ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್ ವಲಯದ ಟೀಕೆಗೆ ಮೊಯಿಲಿ ತಿರುಗೇಟು

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಕಾರ್ಪೊರೇಟ್ ವಲಯದ ಮುಖ್ಯಸ್ಥರು ಟೀಕೆ ವ್ಯಕ್ತಮಾಡಿರುವುದಕ್ಕೆ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ತಿರುಗೇಟು ನೀಡಿದ್ದಾರೆ.

`ಯಾವುದೋ ಪರಿಕಲ್ಪನೆ, ಊಹೆ ವಸ್ತುಸ್ಥಿತಿಯನ್ನು ಬದಲಿಸಲಾರದು. ಅಜೀಂ ಪ್ರೇಮ್‌ಜಿ ಮತ್ತು ನಾರಾಯಣ ಮೂರ್ತಿ ಆಶಾಭಾವನೆಯಿಂದ ಮಾತನಾಡಬೇಕು~ ಎಂದು ಮೊಯಿಲಿ ಹೇಳಿದ್ದಾರೆ.

`2008ರ ಆರ್ಥಿಕ ಹಿಂಜರಿಕೆಯಿಂದ ನಾವು ಪಾರಾಗಿ ಬಂದಿದ್ದೇವೆ. 2010ರ ಆರ್ಥಿಕ ಕುಸಿತವನ್ನು ಎದುರಿಸಿದ್ದೇವೆ. 2011-2012ನೇ ಸಾಲಿನಲ್ಲಿ ನಮ್ಮ ವಿದೇಶಿ ನೇರ ಬಂಡವಾಳ ಹೂಡಿಕೆ ಉತ್ತಮವಾಗಿದೆ. ಹೂಡಿಕೆ ಪ್ರಮಾಣ ಉತ್ತಮವಾಗಿಲ್ಲ ಎಂದು ನೀವು ಹೇಳುವಂತಿಲ್ಲ. ಊಹೆಗಳು, ವಸ್ತುಸ್ಥಿತಿಯನ್ನು ಬದಲಿಸಲಾರವು~ ಎಂದು ಮೊಯಿಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ಸ್ಥಿತಿಗತಿ ಹಾಗೂ ಜಾಗತಿಕ ಮಟ್ಟದಲ್ಲಿ ಅದರ ವರ್ಚಸ್ಸಿನ ಕುರಿತು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೊಯಿಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ `ನಾಯಕ~ರಿಲ್ಲ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಕುಂದುಂಟು ಮಾಡಿದೆ ಎಂದು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿದ್ದರು. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ಪ್ರಸ್ತುತ ಆರ್ಥಿಕ ಸನ್ನಿವೇಶದ ಕುರಿತು ಕಳವಳ ವ್ಯಕ್ತಪಡಿಸಿದ್ದರು.

`ನಾವು ಈ ಹಿಂದೆ ಎರಡು `ಆರ್ಥಿಕ ಸುನಾಮಿ~ಗಳನ್ನು ಎದುರಿಸಿದ್ದೇವೆ. ಪ್ರೇಮ್‌ಜಿ, ನಾರಾಯಣ ಮೂರ್ತಿ ತರಹದ ವ್ಯಕ್ತಿಗಳು ತಮ್ಮ ದೇಶವನ್ನು ಸಮರ್ಥಿಸಿಕೊಳ್ಳಬೇಕು. ದೇಶಭಕ್ತಿಯ ಭಾವದಿಂದ ಮಾತನಾಡುವಂತೆ ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರೇಮ್‌ಜಿ ಹಾಗೂ ನಾರಾಯಣಮೂರ್ತಿ ಹೇಳುವುದು ಸರಿಯಾದಲ್ಲಿ ಮುಖೇಶ್ ಅಂಬಾನಿ ಸಾವಿರ ಕೋಟಿ ಹೂಡಿಕೆ ಬರುವುದರ ಕುರಿತು ವಿಶ್ವಾಸದಿಂದ ಮಾತನಾಡುವುದು ಹೇಗೆ~ ಎಂದು ಸಚಿವರು ಪ್ರಶ್ನಿಸಿದ್ದಾರೆ.

`ಹಲವು ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಕಾಯುತ್ತಿರುವುದು ನಿಜ. ಯುಪಿಎ ಸರ್ಕಾರ ಇದಕ್ಕೆ ಹೊಣೆಯಲ್ಲ. ವಿರೋಧ ಪಕ್ಷಗಳು ಮಸೂದೆ ಅಂಗೀಕಾರಕ್ಕೆ ಅಡಚಣೆ ಮಾಡುತ್ತಿವೆ. ಇದಕ್ಕಾಗಿ ಪ್ರಧಾನಿ ಮನಮೋಹನ್ ಸಿಂಗ್ ದುರ್ಬಲ ನಾಯಕ ಎಂದು ಹೇಳುವುದು ಸರಿಯಲ್ಲ~ ಎಂದೂ ಮೊಯಿಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT