ನುವ ಲಂಕೇಶರ `ಅವ್ವ~ ಕವಿತೆಯ ಧ್ವನಿ ಇಣುಕುತ್ತದೆ. ಹೌದು, ಕಾರ್ಪೆಂಟರ್‌ಗೆ ಲಂಕೇಶ್ ತುಂಬಾ ಇಷ್ಟ. `ನನ್ನ ಜಗತ್ತಿನ ಆಳ ಗೊತ್ತಾಗಿದ್ದೇ ಲಂಕೇಶರನ್ನು ಓದಿಕೊಳ್ಳುವ ಮೂಲಕ~ ಎನ್ನುವಷ್ಟು ಇಷ್ಟ. ದೇವನೂರು, ಕೃಷ್ಣ ಆಲನಹಳ್ಳಿ, ತೇಜಸ್ವಿಯೂ ಇಷ್ಟ.

ಅಪ್ಪ ಮತ್ತು ಪ್ರೇಯಸಿ ಕಥೆಯಷ್ಟೇ, ಕಾರ್ಪೆಂಟರ್ ವಿದ್ಯಾರ್ಥಿ ದೆಸೆಯ ಕಥೆಯ ಹರಹೂ ಸ್ವಾರಸ್ಯವೂ ದೊಡ್ಡದು. ಅಕ್ಷರ ತಿದ್ದುತ್ತಾ ಪ್ರೈಮರಿ ಮುಗಿಸಿ ಹೈಸ್ಕೂಲು ಬಾಗಿಲು ತಟ್ಟುವ ಹೊತ್ತಿಗೆ ಜೊತೆಗಿದ್ದ ಪೋಲಿ ಪಟಾಲಂ ದೊಡ್ಡದಾಗಿತ್ತು. ತಲೆಯಲ್ಲಿ ಏನೇನೋ ಕಸ-ಕನಸು ತುಂಬಿಕೊಂಡು ಹುಡುಗ ಮನೆಬಿಟ್ಟ.

ಊರು ಸುತ್ತುತ್ತಾ ಕೊನೆಗೆ ಸೇರಿದ್ದು ಬೆಂಗಳೂರಿನ ಮಾಗಡಿ ರಸ್ತೆಯ `ಬಾಸ್ಕೋ ಮನೆ~ಯನ್ನು. ಅವರು ಮರಳಿ ಮನೆ ಸೇರಿಸಿದರು. ಆದರೆ ಕಲಿಕೆಯ ದಿಕ್ಕೇನೂ ಬದಲಾಗಲಿಲ್ಲ. ಅಟೆಂಡೆನ್ಸ್ ಶಾರ್ಟೇಜ್ ಎಂದು ಎಸ್ಸೆಸ್ಸೆಲ್ಸಿಯಲ್ಲಿ ಹಾಲ್ ಟಿಕೆಟ್ ದೊರೆಯಲಿಲ್ಲ. ಅಮ್ಮನಿಗೆ ವಿಷಯ ತಿಳಿದರೆ ಹುರಿದು ಮುಕ್ಕಾಳೆಂದು ಅಂಜಿದ ಹುಡುಗ ಮತ್ತೆ ಮನೆ ಬಿಟ್ಟಿದ್ದಾಯಿತು.

ಅಷ್ಟರಲ್ಲಾಗಲೇ ಕಾಲಿನಲ್ಲಿ ಚಕ್ರ ಸೇರಿಕೊಂಡಿತ್ತಲ್ಲ; ಆರು ತಿಂಗಳಲ್ಲಿ- ಮೈಸೂರು, ಮಂಗಳೂರು, ಮಂಡ್ಯ, ಕೊಳ್ಳೇಗಾಲ, ಚಿತ್ರದುರ್ಗ, ಹಾಸನ, ಬಳ್ಳಾರಿ- ಕರ್ನಾಟಕ ದರ್ಶನವಾಯಿತು. ಕೊನೆಗೆ, ದಣಿದ ಹುಡುಗ ಅಮ್ಮನ ಸಿಟ್ಟಿಳಿದಿರಬಹುದೆಂದು ನಂಬಿ ಮನೆ ಸೇರಿದ.

ಶಾಲೆ ಬಿಟ್ಟ ಹುಡುಗ ಆತುಕೊಂಡಿದ್ದು ಮರಗೆಲಸವನ್ನು. ಶಾಲಾ ದಿನಗಳಲ್ಲಿ ಬಡಗಿ ಕೆಲಸದ ಪರಿಚಯವಾಗಿವಿತ್ತು. ಮನೆಯ ಪಕ್ಕದಲ್ಲೇ ಇದ್ದ ಬಡಗಿಯೊಬ್ಬರು ಶನಿವಾರ - ಭಾನುವಾರಗಳಂದು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಕೆತ್ತುತ್ತಾ ಕೆತ್ತುತ್ತಾ ಕಸುಬು ಕರಗತವಾಯಿತು. ಖರ್ಚಿಗೆ ಕಾಸು ಸಿಗುತ್ತಿದ್ದುದರಿಂದ `ಬಡಗಿತನದ ಸಖ್ಯ~ ಸುಖ ಎನಿಸುತ್ತಿತ್ತು.
 
ಆ ಸಖ್ಯವೇ ಶಾಲೆಯಿಂದ ಹೊರಬಿದ್ದ ಹುಡುಗನಿಗೆ ಅನ್ನವಾಯಿತು. ನರಸಿಂಹಮೂರ್ತಿ ಆಗಿದ್ದ ಹುಡುಗ ಕಾರ್ಪೆಂಟರ್ ಆದ. ಅದೇ ಕಾಲಕ್ಕೆ ಗೋಡೆಯ ಮೇಲೆ ಏನೇನೋ ಗೀಚಿಕೊಂಡಿರುತ್ತಿದ್ದ ವಿ.ಎಂ. ಮಂಜುನಾಥ್ (ಕವಿ, ಕಥೆಗಾರ) ಗಮನಸೆಳೆದರು. ಗೆಳೆಯ ಗುರುವಾಗಿ ಕಂಡ. ತಾನೂ ಬರೆಯಬೇಕೆನ್ನಿಸಿ ಶುರುವಿನಲ್ಲಿ ಒಂದಷ್ಟು `ಕಾಮಿಡಿ ಪದ್ಯ~ ಬರೆದಿದ್ದಾಯಿತು.
 
`ಪದ್ಯ ಆಮೇಲೆ ಬರೀವಂತೆ. ಮೊದಲು ಕಾಗುಣಿತ ಕಲಿತ್ಕೊ~ ಎಂದು ಗುರುರೂಪಿ ಗೆಳೆಯನ ಗದರಿಕೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡ ಕಾರ್ಪೆಂಟರ್, ಭಾಷೆಯನ್ನು ಒಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಕನ್ನಡ ಮಾತ್ರವಲ್ಲ, ಕಷ್ಟಪಟ್ಟು ಇಂಗ್ಲಿಷನ್ನೂ ತಕ್ಕಮಟ್ಟಿಗೆ ಕಲಿತರು.

ನೆರೂಡನ ಪದ್ಯಗಳನ್ನು ಓದಿ, ಆತನನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸಿದರು. ಇಂಟರ್ನೆಟ್ ಬಳಸುವುದನ್ನು ಕಲಿತು, ಜಾಗತಿಕ ಸಾಹಿತ್ಯದ ಕಿಟಕಿಗಳಲ್ಲಿ ಇಣುಕುವುದನ್ನು ಅಭ್ಯಾಸ ಮಾಡಿಕೊಂಡರು. ತಪ್ಪಾದಾಗ, ದಿಕ್ಕು ತಪ್ಪಿದಾಗ ಗೆಳೆಯನ ನೆರವು ಇದ್ದೇ ಇತ್ತು.
 
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನ ಬಳಗದವರಿಗೆ ಅವರ ಕಾಯಕದ ಹಾದಿಯ ಭಕ್ತಿಯ ಮಾರ್ಗವೂ ಆದವಷ್ಟೇ; ಕಾರ್ಪೆಂಟರ್ ಪಾಲಿಗೆ ಆತನ ಕೆಲಸದ ಪರಿಕರಗಳೇ ಕವಿತೆಗಳಾದವು. ಪ್ರೇಮದ ಚಡಪಡಿಕೆ ಮತ್ತು ನಿವೇದನೆಗೆ ಕಸುಬಿನ ಪರಿಕರಗಳೇ ರೂಪಕಗಳಾದವು. ಅಲ್ಲೊಂದು ಇಲ್ಲೊಂದು ಪದ್ಯ ಪ್ರಕಟಗೊಂಡು, ಸಂಕಲನಗಳೂ ಪ್ರಕಟಗೊಂಡಾಗ ಕಾರ್ಪೆಂಟರ್ ಆತ್ಮವಿಶ್ವಾಸ ಕುದುರಿತು.

`ಬಿಲ್ಡಿಂಗ್ ವರ್ಕ್, ಇಂಟೀರಿಯರ್ ಸೇರಿದಂತೆ ಎಲ್ಲ ಕೆಲಸಾನೂ ಮಾಡ್ತೀನಿ. ಪ್ಲೈವುಡ್ಡು-ಫರ್ನಿಚರ‌್ರು ಕೆಲಸಾನೂ ಗೊತ್ತು~ ಎಂದು ಆತ್ಮವಿಶ್ವಾಸದಿಂದ ಹೇಳುವ ಕಾರ್ಪೆಂಟರ್, ಸಾಹಿತ್ಯದ ಮಾತಿಗೆ ಬಂದರೆ ಗದ್ಯವಾದರೂ ಪದ್ಯವಾದರೂ ಸೈ ಎನ್ನುವವರು.
ಕಾರ್ಪೆಂಟರ್‌ಗೆ ಮರಗೆಲಸದಷ್ಟೇ ಬರವಣಿಯೂ ಇಷ್ಟವಂತೆ. ಆದರೆ, ಬರೆಯುವ ಹುಕಿ ಬಂದಾಗ ಕೆಲಸಕ್ಕೆ ರಜೆ. `

ಬರವಣಿಗೆಯಿಂದ ಫೇಮಸ್ ಆಗಬಹುದು~ ಎನ್ನುವ ಗುಟ್ಟು ಬೇರೆ ಅವರಿಗೆ ಗೊತ್ತಾಗಿದೆ! ಅಷ್ಟು ಮಾತ್ರವಲ್ಲ, ಮೊದಮೊದಲು ಪದ್ಯ ಬರಕೊಂಡು ಕೆಲಸ ಬಿಟ್ಟು ಮನೆಯಲ್ಲಿ ಕೂರುತ್ತಿದ್ದ ಗಂಡನನ್ನು ದಬಾಯಿಸುತ್ತಿದ್ದ ಯಜಮಾನತಿ, ಕವಿತೆಯ ಬೆನ್ನುಹತ್ತಿ ಬರುವ ಗೌರವ-ಗೌರವಧನ ನೋಡಿ ಮೆದುವಾಗಿದ್ದಾರೆ.

ಹಾಂ, ಪ್ರಣಯ ಪ್ರಸಂಗಗಳನ್ನು ಸಾಹಿತ್ಯದ ಏಕಾಂತಕ್ಕೆ ಬಿಟ್ಟು ಕಾರ್ಪೆಂಟರ್ ಸಂಸಾರಿಯಾಗಿದ್ದಾರೆ. ಪ್ರೀತಿಸಿದ ಜಗದಂಬಾ ಕೈಯನ್ನೂ ಹಿಡಿದಿದ್ದಾರೆ.ಗಾರ್ಮೆಂಟ್‌ನಲ್ಲಿ ದುಡಿಯುವ ಆಕೆ, ಕಾರ್ಪೆಂಟರ್‌ಗೆ ಸಂಸಾರದ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಮಗನ ಹೆಸರು ಚೆಗುವರ. ಮಗಳು ಇಂದಿರಾ ಪ್ರಿಯದರ್ಶಿನಿ. ಬಿಡಿಸಿ ಹೇಳಲೇನು, ಮಗ ಮತ್ತು ಮಗಳು ಅಪ್ಪನ ಆದರ್ಶದ ಕನವರಿಕೆಗಳನ್ನೇ ಹೆಸರಿನ ರೂಪದಲ್ಲಿ ಹೊತ್ತಿದ್ದಾರೆ.

`ಚೆ~ ಹೆಸರಿನಲ್ಲಿ ಕಾರ್ಪೆಂಟರ್ ಪುಸ್ತಕ ಪ್ರಕಾಶನ ಆರಂಭಿಸಿದ್ದಾರೆ. ಯುವ ಬರಹಗಾರ ಹನುಮಂತ ಹಾಲಗೇರಿ ಅವರ `ಕೆಂಗುಲಾಬಿ~ ಕಾದಂಬರಿ `ಚೆ~ ಪ್ರಕಾಶನದ ಮೊದಲ ಪುಸ್ತಕ. ಕಾರ್ಪೆಂಟರಿ ಕೆಲಸದ ಸಂಪಾದನೆಯಲ್ಲೇ ಪುಸ್ತಕ ಪ್ರಕಟಿಸುವ ಹಂಬಲ ಅವರದು. ತಮ್ಮ ಪುಸ್ತಕಗಳನ್ನು ಮಾತ್ರ ಸ್ವಂತ ಪ್ರಕಾಶನದಲ್ಲಿ ಪ್ರಕಟಿಸುವುದಿಲ್ಲ ಎನ್ನುವ ಗೆರೆಯನ್ನೂ ಅವರು ಎಳೆದುಕೊಂಡಿದ್ದಾರೆ.

ಕಾರ್ಪೆಂಟರ್ ಕುರಿತ ಮಾತೆಂದರೆ ಅದು ಅವರ ತಂದೆಯ ಕುರಿತ ಮಾತೂ ಹೌದು. ಅಪ್ಪನಂತೆ ಮಗನಿಗೂ ಗಡಿಯಾರ-ರೇಡಿಯೋಗಳ ನರತಂತುಗಳ ಜಾಲಾಡುವುದರಲ್ಲಿ ಪ್ರೀತಿ. ಅಪ್ಪನಿಗಿದ್ದ ಚೂರು ಚೂರು ತೊದಲು ಮಗನಿಗೂ ಇದೆ. ಆದರೆ, ಗಟ್ಟಿಯಾಗಿ ಓದುವಾಗ ಹಾಗೂ ಹಾಡುವಾಗ ಮಾತ್ರ ಅವರು ತೊದಲುವುದಿಲ್ಲವಂತೆ. ಸಾಹಿತ್ಯ - ಸಂಗೀತ ಎಂದರೆ ತಮಾಷೆಯಾ?

ಕಾರ್ಪೆಂಟರ್ ಅವರನ್ನು ಅಯಸ್ಕಾಂತದಂತೆ ಸೆಳೆಯುವ ಲೌಕಿಕದ ಮತ್ತೊಂದು ಬೆರಗು ರೈಲು. ಎಲ್ಲಿ ರೈಲು ಅಪಘಾತ ಸಂಭವಿಸಿದರೂ ಅಲ್ಲವರು ಹಾಜರು. ಚಿಕ್ಕ ವಯಸ್ಸಿನಿಂದಲೂ ರೈಲು ಹಳಿಗಳ ಜೊತೆಗೇ ನಡೆಯುತ್ತಿದ್ದೇನೆ ಎನ್ನುವ ಅವರು, ರೈಲಿನ ಕುರಿತೇ ಒಂದು ಕಾದಂಬರಿ ಬರೆಯುತ್ತಿದ್ದಾರಂತೆ. ತನ್ನ ಬದುಕಿನ ಕಥೆಯ ಕೆಲವು ತುಣುಕುಗಳನ್ನು `ಕಾರ್ಪೆಂಟರ್ ಕ್ಯಾನ್ವಾಸ್~ ಹೆಸರಿನಲ್ಲಿ ಬರೆದಿದ್ದಾರೆ. `ಅಶ್ಲೀಲ ಕನ್ನಡಿ~ ಅವರ ಪ್ರಕಟಗೊಳ್ಳಲಿರುವ ಕವನ ಸಂಕಲನದ ಹೆಸರು.

ಲೇಖಕನಾಗಿ ತನ್ನದೇ ದಾರಿ ಕಂಡುಕೊಳ್ಳುತ್ತಿರುವಂತೆ, ಕಾರ್ಪೆಂಟರ್ ಆಗಿಯೂ ಅವರ ಬೆಳವಣಿಗೆ ಏರುಮುಖದಲ್ಲಿದೆಯಂತೆ. ಅವರೇ ಹೇಳುವಂತೆ, ಶಾಲಾದಿನಗಳಲ್ಲೇ ಅವರು ಇಂಡಿಪೆಂಡೆಂಟ್ ಆಗಿದ್ದಾಗಿದೆ. ಈಗ ಮೂವರು ಹುಡುಗರಿಗೆ ಕೆಲಸ ಕೊಟ್ಟಿದ್ದಾರೆ.
ಸಾಹಿತ್ಯವನ್ನು ಪ್ರೀತಿಸುವ ನಮ್ಮ ಅನೇಕ ಹುಡುಗರು ಕಸುಬು ಮರೆಯುವುದುಂಟು.

ಆದರೆ, ಸಾಹಿತ್ಯ ಮತ್ತು ಕಸುಬನ್ನು ಕಾರ್ಪೆಂಟರ್ ಜೊತೆಜೊತೆಗೆ ತೂಗಿಸಿಕೊಂಡು ಹೋಗುತ್ತಿದ್ದಾರೆ. ಕಸುಬು ಹಾಗೂ ಸಾಹಿತ್ಯದ ನಡುವಣ ಗೆರೆ ತೆಳುಗೊಳಿಸುವುದೂ ಅವರಿಗೆ ಸಾಧ್ಯವಾಗಿದೆ.

ಕಾಲೇಜು - ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳ ಚೌಕಟ್ಟುಗಳಿಗೆ ಸೀಮಿತಗೊಂಡಿದ್ದ ಕನ್ನಡ ಸಾಹಿತ್ಯವನ್ನು ಹೊಸ ತಲೆಮಾರಿನ ಕೆಲವು ತರುಣ ತರುಣಿಯರು ಬಯಲಿಗೆ ಕರೆತಂದಿದ್ದಾರೆ. ಬಯಲಿನ ಆ ನಡಿಗೆಯಲ್ಲಿ ಕಾರ್ಪೆಂಟರ್ ಅವರದ್ದು ವಿಶಿಷ್ಟ ಹಾಗೂ ಆತ್ಮವಿಶ್ವಾಸದ ನಡಿಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT