ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಸಿದ್ಧತೆ

ಖಾಸಗಿ ಬಂಡವಾಳ ಆಕರ್ಷಿಸಲು ಮೋದಿ ಸರ್ಕಾರದ ಹೆಜ್ಜೆ
Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಆರೂವರೆ ದಶಕಗಳಿಂದ ಮಾರ್ಪಾ­ಡಾಗದೆ ಮುಂದುವರಿದಿರುವ ಕಾರ್ಮಿಕ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ‘ರಾಷ್ಟ್ರೀಯ ಉತ್ಪಾದನಾ ವಲಯ’ವನ್ನು ಬಲ­ಪಡಿಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಯೋನ್ಮುಖವಾಗಿದೆ.

ಕೇವಲ ಒಂದು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿ­ರುವ ಎನ್‌ಡಿಎ ಸರ್ಕಾರ, ಕಾಲಕ್ಕೆ ತಕ್ಕಂತೆ ಕಾಯ್ದೆ­ಗಳು ಬದಲಾಗದೆ ಆರ್ಥಿಕ ಪ್ರಗತಿ ಸ್ಥಗಿತ­ಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಕೈಗಾರಿಕಾ ಕಾಯ್ದೆಗಳನ್ನು ಪುನರ್‌ಪರಿಶೀಲಿಸಲು ಮುಂದಾಗಿದೆ.

ಪರ್ಯಾಯ ಉದ್ಯೋಗ ಕಡ್ಡಾಯ: ಕೇಂದ್ರ ತರಲು ಉದ್ದೇಶಿಸಿರುವ ತಿದ್ದುಪಡಿಗಳು ‘ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ’ (ಎನ್‌ಐ­ಎಮ್‌ಝಡ್‌)ದ ಕಾರ್ಮಿಕರನ್ನು ಸುಲಭ­ವಾಗಿ ಕೆಲಸದಿಂದ ತೆಗೆಯಲು ನೆರವಾಗಲಿವೆ. ಉತ್ಪಾ­ದನಾ ವಲಯದ ಕಾರ್ಮಿಕರನ್ನು ಉದ್ಯಮದ ಮಾಲೀ­ಕರು ಯಾವುದೇ ಮುನ್ಸೂಚನೆ (ನೋಟಿಸ್‌) ಅಥವಾ ಪರಿಹಾರ ನೀಡದೆ ಕೆಲಸ­ದಿಂದ ತೆಗೆಯಬಹುದು.

ಆದರೆ, ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಅದೇ ವಲಯದಲ್ಲಿ, ಅದೇ ವೇತನಕ್ಕೆ ಪರ್ಯಾಯ ಉದ್ಯೋಗ ಒದಗಿಸಬೇಕು. ಅಕಸ್ಮಾತ್‌ ಪರ್ಯಾಯ ಉದ್ಯೋಗ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಉಳಿದಿರುವ ಸೇವಾವಧಿಗೆ ವರ್ಷಕ್ಕೆ 20 ದಿನದ ಸಂಬಳ ಕೊಡಬೇಕಾಗುತ್ತದೆ. ಕೈಗಾರಿಕಾ ಕಾಯ್ದೆಯಲ್ಲಿ ಇದುವರೆಗೆ ಈ ಅವಕಾಶ ಇಲ್ಲ­ದಿರುವುದರಿಂದ ಉದ್ದೇಶಿತ ಬದಲಾವಣೆ ಅತ್ಯಂತ ಮಹತ್ವದ ಹೆಜ್ಜೆಯಾಗಲಿದೆ.

ಸದ್ಯ ಜಾರಿಯಲ್ಲಿರುವ ಕಾನೂನು, ನೂರಕ್ಕಿಂತ ಹೆಚ್ಚು ಕಾರ್ಮಿಕರಿರುವ ಉದ್ಯಮಗಳು ಸರ್ಕಾರದ ಅನುಮತಿ ಪಡೆಯದೆ ಯಾರನ್ನು ಕೆಲಸದಿಂದ ತೆಗೆಯಲು ಆಸ್ಪದ ಕೊಡುವುದಿಲ್ಲ. ಕೆಲಸದಿಂದ ತೆಗೆಯುವ ಮೂರು ತಿಂಗಳ ಮೊದಲು ನೋಟಿಸ್‌ ಕೊಡಬೇಕಾಗುತ್ತದೆ.

ಗಣಿ ಕಾರ್ಮಿಕರಿಗೂ ಹೊಸ ಕಾನೂನು ಅನ್ವಯವಾಗಲಿದೆ. ನೈಸರ್ಗಿಕ ಸಂಪತ್ತು ಬರಿದಾಗಿ ಗಣಿಗಳನ್ನು ಮುಚ್ಚುವ ಸಂದರ್ಭದಲ್ಲಿ ಕಾರ್ಮಿಕ­ರನ್ನು ಕೆಲಸದಿಂದ ತೆಗೆಯಬಹುದಾಗಿದೆ. ಗಣಿ ಬಂದ್‌ ಮಾಡಿದ ದಿನದಿಂದಲೇ ಅದೇ ಸಂಬಳಕ್ಕೆ ಬದಲಿ ಕೆಲಸ ಕೊಡಬೇಕು. ಉದ್ಯೋಗ ಕೊಡಲಾಗ­ದಿದ್ದರೆ ಕಾರ್ಮಿಕರ ಸೇವಾವಧಿ ಆಧಾರದ ಮೇಲೆ ಪರಿಹಾರ ವಿತರಿಸಬೇಕು.

ಗಣಿ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನು ಈಗಾಗಲೇ ಜಾರಿಯಲ್ಲಿದ್ದು, ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ಶಿಫಾರಸಿಗೆ ಅನುಗುಣ­ವಾಗಿ ಇದನ್ನು ಸೇವಾ ವಲಯಕ್ಕೂ ವಿಸ್ತರಿಸಲಾಗುತ್ತಿದೆ. ‘ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಸರಳಗೊಳಿಸುವುದು ತಿದ್ದುಪಡಿ ಉದ್ದೇಶವಲ್ಲ. ಕಾರ್ಮಿಕ ಕಾಯ್ದೆಯನ್ನು ಉದ್ಯಮ ಸ್ನೇಹಿಯಾಗಿ ಪರಿವರ್ತಿಸಲು ತಿದ್ದುಪಡಿ ಮಾಡ­ಲಾಗುತ್ತಿದೆ’ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು ಅತ್ಯಂತ ಕಠಿಣವಾಗಿರುವ ಹಿನ್ನೆಲೆಯಲ್ಲಿ ಉತ್ಪಾದನಾ ವಲಯದಲ್ಲಿ ಬಂಡವಾಳ ಹೂಡಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. 2014ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಗೆ ಉತ್ಪಾದನಾ ವಲಯವು ಶೇ 14.9ರಷ್ಟು ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಉದ್ದೇಶಿತ ತಿದ್ದುಪಡಿಗಳು ಅಂಗೀಕಾರವಾದರೆ 2022ರ ವೇಳೆಗೆ ಇದು ಶೇ 25ಕ್ಕೆ ಏರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಕಾರ್ಮಿಕ ಸಚಿವಾಲಯವು ಉದ್ಯಮಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ಕರೆದಿದೆ. 2012ರ ಸೆಪ್ಟೆಂಬರ್‌ನಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಲವೂ ಕಾರ್ಮಿಕ ಸಂಘಟನೆಗಳು ಸರ್ಕಾರದ ನಡೆಯನ್ನು ವಿರೋಧಿಸುವ ಸಾಧ್ಯತೆಗಳಿವೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಯಾವುದೇ ಕಾರಣಕ್ಕೂ ಕೈಗಾರಿಕಾ ವಿವಾದ ಕಾಯ್ದೆ­ಯನ್ನು ಬದಲಾವಣೆ ಮಾಡಲು ಬಿಡುವುದಿಲ್ಲ. ಈ ವಿಷಯದಲ್ಲಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಭಾರತೀಯ ಮಜ್ದೂರ್‌ ಸಂಘದ (ಬಿಎಂಎಸ್‌) ಪ್ರಧಾನ ಕಾರ್ಯದರ್ಶಿ ಬ್ರಜೇಶ್‌ ಉಪಾಧ್ಯಾಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಅಭಿವೃದ್ಧಿ ಹೆಸರಿನಲ್ಲಿ ಕಾರ್ಮಿಕರನ್ನು ಕೆಲಸ­ದಿಂದ ಕಿತ್ತೊಗೆಯಲು ನಾವು ಅವಕಾಶ ಕೊಡುವು­ದಿಲ್ಲ. ಪ್ರಗತಿಗೆ ಕಾರ್ಮಿಕ ಕಾನೂನುಗಳು ಅಡ್ಡಿ­ಯಾಗಿವೆ ಎಂಬ ವಾದದಲ್ಲಿ ಅರ್ಥವಿಲ್ಲ. ಬೇಕಾದರೆ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯಲಿ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧೀನ ಸಂಘಟನೆಯಾಗಿರುವ ಬಿಎಂಎಸ್‌ನ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಎಐಟಿಯುಸಿ, ಸಿಐಟಿಯು ಹಾಗೂ ಐಎನ್‌ಟಿಯುಸಿ ಇದೇ ನಿಲುವು ಹೊಂದಿವೆ. ‘ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತರುವುದಕ್ಕೆ ನಮ್ಮ ವಿರೋಧವಿದೆ. ಈ ವಿಷಯದಲ್ಲಿ ನಾವೆಲ್ಲರೂ ಒಗ್ಗೂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಕಾರ್ಮಿಕ ಸಚಿವಾಲಯವು ಕಾರ್ಮಿಕ ಸಂಘಟನೆ­ಗಳ ಜತೆ ಸಮಾಲೋಚನೆ ನಡೆಸಲಿರುವ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಕಳುಹಿಸುವ ಟಿಪ್ಪಣಿ ಸಿದ್ಧ­ಪಡಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ರಾಜಸ್ತಾನ ಅಂಗೀಕಾರ
ರಾಜಸ್ತಾನ ಸರ್ಕಾರ ಕಾರ್ಮಿಕ ಕಾನೂನು, ಕೈಗಾರಿಕಾ ವಿವಾದ ಕಾಯ್ದೆ ಹಾಗೂ ಫ್ಯಾಕ್ಟರಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಅಂಗೀಕರಿಸಿದೆ.ವಸುಂಧರರಾಜೆ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT