ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ದಿನಾಚರಣೆ: ಬೃಹತ್ ಮೆರವಣಿಗೆ

Last Updated 2 ಮೇ 2012, 8:20 IST
ಅಕ್ಷರ ಗಾತ್ರ

ಕಾರವಾರ: ದೇಶ ಸಾಕಷ್ಟು ಪ್ರಗತಿ ಸಾಧಿಸಿದರೂ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ ಹೇಳಿದರು.
ವಿಶ್ವ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ತಾಲ್ಲೂಕ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಇಂದಿನ ಸರ್ಕಾರಗಳು ಕಾರ್ಮಿಕರ ಸಮಸ್ಯೆ ಪರಿಹರಿಸಲು, ಬರ ನೀಗಿಸಲು ಕ್ರಮಕೈಗೊಳ್ಳದೇ ಗುಡಿ ಗುಂಡಾರಗಳಿಗೆ ಹಣಸುರಿಯುತ್ತಿವೆ~ ಎಂದರು.

ಒಂದನೇ ತ್ವರಿತ ನ್ಯಾಯಾಲಯದ ಪ್ರದೀಪ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಗುರು ನಾಯ್ಕ `ಕಾರ್ಮಿಕ ಪರಿಹಾರ ಕಾರ್ಯದಡಿ ಕಾರ್ಮಿಕರಿಗೆ ದೊರೆಯುವ ನಷ್ಟ ಪರಿಹಾರ~ದ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜ ಎಚ್. ಎಂ. ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಮತ್ತು ಮೋಹಿನಿ ನಮ್ಸೇಕರ್ ವೇದಿಕೆಯಲ್ಲಿದ್ದರು.

ಶಿರಸಿ ವರದಿ
ಕಾರ್ಮಿಕ ದಿನಾಚರಣೆ ಅಂಗವಾಗಿ ನೂರಾರು ಕೂಲಿ ಕಾರ್ಮಿಕರು ವಾದ್ಯಮೇಳದೊಂದಿಗೆ ಘೋಷಣೆ ಕೂಗುತ್ತ ಮಂಗಳವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಬಾಪೂಜಿ ನಗರದ ಸಭಾಭವನದಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕರು ಶೋಭಾ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದಿಂದ ಸಿಗುವ ಸೌಲಭ್ಯ ಕಾರ್ಮಿಕರಿಗೆ ದೊರೆಯುವಂತಾಗಬೇಕು. ತಾಲ್ಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘ ರಚನೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಈ ಸಂಘಟನೆಯಲ್ಲಿ ಅನುಭವ ಹೊಂದಿದ 290 ಸದಸ್ಯರಿದ್ದು, ಇವರ ಕೆಳಗೆ ಕೆಲಸ ಮಾಡುವ 3000 ಮಂದಿ ಕೂಲಿಕಾರರು ಇದ್ದಾರೆ.

ಇವರಿಗೆ ಸರ್ಕಾರದಿಂದ ಅಥವಾ ಕಾರ್ಮಿಕ ಇಲಾಖೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳದಿದ್ದಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಶೋಭಾ ನಾಯ್ಕ, `ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲಭ್ಯ ಕಲ್ಪಿಸಿದರೂ ಅಧಿಕಾರಿಗಳ ಅಲಕ್ಷ್ಯದಿಂದ ಕಾರ್ಮಿಕರಿಗೆ ತಲುಪುತ್ತಿಲ್ಲ. ಅಧಿಕಾರಿಗಳು ಲಕ್ಷ್ಯವಹಿಸಿ ಕಾರ್ಯ ನಿರ್ವಹಿಸಬೇಕು~ ಎಂದರು. ಹಮಾಲಿ ಕಾರ್ಮಿಕರ ಸಂಘಟನೆ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗೃಹ ನಿರ್ಮಾಣ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಪೂಜಾರಿ, ನಾಗಪ್ಪ ನಾಯ್ಕ, ಅಣ್ಣಪ್ಪ ಪೂಜಾರಿ, ಪ್ರೊ. ಶಿವಣ್ಣ ಮತ್ತಿತರರು ಇದ್ದರು.

ಹಳಿಯಾಳ ವರದಿ
ಕಾರ್ಮಿಕ ದಿನಾಚರಣೆಯ ಅಂಗವಾಗಿ ಸ್ಥಳಿಯ ವಲ್ಲಭಭಾಯಿ  ಪಟೇಲ ಸ್ಮಾರಕ ಉದ್ಯಾನವನದಲ್ಲಿ ತಾಲ್ಲೂಕಿನ  ಗ್ರಾಮ ಪಂಚಾಯಿತಿ, ಅಂಗನವಾಡಿ, ಬಿಸಿಯೂಟ ನೌಕರರು ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು.

ಸಿ.ಪಿ.ಎಂ. ಜಿಲ್ಲಾ ಸಮಿತಿ ಸದಸ್ಯರಾದ ಆರ್.ಎಂ.ಮುಲ್ಲಾ ಅಧ್ಯಕ್ಷತೆ ವಹಿಸಿ, ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ ಕಾರ್ಮಿಕರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.

ಅತಿಥಿಗಳಾಗಿ ನಾಮದೇವ ಬಾಂದುರ್ಗಿ, ಕೃಷ್ಣಾ ಕಾಮರೇಕರ, ಜಯಶ್ರೀ ಹೀರೇಕರ, ಶೋಭಾ ಕುರಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಟಿ.ಎಂ.ಗುರುಬಣ್ಣನವರ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಉಮ್ಮಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT